ರಸ ಋಷಿ ಕುವೆಂಪು ನೆನಪಿನಲ್ಲಿ,ಶ್ರೀವಲ್ಲಿ ಶೇಷಾದ್ರಿ ಕವಿತೆ-ಚೇತನ ಧಾರೆ ಕುವೆಂಪು

ಪಂಪ ರನ್ನರ ಗತ ವೈಭವ ಸಿರಿಯೊಳ್
ತಾಯ ಮುಡಿಗಿನ್ನೊಂದು ನವ್ಯ ಹೂವು
ಬಯಕೆಯ ಹರಕೆಗೆ ವರವಿತ್ತವೊಲ್
ಮಲೆಮಡಿಲ ಪುಟ್ಟ ತೊಟ್ಟಿಲೊಳ್

ಗುಡ್ಡ ನದಿ ಕಾಡೊಳು ಪರಪುಟ್ಟನಾಗಿ
ನಾಕವೆಂದುಲಿನಲಿದು ಕುಣಿದಿದ್ದನು
ಸಹಜ ಪ್ರಕೃತಿಯನಚ್ಚರಿಯ ದಿಟ್ಟೆಯೊಳ್
ನೆಟ್ಟವಗೆ ಹೊಮ್ಮಿದೆ ಅನಂತ ಚೇತನ ಧಾರೆ

ಕುಸುಮಗಳ ಹನಿಯಾಯ್ದು ಹೆಣೆದ
ಗೂಡೊಳೆ ಹುದುಗಿರ್ಪ ಕವನ ಹೆಜ್ಜೇನು
ತಾಯ ಭಾಷಾಸುಧೆ ಕಲ್ಪನಾ ರವಿ ಮಿಲನ
ಕಬ್ಬಿನ ರಸ ಉಣಿಪ ದೃಶ್ಯ ಬ್ರಹ್ಮ

ಶಿಶಿರನನ್ನಟ್ಟಿ ವಸಂತನನ್ನೋಲೈಸಿ ತಂದಿಹ
ಹಸಿರ ಚಿಗುರನೆ ಪೋಲ್ವ ವಿಚಾರ ಧಾರೆ
ಗಂಗೋತ್ರಿ ದೇಗುಲದೆ ಜ್ಞಾನ ತಪಗೈದ
ಕರ್ಮಯೋಗಿಗೆ ಒಲಿದ ಕೃಪಾ ಪ್ರಶಸ್ತಿ

ಭಾರತಿಯ ತನುಜೆಯನ್ನೆಚ್ಚರಿಪ ಕಂದ
ಕರುನಾಡ ಕಸ್ತೂರಿ ಕನ್ನಡದ ಕಣ್ಮಣಿ
ಶ್ರದ್ಧೆಯಂ ಮರುಕಳಿಪ ಮುಪ್ಪಿಲ್ಲದುತ್ಸಾಹಿ
ಅಗಣಿತ ತಾರಾ ಪಥದ ಚಿರಧೃವ ತಾರೆ.


Leave a Reply

Back To Top