ಧಾರಾವಾಹಿ-ಅಧ್ಯಾಯ –16
ಒಬ್ಬ ಅಮ್ಮನ ಕಥೆ
ರುಕ್ಮಿಣಿ ನಾಯರ್
ದೂರದೂರಿನತ್ತ ಪಯಣ
ಅವರ ಧ್ವನಿಯಲ್ಲಿ ಧೃಡ ನಿರ್ಧಾರದ ಗಟ್ಟಿತನವಿತ್ತು.
ಮಕ್ಕಳನ್ನು ಬಿಗಿಯಾಗಿ ಹಿಡಿದುಕೊಂಡಿದ್ದರು. ಮಕ್ಕಳೂ ಕೂಡಾ ಅಮ್ಮನನ್ನು ಅಪ್ಪಿಕೊಂಡು ನಾವು ಬರುವುದಿಲ್ಲ ಎಂಬಂತೆ ಅಪ್ಪನ ಕಡೆ ನೋಡಿದರು. ಮಕ್ಕಳು ಹಾಗೂ ತಾನು ಹೋಗದಿದ್ದರೆ ಸಕಲೇಶಪುರಕ್ಕೆ ಹೋಗುವ ನಿರ್ಧಾರವನ್ನು ಪತಿಯು ಬದಲಾಯಿಸಬಹುದೇನೋ ಎನ್ನುವ ಸಣ್ಣ ಆಸೆಯೊಂದು ಈಗಲೂ ಕಲ್ಯಾಣಿಯ ಮನದಲ್ಲಿ ಇತ್ತು. ನಾರಾಯಣನ್ ರವರಿಗೆ ಎಲ್ಲಿಲ್ಲದ ಕೋಪ ಬಂದಿತು ಎಲ್ಲವೂ ನಿರ್ಧರಿಸಿ ಕಾರ್ಯರೂಪಕ್ಕೆ ತಂದಿದ್ದು ಆಯ್ತು. ಈಗ ಕೊನೆಗಳಿಗೆಯಲ್ಲಿ ಹೆಂಡತಿ ಮಕ್ಕಳು ಬರುವುದಿಲ್ಲವೆಂದು ಹೇಳಿದರೆ ಹೇಗೆ?
ಗಂಡುಮಕ್ಕಳು ಇಬ್ಬರೂ ಅಮ್ಮನನ್ನು ಕಾಣದೇ ಅಳಲು ಪ್ರಾರಂಭಿಸಿದರು. ಸುಮತಿ ಹಾಗೂ ಅವಳ ಅಕ್ಕ ಇಬ್ಬರನ್ನೂ ಮಡಿಲಲ್ಲಿ ಅವುಚಿಕೊಂಡು ತಾವೂ ಮೌನವಾಗಿ ಅಳಲು ಪ್ರಾರಂಭಿಸಿದರು. ಏನು ಮಾಡುವುದು ಎಂದು ತೋಚಲಿಲ್ಲ. ಅವರ ನಂಬಿಕೆಯೂ ಅಮ್ಮ ನಮ್ಮನ್ನು ಬಿಟ್ಟು ಇರಲಾರಳು. ಖಂಡಿತಾ ಹಿಂದೆಯೇ ಬರುವಳು ಎಂದು ಗೇಟಿನ ಆಚೆ ಮುಂದಿನ ತಿರುವು ಬರುವವರೆಗೂ ಇಣುಕಿ ನೋಡಿದರೂ ಅಮ್ಮ ಬರುವುದು ಕಾಣಲಿಲ್ಲ. ಅಮ್ಮ ಬರದಿದ್ದನ್ನು ನೋಡಿ ಅಪ್ಪ ನಮ್ಮನ್ನೆಲ್ಲಾ ಮತ್ತೆ ಮನೆಕಡೆ ಕರೆದುಕೊಂಡು ಹೋಗುವರು ಎಂಬ ನಂಬಿಕೆಯ ನಿರೀಕ್ಷೆಯೊಂದಿಗೆ ಮಕ್ಕಳು ಇದ್ದರು. ಇತ್ತ ಕಲ್ಯಾಣಿ ತಾನಿಲ್ಲದೆ ಪತಿ ಮಕ್ಕಳನ್ನು ಖಂಡಿತಾ ಕರೆದುಕೊಂಡು ಹೋಗುವುದಿಲ್ಲ ಹಿಂತಿರುಗಿ ಬಂದೇ ಬರುತ್ತಾರೆ ತನ್ನ ತವರಿನವರು ಹೇಳಿದಂತೆ ತನ್ನನ್ನೂ ಮಕ್ಕಳನ್ನೂ ಖಂಡಿತಾ ಇಲ್ಲೇ ಬಿಟ್ಟು ಜಮೀನು ಖರೀದಿಯ ನಂತರ ಬಂದು ಎಲ್ಲರನ್ನೂ ಕರೆದುಕೊಂಡು ಹೋಗುತ್ತಾರೆ ಎಂಬ ನಂಬಿಕೆಯ ಮೇಲೆ ಪತಿಯನ್ನು ಹಿಂಬಾಲಿಸಿಕೊಂಡು ಹೋಗದೇ ಅಲ್ಲೇ ಉಳಿದಿದ್ದರು ಹಾಗೂ ಸಕಲೇಶಪುರದಲ್ಲಿ ಜಮೀನನ್ನು ಕೊಳ್ಳುವ ನಿರ್ಧಾರವನ್ನು ಬದಲಾಯಿಸಲೂ ಬಹುದು ಎಂಬ ಅಸಫಲ ನಿರೀಕ್ಷೆಯೂ ಅವರದಾಗಿತ್ತು. ಅವರೂ ಕೂಡಾ ಗೇಟಿನ ತಿರುವಿನವರೆಗೂ ಮರೆಯಾಗುವ ಜೀಪನ್ನು ನೋಡುತ್ತಾ ನಿಂತಿದ್ದರು. ಇನ್ನಾದರೂ ಹಿಂತಿರುಗಿ ಬಂದೇ ಬರುವರು ಎನ್ನುವ ನಂಬಿಕೆ ಕಲ್ಯಾಣಿಗೆ ಇತ್ತು. ಏಕೆಂದರೆ ತಾನಿಲ್ಲದೇ ಖಂಡಿತಾ ಮಕ್ಕಳು ಇರಲಾರರು.
ಸುಮತಿಗೆ ಅಮ್ಮನನ್ನು ಕಾಣದೇ ಆಕಾಶವೇ ತಲೆಯ ಮೇಲೆ ಕಳಚಿ ಬಿದ್ದಂತಹ ಅನುಭವವಾಯಿತು. ಅಮ್ಮ ನಮ್ಮಜೊತೆ ಬರುತ್ತಿಲ್ಲ. ಅಮ್ಮ ಇಲ್ಲದೇ ನಾವು ಹೇಗೆ ಬದುಕುವುದು,?
ತಮ್ಮಂದಿರು ಇನ್ನೂ ಚಿಕ್ಕವರು ಅಮ್ಮ ಇಲ್ಲದೇ ಇರುವುದಿಲ್ಲ. ಕೊನೆಯ ತಮ್ಮನಂತೂ ಅಮ್ಮನಿಲ್ಲದೆ ನಿದ್ರೆ ಮಾಡುವುದಿಲ್ಲ. ರಾತ್ರಿ ನಾವೆಲ್ಲರೂ ಒಟ್ಟಾಗಿ ಮಲಗಿ ನಿದ್ರೆ ಮಾಡಿದರೂ ಅವನು ನಿದ್ರೆ ಮಾಡುವವರೆಗೂ ಅಮ್ಮ ಅವನ ಜೊತೆ ಇರಲೇ ಬೇಕಿತ್ತು. ಅಪ್ಪ ಅಮ್ಮ ಈಗೀಗ ಸರಿಯಾಗಿ ಮಾತನಾಡದೇ ಇರುವುದು ಅಪ್ಪ ಮನೆಗೆ ತಡವಾಗಿ ಬರುವುದು ಇಬ್ಬರೂ ಮೊದಲಿನಂತೆ ಇಲ್ಲದೇ ಇರುವುದು
ಎಲ್ಲವೂ ಸುಮತಿಯನ್ನು ಚಿಂತೆಗೀಡುಮಾಡಿತ್ತು. ಈಗ ಅಮ್ಮ ಜೊತೆಗೆ ಬಾರದೇ ಇರುವುದು ಕಂಡು ಅವಳಿಗೆ ಭಯವಾಯಿತು….” ಅಪ್ಪಾ ಅಮ್ಮ ಇನ್ನೂ ಬಂದಿಲ್ಲ ಪುನಃ ಮನೆಕಡೆಗೆ ಹೋಗೋಣ … ಅಮ್ಮನನ್ನು ಕರೆದುಕೊಂಡು ಬರೋಣ…. ನಾವೆಲ್ಲಾ ಕರೆದರೆ ಅಮ್ಮ ಖಂಡಿತಾ ಬರುತ್ತಾರೆ… ನಾವು ಇಲ್ಲದೇ ಅಮ್ಮ ಅರೆಕ್ಷಣ ಇರಲಾರರು…
ಈಗ ನಾವು ಹಿಂತಿರುಗಿ ಹೋಗುತ್ತೇವೆ ಅಂತ ಅಮ್ಮ ಅಲ್ಲಿ ಕಾಯುತ್ತಾ ಇರುತ್ತಾರೆ…. ನಾವೆಲ್ಲರೂ ಒಟ್ಟಾಗಿ ಕರೆದರೆ ಬಂದೇ ಬರುತ್ತಾರೆ…. ಇಲ್ಲವೆಂದರೆ ನಮ್ಮನ್ನು ಕೂಡಾ ಅಮ್ಮನ ಜೊತೆ ಬಿಟ್ಟು ಹೋಗಿ ಅಪ್ಪಾ”…. ಎಂದಳು ಮಕ್ಕಳೆಲ್ಲ ಅತ್ತು ಕರೆದರೂ ನಾರಾಯಣನ್ ಮನಸ್ಸು ಕರಗಲಿಲ್ಲ. ಅವರಿಗೆ ಮಡದಿಯ ಮೇಲೆ ಬಹಳ ಕೋಪ ಬಂದಿತ್ತು. ಅವರ ಕೋಪ ಹಾಗೂ ಸ್ವಾಭಿಮಾನ ಹಿಂತಿರುಗಿ ಹೋಗಲು ಅವರನ್ನು ತಡೆದಿತ್ತು. ಅದರ ಮುಂದೆ ಮಕ್ಕಳ ಅಳುವಾಗಲೀ ಕಲ್ಯಾಣಿಯಿಲ್ಲದೇ ಮುಂದೆ ತಾವೆಲ್ಲರೂ ಹೇಗೆ ಬದುಕುತ್ತೇವೆ ಅನ್ನುವ ಚಿಂತೆಯಾಗಲಿ ಅವರ ಮನಸ್ಸನ್ನು ಕರಗಿಸಲಿಲ್ಲ. ಸುಮತಿ ಅಪ್ಪನ ಕರಗದ ಮನಸ್ಸನ್ನು ಕಂಡು ಚಕಿತಳಾದಳು. ಅವಳ ಅಕ್ಕನೂ ಕೂಡಾ
ಅಪ್ಪನನ್ನು ಕೇಳಿಕೊಂಡಳು. ಗಂಡು ಮಕ್ಕಳಂತೂ ಅತ್ತು ಅರೆಜೀವವಾಗಿದ್ದರು.
ಅಪ್ಪ ಮತ್ತೊಮ್ಮೆ ಮನೆಕಡೆ ಹೋಗುವುದಿಲ್ಲ ಎಂದು ಅರಿವಾದ ನಂತರ ಮಕ್ಕಳು ಮೌನವಾದರು. ಪತ್ತನಮ್ ತಿಟ್ಟ ಬಸ್ ನಿಲ್ದಾಣ ತಲುಪಿದರು. ಕೂಲಿಯವರು ಬಸ್ಸಿನ ಮೇಲೆ ಇರುವ ಕ್ಯಾರಿಯರ್ಗಳಲ್ಲಿ ಮನೆಯಿಂದ ತಂದ ಸಾಮಾನು ಸರಂಜಾಮುಗಳನ್ನು ಇಟ್ಟು ಭದ್ರವಾಗಿ ಕಟ್ಟಿದರು. ಅಪ್ಪನ ಜೊತೆ ಒಲ್ಲದ ಮನಸ್ಸಿನಿಂದ ಎಲ್ಲರೂ ಬಸ್ಸು ಹತ್ತಿದರು. ಊಟ ತಿಂಡಿಗೆ ಅಲ್ಲಲ್ಲಿ ಬಸ್ಸಿಂದ ಇಳಿದರು. ಒಂದೇ ಬಸ್ಸು ಪತ್ತನಮ್ ತಿಟ್ಟದಿಂದ ನೇರವಾಗಿ ಸಕಲೇಶಪುರಕ್ಕೆ ಇಲ್ಲದ ಕಾರಣ ಅಲ್ಲಲ್ಲಿ ಬಸ್ಸುಗಳನ್ನು ಬದಲಿಸಿ ಹತ್ತಿ ಮೈಸೂರು ಮುಖಾಂತರ ಹಾಸನಕ್ಕೆ ಬಂದು ಸಕಲೇಶಪುರ ತಲುಪಿದರು. ಅಲ್ಲಿಂದ ಹೊರಟ ಎರಡು ದಿನಗಳಲ್ಲಿ ಸಕಲೇಶಪುರದಲ್ಲಿ ಇರುವ ಅಕ್ಕನ ಮನೆ ತಲುಪಿದರು. ಅಕ್ಕನ ಮನೆಗೆ ಬಂದ ನಂತರ ನಾರಾಯಣನ್ ರವರಿಗೆ ಸ್ವಲ್ಪ ಸಮಾಧಾನವಾಯಿತು. ತೋಟ ಕೊಂಡು ಕೊಳ್ಳುವವರೆಗೂ ಅಕ್ಕ ಮಕ್ಕಳನ್ನು ನೋಡಿಕೊಳ್ಳುವರು ಎಂಬ ಭರವಸೆ ಇತ್ತು. ಮಕ್ಕಳು ಮೊದಲಬಾರಿಗೆ ಅತ್ತೆಯನ್ನು ಕಂಡಾಗ ಸಂಕೋಚದಿಂದ ಅವರ ಬಳಿಗೆ ಹೋಗದೇ ದೂರ ನಿಂತರು. ಆದರೆ ಅವರ ಅತ್ತೆ ಪ್ರೀತಿಯಿಂದ ಮಕ್ಕಳನ್ನು ಬರಮಾಡಿಕೊಂಡು.. “ಕಲ್ಯಾಣಿ ಬಂದಿಲ್ಲವೇ”… ಎಂದು ನಾಣುವನ್ನು ಕೇಳಿದರು. ಅದಕ್ಕೆ ನಾರಾಯಣನ್ ಏನೂ ಹೇಳದೇ ಇಲ್ಲವೆಂದು ತಲೆ ಅಲ್ಲಾಡಿಸಿದರು. ಹೆಚ್ಚೇನೂ ಕೇಳದೇ ಮಕ್ಕಳು ಹಾಗೂ ನಾರಾಯಣನ್ ದಣಿದಿದ್ದ ಕಾರಣ ಸ್ನಾನ ಮಾಡಿ ಎಲ್ಲರೂ ಊಟಕ್ಕೆ ಬರಲು ಹೇಳಿದರು. ಮಕ್ಕಳೆಲ್ಲರೂ ಬೆಚ್ಚನೆಯ ನೀರಿನಲ್ಲಿ ಸ್ನಾನ ಮಾಡಿದರು. ಕೊಳದ ತಣ್ಣೀರಿನಲ್ಲಿ ಸ್ನಾನ ಮಾಡುತ್ತಾ ಇದ್ದ ಮಕ್ಕಳಿಗೆ ಇಂದು ಸ್ನಾನದ ಮನೆಯಲ್ಲಿ ಬೆಚ್ಚನೆಯ ನೀರಿನಲ್ಲಿ ಸ್ನಾನ ಮಾಡಿದ್ದು ಹೊಸ ಅನುಭವ. ಬೆಚ್ಚನೆಯ ನೀರಿನ ಸ್ನಾನ ಅವರೆಲ್ಲರ ಎರಡು ದಿನಗಳ ಪ್ರಯಾಣದ ಆಯಾಸ ಕಡಿಮೆ ಮಾಡಿತು.
ರುಕ್ಮಿಣಿ ನಾಯರ್
ಕೇರಳ ಮೂಲದವರಾದ ರುಕ್ಮಿಣಿ ನಾಯರ್ (ರುಕ್ಮಿಣಿ ಎ.ವಿ),ಹುಟ್ಟಿದ್ದುಹಾಸನ ಜಿಲ್ಲೆಯ ಸಕಲೇಶಪುರದಲ್ಲಿ.ಸುಮತಿ ಪಿ.ಎಸ್. ಮತ್ತು ವೇಲಾಯುಧನ್ ನಾಯರ್ ಅವರ ಎರಡನೆಯ ಮಗಳಾಗಿ.ನಂತರ ಶ್ರೀದರ್ ಬಿ.ಎಂ.ರವನ್ನು ಮದುವೆಯಾಗಿ ಬೆಂಗಳೂರಲ್ಲಿನೆಲೆಸಿದ್ದಾರೆ..ಕೆಲಕಾಲ ಶಿಕ್ಷಕಿಯಾಗಿಕೆಲಸ ಮಾಡಿದವರೀಗ ಪೂರ್ಣಪ್ರಮಾಣದ ಗೃಹಿಣಿಯಾಗಿ ಬರವಣಿಗೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಪುಸ್ತಕ ಓದುವುದು-ಬರೆಯುವುದು, ಚಿತ್ರ ಬಿಡಿಸುವುದು. ಗಿಡಗಳನ್ನು ಬೆಳೆಸುವುದು ಇವರ ಹವ್ಯಾಸಗಳು