ಕಾವ್ಯ ಸಂಗಾತಿ
ಪೂರ್ಣಿಮಾ ಸುರೇಶ್
‘ದೇವರನ್ನು ಮುಟ್ಟಲಾಗದು’
ದೇವರನು ಮುಟ್ಟಲಾಗದು
ಮಂದ ಬೆಳಕು
ಪೂಜಿಸುವವನಿಗೆ ಪೂಜೆಯೇ
ದಿನವಿಡೀ,
ತೈಲ, ಬತ್ತಿ, ದೀಪ ಆರತಿ- ನೈವೇದ್ಯ ಅರಿವಿಗೆಟುಕದ ಗಡಿಬಿಡಿ
ದೇವಾ ನೀನು ಏಕಾಂಗಿ
ನಿಮ್ಮ ಕಾಯಕದ ಸಖ್ಯ
ಉಳಿಕೆ ಎರಡಾತ್ಮಗಳ ಐಕ್ಯ
ಭಕ್ತರ ಸಾಲು ಮಾರುದೂರ
ಬೇಡಿಕೆಗಳ ಸಾಲು
ಮಾಲೆಮಾಲೆ
ವರಗಳ ಧಾತನಂತೆ
ನಾನೂ ಪೂಜಿಸಿದ್ದಾಯಿತು
ಈಗ ಒಂದೇ ಆಸೆ
ಚೂರು.. ಚೂರೇ ಚೂರು
ಮುಟ್ಟುವಾಸೆ
ಎದೆ ಡವಡವಿಸಿ ಬರುತ್ತೇನೆ
ನಿನ್ನ ಪರಿಧಿಯ ಅಂಚಿಗೆ
ಯತ್ನಿಸುತ್ತೇನೆ ಸ್ಪರ್ಶಿಸಲು
ಮುಟ್ಟಬೇಕು
ಕದ್ದಾದರೂ
ಬರಬೇಕು ನಿನ್ನ ಬಳಿ
ಕೈ ಸವರಲೇ..
ಕೆನ್ನೆ ತಗುಲಿಸಲೇ..
ರೋಮಾಂಚನ ಆಗದೇ
ತುಂಟ ಕಣ್ಣಿನ ಪ್ರಶ್ನೆ
ಅಮೂರ್ತ ಮಾತುಗಾರನೆದುರು
ಗರ್ಭಗುಡಿ ಬಾಗಿಲನವರು ಮುಚ್ಚಿದೊಡನೆ
ಒಂಟಿ ನೀನು
ಎದೆ ತಟದಲಿ ಸುಯ್ಯಲೆಗಳು.. ವಿಪ್ಲವಗಳು
ಅನಂತದಲಿ
ಅಲೆಯುತ್ತಿದೆ ರಾಗ
ತಾಕದೇ..
ಬೇರೇನಿಲ್ಲ
ಕಣ್ಣ ಮುಚ್ಚಿ ನಿನ್ನ ಕರೆವ ಧ್ಯಾನ
ಸಾಕಾಗಿದೆ
ಮುಟ್ಟಬೇಕು ಹೊಳೆವ ಕಣ್ಣಲಿ ಕಣ್ಣಿಟ್ಟು ನೋಡಬೇಕು
ಅದೆಷ್ಟು ಜನ
ನಿನ್ನೊಡನೆ ಆಡಿದವರು
ಓಡಾಡಿದವರು
ನಲಿದವರು
ಕರೆದವರು
ಉಣಿಸಿದವರು
ಲಾಲಿಸಿದವರು
ನನಗೂ ಆಸೆ ಎದೆ ಉಮ್ಮಳಿಸಿ..
ಯಾಕೆ ನಾನು ಮುಟ್ಟಬಾರದು
ಮುಟ್ಟಿಯೇ ತೀರುತ್ತೇನೆ
ನೀನು ಮಲಿನವಾಗು
ನಾನಾಗುವೆ ಪಾವನ
ಬರಲಿ ಕೆದಕಲು ಕಾರಣ
ನಡೆಯಲಿ ಅಷ್ಟಮಂಗಳ,
ಶುದ್ದಿ ಶಾಂತಿ,ಹೋಮ- ಹವನ
ನನ್ನ ಹೆಸರ ಗುರುತೂ
ಅಲ್ಲಿ ಕಾಣದಿರಲಿ
ದೇವ ಅನುಮತಿಸು
ವಿಗ್ರಹ ಅಲ್ಲೇ ಅವರಿಗಿರಲಿ
ಗರುಡ ಹೊರಗೆ ಹಾರುತ್ತಿದೆ
ಗಮನವೆನ್ನದು ಅದರ ಮೇಲಿರಲಿ
ಆಸೆ ಬಂದೆನ್ನ ಮುಟ್ಟು
ಮುಂದೆ ತೆರೆದ ಬಾಗಿಲ ಗುಟ್ಟು
ಪೂರ್ಣಿಮಾ ಸುರೇಶ್
ವಾವ್…ಸುಪರ್ ಪೂರ್ಣಿ
– ಸ್ಮಿತಾ
ಬೊಗಸೆ ಪ್ರೀತಿ ಸ್ಮಿತಾ
ದೇವರ ಅಸ್ಮಿತೆಯ ಬಗೆ ನೈಜವಾದ ಭಾವಗಳನ್ನು ವ್ಯಕ್ತಪಡಿಸಿದ್ದಿರಿ.
ಅತ್ಯುತ್ತಮ ಕವನ