ಮನೆಯ ತಿಂಡಿ
ಶ್ರೀದೇವಿ ಕೆರೆಮನೆ
ಶಾಲೆಯಿಂದ ಬರುವಾಗಲೇ ಮಕ್ಕಳು ಮುಖ ಉಬ್ಬಿಸಿ ಬಂದಿದ್ದರು. ಕೇಳಿದ್ದಕ್ಕೆ ಉತ್ತರವಿಲ್ಲ. ನಾನೇನೋ ಅವರಿಗೆ ಅಹಿತವಾದ್ದೇನೋ ಮಾಡಿದ್ದೇನೊ ಎಂಬ ಭಾವನೆ ಅವರಿಬ್ಬರ ಮುಖದಲ್ಲಿ. ಕೊನೆಗೆ ನಾನು “ ಏನಾದರೂ ಮಾಡಿಕೊಳ್ಳಿ. ನೀವು ಮಾತನಾಡದಿದ್ದರೆ ನನಗೆ ಆರಾಮ ಆಯ್ತು. ಹಾಯಾಗಿ ಇರ್ತೇನೆ” ಎಂದು ನನ್ನ ಪಾಡಿಗೆ ನಾನು ನನ್ನ ಕೆಲಸದಲ್ಲಿ ನಿರತಳಾದೆ. ಕೊನೆಗೂ ಚಿಕ್ಕವನು ಶಾಲೆಯಿಂದ ತಂದ ಚಿಕ್ಕ ಚೀಟಿಯೊಂದನ್ನು ನೀಡಿದ. ‘ಮಕ್ಕಳಿಗೆ ಮನೆಯಲ್ಲಿಯೇ ಮಾಡಿದ ತಿಂಡಿಯನ್ನು ಹಾಕಿ ಕೊಡಬೇಕು. ಹೊರಗಿನ ತಿಂಡಿಯನ್ನು ಹಾಕಿ ಕೊಡುವಂತಿಲ್ಲ’ ಎಂಬರ್ಥದ ಹಾಗೂ ಅದರ ಜೊತೆ ಇನ್ನೂ ಹಲವಾರು ಸೂಚನೆಗಳಿದ್ದ ಚೀಟಿ ಅದು. ಓದುತ್ತಿದ್ದಂತೆ ನನಗೆ ನಗು ಬಂತು. ‘ಕೊನೆಗೂ ನಾನು ಹೇಳಿದಂತೆಯೇ ಆಯ್ತಲ್ಲ?’ ನಾನು ಹೇಳಿದೆ. ‘ನೀನೇ ನಮ್ಮ ಟೀಚರ್‌ಗೆ ಹೇಳಿದ್ದು. ಅದಕ್ಕೆ ಹಾಗೆ ಬರೆದಿದ್ದಾರೆ…’ ಪುನಃ ಇಬ್ಬರೂ ಮುಖ ಉಬ್ಬಿಸಿದರು. ನನಗೆ ಅವರ ಕೋಪದ ಕಾರಣ ಆಗ ಗೊತ್ತಾಯ್ತು. ನಾನೇನೂ ಹೇಳಲಿಲ್ಲ ಎಂದರೂ ಅವರು ನಂಬುವ ಸ್ಥಿತಿಯಲ್ಲಿರಲಿಲ್ಲ.
ಕೆಲವು ದಿನಗಳ ಹಿಂದೆ ಇದೇ ವಿಷಯಕ್ಕೆ ನಮ್ಮ ಮನೆಯಲ್ಲಿ ಜೋರು ಚರ್ಚೆ ನಡೆದಿತ್ತು. “ಎಲ್ಲರೂ ಹೊಟೇಲಿನಿಂದ ತಿಂಡಿ ತರ್ತಾರೆ. ನೀನು ಮಾತ್ರ ಬರೀ ಮನೆಯಲ್ಲಿ ಮಾಡಿದ ತಿಂಡಿ ಹಾಕಿ ಕೊಡ್ತೀಯಾ. ಎಲ್ಲರ ಅಮ್ಮಂದಿರೂ ಹೊರಗಿನ ತಿಂಡಿ ಕೊಡ್ತಾರೆ.” ದೊಡ್ಡ ಮಗ ಮುಖ ಉಬ್ಬಿಸಿ ಹೇಳಿದ್ದ. ಆತನ ಸ್ನೇಹಿತರೆಲ್ಲ ಹೋಟೇಲಿನಿಂದ ಬೋಂಡಾ, ವಡೆ ತರುತ್ತಾರಂತೆ. ಇಲ್ಲಾ ಅಂದ್ರೆ ಒಂದು ಪ್ಯಾಕ್ ಬಿಸ್ಕಿಟ್ ತರ್ತಾರಂತೆ. ನಮಗೆ ಮಾತ್ರ ನೀನು ಹಾಗೆಲ್ಲ ತಂದು ಕೊಡೋಲ್ಲ ಅನ್ನುವುದು ಆತನ ಆರೋಪ. ಆತನಿಗೋಸ್ಕರ ಎಂದೇ ಕೆಲವೊಮ್ಮೆ ನನಗಿಷ್ಟ ಇಲ್ಲದಿದ್ದರೂ ಬೆಳಿಗ್ಗೆ ಬೆಳಿಗ್ಗೆ ಪೂರಿ, ವಡಾ ಎಂದೆಲ್ಲ ಎಣ್ಣೆಯ ತಿಂಡಿ ಮಾಡಿ ಡಬ್ಬಿ ತುಂಬುತ್ತಿದ್ದದೂ ಇತ್ತು. ಶಾವಿಗೆ ಪಾಯಸ, ಶಿರಾ ಅಂತೂ ಮಾಮೂಲು. ಆದರೂ ಅದರಲ್ಲಿ ಆತನಿಗೆ ತೃಪ್ತಿ ಇಲ್ಲ. ‘ಅಮ್ಮ ಮ್ಯಾಗಿ ಟು ಮಿನಿಟ್ಸ್ನಲ್ಲಿ ಆಗುತ್ತೆ. ನೀನು ಅದನ್ನೇ ಯಾಕೆ ಮಾಡೋಲ್ಲ?’ ಎಂಬ ಕುಸುಕುಸು ಕೋಪ. ಎಂದೋ ಬಂದ ಮ್ಯಾಗಿ ತಿಂದರೆ ಆಗುವ ಅಪಾಯಗಳ ಬಗ್ಗೆ ಇರುವ ಪೇಪರ್ ಕಟಿಂಗ್ಸ್ ಎದುರಿಗಿಡುತ್ತೇನೆ. ‘ಎಲ್ಲದಕ್ಕೂ ಈ ಅಮ್ಮನಿಗೆ ಒಂದೊಂದು ಕಾರಣ ಇರುತ್ತದೆ. ಒಟ್ಟಿನಲ್ಲಿ ನಮಗೆ ಇಷ್ಟವಾಗಿದ್ದನ್ನು ಮಾಡಿಕೊಡಲೇ ಬಾರದು ಅಂತಾ ಅಮ್ಮಾ ಪ್ಲಾನ್ ಹಾಕ್ತ ಇರ್ತಾಳೆ.’ ಮುಖ ಮತ್ತೆ ಬಿಮ್ಮನೆ ಊದಿಸಿಕೊಳ್ಳುತ್ತವೆ. ‘ಏನೇ ಆದರೂ ಬೆಳಗಿನ ತಿಂಡಿಗೆ ನೀನು ಮಾಡುವುದು ದೋಸೆ, ಇಡ್ಲಿ, ಚಪಾತಿ. ಅವರ ಮನೆಯಲ್ಲೆಲ್ಲ ಬೆಳಗಿನ ತಿಂಡಿಯನ್ನೂ ಹೊಟೇಲಿಂದಲೇ ತರ್ತಾರಂತೆ’ ನನಗೆ ಅಚ್ಚರಿಯಾಗಿತ್ತು. ‘ ಅವರ ಅಮ್ಮ ಬೆಳಿಗ್ಗೆನೆ ಕೆಲಸಕ್ಕೆ ಹೋಗ್ತಾರೇನೋ. ಮನೆಯಲ್ಲಿ ತಿಂಡಿ ಮಾಡಿಕೊಡುವಷ್ಟು ಪುರುಸೊತ್ತು ಇರುವುದಿಲ್ಲವೇನೋ. ಅದಕ್ಕೆ ಹೊಟೇಲಿಂದ ತರ್ತಾರೆ.’ ನಾನು ಸಮಾಧಾನ ಮಾಡಲು ಪ್ರಯತ್ನಿಸಿದೆ. ‘ಇಲ್ಲ, ಅವರಮ್ಮ ಮನೆಯಲ್ಲೆ ಇರ್ತಾರೆ. ಎಲ್ಲೂ ಕೆಲಸಕ್ಕೆ ಹೊಗೊದಿಲ್ಲ. ಆದ್ರೂ ಇವರಿಗೆ ಹೊಟೇಲ್‌ನಿಂದ ತಂದು ಕೊಡ್ತಾರೆ.’ ನಾನು ಮತ್ತೇನೂ ಹೇಳುವ ಸ್ಥಿತಿಯಲ್ಲಿರಲಿಲ್ಲ. ಮನೆಯಲ್ಲಿದ್ದರೂ ಬೆಳಗಿನ ತಿಂಡಿ ಮಾಡದೇ ಇರಲು ಕಾರಣವೇನು? ತುಂಬಾ ಕೆಲಸ ಮಾಡಿ ಸುಸ್ತಾಗಿರುತ್ತದೆಯೇ. ಅಥವಾ ಬೆಳಗಿನ ತಿಂಡಿ ಮಾಡಲು ಆಗುವುದಿಲ್ಲವೇ? ಹೊಟೇಲಿಂದ ತಿಂಡಿ ತರುವಷ್ಟು ಹಣ ಇರುತ್ತದೆ ಎಂದಾದ ಮೇಲೆ ತಿಂಡಿಗೆ ಬೇಕಾದ ಸಾಮಾನು ತರಲೂ ಹಣ ಇರುತ್ತದೆ ಎಂದಾಯ್ತು. ಯಾಕೋ ನನಗೆ ಮಕ್ಕಳ ಬಗ್ಗೆ ಮರುಕ ಉಂಟಾಯ್ತು. ಕೆಲವು ಮಕ್ಕಳು ಬೆಳಗಿನ ತಿಂಡಿಗೆ ಕೇವಲ ಬ್ರೆಡ್ ತಿಂದು ಬರುವುದೂ ಇದೆ. ಹೀಗಾದಾಗ ಆ ಮಕ್ಕಳ ಸ್ಥಿತಿ ಎನು?
ನಮ್ಮ ಶಾಲೆಗೆ ನಾನು ಬಂದ ಹೊಸದರಲ್ಲಿ ಬೆಳಿಗ್ಗೆ ಪ್ರಾರ್ಥನೆಗೆಂದು ನಿಂತರೆ ಆ ಹತ್ತು ಹದಿನೈದು ನಿಮಿಷದಲ್ಲಿ ಕನಿಷ್ಟ ಐದರಿಂದ ಆರು ಜನ ತಲೆ ತಿರುಗಿ ಬೀಳುತ್ತಿದ್ದರು. ಬೆಳಿಗ್ಗೆ ಏನು ತಿಂದೆ ಎಂದು ಕೇಳಿದರೆ ಮೌನವೇ ಅವರ ಉತ್ತರವಾಗಿರುತ್ತಿತ್ತು. ಪ್ರತಿ ದಿನ ಬೆಳಿಗ್ಗೆ ಆರು ಘಂಟೆಗೇ ಅಂಕೋಲಾಕ್ಕೊ ಅಥವಾ ಕಾರವಾರಕ್ಕೊ ಅಥವಾ ಕೊನೆಗೆ ಗೋವಾ ಗಡಿಗೋ ಹೋಗಿ ಮೀನು ತಂದು ಅದನ್ನು ಮಾರಿದರಷ್ಟೆ ಹೊಟ್ಟೆಗೆ ಎನ್ನುವ ಬಡತನದ ಮಧ್ಯೆ ತಾಯಿಗೆ ಶಾಲೆಗೆ ಹೋಗುವ ಮಕ್ಕಳ ಹೊಟ್ಟೆ ಖಂಡಿತ ನೆನಪಿರಲು ಸಾದ್ಯವಿಲ್ಲ. ಅಪ್ಪ ದೂರದ ಮಂಗಳೂರಿನಲ್ಲೊ ಅಥವಾ ಪಕ್ಕದ ಗೋವಾದಲ್ಲೊ ಬೋಟ್ ಕೆಲಸಕ್ಕೆ ಹೋಗಿ ಎರಡು ತಿಂಗಳಿಗೋ ನಾಲ್ಕು ತಿಂಗಳಿಗೋ ಒಮ್ಮೆ ಮನೆಯ, ಹೆಂಡತಿಯ- ಮಕ್ಕಳ ಮುಖ ನೋಡುವ ಪರಿಸ್ಥಿತಿಯಲ್ಲಿ ತಾಯಿಯಾದವಳೇ ಅನಿವಾರ್ಯವಾಗಿ ಯಾರೋ ತಂದ ಮೀನನ್ನು ಕೊಂಡು ಮಾರಿ ಅದರಿಂದ ಬರುವ ಅತ್ಯಲ್ಪ ಲಾಭದಲ್ಲಿ ಸಂಸಾರ ನಿಭಾಯಿಸಬೇಕಾದ ಅನಿವಾರ್ಯತೆ ಎದ್ದು ಕಾಣುತ್ತದೆ. ಅದರಲ್ಲೂ ಮಳೆಗಾಲ ಪ್ರಾರಂಭವಾದ ಕೂಡಲೇ ಒಂದು- ಒಂದುವರೆ ತಿಂಗಳು ಮೀನುಗಾರಿಕೆಗೆ ನಿಷೇಧವಿರುವುದರಿಂದ ಎರಡು ಹೊತ್ತಿನ ಊಟಕ್ಕೆ ಸಂಚಕಾರ ಒದಗಿರುವಾಗ ಬೆಳಗಿನ ತಿಂಡಿಯ ಬಗ್ಗೆ ಯೊಚಿಸುವವರಾದರೂ ಯಾರು? ಹೀಗಾಗಿ ಎಷ್ಟೊ ಸಲ ಮಕ್ಕಳು ಬೆಳಿಗ್ಗೆ ಎದ್ದು, ಹಲ್ಲುಜ್ಜಿ, ಯೂನೀಫಾರ್ಮ್ ಧರಿಸಿ ನೇರವಾಗಿ ಶಾಲೆಗೆ ಬಂದುಬಿಡುವ ಅನಿವಾರ್ಯತೆ ಕೂಡ ಅವರ ಪಾಲಿಗಿದೆ. ಕೆಲವೊಮ್ಮೆ ಅಮ್ಮ ಬೆಳಿಗ್ಗೆ ಎದ್ದು ಮೀನು ತರಲೆಂದು, ನಂತರ ಮಾರಲೆಂದು ಹೋಗಿ ಬಿಟ್ಟರೆ ಒಂಬತ್ತು ಗಂಟೆಯಾದರೂ ಎದ್ದೇಳದೇ ಕೊನೆಗೆ ಎದ್ದು ಮುಖಕ್ಕಿಷ್ಟು ನೀರು ಸೋಕಿಸಿ ಶಾಲೆಗೆ ಬಂದು ಬಿಡುವ ಆಲಸಿಗಳೂ ಇದ್ದಾರೆ. ಹಸಿವಿನಿಂದ ಬಿಳುಚಿಕೊಂಡ ಮಕ್ಕಳಿಗೆ ಹೊಟ್ಟೆಯಲ್ಲಿ ಸಂಕಟವಾಗುತ್ತಿದ್ದರೆ ನಾವು ಅದ್ಯಾವುದನ್ನೂ ಗಮನಿಸದೇ ಹೋಂವರ್ಕ ಯಾಕೆ ಮಾಡಿಲ್ಲ ಎಂದು ದಬಾಯಿಸುವುದು ನಿಜಕ್ಕೂ ಅಸಹ್ಯ ಎನ್ನಿಸಿ ಬಿಡುತ್ತದೆ. ಆದರೆ ಈಗ್ಗೆ ಆರೇಳು ವರ್ಷಗಳ ನಂತರ ಪರಿಸ್ಥಿತಿಯಲ್ಲಿ ಅನೇಕ ಬದಲಾವಣೆಗಳಾಗಿವೆ. ಅಮ್ಮ ಯಥಾಪ್ರಕಾರ ಆರು ಗಂಟೆಯ ಬಸ್ಸಿಗೇ ಮೀನು ತರಲು ಹೋಗುತ್ತಾಳಾದರೂ ಈಗಿನ ಮಕ್ಕಳ ಕೈಯಲ್ಲಿಷ್ಟು ದುಡ್ಡು ಹಾಕಿ ‘ಹೊಟ್ಲಲೆ ತಿಂದ್ಕಳಿ ಮಕ್ಳಾ’ ಎಂದು ಹೋಗುತ್ತಾಳೆ. ಹೀಗಾಗಿ ಮುಂಚಿನಂತೆ ಖಾಲಿ ಹೊಟ್ಟೆಗೆ ಒಂದು ಲೋಟ ನೀರು ಕುಡಿದು ಬರಬೇಕಾದ ಪರಿಸ್ಥಿತಿ ಇಲ್ಲದಿದ್ದರೂ ಆ ಮಕ್ಕಳು ಆ ದುಡ್ಡಿಂದ ಏನನ್ನು ತಿನ್ನುತ್ತವೆ ಎಂಬುದನ್ನೂ ಕೂಡ ಗಣನೆಗೆ ತೆಗೆದುಕೊಳ್ಳ ಬೇಕಾಗುತ್ತದೆ. ನಿಜ. ಅದು ಶಿಕ್ಷಕರಾದ ನಮ್ಮ ಕೆಲಸವಲ್ಲ. ಆದರೆ ಸಾಮಾಜಿಕ ದೃಷ್ಟಿಕೋನದಿಂದ ನೋಡಿದಾಗ ನಿಜಕ್ಕೂ ಬೆಳಗಿನ ಹೊಟ್ಟೆಯ ಹಸಿವಿಗೆ ಏನು ಬೇಕು ಎಂಬುದನ್ನೆ ಅರಿಯದ ಮಕ್ಕಳು ಎರಡು ರೂಪಾಯಿಯ ಪೆಪ್ಸಿ ಕುಡಿದು ಶಾಲೆಗೆ ಬಂದು ಬಿಡುವ ಅಪಾಯ ಈಗ ಮೊದಲಿಗಿಂತ ಜಾಸ್ತಿಯಾಗಿದೆ. ಮತ್ತು ಮಕ್ಕಳ ಈ ಒಲ್ಲದ ರೂಢಿ ಶಿಕ್ಷಣದ ಮೇಲೂ ನೇರ ಪರಿಣಾಮ ಬೀರುವುದನ್ನು ಕಾಣಬಹುದಾಗಿದೆ.
ಬೆಳಗಿನ ತಿಂಡಿ ಮಕ್ಕಳಿಗೆ ಅತೀ ಅವಶ್ಯಕ. ಪ್ರತಿದಿನದ ಪಾಠವನ್ನು ಗಮನವಿಟ್ಟು ಕೇಳಬೇಕು ಎಂದಾದರೆ ಮಗು ಬೆಳಗಿನ ಹೊತ್ತಿನ ಉಪಹಾರವನ್ನು ಹೊಟ್ಟೆತುಂಬಾ ಸೇವಿಸಲೇಬೇಕು. ಹಸಿದ ಹೊಟ್ಟೆಯಿಂದ ಕೇಳಿದ ಯಾವ ವಿಷಯವೂ ಮೆದುಳನ್ನು ತಲುಪುವುದಿಲ್ಲ ಎನ್ನುವುದನ್ನು ಮೊದಲು ಗಮನದಲ್ಲಿಡಬೇಕು. ಇದು ಕೇವಲ ಮಕ್ಕಳಿಗೋಸ್ಕರ ಮಾತ್ರವಲ್ಲ. ಕೆಲಸಕ್ಕೆ ಹೋಗುವ ದೊಡ್ಡವರಿಗೂ ಅನ್ವಯಿಸುತ್ತದೆ. ಸರಿಯಾದ ಕೆಲಸ ಆಗಬೇಕು, ಮಾನವಶಕ್ತಿಯ ಬಳಕೆ ಸರಿಯಾಗಿ ಆಗಬೇಕು ಅಂತಾದರೆ ಬೆಳಗಿನ ಉಪಹಾರ ಉತ್ತಮವಾಗಿರಲೇಬೇಕು. ಒಂದು ಲೋಟ ಹಾಲು, ಒಂದು ಕಪ್ ಚಹಾ ಅಥವಾ ಕಾಫಿ ಇಡಿದಿನದ ಶಕ್ತಿಯನ್ನು ನಮಗೆ ಕೊಡಲಾರದು. ಅದರಲ್ಲೂ ಹೊರಗಿನ ತಿಂಡಿ ತಂದು ತಿನ್ನುವ ಬಹುತೇಕ ಮನೆಗಳ ಮಕ್ಕಳು ನೋಡಲು ದಷ್ಟಪುಷ್ಟವಾಗಿ ಕಂಡರೂ ಅವರಲ್ಲಿ ಪೋಷಕಾಂಶದ ಕೊರತೆ ಇರುವುದನ್ನು ಭಾರತೀಯ ವೈದ್ಯಕೀಯ ಸಂಗದ ವರದಿ ತಿಳಿಸಿದೆ.
ಎಷ್ಟೊ ಸಲ ಮಕ್ಕಳು ಹಟ ಮಾಡುತ್ತವೆ ಎನ್ನುವ ಕಾರಣಕ್ಕಾಗಿಯೇ ಹೊರಗಿನ ತಿಂಡಿಗಳನ್ನು ತಂದು ರೂಢಿಸಿ ಬಿಟ್ಟಿದ್ದೇವೆ ಹೋಟೇಲಿನಿಂದ ಬೆಳಗಿನಿ ತಿಂಡಿ, ಮಧ್ಯಾಹ್ನ ಊಟಕ್ಕೆ ಹೊಟೇಲಿನ ಸಾರು, ಸಂಜೆ ಎಲ್ಲೊ ರಸ್ತೆ ಪಕ್ಕದ ಪಾನಿಪೂರಿ, ರಾತ್ರಿ ಉಟಕ್ಕೆ ಮತ್ತೆ ಹೊಟೇಲಿನ ನಾನ್‌ವೆಜ್ ಐಟೆಮ್‌ಗಳು. ಮಾಡುವ ಕೆಲಸ ಕಡಿಮೆ ಎನ್ನಿಸಿದರೂ ಮುಂದಿನ ಪರಿಣಾಮವಾದರೂ ಏನು? ಸುತ್ತಲಿನ ಎಲ್ಲ ಮಕ್ಕಳೂ ಹಾಗೆ ಮಾಡುವಾಗ ನಮ್ಮ ಮಕ್ಕಳು ಮಾತ್ರ ಆ ಖುಷಿಯನ್ನು ಕಳೆದುಕೊಳ್ಳುವುದೇಕೆ ಎನ್ನುವ ಕಾರಣಕ್ಕಾಗಿಯೋ ಅಥವಾ ‘ಅವರೆಲ್ಲ ಸೇರಿದಾಗ ಆ ಬಗ್ಗೆ ಮಾತನಾಡಿಕೊಳ್ಳುತ್ತಾರೆ. ನನಗೆ ಮಾತ್ರ ಏನೂ ಇಲ್ಲ’ ಎನ್ನುವ ಮಕ್ಕ ಮುನಿಸಿಗೆ ಬಾಗಿಯೋ ಅಂತೂ ಮನೆಯ ತಿಂಡಿ ಊಟ ರುಚಿ ಕಳೆದುಕೊಳ್ಳುತ್ತಿದೆ. ‘ಒಂದು ಸಲ ನಾವೂ ಫೀಜಾ ಆರ್ಡರ್ ಮಾಡೋಣ’ ಎಂಬ ಸಣ್ಣ ಮಗನ ಬೇಡಿಕೆಯನ್ನು ನಾನಿನ್ನೂ ‘ಹೋಂ ಡೆಲವರಿ ಇಲ್ಲ’ ಎಂಬ ಕಾರಣ ಮುಂದಿಟ್ಟು ಮುಂದೂಡುತ್ತಲೇ ಬಂದಿದ್ದೇನೆ. ಆದರೂ ಮೆಟ್ರೊಪೊಲಿಟನ್ ಸಿಟಿಗಳ ಮನೆ ಬಾಗಿಲಿಗೆ ಬಂದು ಸರ್ವ ಮಾಡುವ ಫೀಜಾ, ಬರ್ಗರ್‌ಗಳು ಇನ್ನೂ ನಮ್ಮ ಈ ಸಣ್ಣ ಪಟ್ಟಣ, ಹಳ್ಳಿಗಳಿಗೆ ದಾಳಿ ಇಟ್ಟು ಈಗಿರುವ ಮನೆ ಊಟದ ನೆಮ್ಮದಿ ಹಾಗೂ ಸ್ವಾಸ್ಥ್ಯವನ್ನು ಹಾಳು ಮಾಡಿಲ್ಲ ಎನ್ನುವುದೇ ಸಧ್ಯದ ಪರಿಸ್ಥಿತಿಯಲ್ಲಿ ನೆಮ್ಮದಿಯಿಂದ ಉಸಿರಾಡುವಂತೆ ಮಾಡಿದೆ.
=================================================
ಶ್ರೀದೇವಿ ಕೆರೆಮನೆ
ಥ್ಯಾಂಕ್ಯೂ ಸರ್
ಹೋಂ ಡೆಲಿವರಿ ಇಲ್ಲ ಅನ್ನುವ ಕಾರಣಕ್ಕೆ ನೀವು ಪಾರಾಗಿರಬಹುದು . ಇನ್ನು ಮುಂದೆ ಬರಬಹುದಾದ ಸಾಧ್ಯತೆ ಇದೆ. . ಹೊರಗಿನ ತಿಂಡಿಯ ಮಹತ್ವ ಮತ್ತು ಮಕ್ಕಳ ಭಾವನೆಗಳು ಚೆನ್ನಾಗಿ ಬರೆದಿದ್ದೀರಿ ಸಿರಿಯಮ್ಮ. ನಿಜಕ್ಕೂ ಇದು ಎಲ್ಲಾ ತಾಯಂದಿರು ಆಲೋಚಿಸಬೇಕಾದ ವಿಚಾರ…
ರಮೇಶ ಗಬ್ಬೂರ್
ಬರವಣಿಗೆಯ ಹೊಸ ಪ್ರಕಾರದಲ್ಲೂ ತಮಗೆ ಸಿಕ್ಕಿದೆ..
ಬಹಳ ಕುತೂಹಲಕಾರಿ ಓದಿಸಿಕೊಳ್ಳುತ್ತಲೆ ಅಲ್ಲಲ್ಲಿ ಚಿಂತನೆಯ ಮಿಂಚುಗಳು ಮಿಂಚುತ್ತವೆ.
ಮುಂದುವರೆಯಿರಿ..
ಒಳ್ಳೆಯದಾಗಲಿ
ಬಹಳ ಉಪಯುಕ್ತ ಲೇಖನ .
ಓದಿದೆ ಮೇಡಮ. ವಾಸ್ತವ ಸಂಗತಿಯನ್ನು ಕಾಳಜಿಪೂರ್ವಕವಾಗಿ ಇಟ್ಟಿದ್ದೀರಿ. ಚನ್ನಾಗಿದೆ.ಅಭಿನಂದನೆಗಳು
ವಿದ್ಯಾರ್ಥಿಗಳಿಗೆ ಅದರಲ್ಲೂ ಪೋಷಕರಿಗೆ ಮನಮುಟ್ಟುವಂತಹಾ ಬರಹ…
ಹಸಿವು ಮತ್ತದರ ಮೂಲಗಳು.ಮಕ್ಕಳ ಮೇಲೆ ಆಗುವ ಪರಿಣಾಮವನ್ನು ಹೇಳುತ್ತಲೇ ಮನೆಯೂಟದ ಆರೋಗ್ಯವನ್ನು ಮನದಟ್ಟು ಮಾಡಿಸುತ್ತದೆ.
ಮಕ್ಳಳ ದೈಹಿಕ ಆರೋಗ್ಯಕ್ಕೆ ಬೆಳಗಿನ ತಿಂಡಿಯ ಅಗತ್ಯವನ್ನು ತುಂಬ ಸರಳ ಹಾಗೂ ಅನುಭವ ನಿಷ್ಠ ಮಾತುಗಳಿಂದ ಕಟ್ಟಿದ್ದಿಯಾ ಶ್ರೀದೇವಿ, ಇಷ್ಟವಾಯ್ತು.