ಶ್ರೀ ಸಿದ್ದರಾಮ ಶಿವಯೋಗಿಗಳು ವಚನ ಮೌಲ್ಯ-ಸುಜಾತಾ ಪಾಟೀಲ ಸಂಖ

ತಾ ಮಾಡಿದ ಹೆಣ್ಣು ತನ್ನ ತಲೆಯನ್ನೇರಿತ್ತು,
ತಾ ಮಾಡಿದ ಹೆಣ್ಣು ತನ್ನ ತೊಡೆಯನ್ನೇರಿತು,
ತಾ ಮಾಡಿದ ಹೆಣ್ಣು ಬ್ರಹ್ಮನ ನಾಲಿಗೆಯನ್ನೇರಿತ್ತು,
ತಾ ಮಾಡಿದ ಹೆಣ್ಣು ನಾರಾಯಣನ ಎದೆಯನ್ನೇರಿತ್ತು,

ಅದು ಕಾರಣ ಹೆಣ್ಣು ಹೆಣ್ಣಲ್ಲ,
ಹೆಣ್ಣು ರಾಕ್ಷಸಿಯಲ್ಲ,
ಹೆಣ್ಣು ಸಾಕ್ಷಾತ್ ಕಪೀಲಸಿದ್ಧ ಮಲ್ಲಿಕಾರ್ಜುನ ನೋಡಾ
.

ಶ್ರೀ ಸಿದ್ದರಾಮ ಶಿವಯೋಗಿಗಳು
*********

12 ನೇ ಶತಮಾನದಲ್ಲಿ ಅಪ್ಪ ಬಸವಣ್ಣನವರ ನೇತೃತ್ವದಲ್ಲಿ ಉದಯಿಸಿದ ಕ್ರಾಂತಿ ಸ್ತ್ರೀಕುಲದ  ಉದ್ಧಾರಕ್ರಾಂತಿ, ಪುನರ್ಜನ್ಮ ಕ್ರಾಂತಿ ಎಂದರೆ ಅತಿಶಯೋಕ್ತಿಯಲ್ಲ,

ಬಾಲ  ಬಸವಣ್ಣನವರು ತಮ್ಮ 8ನೇ ಎಳೆ ವಯಸ್ಸಿನಲ್ಲೇ ಅಕ್ಕನಿಗೆ  
ಕೊಡಲಾಗದ  ಹಕ್ಕು  ಸ್ವಾತಂತ್ರ್ಯ  ನನಗೇಕೆ? ಎಂದು ಮನೆಬಿಟ್ಟು ಹೊರಟ ಮಹಾಮಾನವತಾವಾದಿ ಅಪ್ಪ ಬಸವಣ್ಣನವರು, ಸ್ತ್ರೀಕುಲದ ಉದ್ಧಾರಕ್ಕಾಗಿ,ಬೇಧರಹಿತ ಸಮಾಜ ನಿರ್ಮಾಣಕ್ಕೆ, ಮಾಡಿದ ತ್ಯಾಗ ,ಕಂಡುಂಡ ಕಷ್ಟ ನೋವು ಅಷ್ಟಿಷ್ಟಲ್ಲ.ಕಾರ್ಮೋಡ ಕವಿದು, ಕಗ್ಗತ್ತಲೆಯಾದ  ಸ್ತ್ರೀಯರ ಬದುಕಿನಲ್ಲಿ ಬೆಳಕಿನ ಸೆಲೆಯಾಗಿ ಬಂದವರು ಬಸವಾದಿ ಶರಣರು.

ವರ್ಣಭೇದ, ವರ್ಗಭೇದ, ಜಾತಿಭೇದದ ಹೀನಾಯ ಕರ್ಮಠತನದಿಂದ ಶಾಪಕ್ಕೆ ಗುರಿಪಡಿಸಿ, ಎಲ್ಲಾ ಮಗ್ಗುಲಗಳಿಂದ ಸ್ತ್ರೀ ಶೋಷಣೆ ರಾಜಾರೋಷವಾಗಿ ನಡೆದಿತ್ತು.
ಈ ಅಸ್ಪೃಶ್ಯ ,ಕ್ರೂರ ನಡತೆಯ ವಿಮೋಚನೆಗೆ ಸೂರ್ಯ ಕಿರಣವಾಗಿ ಬಂದರು ಜಗಜ್ಯೋತಿ ಬಸವಾದಿ ಶರಣರು.

ಆದ್ದರಿಂದಲೇ ಜನಪದಿಗರು ಒಂದು ಕಡೆ ಹೇಳುತ್ತಾರೆ.

“ಬಸವಣ್ಣ ಬರುವಾಗ ಬಿಸಿಲು ಬೆಳದಿಂಗಳು ಮೊಗ್ಗು ಮಲ್ಲಿಗೆ ಅರಳ್ಯಾವ !
ಮೊಗ್ಗು ಮಲ್ಲಿಗೆ ಅರಳ್ಯಾವ ಯಾಲಕ್ಕಿ ಗೊನೆ ಬಾಗಿ ಹಾಲ ಸುರಿದಾವ”.

ಎಂಬಂತೆ ಈ ಎಲ್ಲ ಅಭಿ ಶಾಪಗಳ ವಿಮೋಚನೆಗಾಗಿ ಕ್ರಿಯಾತ್ಮಕ ಹೋರಾಟ ಮಾಡಿದ ಶರಣರು,
ಸ್ತ್ರೀಯರಲ್ಲಿರುವ ಅಶ್ಮಿತೆಯನ್ನು ಜಾಗ್ರತೆಗೊಳಿಸಿ ಅವರಿಗೆ ಸಮಾಜದ ಸರ್ವಕ್ರಿಯೆಗಳಲ್ಲೂ ಸಮಾನ ಪಾಲುಗೊಳ್ಳುವಿಕೆಯ ಅವಕಾಶ ಮಾಡಿಕೊಟ್ಟರು.

 ಬಸವಾದಿ ಶರಣರು ಇಡೀ ಜಗತ್ತಿನಲ್ಲಿ ಮೊಟ್ಟ ಮೊದಲು ಸ್ತ್ರೀ ಶೋಷಣೆಯ ವಿರುದ್ಧ ಧ್ವನಿ ಎತ್ತಿ ,ಕಹಳೆ ಮೊಳಗಿಸಿ ಅನುಸರಣೆಯ ದಿಟ್ಟ ನಿರ್ಧಾರಕ್ಕೆ ಪ್ರಾಣ ಪಣಕ್ಕಿಟ್ಟ ಕೆಚ್ಚೆದೆಯ ಧೀಮಂತಿಕೆ ಶರಣರದ್ದು ಎಂಬ ಹೆಮ್ಮೆ ನಮ್ಮದು.

ಹುಟ್ಟು, ಮುಟ್ಟು ,ಮೈಲಿಗೆ, ಸೂತಕಗಳ ಬಲೆ ಹಾಕಿ ಕೆಟ್ಟ ಪರಂಪರೆಗೆ ಸ್ತ್ರೀಯರನ್ನು ಗುರುಪಡಿಸಿ, ಸಾಮಾಜಿಕ, ಧಾರ್ಮಿಕ ,ಆರ್ಥಿಕ , ಶೈಕ್ಷಣಿಕ, ರಾಜಕೀಯ, ಆದ್ಯಾತ್ಮಿಕ  ಹೀಗೆ ಎಲ್ಲ ಬಗೆಯ ಸ್ವಾತಂತ್ರ್ಯವನ್ನು ಕಸಿದುಕೊಂಡು ಸ್ತ್ರೀಯರನ್ನು ಎರಡನೆಯ ದರ್ಜೆಯ ಪ್ರಜೆಯನ್ನಾಗಿಸಿದ್ದು ಸ್ತ್ರೀ ಕುಲಕ್ಕೆ ಬಗೆದ ದೊಡ್ಡ ದ್ರೋಹವಾಗಿತ್ತು.

ಕೇವಲ ಪುರುಷನ ಭೋಗದ ವಸ್ತುವಾಗಬೇಕಾಗಿ ಬಂದ ಮಹಿಳೆಯ ಕಥೆ ಕರುಣಾಜನಕ ವ್ಯಥೆಯಾಗಿಯೇ ಮುಂದುವರಿಯುತ್ತಾ ಬಂದಿತ್ತು. ಇಂತಹ ವ್ಯಥೆಯ ಬದುಕನ್ನು ಅಂತ್ಯಗೊಳಿಸಿದ ಅನನ್ಯ ನಡೆ ಶರಣರದ್ದು.

ಇಂದಿಗೂ ಸಂವಿಧಾನಿಕವಾಗಿ ಸ್ತ್ರೀಯರಿಗೆ ಸಮಾನವಾದ ಅವಕಾಶ ಕೊಡಲು ಸಾಧ್ಯವಾಗದ ಕಾಲದಲ್ಲಿ ವಿಚಾರ ಮಾಡಬೇಕು ನಾವುಗಳೆಲ್ಲಾ,
ಒಂಬತ್ತು ನೂರು ವರ್ಷಗಳ ಹಿಂದೆಯೇ…, ಅಂತಹ ಒಂದು ಸಂದಿಂಗ್ಧ ಪರಸ್ಥಿತಿಯಲ್ಲಿ 33ಕ್ಕೂ ಹೆಚ್ಚು ವಚನಕಾರ್ತಿಯರು ಸ್ವತಂತ್ರವಾಗಿ ವಚನಗಳನ್ನು ಬರೆದು, ಎಲ್ಲಾ ದೌರ್ಜನ್ಯಗಳ ಎದುರು ಸಿಡಿದು ನಿಂತು ಮುಕ್ತವಾಗಿ ಮಾತನಾಡಿದ್ದನ್ನು ಕೇಳಿದರೆ ಹಾಗೂ ಮಾತಾಡಿದಂತೆ ನಡೆದದ್ದನ್ನು ಗಮನಿಸಿದರೆ ಜಗತ್ತಿನ ಇತಿಹಾಸದಲ್ಲಿ ಅಂತಹ ಕ್ರಾಂತಿ ನಡೆದದ್ದು ,ಅದ್ಭುತವಾದ ಅಮರ ಇತಿಹಾಸವೇ ಆಗಿದೆ.

ಅಂದಿನ ಶರಣೀಯರೆಲ್ಲರೂ ಕೇವಲ ವಚನಗಳನ್ನು ಬರೆಯಲಿಲ್ಲ ನಡೆದಂತೆ ನುಡಿದ ಪ್ರಮಾಣಗಳಾಗಿದ್ದವು ಅವರು ಬರೆದ ವಚನಗಳು.


ಉದಾಹರಣೆಗೆ: ಸ್ತ್ರೀಕುಲ ತಿಲಕ  ಮೊದಲ ಕವಿಯತ್ರಿ ಅಕ್ಕ ಮಹಾದೇವಿ, ಶರಣೆ ಆಯ್ದಕ್ಕಿ ಲಕ್ಕಮ್ಮ, ಶರಣೆ ಹಡಪದ ಲಿಂಗಮ್ಮ, ಶರಣೆ ಸತ್ಯಕ್ಕ,ಶರಣೆ ಸಂಕವ್ಯೆ, ಶರಣೆ ಕಾಳವ್ವೆ, ಶರಣೆ ಅಕ್ಕನಾಗಮ್ಮ, ಶರಣೆ ಮುಕ್ತಾಯಕ್ಕ ಹೀಗೆ ಅನೇಕ ಸಾಮಾನ್ಯ ಸ್ತ್ರೀಯರು ಅಸಾಮಾನ್ಯ ಅಂತರಾತ್ಮದ ವಚನಗಳನ್ನು ರಚಿಸಿದಷ್ಟೆ ಅಲ್ಲ ಅವುಗಳನ್ನು ಬದುಕಿನಲ್ಲಿ ಅನುಸಂಧಾನ ಮಾಡುವ ಮೂಲಕ ಇಂದಿಗೂ ಜೀವಂತವಾಗಿದ್ದಾರೆ.

ಆದ್ದರಿಂದಲೇ ಶಿವಯೋಗಿ ಸಿದ್ಧರಾಮರು ಸ್ತ್ರೀಯರನ್ನು ಜಗತ್ತಿನ ಎದುರಲ್ಲಿ ಹೆಣ್ಣನ್ನು ಸಾಕ್ಷಾತ್ ಕಪೀಲಸಿದ್ಧ ಮಲ್ಲಿಕಾರ್ಜುನ ಎಂದು ದರ್ಶಿಸಿ ದ್ದಾರೆ.
ಹೆಣ್ಣು ಹೆಣ್ಣಲ್ಲ, ಹೆಣ್ಣು ರಾಕ್ಷಸಿಯಲ್ಲ ಹೆಣ್ಣು ಸಾಕ್ಷಾತ್ ಕಪಿಲಸಿದ್ದ ಮಲ್ಲಿಕಾರ್ಜುನ ನೋಡಾ

ಡಾ: ಬಾಬಾಸಾಹೇಬ್ ಅಂಬೇಡ್ಕರ್ ಒಂದು ಕಡೆ ಹೇಳುತ್ತಾರೆ, “ಇತಿಹಾಸ ಮರೆತವರು ಇತಿಹಾಸ ಸೃಷ್ಟಿಸಲಾರರು” ಶರಣರು ಹೇಳಿದಂತೆ ,


ಹೆಣ್ಣು ಎಂದರೆ ಚೈತನ್ಯ ಶಕ್ತಿ
ಹೆಣ್ಣು ಎಂದರೆ ಜನಪದ
ಹೆಣ್ಣು ಎಂದರೆ ನೆಲ
ಹೆಣ್ಣು ಎಂದರೆ ಜಲ
ಹೆಣ್ಣು ಎಂದರೆ ದೇವತೆ


ಹೆಣ್ಣು ಎಂದರೆ ಜಂಗಮ ಹೀಗಾಗಿ ನಿಸರ್ಗ ಸಹಜವಾದ ಅಭಿವ್ಯಕ್ತಿಯಲ್ಲಿ ಶ್ರೀ ಸಿದ್ಧರಾಮ ಶಿವಯೋಗಿಗಳು ಸ್ತ್ರೀ ಸಂವೇದನೆಯನ್ನು ಕುರಿತು ವ್ಯಕ್ತಪಡಿಸಿದ  ವಚನವು ಸಮಷ್ಟಿಯ ಸಂತುಲತೆಯ ವೈಚಾರಿಕ ಸಾಕ್ಷಿಯಾಗಿದೆ.
ಎಲ್ಲರಿಗೂ ಶರಣುಶರಣಾರ್ಥಗಳು


2 thoughts on “ಶ್ರೀ ಸಿದ್ದರಾಮ ಶಿವಯೋಗಿಗಳು ವಚನ ಮೌಲ್ಯ-ಸುಜಾತಾ ಪಾಟೀಲ ಸಂಖ

  1. ‌.ಹೆಣ್ಣು ಜಗದ ಕಣ್ಣು ಅಥ೯ವತ್ತಾದ ಚಿಂತನೆ ಮೇಡಂ ಶರಣಾರ್ಥಿಗಳು

  2. AkkaSujata Patil is called Akkamahadevi of 12th Century.She explains vachanas very explicitly and in aconvincing manner. Which arrests heart of every one who listens it. She is genius.and mystic.

Leave a Reply

Back To Top