ಕಾವ್ಯ ಸಂಗಾತಿ
ನಾಗರಾಜ ಜಿ. ಎನ್. ಬಾಡ
ಹುಡುಕಾಟ…
ನನ್ನೊಳಗೆ ನಾನು ಕಳೆದು ಹೋಗಿರುವೆ
ಜಗದ ಸಂತೆಯನು ಮರೆತೇ ಬಿಟ್ಟಿರುವೆ
ಏಕಾಂತವನ್ನು ಅಪ್ಪಿಕೊಂಡಿರುವೆ
ಮೌನಕ್ಕಿಂತಲೂ ಮೌನದಲಿ
ನನ್ನೊಳಗೆ ಧ್ಯಾನಿಸುತ್ತಿರುವೆ
ಕತ್ತಲೊಳಗೂ ಬೆಳಕ ಹುಡುಕುತ್ತಲಿರುವೆ
ಕಣ್ಣೆದಿರಿನ ಮಾಯೆಗೆ ಸೋಲದೆ
ಸಂಬಂಧಗಳ ಬಲೆಯೊಳಗೆ ಸಿಲುಕದೆ
ಸೋಲು ಗೆಲುವುಗಳ ಲೆಕ್ಕಾಚಾರವ
ಮಾಡದೆ
ಸಾಗುವೆನು ಹೀಗೆ ಮುಂದೆ
ಹಿಂತಿರುಗಿ ನೋಡದೆ
ಎಲ್ಲವೂ ಗೌಣ ಎನಿಸುತಿದೆ
ಉಸಿರೊಳಗಿದೆ ನಿಟ್ಟುಸಿರ ಬಾರ
ತುಂಡರಿಸ ಬೇಕಿದೆ ನೋವಿನ ದಾರ
ಹುಡುಕಿ ಕೊಳ್ಳ ಬೇಕಿದೆ
ನೆಮ್ಮದಿಯ ತಾಣ
ಸೋಲದೆ ಮುನ್ನಡೆಯುವೆನು
ಈ ಬಾರಿ
ಕಂಡುಕೊಳ್ಳುವೆನು ಹೊಸ ದಾರಿ
ಗೆಲ್ಲಲೇ ಬೇಕೆಂಬ ಹುಚ್ಚಲ್ಲ
ಸೋಲಬಾರದೆಂಬ ಕಿಚ್ಚಷ್ಟೇ
ಸೋತು ಗೆಲ್ಲುವೆನು
ನೋವ ಮರೆಯುವೆನು
ಅತೃಪ್ತಿಯ ಕಿಡಿಯ ಆರಿಸಿ
ಸಂತೃಪ್ತಿಯ ಹೊಸ ಬೆಳಕಿನಲ್ಲಿ
ಪ್ರಜ್ವಲಿಸುವೆನು
ಕಿರಣವಾಗಿ ಉಳಿಯುವೆನು
ನೆಮ್ಮದಿಯ ಹೊಂದುವೆನು
ನಾಗರಾಜ ಜಿ. ಎನ್. ಬಾಡ
ಕವನದ ಸಾಲುಗಳ ಆಪ್ತತೆ ಅನುಬಂಧ ಎನಿಸುತ್ತದೆ. ಇದ್ದು ಇಲ್ಲವಾಗುವ ಕಾಲದ ನಡುವೆ ಇದ್ದು ನಗಬೇಕು. ಜಗದ ಸಂತೆಯಲ್ಲಿ ನಮ್ಮ ನೆಮ್ಮದಿಯ ಉಸಿರಾಗಿಸಿ ಬದುಕಬೇಕು. ಮೌನದಿ ಸಮಾಧಾನ ಒಳ್ಳೆಯದು. ಸಂಬಂಧಗಳು , ಸೋಲು ಗೆಲುವುಗಳು ನಮ್ಮ ಸುತ್ತಿಕೊಳ್ಳುವವು. ಆದರೂ ಸಾಗಲೇಬೇಕು. ನಮ್ಮ ಇಷ್ಟದ ಜೊತೆಗೆ ಒಂದು ಸದೃಢ ಹರುಷವಾಗಿ ಸಾಗಬೇಕು. ಹೊಸತನದ ನೆಮ್ಮದಿಗೆ ನಾವು ಸಾಗಲೇಬೇಕು ಎಂದು ಆಶಿಸುವ ಕವನದ ಸಾಲುಗಳು ಚೆನ್ನಾಗಿದೆ. ಬದುಕಿನ ಸರಳ ಸೂಕ್ಷ್ಮ ಸಂವೇದನೆ ಇದರ ಒಡಲಲ್ಲಿ ಅಡಗಿದೆ. ಮನದಿ ಮೂಡಿದ ಸುಂದರ ಸಾಲುಗಳು ಆಪ್ತವಾಗಿದೆ……….