ಕಾವ್ಯ ಸಂಗಾತಿ
ಆದಪ್ಪ ಹೆಂಬಾ
ಹೊಸತು ವರುಷ ಮತ್ತೆ ಬರಲಿ
ಹೊಸತು ವರುಷ ಮತ್ತೆ ಬರಲಿ
ಬದುಕ ಭಾರ ಜೀಕಿ ಜೀಕಿ
ಸವೆದ ಹಿರಿಯ ಜೀವಗಳಿಗೆ
ಹೊಸತು ಹರುಷ ನಿತ್ಯ ತರಲಿ
ನೊಗ ಹೊರಲು ಭುಜ ಕೊಡಲು ಸಿದ್ಧವಾಗಿರುವ
ಶುದ್ಧ ಉತ್ಸಾಹಿಗಳಿಗೆ ||
ಕರ್ಮಯೋಗಿ ರಾಶಿ ತೂರಿ
ಸುಗ್ಗಿ ಹಾಡು ಹಾಡಲಿ
ಮಡದಿ ಮಕ್ಕಳೊಡನೆ ಕೂಡಿ
ಮೂಟೆ ಮೂಟೆ ತುಂಬಲಿ ||
ಗಾನಯೋಗಿ ನೋವ ಮರೆತು
ಹೊಸತು ಹಾಡು ಹಾಡಲಿ
ಜಗವು ಕೇಳೆ ಹೊಸತು ರಾಗ
ತಲೆದೂಗುತ ನಲಿಯಲಿ ||
ಜ್ಞಾನಯೋಗಿ ಜಗದ ಪಾಪ
ತೊಳೆವ ಕೆಲಸ ಮಾಡಲಿ
ಪ್ರೀತಿ-ಸ್ನೇಹ ಒಂದೆ ಸಾಕು
ಬೇರೆ ಮದ್ದು ಏಕೆ ಬೇಕು
ಎಂಬ ಮಾತು ಸಾರಲಿ ||
ತೃಣಕು ತುಣುಕು ಅಣುವೇ ಸ್ಪೂರ್ತಿ ಜಗವನಾಳ್ವೆ ಎನುತಿದೆ
ನಿಜದ ಮೂಲ ಮಹಾ ಮಂತ್ರ
ಪ್ರೀತಿ-ಸ್ನೇಹ ಎನ್ನದೇ ||
ಪಾರುಪತ್ಯ ನೋಡುವವಗೆ
ಕಾಣುತಿಹುದು ಶಾಂತಿ ನೆಮ್ಮದಿಯ ಕೊರತೆ
ಎದುರಿಗಿರುವ ವರುಷ ಪೂರ್ತಿ
ಬತ್ತದಿರಲಿ
ಪ್ರೀತಿ-ಒಲವಿನೊರತೆ ||
ಆದಪ್ಪ ಹೆಂಬಾ