ಡಾ.ಎಂ.ಎಸ್.ಮೂರ್ತಿಯವರ ಕೃತಿ,”ಯಶೋಧರೆ ಮಲಗಿರಲಿಲ್ಲ” ಒಂದುಅವಲೋಕನ-ಎಸ್ಕೆ ಕೊನೆಸಾಗರ

ಯಶೋಧರೆ ಮಲಗಿರಲಿಲ್ಲ
ನಾಟಕ
ಡಾ.ಎಂ.ಎಸ್.ಮೂರ್ತಿ
ಬೋಧಿಶ್ರೀ ಪ್ರಕಾಶನ, ತುಮಕೂರು
ಬೆಲೆ: ೫೦
ಪುಟ ೫೦

[11:09 am, 05/02/2024] S K Konesagar: ಲೋಕ ಬೆಳಕಿನ ಹಾದಿಯಲ್ಲಿ ಕಾಣದ ತ್ಯಾಗದ ಚಿತ್ರ
ಡಾ.ಎಂ.ಎಸ್. ಮೂರ್ತಿ ಅವರ ನಾಟಕ ‘ಯಶೋಧರೆ ಮಲಗಿರಲಿಲ್ಲ’
ಕನ್ನಡದ ಹಿರಿಯ ಚಿತ್ರಕಲಾವಿದರು ಹಾಗೂ ಲೇಖಕರಾಗಿರುವ ಬೆಂಗಳೂರಿನ ಡಾ.ಎಂ.ಎಸ್.ಮೂರ್ತಿ ಸೂಕ್ಷ್ಮ ಮನಸ್ಸಿನ ಹಿರಿಯ ಬರಹಗಾರರು ಮತ್ತು ಚಿತ್ರಕಲಾವಿದರು. ಬಗೆಬಗೆಯ ಹೂವುಗಳ ಮಕರಂದವನ್ನು ತಂದು ಜೇನ್ನೊಣಗಳು ಜೇನು ಮಾಡುವಂತೆ ತಮ್ಮ ಬದುಕಿನ ಮತ್ತು ತಾವು ಕಂಡುಂಡ ವಿವಿಧ ಸ್ತರಗಳಲ್ಲಿನ ಅನುಭವಕ್ಕೆ ಬರಹದ ಬೆಳಕನ್ನು ತಂದು ತೋರಿದವರು. ತಾವು ಹುಟ್ಟಿ ಬೆಳೆದ ಮಹಾನಗರ ಬೆಂಗಳೂರನ್ನು ಬಿಟ್ಟು ನಮ್ಮ ನಾಡಿನ ಅಸ್ಮಿತೆಯಾದ ದೇಸೀಯತೆ ಪ್ರಜ್ಞೆಗೆ ಹೆಚ್ಚು ಸ್ಪಂದಿಸಿದವರು. ಅದರಲ್ಲೂ ಬೌದ್ಧಧರ್ಮ ಮತ್ತು ಜಗದ ಬೆಳಕು ಬುದ್ಧನ ಸುತ್ತಲೇ ತಮ್ಮ ವಿಚಾರ ಸರಣಿಗಳನ್ನು ಆಳವಾಗಿ ವಿಸ್ತರಿಸಿಕೊಂಡು ಕೃತಿಗಳನ್ನು ರಚಿಸಿದವರು. ಅದಕ್ಕೆ ಉದಾಹರಣೆಯಾಗಿ ಬುದ್ಧನೆಂಬ ಬೆಳಕು(ಕಾದಂಬರಿ), ಯಶೋಧರೆ ಮಲಗಿರಲಿಲ್ಲ(ನಾಟಕ) ಮತ್ತು ಬೌಲ್(ಕಾದಂಬರಿ) ಕೃತಿಗಳು ನಮ್ಮ ಮುಂದಿವೆ.
  ಈಗಾಗಲೇ ದೃಶ್ಯ(ಕಾದಂಬರಿ), ದೇಸೀ ನಗು ಮತ್ತು ನಿಜದ ನೆರಳು(ಪ್ರಬಂಧ ಸಂಕಲನಗಳು) ಕೃತಿಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ನೀಡಿದ್ದಾರೆ. ‘ಮಕ್ಕಳ ಮನಸ್ಸಿನ ಚಿತ್ರಗಳು’ ಮಹಾಪ್ರಬಂಧಕ್ಕೆ ಹಂಪಿಯ ಕನ್ನಡ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿಯನ್ನು ಪಡೆದುಕೊಂಡಿದ್ದಾರೆ. ಬುದ್ಧನೆಂಬ ಬೆಳಕು ಕೃತಿ ಇರಾನಿನ ಅಂತಾರಾಷ್ಟ್ರೀಯ ಬೈನಾಲೆ ಪ್ರಶಸ್ತಿ ಮತ್ತು ‘ದೇಸೀ ನಗು’ ಕೃತಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಗೌರವಕ್ಕೆ ಪಾತ್ರವಾಗಿವೆ. ಇವರ ‘ಯಶೋಧರೆ ಮಲಗಿರಲಿಲ್ಲ’ ನಾಟಕವು ಆಕಾಶವಾಣಿ ರಾಷ್ಟ್ರೀಯ ಪ್ರಶಸ್ತಿ ಪಡೆಯುವುದರೊಂದಿಗೆ ಮರಾಠಿ ಮತ್ತು ಇಂಗ್ಲಿಷಿಗೆ ಅನುವಾದಗೊಂಡಿದ್ದು ಇವರ ಬರಹದ ತಾಕತ್ತಿಗೆ ಸಾಕ್ಷಿಯಾಗಿದೆ. ಅಂಕಣಕಾರರಾಗಿ ಸಂಯುಕ್ತ ಕರ್ನಾಟಕ ಪತ್ರಿಕೆಯಲ್ಲಿ ಬರೆದ ಚಿತ್ರಕಲೆ ಹಾಗೂ ಇತರ ಲೇಖನಗಳು ಅವರ ಸಂವೇದನಾಶೀಲ ವ್ಯಕ್ತಿತ್ವಕ್ಕೆ ಕನ್ನಡಿ ಎನ್ನಬಹುದು.
  ಒಂದೆರಡು ವರ್ಷಗಳ ಹಿಂದೆ ಅವರ ‘ಬೌಲ್’ ಕಾದಂಬರಿಯ ಬಗ್ಗೆ ಚರ್ಚೆಯನ್ನು ಇಳಕಲ್ಲಿನ ಗೆಳೆಯ ಕಾಸಿಮ್ ಕನಸಾವಿ ಏರ್ಪಡಿಸಿದ್ದರು. ಅಂದಿನ ಎಂಟು ಜನ ಓದುಗರು ಅದರ ಕುರಿತಾಗಿ ಅಭಿಪ್ರಾಯ ಮಂಡನಕಾರರಲ್ಲಿ ನಾನೂ ಒಬ್ಬನಾಗಿದ್ದೆನು. ಸಹ ಮಾತುಗಾರರ ಜೊತೆ ಬೌಲ್ ಕುರಿತಾಗಿ ಇಂದಿಷ್ಟು ಮಾತನಾಡಿದೆ. ಕನ್ನಡದ ವಿಶಿಷ್ಟ ಕಾದಂಬರಿಯಾಗಿ ಬೌಲ್ ಈಗಾಗಲೇ ಸುದ್ದಿ ಮಾಡಿತ್ತು. ಬೌದ್ಧ ಚಿಂತನೆಯ ಬೆಳಕಿನಲ್ಲಿ ಮಾನವ ತಾನು ಬಿಡಿಸಿಕೊಳ್ಳುವ, ಹಾಗೆಯೇ ನಿರಾಳಗೊಳ್ಳುವುದನ್ನು ತುಂಬ ಸೂಕ್ಷ್ಮವಾಗಿ ಕೃತಿ ಕಟ್ಟಿಕೊಟ್ಟ ಇವರ ಬರಹವನ್ನು ಕಂಡಿದ್ದೆ. ಅವರೊಬ್ಬ ನಾಟಕಕಾರರಾಗಿದ್ದು ಅವರು ಬರೆದ ಯಶೋಧರೆ ಮಲಗಿರಲಿಲ್ಲ ನಾಟಕವನ್ನು ಕೊಂಡು ತಂದು ಮತ್ತೆ ಮತ್ತೆ ಓದಿದೆ. ಅದು ಕೊಟ್ಟ ಅನುಭವ ಭಿನ್ನ ಎನಿಸಿತು. ಬುದ್ಧನ ಸಾಧನೆಯ ಹಾದಿಯ ನಡಿಗೆಯಲ್ಲಿ ಹಿಂದೆ ಪತ್ನಿ ಯಶೋಧರೆಯ ತ್ಯಾಗ ಇತ್ತು. ಅದು ಶುಭಾಶಯದ ಮಾದರಿಯಲ್ಲಿತ್ತು.
  ‘ಯಶೋಧರೆ ಮಲಗಿರಲಿಲ್ಲ’ ಒಂದು ಕಿರು ನಾಟಕವಾದರೂ ಅದು ನಮಗೆ ಕಾಣಿಸುವ ಬೆಳಕು, ಬದುಕಿನ ಮೋಹ ಪರದೆ ಮತ್ತು ಕೌಟುಂಬಿಕ ಸಂಬಂಧಗಳ ಬಿಡುಗಡೆಯ ಹೊತ್ತು ತರುವ ಅನೇಕ ತಲ್ಲಣಗಳಿಗೆ ಸಾಕ್ಷಿಯಾಗಿದೆ. ಇಲ್ಲಿ ಯುವರಾಜ ಸಿದ್ದಾರ್ಥ ಮಡದಿ ಯಶೋಧರೆ, ಮಗ ರಾಹುಲ, ತಂದೆ ಶುದ್ಧೋದನ. ಪ್ರಜೆಗಳು ಹಾಗೂ ರಾಜ್ಯವನ್ನು ತೊರೆಯುವಾಗ ಕಂಡ ಸಂಬಂಧದ ಸಂಕೋಲೆಗಳು ಒಂದುಕ್ಷಣ ಆತನನ್ನು ಆತಂಕಕ್ಕೆ ಈಡು ಮಾಡುತ್ತವೆ. ಆದರೂ ಬಯಲ ಬೆಳಕಿನತ್ತ ಮುಖ ಮಾಡಿದ ಸಿದ್ದಾರ್ಥ ರಾಜ್ಯ ತೊರೆಯುತ್ತಾನೆ. ಈ ಸಂದರ್ಭದಲ್ಲಿ ಯಶೋಧರೆಯ ಮಾತುಗಳು “ಇಲ್ಲಿಲ್ಲವೇ ಬೆಳಕು? ಇಲ್ಲಿರುವವರೆಲ್ಲ ಕತ್ತಲೆಯಲ್ಲಿರುವರೆ, ನಾನು ಕತ್ತಲಲ್ಲಿರುವೆನೆ? ಇಲ್ಲಿರುವ ಆನಂದಕ್ಕಿಂತಲೂ, ಶಾಂತಿಗಿಂತಲೂ ಮೀರಿದ ಅದಾವ ನೆಮ್ಮದಿ ಹುಡುಕ ಹೊರಟಿದ್ದಾನೆ ಇವನು?’ ಎಂಬ ಪ್ರಶ್ನೆಗಳು ತುಂಬ ಗಂಭೀರ ಚಿಂತನೆಯ ಹಾದಿಯನ್ನು ಹೇಳುತ್ತವೆ. ಲೋಕ ಬೆಳಕಿನ ಹಾದಿಗೆ ಬೆಳಕಾಗಲು ಹೊರಟವರ ಮಹಾನ್ ವ್ಯಕ್ತಿಗಳ ಕೌಟುಂಬಿಕ ಚಿತ್ರ ಹೀಗೆ ಇರುತ್ತದೆ. ಇದಕ್ಕೆ ಉದಾಹರಣೆಯಾಗಿ ಬಾಪೂಜಿ ಬದುಕಿನಲ್ಲೂ ಕಸ್ತೂರಬಾ ಅನೇಕ ಸಂದರ್ಭಗಳಲ್ಲಿ ಪ್ರಶ್ನಿಸಿದ್ದನ್ನು ನಾವು ಇತಿಹಾಸದಲ್ಲಿ ಕಾಣಬಹುದು. ಹೀಗೆ ವಿವಿಧ ಕತೆಗಳಲ್ಲಿನ ‘ಪುಣ್ಯ’ ಸ್ತ್ರೀಯರ ಬದುಕಿನ ಪುಟಗಳ ಉದಾಹರಣೆಗಳನ್ನು ಕಾಣಬಹುದು. ಅಲ್ಲಿಯೂ ಇಂಥ ‘ತ್ಯಾಗ’ದ ಭಾರ ಹೊತ್ತವರನ್ನು ಕಂಡು ಸುಮ್ಮನಾಗಿದ್ದೇವೆ.
  ನಾಲ್ಕು ದೃಶ್ಯಗಳಲ್ಲಿ ಮೂಡಿಬಂದ ಈ ರಂಗಕೃತಿ ಒಂದು ಓದಿಗೆ ಮುಗಿಯಬಹುದಾದರೂ ಒಂದಿಷ್ಟು ಗಂಭೀರ ವಿಚಾರಗಳಿಗೆ ದಾರಿ ಮಾಡಿಕೊಡುತ್ತದೆ. ಅಗಲಿಕೆಯ ನೋವು ಮತ್ತು ಅದರ ಪರಿಣಾಮಗಳ ಬಗ್ಗೆ ಹಲವು ಸಂಭಾಷಣೆಯಲ್ಲಿ ಕಾಣಬಹುದಾಗಿದೆ. ಮಡದಿ ಮಕ್ಕಳನ್ನು ತೊರೆದ “ಇವನನ್ನು ಯಾರು ಆದರಿಸುತ್ತಾರೆ ಮತ್ತು ಪ್ರೀತಿಯಿಂದ ಕಾಣುತ್ತಾರೆ” ಎಂದು ಯಶೋಧರೆ ಒಳ ಮನಸ್ಸು ಒಮ್ಮೆ ಕೇಳುತ್ತದೆ. ಸಿದ್ದಾರ್ಥ ಬುದ್ಧನಾಗಿ ಬಂದಾಗ ಇಡೀ ರಾಜ್ಯವೇ ಸಂಭ್ರಮಿಸಿದರೆ ಯಶೋಧರೆ ಸಂಬಂಧ ಮತ್ತು ಸಂಸಾರ ಕೊಂಡಿಯನ್ನು ಕಳಚಿ ನಿರಪೇಕ್ಷಿತಳಂತೆ ವರ್ತಿಸುತ್ತಾಳೆ. ಅವನನ್ನು ನೋಡಲು ಕೂಡ ಇಚ್ಛಿಸುವುದಿಲ್ಲ. ಇದು ಅವಳ ಸ್ಥಿತಪ್ರಜ್ಞೆ ಎನ್ನಬೇಕೊ ಸಹಜವಾಗಿ ಅಗಲಿಕೆಯ ನೋವನ್ನು ಅನುಭವಿಸಿ ಗಟ್ಟಿಯಾದ ಒಬ್ಬ ಮಡದಿ ಎನ್ನಬೇಕೊ ಎಂದು ಕಾಡುತ್ತದೆ.
  ಮೂರ್ತಿ ಅವರಿಗೆ ಬುದ್ಧ ಮತ್ತು ಅವನ ತತ್ವಗಳು ಕಾಡಿದ್ದು ಆ ದೆಸೆಯಲ್ಲಿ ಅವರ ಬರವಣಿಗೆಯಲ್ಲಿ ಮೂಡಿಬಂದ ‘ಬುದ್ಧನೆಂಬ ಬೆಳಕು’ ಮತ್ತು ‘ಬೌಲ್’ ಕಾದಂಬರಿಗಳು ಒಂದು ಹೊಸ ಚಿಂತನ ಮಾದರಿಗಳನ್ನು ಹೊಂದಿವೆ. ಎರಡೂ ಕೃತಿಗಳನ್ನು ಅವಲೋಕಿಸಿದಾಗ ಅಲ್ಲಿನ ಪಾತ್ರಗಳ ಮೂಲಕ ಬದುಕಿನ ಸತ್ಯದ ಅನಾವರಣಗೊಳಿಸುವ ಬರಹ ಶೈಲಿ ಸಿದ್ಧಿಸಿದೆ. ಇವರ ಸದ್ಯದ ನಾಟಕವೂ ಕೂಡ ಅದೇ ಚಿಂತನೆಯನ್ನು ತೋರುತ್ತದೆ. ಬೌಲ್‌ನಲ್ಲಿ ಗಂಡ ಮಾಲಿಂಗನನ್ನು ಕಳೆದುಕೊಂಡ ಸುಮಲತೆ ಕೊನೆಯಲ್ಲಿ ಮಗ ಗುರುವಾದ ಆನಂದನ ಸ್ಥಿತಿ ಕಂಡು ಸುಮ್ಮನಾಗುತ್ತಾಳೆ. ತಾನು ಬದುಕಿನಲ್ಲಿ ಎಂತೆAಥ ಏರಿಳಿತಗಳನ್ನು ಕಂಡರೂ ಸ್ಥಿತಪ್ರಜ್ಞಳಾಗಿದಂತೆ ಇಲ್ಲಿನ ಯಶೋಧರೆ ಅದನ್ನೇ ಪಾಲಿಸಿದಂತೆ ನಮ್ಮ ಮುಂದೆ ನಿಲ್ಲುತ್ತಾಳೆ.
  ಬೆನ್ನುಡಿಯ ನಾಲ್ಕು ಸಾಲುಗಳಲ್ಲಿ ಡಾ.ಎಲ್ ಬಸವರಾಜು ಅವರ ಮಾತಿನಂತೆ “ನಿಷ್ಠೆ ಮತ್ತು ಸ್ವಾರ್ಥಗಳೆರಡರ ನಡುವೆ ಘರ್ಷಣೆಯಾಗುವ ಇಂಥಹದೊAದು ಸಂದಿಗ್ಧ ಪರಿಸ್ಥಿತಿಯಲ್ಲಿ ಬುದ್ಧನನ್ನು ಲೇಖಕರ ಯಶೋಧರೆ ಅರ್ಥ ಮಾಡಿಕೊಂಡಿದ್ದಾಳೆ. ಈಕೆ ಮಹಾತಾಯಿಯೇ” ಎಂದಿದ್ದಾರೆ. ಮುನ್ನುಡಿಯನ್ನು ಬರೆದ ಹಿರಿಯ ರಂಗವಿಮರ್ಶಕಿ ಡಾ.ವಿಜಯಾ ಇವರ ಬರವಣಿಗೆಯ ಗತಿಯನ್ನು ತುಂಬಾ ಆಪ್ತವಾಗಿ ಚರ್ಚಿಸುತ್ತ “ಲೋಕ ಕಲ್ಯಾಣಕ್ಕಾಗಿ ಹೊರಟವನು ಮೋಹದಲ್ಲಿ ಕರಗಿಹೋಗದ ಹಾಗೆ ನೋಡಿಕೊಳ್ಳುವುದು ಕರ್ತವ್ಯ ಎಂದು ಭಾವಿಸುವ ಯಶೋಧರೆಯ ಉದಾತ್ತತೆ”ಯನ್ನು ಗುರುತಿಸಿದ್ದಾರೆ.
  ಒಂದು ರಂಗಕೃತಿ ಅಭಿನಯದ ಹಾಸಿನಲ್ಲಿ ದಕ್ಕಿದಂತೆ ಅದು ಓದು ವಿಮರ್ಶೆಗೆ ದಕ್ಕಲಾರದು ಎಂದು ನನ್ನ ಅಭಿಪ್ರಾಯ. ನಾಟಕದ ಪ್ರದರ್ಶನ ಲೆಕ್ಕಾಚಾರದ ಲಕ್ಷಣಗಳಾದ ಚಲನೆ, ಪರಿಕರ, ಬೆಳಕು, ಸಂಗೀತ, ಕಲಾವಿನ್ಯಾಸ, ಸಂಭಾಷಣೆಯ ಮೊನಚು ಪಾತ್ರಧಾರಿಯ ಮತ್ತು ದೃಶ್ಯಗಳಲ್ಲಿ ಮೌನ ನಾಟಕದ ಸಫಲತೆಗೆ ದಾರಿಯಾಗಬಹುದು. ಈ ನಾಟಕದಲ್ಲಿ ಕೇವಲ ನಾಲ್ಕು ಪಾತ್ರಗಳಿದ್ದರೂ ಹತ್ತಾರು ಪಾತ್ರಗಳು ಹೇಳುವಷ್ಟು ವಿಷಯದ ಗತಿಯನ್ನು ಹೊಂದಿದೆ.
 ಬುದ್ಧ ಮಾನವ ಸಮಾಜದ ಬೆಳಕು. ಅದನ್ನು ಕಾಣಿಸಲು ಕಾದಂಬರಿ ಮತ್ತು ನಾಟಕಗಳ ಮೂಲಕ ಹೊರಟ ಲೇಖಕರ ಆಶಯ ನಿಜಕ್ಕೂ ಸ್ವಾಗತಾರ್ಹ. ಅಧಿಕಾರ, ಸ್ವಮೋಹದ ವ್ಯಸನ ಮತ್ತು ಧನದಾಹದ ಇಂದಿನ ಪ್ರಪಂಚಕ್ಕೆ ಬುದ್ಧ ಮತ್ತು ಆತನ ವಿಚಾರ ಸರಣಿ ಒಂದಿಷ್ಟು ನೆಮ್ಮದಿ ನೀಡಬಲ್ಲದು ಎಂಬ ಆಸೆಯೂ ನನ್ನದು.

———————————————————————-

One thought on “ಡಾ.ಎಂ.ಎಸ್.ಮೂರ್ತಿಯವರ ಕೃತಿ,”ಯಶೋಧರೆ ಮಲಗಿರಲಿಲ್ಲ” ಒಂದುಅವಲೋಕನ-ಎಸ್ಕೆ ಕೊನೆಸಾಗರ

  1. ಆತ್ಮೀಯ ಕೊನೆಸಾಗರ ಅವರೇ ನಮಸ್ಕಾರ ಗಳು…ನಿಮ್ಮ ಓದಿನ ಪ್ರೀತಿಗೆ,ಬರಹದ ಸೌಜನ್ಯ ಕೆ ಋಣಿ.
    ಎಂ.ಎಸ್. ಮೂರ್ತಿ

Leave a Reply

Back To Top