ಕಾವ್ಯಸಂಗಾತಿ
ಕವಿತಾ ವಿರೂಪಾಕ್ಷ
‘ನಾವುಹೆಂಗಸರೇ ಹೀಗೆ…!!’
ಹೌದು ಸ್ವಾಮಿ
ನಾವು ಹೆಂಗಸರೇ ಹೀಗೆ…
ಸಂತೋಷ ಮಕ್ಕಳಿಂದ
ಗೌರವ ಗಂಡನಿಂದ
ಪಡೆಯುವವರು…!
ಅಪ್ಪ, ಅಣ್ಣ,ಗಂಡನ
ರಕ್ಷಣಾ
ಬೊಗಸೆಯಲೇ
ಗುಬ್ಬಚ್ಚಿ ರೀತಿಯಲ್ಲಿ ಬೆಳೆದು,
ಬಿಟ್ಟರೂ ಹಾರಲಾರದವರು,
ಜೊತೆಜೊತೆಗೆ
ಹಾರುವುದೇ ಮರೆತವರು…!!
ಹೆಂಚಿನ ಮೇಲಿನ
ಬಿಸಿ ರೊಟ್ಟಿಯ ರುಚಿ
ಚಿಕ್ಕಂದಿನಲ್ಲಿ ಆವ್ವಗೋಳು ತಿನಿಸಿದ್ದಷ್ಟೇ ಗೊತ್ತು..!
ಈಗೀಗ
ಹೆಂಚಿನ ಬಿಸಿಗೊತ್ತೇ ಹೊರತು
ಬಿಸಿ ರೊಟ್ಟಿಯ ರುಚಿ ಮರೆತೇ ಹೋಗಿದೆ…!!
ಕೈ ತಟ್ಟಿ ಬಾಯಗಲಿಸಿ
ಜೋರಾಗಿ ನಗುವಾಸೆ
ಮಕ್ಕಳು ನೋಡಿದರೆ..,
ಮನೆಯೊಳಗಿನ ಅತ್ತೆ
ನೆರೆಹೊರೆಯವರು ಏನೆಂದಾರು..?
ತಕ್ಷಣವೇ ಕೃತಕ ಗಾಂಭೀರ್ಯ..!
ಒಮ್ಮೊಮ್ಮೆ ನಮಗೂ
ತಿಕ್ಕುವುದು,ತೊಳೆಯುವುದು,
ಬೇಯಿಸುವುದು ಸಾಕೆನಿಸುತ್ತದೆ
ಒಮ್ಮೆಗೇ
ಮಮತಾಮಯಿ,ತ್ಯಾಗಮಯಿ,
ಕರುಣಾಳು ಬಿರುದುಗಳು
ಒರಲಿಟ್ಟು ಕೂಗುವ ಕೂಗಿಗೆ
ಕಾಲುಗಳೇ ಅತ್ತ ಓಡುತ್ತವೆ…!
ಮನೆಯ ಮೂಲೆ ಮೂಲೆಗಳೂ
ನಮ್ಮಿಂದ ನಾಜೂಕಾಗಿವೆ
ಆದರೆ
ನಾವೂ………
ಛೇ ಬಿಡಿ..,
ನಾವು ಹೆಂಗಸರೇ ಹೀಗೆ…!
—————————————-
ಕವಿತಾ ವಿರೂಪಾಕ್ಷ