‘ನಮ್ಮನ್ನು ನಾವು ಗಟ್ಟಿಗೊಳಿಸಿ ಕೊಳ್ಳೋಣ’ ಹನಿಬಿಂದು ಲೇಖನ

 ಹಲವಾರು ಬಾರಿ ಕೆಲವು ಮಹಿಳೆಯರಿಗೆ ಅನ್ನಿಸಬಹುದು ಹೀಗೆ, ಅದೇನೆಂದರೆ “ನಾನು ಬದುಕಿನಲ್ಲಿ ತುಂಬಾ ನೊಂದಿರುವ ಹೆಣ್ಣು, ಕಂಡಿದ್ದು ಬರೀ ನೋವೇ, ಕಷ್ಟ ಕಷ್ಟದ ಮುಳ್ಳಿನ ಹಾದಿ…” ಎಂದು. ಆದರೆ ಕಷ್ಟ ಯಾರಿಗೆ ತಾನೆ ಇಲ್ಲ ಹೇಳಿ? ಕಷ್ಟವೆಂದು ಕೈ ಕಟ್ಟಿ ಕೂತರೆ ಬದುಕು ಸಾಗುವುದೇ? ” ನಮಗೆ ಬೇಕಾದದ್ದು ಸ್ವಲ್ಪ ಸಂತೋಷ, ಒಂದಿಷ್ಟು ಹಿಡಿ ಪ್ರೀತಿ, ಆದರೆ ಅದನ್ನು ನಾವು ಎಲ್ಲರಿಂದ ಬಯಸಲು ಸಾಧ್ಯ ಇಲ್ಲ ಅಲ್ಲವೇ? ನಾವು ಹುಡುಕುತ್ತಾ ಹೋದರೂ ಅದು ಒಮ್ಮೆ ಸಿಕ್ಕ ಹಾಗೆ ಅನ್ನಿಸಿದರೂ ಅದು ಮರೀಚಿಕೆ ಅಷ್ಟೇ. ಮತ್ತೆ ನಮಗೆ ನಾವೇ! ಆಗ ನಾವು ಏನು ಮಾಡಬಹುದು?
      ತಾಳ್ಮೆ, ಒಳ್ಳೆಯ ಮನಗಳ ಜೊತೆ ಬೆರೆಯುವುದು,  ಹಿಂದಿನ ದುಃಖದ  ಕ್ಷಣ ಮರೆಯುವುದು,  ಆರೋಗ್ಯ ಸಮಸ್ಯೆ,  ಜವಾಬ್ದಾರಿಗಳ ಸವಾರಿ, ಒತ್ತಡ ನಿರ್ವಹಣೆಗೆ ಬೇಕಾದ ಮದ್ದು, ಇದೆಲ್ಲಕ್ಕೂ ಬದುಕಲ್ಲಿ ಯಾರು ಜೊತೆ ಆಗುತ್ತಾರೋ ಅವರನ್ನು ದೇವರ ಪ್ರಸಾದ ಎಂದು ಸ್ವೀಕರಿಸಿದ ಜನಗಳು ನಾವಾಗಬೇಕು. ಮತ್ತು ಅವರಿಗೆ ಸಂತಸ ಹಂಚಿ ಖುಷಿಯಿಂದ ಬಾಳುವ ಬಾಳು ನಮ್ಮದಾಗ ಬೇಕು. ನಾವು ಯಾರ ಜೊತೆ ಬದುಕುತ್ತೇವೆಯೋ ಅವರಿಂದ ನಮಗೆ ಖುಷಿ ಸಿಗಬೇಕೇ ಹೊರತು ಮತ್ತೆ ಮತ್ತೆ ನೋವಲ್ಲ. ಮತ್ತೆ ಮತ್ತೆ ನೋವೇ ಕೊಡುವ ಧೂರ್ತರು ನಮ್ಮ ಬದುಕಿಗೆ ಯಾಕೆ ಬೇಕು ಅಲ್ಲವೇ? ನಮ್ಮಿಂದ ಬೇಕಾದ ಎಲ್ಲವನ್ನೂ ಪಡೆದು, ಮತ್ತೆ ನಮಗೆ ನೋವು ಉಣಿಸುವ ಮುಖಗಳು ನಮ್ಮ ಬಾಳಿನಿಂದ ತೊಲಗಲಿ. ಅವರಿಗೆ ಎಲ್ಲಿ, ಹೇಗೆ, ಯಾರ ಜೊತೆ ಖುಷಿ ಸಿಗುವುದೋ ಅಲ್ಲೇ ಇರಲಿ. ನಾವು ನಾವಾಗಿ ನೆಮ್ಮದಿಯಿಂದ ನಾಲ್ಕು ದಿನ ಬಾಳೋಣ, ಅಲ್ಲವೇ?

       ದೇವರ ವರ ಪ್ರಸಾದ ಒಮ್ಮೆ ಮಾತ್ರ ಸಿಗಲು ಮತ್ತು ಅದನ್ನು ನಾವು ಸ್ವೀಕರಿಸಲು ಸಾಧ್ಯ ಅಲ್ಲವೇ.ಹಾಗೆಯೇ ಜನರ ಹಾಗೂ ನಮ್ಮ ಪ್ರೀತಿ ಕೂಡಾ. .ಹಾಗಾಗಿ ನಮ್ಮ ಹೃದಯದಲ್ಲಿ ನೋವೇ ಇದ್ದರೂ ಮೋಸ, ವಂಚನೆ, ತಿರಸ್ಕಾರ ಎಂದಿಗೂ ಇರಬಾರದು. ನಮ್ಮ ಬದುಕು ದೇವರ ಜೊತೆಗೆ ಇರಬೇಕು. ನಾವು ಕಷ್ಟ ಸುಖ ಹಂಚಿಕೊಳ್ಳುವುದು ಕೂಡ ಆ ದೇವರ ಜೊತೆಗೇ ಆಗಿರಬೇಕು. ಮಾತು, ಹರಟೆ, ನೋವು ಎಲ್ಲಾ ಆ ದೇವರ ಜೊತೆ ವಿನಿಮಯ ಆದರೆ ದೇವರು ಇನ್ನೊಬ್ಬರಲ್ಲಿ ಆಡಿಕೊಂಡು ನಗುವುದಿಲ್ಲ ಅಲ್ಲವೇ? ಏನಾದರೂ ಬೇಡುವುದು ಇದ್ದರೆ ಅದು ಸಹ ಆ ದೇವರಲ್ಲಿಯೇ ಕೇಳಿಕೊಳ್ಳಬೇಕು. ಏಕೆಂದರೆ ಮಾನವ ಕೊಟ್ಟರೆ ಮನೆ ತನಕ, ದೇವರು ಕೊಟ್ಟರೆ ಕೊನೆ ತನಕ ಅಂತ ಗಾದೆ ಇದೆ ಇಲ್ಲವೇ? ಬದುಕಿನಲ್ಲಿ ದೇವರು ಒಳ್ಳೆಯವರನ್ನೇ  ಕೊಡುತ್ತಾರೆ ಅಂದುಕೊಂಡು ಸ್ವೀಕರಿಸಿ ಮೋಸ ಹೋದವರು ಅದೆಷ್ಟೋ ಜನರು ಇರಬಹುದು. ನಾವು ಒಮ್ಮೆ ಪಡೆದ ನೋವಿಗೆ ಔಷಧಿಗಳನ್ನು ಮಾಡುವುದೇ  ಈ ಬದುಕು. ಮನಸ್ಸಿನ ನೋವಿಗೆ ಇದುವರೆಗೂ ಯಾವ ಮುಲಾಮು ಕೂಡ ಬಂದಿಲ್ಲ, ಪ್ರೀತಿ ಸಾಂತ್ವನಗಳ ಹೊರತಾಗಿ. ಹಾಗಾಗಿ ಮತ್ತೆ ಮತ್ತೆ  ಕೋಮಕ್ಕೆ ಹೋಗುವ ಮೊದಲೇ ಆಲೋಚನೆ ಮಾಡಬೇಕು. ಯಾರು ನಮ್ಮನ್ನು ಅರ್ಧದಲ್ಲೇ ಬಿಟ್ಟು  ಎಲ್ಲೇ ಹೋದರೂ, ನಾವು ಯಾವ ಮಟ್ಟಕ್ಕೆ ಹೋದರೂ, ಬದುಕುವ ಶಕ್ತಿ ನಮಗೆ ಇದೆಯೇ ಎಂದು. ನಮ್ಮನ್ನು ಈ ಸ್ಥಿತಿಗೆ ತಲುಪಿಸಿದ ಆ ವ್ಯಕ್ತಿಗಳು ಎಂದಾದರೂ ಬದಲಾಗ ಬಲ್ಲರೆ? ನಾವು ಅವರ ಜೊತೆ ಇದ್ದರೆ ನಿಜ ಖುಷಿ ಸಿಗುವುದೇ ಎಂದು ಅಳೆದು, ಸುರಿದು, ತೂಗಿ ನೋಡಬೇಕು. ಕೆಲವೊಮ್ಮೆ ಅಲ್ಲೂ ತಪ್ಪುತ್ತೇವೆ. ಏಕೆಂದರೆ ಭವಿಷ್ಯ ಅರಿತವ  ಆ ದೇವರು ಮಾತ್ರ. ನಮ್ಮ ಪುಣ್ಯ ಹಾಗೂ ಕರ್ಮ ಫಲಗಳು ಚೆನ್ನಾಗಿ ಇರಬೇಕು ಅಲ್ಲವೇ? ಅದಾಗಲೇ ಉತ್ತಮ ಮನಗಳು ನಮ್ಮ ಜೊತೆಗೆ ಇರಲು ಸಾಧ್ಯ.


    ತುಂಬಾ ನಾಜೂಕಿನ ಬದುಕು ಇದು ಅಂತ ನಿಮಗೆ ಆಗಾಗ ಅನ್ನಿಸುವುದಿಲ್ಲವೇ? ಒಮ್ಮೆ ಒಬ್ಬರಿಗೆ ಮಾತು ಕೊಟ್ಟ ಮೇಲೆ ನಿಭಾಯಿಸುವುದು ನಮ್ಮ ಧರ್ಮ,  ಆದರೆ ಕುಡುಕರು, ನಾನೇ ಸರಿ ಎಂದು ವಾದಿಸುವವರು, ಕಟುಕರು, ಕಬ್ಬಿಣದ ಹೃದಯದವರು, ಕಣ್ಣಲ್ಲಿ ರಕ್ತ ಇಲ್ಲದವರು, ಪರರ ಜೊತೆ ನಮ್ಮನ್ನು ಹೋಲಿಸಿ ನಾವು ಸರಿ ಇಲ್ಲ ಎಂದು ಹೀಗಳೆವ  ಜನ, ನಮ್ಮ ಜೊತೆ ಮತ್ತು ಸಂಶಯ ಪಿಶಾಚಿಗಳ ಜೊತೆ ಬಾಳು ಸಾಧ್ಯ ಇಲ್ಲ ಎಂದು ಹತ್ತು ಇಪ್ಪತ್ತು ವರ್ಷಗಳ ಕಷ್ಟ , ನೋವು ಹಾಗೂ ಕಣ್ಣೀರಿನಲ್ಲಿ ಅರಿತ ಬಳಿಕ ಅವರ ಜೊತೆಯಲ್ಲಿಯೇ ಚೆನ್ನಾಗಿ ಬಾಳುತ್ತವೆ, ಅವರು ಇಂದಲ್ಲ ನಾಳೆ ಬದಲಾಗುತ್ತಾರೆ ಎಂಬ ಅದು ಯಾವ ಭಂಡ  ಧೈರ್ಯ ನಮ್ಮಲ್ಲಿ ಮೊಳೆಯಲು ಸಾಧ್ಯ? ಮತ್ತೆ ನಮಗೆ ಬೇಕಾದದ್ದು ಇಷ್ಟೇ ಒಂದಷ್ಟು ಖುಷಿ
ಒಂದು ಹಿಡಿ ಪ್ರೀತಿ ಅಷ್ಟೇ. ತಪ್ಪು ನಮ್ಮದೂ ಇರಬಹುದು ಎಂದು ಅರಿತು, ಕೆಲವೊಮ್ಮೆ ಸಂಬಂಧ ಸರಿಯಾಗಿ ನಿಭಾಯಿಸಲು ನಮ್ಮ ತಪ್ಪೇ ಇಲ್ಲದೆ ಹೋದರೂ, ಕ್ಷಮೆ ಕೇಳಬೇಕಾಗುತ್ತದೆ.
        ಮನುಜರು ಅಂದ ಮೇಲೆ ತಪ್ಪುಗಳು ಸಹಜ ತಾನೇ? ಕ್ಷಮಾ ಗುಣವೂ , ಒಪ್ಪಿಕೊಳ್ಳುವ ಗುಣವೂ ಎರಡೂ ಇರಬೇಕು ತಾನೇ? ಆದರೆ ಆ ತಪ್ಪು ಖಂಡಿತವಾಗಿ ಯಾರ ಮನಸ್ಸನ್ನೂ ನೋಯಿಸುವ ಉದ್ದೇಶಕ್ಕಾಗಿ ಆಗಬಾರದು ಅಷ್ಟೇ. ಮೋಸ ಮಾಡಲಿಕ್ಕಂತೂ ಹೋಗಬಾರದು. ಅದು ಎಂದಿಗೂ ಕೆಟ್ಟದ್ದೇ. ಬದುಕಿನಲ್ಲಿ ಖುಷಿ ಕಳೆದುಕೊಂಡ ನಾವು ಇತರರ ಬಾಳಿಗೂ ಖುಷಿ ಕೊಡಲು ಬಯಸುವವರಾಗಬೇಕು. ಕಾರಣ ನಾವು ಬಯಸಿದ್ದನ್ನೇ ಇತರರು ಕೂಡಾ ಬಯಸುತ್ತಾರೆ. ಮಾನವ ಸಹಜ ಗುಣ. ಪ್ರೀತಿ, ಪ್ರೇಮ, ಶಾಂತಿ, ಸಹನೆ, ನೆಮ್ಮದಿ,ಕ್ಷಮೆ, ಉತ್ತಮ ಆರೋಗ್ಯ ಬೇಕು, ಜೊತೆಗೆ ಒಂದಷ್ಟು ಹಣ, ಆಸ್ತಿ, ಜಾಗ, ಮನೆ, ಒಡವೆ. ಇದು ಸರ್ವರ ಕೋರಿಕೆ ಅಲ್ಲವೇ?ಪ್ರೀತಿ, ಸಣ್ಣ ಪುಟ್ಟ ಸಂತೋಷ ಕೊಡುವ ಧೈರ್ಯದ ಬಗ್ಗೆ ನಮಗೂ ಅರಿವು ಇರಬೇಕು. ಅದನ್ನೇ ನಾವು ಪರರಿಂದ ಬಯಸುವ ಬದಲು ನಾವೂ ನೀಡಬೇಕು. ನಾವು ಏನು ಬಯಸುತ್ತೇವೆಯೋ ಅದನ್ನೇ ನಮ್ಮೊಡನೆ ಇರುವ ಹೃದಯಗಾಳಿಗೂ ಧಾರೆ ಎರೆಯ ಬಯಸೋಣ. ಹುಡುಕುತ್ತಾ ಹೋದರೆ ಬದುಕಿಗೆ ಸಾವಿರ ಜನ ಸಿಗಬಹುದು. ಆದರೆ ಅದರಲ್ಲಿ ಪ್ರೀತಿಯ ಒಂದು ಮನವ ಮಾತ್ರ  ಬಯಸುವುದು ಅಲ್ಲವೇ? ಪ್ರಾಣಿಗಳು ಕೂಡಾ ಒಂದೇ ಪಾಟ್ನರ್ ನ್ನು ಸೆಲೆಕ್ಟ್ ಮಾಡುತ್ತವೆ. ಮಾನವತೆ ಮೆರೆವ ನಿಷ್ಕಲ್ಮಶ ಹೃದಯ ಮಾತ್ರ ನಮಗೆ ಬೇಕಾಗಿದೆ ಅಲ್ಲವೇ? ನನಗೆ ಸುಖ ನೀಡು ಎನ್ನುವ ಬದಲು, ನಿನ್ನ ಬಾಳಿಗೆ ನಾನು ಎಂದೆಂದೂ ಬೆಳಕಾಗಿ ಇರುತ್ತೇನೆ, ನಿನ್ನ ಜೀವನದ ಕಟ್ಟ ಕಡೆಯ ದಿನದವರೆಗೂ ನಾ ನಿನ್ನ ಬಾಳಿನಲ್ಲಿ ಜೊತೆಯಾಗಿಯೇ ಇರುವ ಮಾತು ಕೊಡುತ್ತೇನೆ ಎನ್ನುವ ಜೀವ ನಮ್ಮನ್ನು ಕಾಯುತ್ತದೆ. ಆದರೂ ಕೆಲವೊಮ್ಮೆ ಆ ಲೆಕ್ಕಾಚಾರವೂ ತಪ್ಪಾಗುತ್ತದೆ. ಕೇವಲ ಬಾಯಿ ಮಾತಿಗೆ ತಮ್ಮ ಬೇಳೆ ಬೇಯಿಸಿಕೊಳ್ಳಲು ಹಾಗೆ ಹೇಳಿರಲೂ ಬಹುದು.ತದ ನಂತರ ನಂಬಿಸಿ, ನಂಬಿಕೆಗೆ ದ್ರೋಹ ಮಾಡುವವರು ಇಲ್ಲ ಎಂದಲ್ಲ ಅಲ್ಲವೇ?
      ಎಲ್ಲೋ ಸಣ್ಣ ಪುಟ್ಟ ತಪ್ಪುಗಳಾದರೆ ಕ್ಷಮೆ ಇರಲಿ ಅಲ್ಲವೇ?
ಕ್ಷಮಿಸಲು ಸಾಧ್ಯ ಆಗದ ತಪ್ಪುಗಳಿದ್ದರೆ ಶಿಕ್ಷೆಯೇ ಬರಲಿ. ಯಾರೂ  ನಮ್ಮ ನಂಬಿಕೆಗೆ ದ್ರೋಹ ಬಗೆಯಲಾರರು ಎಂದು ಹೇಳುವ ಹಾಗಿಲ್ಲ, ನಾವು ಹಾಗೆ ಮಾಡುವುದೇ ಇಲ್ಲ ಅಂತ ಬದುಕಬೇಕು ಅಷ್ಟೇ. ನಮ್ಮ ಪ್ರೀತಿಗೆ ಮೋಸ ಆಗಲಾರದು ಎಂಬ ಭಾವನೆ ಇಲ್ಲದೆ ಸಾಗುತ್ತಾ ಇರುತ್ತೇವೆ. ನಾಜೂಕಿನ ಬದುಕಿನಲ್ಲಿ ಕೇಳಿದ್ದು ನೋಡಿದ್ದು ಯಾವುದೂ ಸುಳ್ಳು ಆಗಬಹುದು. ಆದರೆ ಅನುಭವಿಸಿದ್ದು ಮಾತ್ರ ಸತ್ಯ. ಅದನ್ನು ಮರೆಯಲು ಸಾಧ್ಯವೇ ಇಲ್ಲ. ಹಾಗಂತ ಬದುಕು ನಿಲ್ಲದು. ನಾವು ಏನು ಎಂದು ನಮಗೆ ಗೊತ್ತಿರಬೇಕು. ನಮ್ಮ ಜೊತೆಗೆ ಇರುವವರು ಹೇಗೆ ಇದ್ದಾರೆ ಎಂಬುದನ್ನು ಕೂಡಾ ನಾವು ಅರ್ಥ ಮಾಡಿಕೊಳ್ಳ ಬೇಕು. ನಮ್ಮನ್ನು ಒಟ್ಟಾಗಿ ಇತರ ಜನರ ಜೊತೆ ಸೇರಿಸುವುದು ಆ ದೇವರು. ಆ ದೇವರ ಸಂಬಂಧ ಕೆಡುಕಾಗದು.ನಮ್ಮ ಮನಸ್ಸು ಸ್ಥಿರವಾಗಿ ಇರಬೇಕು. ನಮ್ಮಲ್ಲಿ
ಕೆಟ್ಟ ಭಾವನೆಗಳು ಬರಬಾರದು. ಯಾವತ್ತಾದರೂ ನಮ್ಮವರು ನಮ್ಮವರೇ. ಯಾರು ಏನೇ ಅಂದರೂ ಅವರು ಪರರಲ್ಲ. ಅವರಲ್ಲಿ ನಮ್ಮ ನಂಬಿಕೆ ಹೇಗಿದೆ ಎಂಬುದನ್ನು ನಾವು ಅರಿತಿರಬೇಕು.
       ನಾವೇ ಸಮಾಜ ಅಲ್ಲವೇ?  ಕ್ಷಮೆ ನಮ್ಮಲ್ಲಿ ಇರಬೇಕು.
ಯಾವ ಮನುಜನೂ ನೂರು ಶೇಕಡಾ ಸರಿ ಇರಲು ಸಾಧ್ಯ ಇಲ್ಲ.
ದೇವರು ಕೂಡಾ ಎಲ್ಲರನ್ನೂ ಒಂದೇ ರೀತಿ ಇಟ್ಟಿಲ್ಲ, ಸೃಷ್ಟಿಸಿಲ್ಲ.
ಏರು ತಗ್ಗುಗಳ ಜೊತೆ ಆಟವಾಡುತ್ತ ಸಂತಸದಿ ಬದುಕುವುದೇ ಜೀವನ. ಕಷ್ಟ ಸುಖಗಳ ಮೀಲನವಿದು. ಮನದ ಭಾವ ಮುಖ್ಯ ಇಲ್ಲಿ. ಚೆನ್ನಾಗಿ ಬದುಕಲು ಒಂದಿಂಚೂ ಕೆಟ್ಟದು ಅಲ್ಲಿ ಸುಳಿಯಬಾರದು. ನಮ್ಮದು ಎಂದರೆ ಅದು ನಮ್ಮದು ಮಾತ್ರ. ಪ್ರೀತಿಯಲ್ಲಿ ಹೊಟ್ಟೆಕಿಚ್ಚು, ಮತ್ಸರ ಆಗಾಗ ಸುಳಿಯುತ್ತದೆ. ನಮ್ಮ ಪದಗಳಿಂದ,  ಮಾತಿನಿಂದ ಪರರ ನೋಯಿಸಿ ನಾವು ಚೆನ್ನಾಗಿ ಬದುಕಲು ಆಗದು. ನಮ್ಮ ಪ್ರೀತಿ ಪಾತ್ರರರನ್ನು ಅವರು ನಮಗೆ ಬೇಕಾದರೆ ಅವರನ್ನು ಬೇರೆಯವರ ಪಾಲಾಗಲು ಬಿಡಬಾರದು.
             ಏಕೆಂದರೆ ನೀರು ಸಮುದ್ರದ ಕಡೆ ಹರಿದ ಹಾಗೆ
ಮನಸ್ಸು ಶಾಂತಿ ನೆಮ್ಮದಿ ಸಂತಸದ ಕಡೆ ಹರಿಯುತ್ತದೆ. ನಾವು ಇಷ್ಟ ಪಟ್ಟವರಿಗೆ ಅದು ನಮ್ಮ ಕಡೆಯಿಂದಲೇ ಹರಿಯಬೇಕು.
ನಮಗೆ ಬೇಡದವರು ಅದನ್ನು ಹುಡುಕಿ ಎಲ್ಲಿ ಬೇಕಾದರೂ ಹೋಗಲಿ, ಅಲ್ಲವೇ? ಒಟ್ಟಿನಲ್ಲಿ ಎಲ್ಲಾ ಸಂಬಂಧಗಳೂ ಚೆನ್ನಾಗಿರಲಿ. ನೋವು ಪಟ್ಟವರಿಗೆ ಮತ್ತೆ ಮತ್ತೆ ನೋವೇ ಸಿಗದೆ ಇರಲಿ. ಸರ್ವರ ಬಾಳು ಬಂಗಾರವಾಗಲಿ ಎಂದು ಆಶಿಸೋಣ ಅಲ್ಲವೇ? ನೀವೇನಂತೀರಿ?

—————————

Leave a Reply

Back To Top