ಕಾವ್ಯ ಸಂಗಾತಿ
ಅನಸೂಯ ಜಹಗೀರದಾರ
ಪಾಶಾಣ
ಅದೆಷ್ಟು ಯುಗಗಳು ಸರಿದವೋ
ಇದ್ದಲ್ಲಿಯೇ ಇದ್ದು
ಒಂದು ಚೂರು ಮಿಡುಕಾಟದಲಿ
ಅಲುಗದೇ ಇದ್ದು
ಅದೆಷ್ಟು ವರ್ಷ ಸರಿದವೋ
ಭೋರೆಂದು
ವರ್ಷಧಾರೆ ಸುರಿದರೂ
ಅಚಲ ನಿಲುವ
ಸಡಿಲಿಸದೇ ಇದ್ದು
ನೀರ ಹನಿಯಲಿ
ಪ್ರತಿಸಲವೂ ಮಿಂದೆದ್ದು
ನವೆದರೂ ನಗುತ
ಸವಕಲು ಪುಡಿ ಮಣ್ಣಾಗಿ
ಹಸುರು ಚಿಗುರಿಗೆ
ದಾರಿಯಾಗಿಸಿದ್ದು
ಮೊಳಕೆಯೊಡೆದು ಜೀವ
ಉದಯಿಸಿದ್ದು
ಯಾರ ಶಾಪದಲೋ
ಕಲ್ಲಾಗಿದ್ದು
ಬಿಸಿಲು ಗಾಳಿ ಮಳೆ ಚಳಿಗೆ
ಸಹಿಸಿದ್ದು
ಅರುಹುತ್ತಿವೆ ಗತವ
ಮೂಕವಾಗಿದ್ದು
ಯಾರೋ ಕಟೆದ ಬರಹ
ಶಾಸನವಾಗಿದ್ದು
ಮತ್ತಾರೋ ಕೆತ್ತಿದ ಚಿತ್ರ
ದೇವರಾಗಿಸಿ ಭಕ್ತಿ ಮೆರೆದದ್ದು
ಹಾಸುಗಲ್ಲಿನಲಿ
ಪ್ರೇಮಾಂಕುರರು
ಹೆಸರು ಬರೆದದ್ದು
ಚೂಪುಗಲ್ಲಿನ ಏಟು
ಪ್ರೀತಿಗೆ ಸಾಕ್ಷಿಯಾಗಿದ್ದು
ಮತ್ತಾರೋ ಬಣ್ಣಗಳ
ತಂದು ಮೆತ್ತಿದ್ದು
ತಮ್ಮದೇ ಬಂಡೆಯೆನ್ನುವ
ಹಾಗೆ ಸ್ವತ್ತಾಗಿಸಿದ್ದು
ಯಾರೇ ಬರಲಿ ಸಂವಹಿಸುತ್ತವೆ
ಅವರದೇ..
ಪ್ರತಿಧ್ವನಿಗಳೊಂದಿಗೆ
ಪಾಶಾಣಗಳು
ಅನಸೂಯ ಜಹಗೀರದಾರ
ಸೂಪರ್ ಮೇಡಂ ಜೀ