ಮಳೆಗಾಲದ ಆರಂಭ ಮತ್ತು ಮೀನು ಶಿಕಾರಿ…
ರಮೇಶ್ ನೆಲ್ಲಿಸರ
‘ಮಳ್ಗಾಲ ಅನ್ನೋದ್ ಯಾವಾಗ್ ಬಂದ್ ಈ ಸುಡ್ಗಾಡ್ ಶೆಕೀನ ಹೊತ್ಕಂಡ್ ಹೋಯ್ತದೋ ಆ ದ್ಯಾವ್ರೆ ಬಲ್ಲ’, ಅಂತ ಬೇಸ್ಗೀಲಿ ಹಾಗೇಯ “ಈ ಹಾಳಾದ್ ಮಳಿ ದಸೇಂದ್ ಮನೆ ಹೊರ್ಗ್ ಕಾಲಿಡಕ್ ಆಗ್ದು” ಅಂತ ಮಳ್ಗಾಲದಾಗೆ , ಈ ಬಗೀ ಮಾತು ನಮ್ ಮಲ್ನಾಡ್ ಕಡೆ ಎಲ್ರೂ ನಾಲ್ಗಿ ಮೇಲೂ ನಲೀತರ‌್ದದೆ.
ಏನ್ ಶೆಕಿ ಅಂತೀರಾ, ಹೋದ್ ಮಳ್ಗಾಲ‌್ದಲ್ ಆ ನಮೂನಿ ಮಳೆ ಹೊಯ್ದ್ರು ನೀರ್ ಅನ್ನದ್ ಪಾತಾಳ್‌ಮಟ ಇಳ್ದು ತುಂಗಾ ನದಿ ಅನ್ನೋದು ಬೇಗೊಳ್ಳಿ ಹಳ್ದಂಗ್ ಆಗಿ ಆಚಿದಡ ಈಚಿದಡಕ್ಕೆ ನಡ್ಕೊತಾನೆ ದಾಟಾಡೊಂಗ್ ಆಗಿತ್ತು.
ಮುುುಂಗಾರಲ್ ಮಳಿ ಹೆಂಗಪ್ಪ ಅಂದ್ರೆ ಅತ್ಲಾಗೂ ಬಂದಂಗೂ ಅಲ್ಲ, ಇತ್ಲಾಗ್ ಬರ್ದೀತೆ ಇರಂಗು ಅಲ್ಲ, ಒಂದ್ ಸರಿ ಹೊಯ್ತದೆ,ಮಾರ‌್ನೆ ಗಳ್ಗೆಗ್ ಬಿಸ್ಲ್ ಮೂಡತ್ತೆ, ಮಳಿ ಹಿಡ್ಕಳಾ ಒಳ್ಗೇನೆ ದರ‌್ಗು, ಒಣ ಹುಲ್ಲು,ಕಟ್ಗಿ ಎಲ್ಲಾ ಕೊಟ್ಗೆಗ್ ಸೇರ್ಸಿದ್ವೊ ಆತು ಇಲ್ಲಾಂದ್ರೆ ಆ ಯಮ ಮಳೀಲಿ ಹೊರ್ಗ್ ಹೊಂಡಾಕ್ ಆಗ್ತ?, ಊಹುಂ ಅದ್ ಕೇಣ್ಬೇಡಿ.
ಬೇಸ್ಗಿ ಮುಗ್ಯೋವರ್ಗು ಕೇಸಿನ್ ಸೊಪ್ಪು, ಬಸ್ಲೆ ದಂಟು, ಸೂರೇನ್‌ಗೆಡ್ಡೆ, ಅಂತ ಚಪ್ಪೆ ತಿನ್ಕುಂಡು ನಾಲ್ಗಿ ಕೆಟ್ಟೋಗಿರೋ ಟೇಮಿಗ್ ಈ ಮಳಿ ಅನ್ನೊದ್ ನಮ್ಗೆ ಅಮೃತ ಇದ್ದಂಗೆ,ಇಷ್ಯ ಏನಪ್ಪ ಅಂದ್ರೆ ಚೂರ್ ಮಳಿ ಬಂದು ಕೊನೇಗ್ ಗದ್ದೆ ಬದಿ ಹಳ್ಳನಾರು ಬಂದಿದ್ರೆ ನಾಕ್ ಸೊಸ್ಲು ಹಿಡ್ಕಂಡ್ ಬಂದ್ರೆ ಪಲ್ಯಾಕಾದ್ರೂ ಆದೀತು ಅಂತ.
ಈ ಸಮುದ್ರದ್ ಮೀನ್ನ ನಮ್ಗ್ ಕೊಣ್ಣಾಕ್ ಆದೀತಾ ಊಹುಂ, ಆ ಪಾಟಿ ರೇಟು!, ಏನಾರ್ ಅರ್ಧಕೇಜಿ ತಕ್ಕಂಬದು ಆದ್ರೆ ಅದೂ ಕೊನ್ಕೊನೆಗೆ ಚಪ್ಪೇಯ, ಭೂತಾಯಿ ಬಂಗ್ಡೆ ಎಲ್ಲಾರ್ ತೀರ್ಥಳ್ಳಿ ಪೇಟೆ ಕಡೆ ಹ್ವಾದ್ರೆ ಹ್ವಾಟ್ಲಲ್ ತಿನ್ಕಬರ್ಬೋದು, ಅದೂ ದೊಡ್ಡೋರ್ ಮಾತ್ರ.
ಆಗಿಂದನೂ ಅಷ್ಟೇ ಅಪ್ಪಯ್ಯ, ದೊಡ್ಡಪಯ್ಯೋರು ಮಳಿ ಬಂತು ಅಂದ್ರೆ ಗದ್ದೆ ಬದ ಕೆತ್ತೋದು, ಗೊಬ್ರ ಹರ‌್ಡೋದು, ಬೀಜದ್ ಭತ್ತ ಬಿತ್ತಕ್ ಅಣಿ ಮಾಡೋದು ಅವ್ರ್ ಅವ್ರು ಅವರ್ ಕೆಲ್ಸ್ದಾಗ್ ಇದ್ರೆ ನಮ್ ಮಂಜ್ ಚಿಕ್ಕಪ್ಪಯ್ಯ ನಾವ್ ಹುಡುಗ್ರು ಮಕ್ಕಳನ್ನ ಸೇರ್ಸೊಂಡು ಬಿದ್ರಳ್ಳ ತುದೀಗ್ ಹೋಗಿ ಸೋಸ್ಲು ಮೀನ್ ಹಿಡೀತಾ ಕೂಕಂತಿದ್ರು.
ಚಿಕ್ಕಪ್ಪಯ್ಯ ಸಿಕ್ದಷ್ಟ್ ಮೀನ್ ಹಿಡ್ಕಣಕ್ ಒದ್ದಾಡ್ತಿದ್ರೆ ನಾನು ಮತ್ತೆ ತಮ್ಮಣ್ಣಿ, ಆಚೆಮನಿ ರಾಜು, ದೊಡ್ಡಪ್ಪಯ್ಯನ್ ಮಗ ವಿನಯ ಮತ್ತೆ ನಾಗತ್ತೆ ಮಗ್ಳು ಜಲಜ ಎಲ್ಲಾ ಕೆಸ್ರು ನೀರಾಗ್ ಬಿದ್ದ್ ಒದ್ದಾಡೊದೇ!, ಒಳ್ಳೆ ಹಾಲಂಗ್ ಇರೋ ಮಳೆ ನೀರ‌್ನ ಕೆಸ್ರು ರಾಡಿ ಎಬ್ಸ್ತಿದ್ದೋ. ಪಾಪದ್ ಚಿಕ್ಕಪಯ್ಯಂಗ್ ಎಲ್ಲಾ ಬಯ್ಯೋರೆ,ಆದ್ರೆ ಮೀನಿನ್ ಸಾರಿನ್ ಘಾಟಿಗ್ ಒಲಿ ಹತ್ರನೇ ಬಂದ್ ಕೂರವ್ರು ಎಲ್ಲರೂವೆ.
ಮಂಜ್ ಚಿಕ್ಕಪಯ್ಯಂಗೆ ತಲಿ ಕೆಟ್ಟದೆ ಅಂತ ಅವ್ರಿಗ್ ಜಾಸ್ತಿ ಕೆಲ್ಸ ಏನೂ ಕೊಡ್ತ ಇರ್ಲಿಲ್ಲ, ಅದ್ಕೆ ಬರೀ ಇಂತವ್ವೆ ಕೆಲ್ಸ ಹಲ್ಸಿನ್ ಬೀಜ ಒಟ್ಟಾಕದು, ಮುರ್ಗನ್ ಹುಳಿ ಒಣಗ್ಸಿ ಇಡೋದು (ಮೀನ್ ಪಲ್ಯಕ್ ಭಾರಿ ಮಸ್ತಾತದೆ), ಏಡಿ ಹಿಡ್ಯಾಕ್ ಹೋಗದು, ಅಳ್ಬಿ ಹುಡ್ಕಂಡು ಕಾನಿನ್ ಬದಿ ತಿರ್ಗಾದು, ನಾಕ್ ರುಪಾಯ್‌ಗೆ ಹಲ್ಸಿನ್ ಕಾಯ್ ಕೊಯ್ದ್ ಮಾರದು ಇವೇಯ.
ಚಿಕ್ಕಪಯ್ಯ ನಮ್ಗೆ ಕೆಲವ್ ಅಸಾಮಾನ್ಯ ಕೆಲ್ಸಗಳ್ ಕಲ್ಸ್‌ಕೊಟೈತೆ, ಅವ್ ಏನಂದಿರಾ? ನಮ್ಮವ್ ಅಸಾಮಾನ್ಯ ಕೆಲ್ಸಗಳ್ ಅಂದ್ರೆ ಇವೇಯ, ಸೊಳ್ಳೆ ಪರ್ದೆ ಒಟ್ಟಾಕದು, ಯಾದಾದ್ರೂ ಬಲೆ ಇದ್ರೆ ಅದ್ನ ಸರಿ ಮಾಡ್ಕಣದು, ಅವ್ವನ್ ಹತ್ರ ಉಗ್ಸ್ಕೊಂಡು ಹಳೆ ಸೀರೆಲಿ ಮೀನ್ ಹಿಡ್ಯಾದು.
ಅದ್ರಲ್ ಈ ರಾತ್ರಿ ಮೀನ್ ಹಿಡ್ಯಾಕ್ ಹೋಗೋದ್ ತಾಪತ್ರಯ ಯಾರಿಗೂ ಬ್ಯಾಡ, ಅಪ್ಪಯ್ಯ ಬೆಳ್ಗಾತಿಂದ ಸಂಜೆಮಟ ಗದ್ದೆ,ತ್ವಾಟ ರಾತ್ರಿ ಶಿಕಾರಿಗ್ ಹತ್ಯಾರ ಜೋಡ್ಸುದ್ ನೋಡುದೆ ಚಂದ, ಉದ್ದದ್ ಕತ್ತಿ ಮಸ್ಕಂಡು, ಬ್ಯಾಟ್ರಿಗ್ ಶೆಲ್ ಹಾಕಿಟ್ಕೊಣದು, ಕಂಬ್ಳಿ ಕೊಪ್ಪೆಗ್ ತೇಪೆ ಹಾಕಿ ರೆಡಿ ಮಾಡ್ಕೊತಿದ್ರು.
ಅಪ್ಪಯ್ಯೋ ನಾನು ಬತ್ತೀನೋ ಅಂದ್ರು ಇದ್ ಅಪ್ಪಯ್ಯ ಕೇಣ್ಬೇಕಲ್ಲ, ‘ಮೈ ಎಲ್ಲಾ ತೊಪ್ಪೆ ಆತದ್ ಮುದ್ರ್ಕೊಂಡು ಉಂಡ್ಕಂಡ್ ಬಿದ್ಕೋ ಅಂತ ಹೇಳ್ ಹೊಂಡೋರು.
ಅಪ್ಪಯ್ಯ ಮತ್ತೆ ಅವ್ರು ಪ್ರೆಂಡ್‌ಗಳ್ದು ಮೀನ್ ಹಿಡ್ಯೋ ನಮೂನಿನೆ ಬೇರೆ, ಹಳ್ಳದ್ ಬದಿ ಹೋಗಿ ಆಯ್ಕಟ್ಟಲಿ ಕುಣಿ ಹಾಕಿ ಈ ಕಡೆ ಕತ್ತಿಂದ ಬ್ಯಾಟ್ರಿ ಬೆಳ್ಕ್ ನೀರಲ್ ಬಿಟ್ಟು ಮೀನ್ ಕಾಣ್ಸಿದ್ ಕೂಡ್ಲೆ ಎತ್ತಿದ್ ಏಟಿಗ್ ಕತ್ತಿ ಬೀಸಿದ್ರೆ ಆ ಮೀನು ಇಲ್ಲೋ ಎರಡ್ ಪೀಸ್ ಆಗೋವು ಇಲ್ದಿದ್ರೆ ತಪ್ಸ್‌ಕೊಂಡ್ ಪಾರಾಗೋವು. ರಾತ್ರಿ ಕಳೆಯೋದೆ ಕಾಯ್ತ ಕೂಕಣದ್ ಯಮ ಯಾತ್ನೆ ಯಾವಂಗು ಬ್ಯಾಡ, ಸೊಳ್ಳೆ ಕಚ್ಚುಸ್ಕುತ ಹುಯ್ಯೋ ಮಳೇಲಿ ನೆನೀತ ಇರ್ಬೇಕು, ಹಾಕಂಡಿರೋ ಕಂಬ್ಳಿ ಆ ಗಾಳಿಮಳೆಗ್ ಯಾವ್ ಲೆಕ್ಕಾನು ಅಲ್ಲ, ಹಳ್ಳದ್ ನೀರು ಏರ್ತಿದ್ದಂಗೆ ಮುರ್ಗೋಡು, ಚೇಳಿ, ಗೊಜ್ಲೆ ,ಗೌರಿ ಮತ್ತೆ ಏಡಿ ದಡಕ್ಕೆ ಬತ್ತಿದಂಗೆ ನಮ್ಮ್ ಕೆಲ್ಸ ಸುರು, ಚೂರು ಸೌಂಡ್ ಮಾಡ್ದೆ ಬ್ಯಾಟ್ರಿ ಬೆಳ್ಕ್ ಬಿಟ್ರೆ ಮೀನ್ ಅಲ್ಲೆ ಬೆಳ್ಕ್ ನೋಡ್ಕುತಾ ನಿಲ್ತವೆ ಆಗ್ಲೆ ಕತ್ತಿಲ್ ರಪ್ ಅಂತ್ ತಾಗೂ ಹಾಗೋ ಮಂಡೆ ಬುಡ್ದಲ್ ಹೊಡ್ಯಾದು ಇನ್ನುಬ್ರು ಹೊಡ್ದಿದ್ ಏಟಿಗ್ ಮೇಲ್‌ಬರೋ ಮೀನ್ ಹಿಡ್ಕಂಡು ಚೀಲಕ್ ತುರ‌್ಕದು. ಈ ಹತ್ಮೀನ್ ಮಾತ್ರ ಸೊಳ್ಳೆಪರ್ದೇಲ್ ಸೋಸಿದ್ರೆ ಕೆಲೋ ಬಾರಿ ಮೂಟೆಗಟ್ಲೆನೂ ಸಿಕ್ತಾವೆ.
ನಾನೂ ಐದ್ನೇ ಕ್ಲಾಸ್ ಅಗೋವರ್ಗೂ ಅಪ್ಪಯ್ಯ ರಾತ್ರಿ ಶಿಕಾರಿಗ್ ನಂಗ್ ಕರ್ಕೊಂಡ್ ಹೋಗ್ನಿರ್ನಿಲ್ಲ, ಆಮೇಲಾಮೇಲೆ ನಾನೆ ಬಯ್ದ್ರು ಓಡ್ ಹೋಗ್ತಿದ್ರೆ , ಏನ್ ನಾಕೇಟ್ ಹೊಡೆಯವ್ರು ಆದ್ರೆ ಮೀನ್ ಹಿಡ್ಯೋ ಖುಷಿ ಮುಂದೆ ಅವೆಲ್ಲಾ ಹೊಡ್ತ ಎಂತದೂ ಅಲ್ಲ ಬಿಡಿ. ಕಾಲೇಜಿಗ್ ಹೋಗ್ವಾಗ ಮಂಜ್ ಚಿಕ್ಕಪಯ್ಯ ಹೋದ್ರು, ಆಮೇಲ್ ಅಪ್ಪಯ್ಯ ಮೀನ್ ಶಿಕಾರಿ ಕಡ್ಮೆ ಮಾಡ್ತು, ಹೆಂಗು ಹಿಡ್ದೋರ್ ಯಾರಾರು ಸ್ವಲ್ಪ ಕೊಡೋರು, ನಾನುವೆ ಆಗಾಗ ದೊಡ್ಡಪ್ಪಯ್ಯನ್ ಜೊತೆ ಹೋಗ್ತಿದ್ದೆ. ಒಂದೊಂದ್ ಸರಿ ಹ್ವಾದ್ರು ಒಂದೊಂದ್ ಅನುಭವ ಆಗದು, ಕೆಲ ಸಲ ಏನೂ ಸಿಗ್ದೆ ನಾಕ್ ಏಡಿ ಹಿಡ್ಕ ಬಂದಿದ್ದೂ ಅದೆ.ಸರಿ ರಾತ್ರಿ ಆದ್ರೂ ಅಮ್ಮ ಕಾಯ್ಕೊತಾ ಇದ್ದು ಎರ್ಡ್ ಗಂಟೆ ಆದ್ರೂ ವಾಟೆಹುಳಿ ಹಾಕ್ ಘಮ್ ಅನ್ನೋ ಬಿಸಿಬಿಸಿ ಮೀನ್ ಸಾರ್ ಮಾಡ್ ಹಾಕ್ತಿತ್ತು ,ಆಗ್ಲೆ ನಮ್ ಶಿಕಾರಿನು ಸಾರ್ಥಕ ಆಗೋದು.
ಈಗ್ ಎಲ್ಲೆಲ್ಲೋ ಪೇಟೆಲ್ ಕೆಲ್ಸ ಮಾಡ್ಕುತ ಇರೋ ನಮ್ಗೆ ಯಾರಾದ್ರು ಹತ್ಮೀನ್ ಕಡಿಯೋ ಪೋಟೋ ಹಾಕಿದ್ರೆ ಹಳೆ ನೆಂಪೆಲ್ಲಾ ಅಂಗೆ ಕಣ್ ಮುಂದೇನೆ ಬಂದಂಗ್ ಆತದೆ. ಈಗ್ಲೂವೆ ಮಲ್ನಾಡ್ ಬದಿ ಮೀನ್‌ಶಿಕಾರಿ ಅಂದ್ರೆ ಅದೊಂಥರ ಹಬ್ಬಾನೆ…
ರಮೇಶ್ ನೆಲ್ಲಿಸರ
ಪರಿಚಯ:
ಮೂಲತಃ ತೀರ್ಥಹಳ್ಳಿ,ಪ್ರಸ್ತುತ ಸರ್ಕಾರಿ ಪ್ರೌಢ ಶಾಲೆ ಯಡೂರು, ಹೊಸನಗರ ತಾಲ್ಲೂಕು, ಇಲ್ಲಿ ಇಂಗ್ಲಿಷ್ ಶಿಕ್ಷಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಓದಿದ್ದು ಆಂಗ್ಲ ಸಾಹಿತ್ಯ, ಕತೆ ,ಕವನ ಮತ್ತು ಲಲಿತ ಪ್ರಬಂಧಗಳನ್ನು ಬರೆಯುವ ಹವ್ಯಾಸವಿದ್ದು. ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ.
ಸ್ನೇಹಿತ ರಮೇಶ್ ನೆಲ್ಲಿಸರ ರವರಿಗೆ ಅಭಿನಂದನೆಗಳು
ಸಂಗಾತಿ ಪತ್ರಿಕೆಯಲ್ಲಿ ನೀವು ಬರೆದ ಲೇಖನ ಮೀನು ಶಿಕಾರಿಯ ಸಂಭ್ರಮ ತುಂಬಾ ಗ್ರಾಮೀಣ ಪದಗಳನ್ನು ಬಳಸಿ ಬರೆದಿರುವ ದರಿಂದ ಮತ್ತು ಆ ಕಲ್ಪನಾ ಲೋಕ ಅದ್ಭುತ ವಾಗಿದೆ.