ಕಾವ್ಯ ಸಂಗಾತಿ
ಅನುರಾಧಾ ರಾಜೀವ್ ಸುರತ್ಕಲ್
ಗಜಲ್
ಹಾವಿನ ಹೆಡೆಯಲಿ ಕುಣಿಯುತ ದ್ವೇಷದ
ಬೆಂಕಿಯ ಆರಿಸಿದೆ ನೀನು
ನೋವಿನ ಬಿಸಿಯನು ತಣಿಸುತ ಪ್ರೇಮದ
ಮಳೆಯ ಸುರಿಸಿದೆ ನೀನು
ಭಾವನೆ ಕೆಣಕುತ ಚಾಂಚಲ್ಯದ ಚಿತ್ತದಿ
ಕುಟಿಲತೆ ಮೆರೆದೆ ಅಲ್ಲವೇ
ದೇವನ ಸಾನ್ನಿಧ್ಯದಿ ಭರವಸೆ ಮೂಡಲು
ಬೆಳಕ ಉರಿಸಿದೆ ನೀನು
ಮಾವಿನ ಎಲೆಯಲಿ ತೋರಣವ ಕಟ್ಟುತ
ಬಾಗಿಲ ಸಿಂಗಾರ ಮಾಡಿದೆ
ಬೇವಿನ ಕಹಿಯಲಿ ಸಿಹಿಯನು ಸೇರಿಸಿ
ಒಲವ ಸ್ಪುರಿಸಿದೆ ನೀನು
ಕಾವನು ಕೊಡುತಲಿ ಮರಿಗಳ ರಕ್ಷಿಸಿ
ಸಲಹಿ ಪೊರೆಯುವೆ ವಾತ್ಸಲ್ಯದಿ
ಸಾವಿನ ಭಯದಲಿ ಕಂಗಲಾಗಿ ಕೂಡಲು
ದಾರಿಯ ತೋರಿಸಿದೆ ನೀನು
ಬಾವಿಯ ಒಳಗಿನ ಕಪ್ಪೆಯಂತೆ ಜೀವನ
ಸಲ್ಲದು ಹೊರಪ್ರಪಂಚಕೆ ಕಾಲಿಡು
ಗೋವಿನ ನೆರಳಲಿ ನಿಶ್ಚಿಂತೆಯ ಬದುಕು
ಸುಲಭದಿ ಭರಿಸಿದೆ ನೀನು
ಕೋವಿಯ ಎದುರಿಸಿ ನಿಲ್ಲುವ ಛಲವು
ಇರಬೇಕು ಎದೆಯ ಗೂಡಲಿ
ಪವನ ಸುತನ ಆರಾಧ್ಯ ರಾಮನೇ
ಕಾವಿಯ ಧರಿಸಿದೆ ನೀನು
ಹೂವಿನ ಮಾಲೆಯಲಿ ಭಕುತಿಯ ಸೇರಿಸಿ
ಮಾಧವನ ಪಾದಕೆ ಅರ್ಪಣೆ
ಗಾವುದ ದೂರದಲಿ ರಾಧೆಯ ಹೃದಯದಿ
ಕಂಪನ ತರಿಸಿದೆ ನೀನು
ಅನುರಾಧಾ ರಾಜೀವ್ ಸುರತ್ಕಲ್