‘ಹಲ್ಲು ,ಮತ್ತು ನಾಲಿಗೆಯ ಸಂದೇಶ’ ಲೇಖನ-ಮಾಧುರಿ ದೇಶಪಾಂಡೆ

ಮನುಷ್ಯ ದೇಹವು ದೇಗುಲ ಎಂದೇ ಭಾವಿಸುತ್ತಾರೆ. ಹೀಗಾಗಿ ನಮ್ಮ ಆರೋಗ್ಯ ರಕ್ಷಣೆ ಮಾಡಿಕೊಳ್ಳುವುದು ಭಗವಂತನ ಪೂಜೆಯಾಗಿದೆ.  ಹಲ್ಲು ಮತ್ತು ನಾಲಿಗೆಯು ನಮಗೆ ಜೀವನಕ್ಕೆ ಉತ್ತಮ ಸಂದೇಶವನ್ನು ನೀಡುತ್ತವೆ.  ಹಲ್ಲುಗಳು ಹುಟ್ಟಿದ ಕೂಡಲೇ ಬರುವುದಿಲ್ಲ ಕಾಲಕ್ರಮೇಣ ಅವಶ್ಯಕತೆಗೆ ತಕ್ಕಂತೆ, ವಯಸ್ಸಿಗೆ ತಕ್ಕಂತೆ ಬರಲು ಆರಂಭಿಸುತ್ತವೆ. ಹಲ್ಲುಗಳು ಹರಿತವಾಗಿಯೂ ಗಟ್ಟಿಯಾಗಿಯೂ ಇರುತ್ತವೆ. ನಾಲಿಗೆ ಮೃದುವಾಗಿಯೂ ಬಾಗುವ ಗುಣವನ್ನು ಹೊಂದಿರುತ್ತದೆ.  ಮನುಷ್ಯ ಜೀವನಕ್ಕೆ ಹಲ್ಲು ಆಹಾರವನ್ನು ಅಗಿದು ತಿನ್ನಲು ಬಹಳ ಅವಶ್ಯಕ ನಾಲಿಗೆ ಮಾತನಾಡಲು ನುಂಗಲು ಬೇಕೇ ಬೇಕು ಆದರೆ ಹಲ್ಲು ಇರದ ಮನುಷ್ಯ ಇರಬಹುದು ಆದರೆ ನಾಲಿಗೆ ಇಲ್ಲದೇ ಇರಲಾಗುವುದಿಲ್ಲ.  ನಾಲಿಗೆ ಪ್ರಮುಖ ಅಂಗವಾಗಿದೆ.

ಮನುಷ್ಯನ ಸ್ವಭಾವ ಗಟ್ಟಿತನದ ಜೊತೆಗೆ ಮೃದುತ್ವವನ್ನು ಹೊಂದಿರಬೇಕು.  ನಮ್ಮ ಜೀವನದಲ್ಲಿ ಗಟ್ಟಿಯಾಗಿ ನಿಲ್ಲಬೇಕಾದ ದೃಢವಾದ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾದ ಕೆಲವು ಸಮಯದಲ್ಲಿ ಒರಟಾಗಿ ಇರಬೇಕಾದ ಸಂದರ್ಭದಲ್ಲಿ ಹಲ್ಲಿನಂತೆ ನಡೆದುಕೊಂಡು ಮಿಕ್ಕೆಲ್ಲ ಸಮಯದಲ್ಲಿ ನಾಲಿಗೆಯಂತೆ ಇರಬೇಕು.  ನಾಲಿಗೆಯು ಎಲ್ಲ ಸಮಯದಲ್ಲಿಯೂ ತನ್ನ ಮೃದು ಸ್ವಭಾವದಿಂದ ಎಲ್ಲರೊಂದಿಗೂ ಸಾಮರಸ್ಯವನ್ನು ಕಾಯ್ದುಕೊಂಡು ಇರುತ್ತವೆ.  ನಮಗಿಂತ ಬಲಶಾಲಿ/ಶಕ್ತಿಶಾಲಿ ಜನರ ನಡುವೆ ಮೌನವಾಗಿರುವುದರಿಂದ ಗಾಂಭೀರ್ಯದಿಂದ ನಡೆದುಕೊಳ್ಳುವುದರಿಂದ ನಮ್ಮ ಜೀವನ ಸರಳ ಹಾಗೂ ಘನತೆಯನ್ನು ಹೆಚ್ಚಿಸುವುದು ನಾಲಿಗೆಯೇ .  ನಾಲಿಗೆ ಸ್ವಲ್ಪ ಹೆಚ್ಚು ಮೊನಚಾದಾಗ ಹೊರಟ ಅನವಶ್ಯಕ ಮಾತುಗಳು ಕಲಹ ಹಿಂಸೆಗೆ ಗುರಿಯಾಗಿ ಏಟು ತಿನ್ನುವ ಪ್ರಸಂಗ ಬಂದರೆ ಹಲ್ಲುಗಳು ಉದುರುತ್ತವೆ ಆದರೆ ನಾಲಿಗೆ ಶಾಶ್ವತವಾಗಿರುವುದಾಗಿದೆ. ಆದ್ದರಿಂದ ಸಭ್ಯ ಹಾಗೂ ಮೃದು ಸ್ವಭಾವವು ನಮಗೆ ಧೀರ್ಘಕಾಲಿಕ ಗುರುತನ್ನು ಗೌರವವನ್ನು ಕೊಡುತ್ತದೆ.  

ನಾಲಿಗೆ ಮತ್ತು ಹಲ್ಲು ಇನ್ನೊಂದು ಪಾಠವನ್ನು ಮಾಡುತ್ತದೆ.  ದುಷ್ಟರ ನಡುವೆ ಇದ್ದಾಗಲೂ ನಾವು ನಮ್ಮತನವನ್ನು ಕಾಪಾಡಿಕೊಳ್ಳಬಹುದು. ನಮ್ಮ ಸುತ್ತಲೂ ಎಂತಹ ಜನರೇ ಇರಲಿ ನಮ್ಮ ಮೇಲೆ ನಮಗೆ ನಿಯಂತ್ರಣವಿದ್ದಾಗ ಅವರ ಮಧ್ಯದಲ್ಲೂ ಹೆಚ್ಚು ದಿನ ಬಾಳಬಹುದು ಎಂಬ ಸಂದೇಶವನ್ನು ನೀಡುತ್ತದೆ.  ನಾಲಿಗೆಯ ರುಚಿಯ ಆಸೆಗೆ ಹಲ್ಲು ಕೆಲವೊಮ್ಮೆ ನೋವನ್ನು ಪಡುತ್ತದೆ. ಒಟ್ಟಿನಲ್ಲಿ ಮನುಷ್ಯನ ಮನಸ್ಸು ಹಾಗೂ  ಅಂಗಾಂಗಗಳ ಸಮನ್ವಯತೆ ಅವನ ದೈಹಿಕ ಹಾಗೂಮಾನಸಿಕೆ ಬಯಕೆಗಳಿಗೆ ಅನುಸಾರವಾಗಿ ನಡೆದುಕೊಂಡು ಸುಖ, ದುಃಖಗಳಿಗೆ ಕಾರಣವಾಗುತ್ತವೆ.

ನಾಲಿಗೆಯ ನಿಯಂತ್ರಣ ಇಲ್ಲದಾಗ ಸಂಬಂಧಗಳು ಕೆಲಸಗಳು ಕೆಡುತ್ತವೆ. ಅದರಂತೆಯೇ ನಾಲಿಗೆಯ ನಿಯಂತ್ರಣ ಅಂಧರೆ ರುಚಿಯ ಬಯಕೆಗೆ ಕಡಿವಾಣ ಇಲ್ಲದಾದಾಗ ದೈಹಿಕ ಆರೋಗ್ಯವೂ ಕೆಡುತ್ತದೆ.  ಹೀಗಾಗಿ ಗಟ್ಟಿಯಾದ ಹಲ್ಲುಗಳಿಗಿಂತ ನಾಲಿಗೆಯೇ ಹೆಚ್ಚು ಮಹತ್ವವನ್ನು ಹೊಂದಿದೆ.

ಆದರೆ ನಾಲಿಗೆ, ಹಲ್ಲು ಮೂಗು ಕಣ್ಣು ಎಲ್ಲ ಅಂಗಗಳಿಂಗ ದೊಡ್ಡದಾದ ಜವಾಬ್ದಾರಿ ಮನಸ್ಸಿನದ್ದಾಗಿರುತ್ತದೆ. ಮನಸ್ಸು ಚಂಚಲವಾದರೆ ಕೆಟ್ಟ ವಿಚಾರ ಮಾಡಿದರೆ ಅದರ ಪರಿಣಾಮವು ದೇಹಕ್ಕೆ ಮನಸ್ಸಿಗೂ ಆಗುತ್ತದೆ. ಹೀಗಾಗಿ ಒಳಿತು ಕೆಡಕನ್ನು ತಿಳಿದು ಉತ್ತಮ ರೀತಿಯಿಂದ ಬದುಕಿದಾಗ ಜೀವನ ಸರಳ ,ಸುಲಭ ಮತ್ತು ಸುಂದರ. ಹಲ್ಲು ನಾಲಿಗೆಗಳನ್ನು ಹಿಡಿತದಲ್ಲಿಟ್ಟು ಕೊಂಡು ಉತ್ತಮ ಜೀವನ ನಡೆಸೋಣ


Leave a Reply

Back To Top