ರಸ ಋಷಿ ಕುವೆಂಪು ನೆನಪಿನಲ್ಲಿ,ನಳಿನಾ_ದ್ವಾರಕನಾಥ್ ಕವಿತೆ

ಮಲೆನಾಡಿನ ಸೀಮೆಯಲ್ಲಿ ಹುಟ್ಟು
ಕರುನಾಡಿಗೆ ಸಾಹಿತ್ಯಸೇವೆ ಕೊಟ್ಟು
ಸಹ್ಯಾದ್ರಿಯ ಸೌಂದರ್ಯ ಸವಿಯುತ
ಸುಂದರ ಕಾವ್ಯಧಾರೆಯನ್ನು ಹರಿಸುತ

ರಸ ಋಷಿಯಾದರು ಕನ್ನಡದ ಕುವರ
ಭುವಿಯೊಳು ನಿಮ್ಮ ಹೆಸರು ಅಮರ
ಶ್ರೀ ರಾಮಾಯಣ ದರ್ಶನಂ ಬರೆದರು
ಜ್ಞಾನಪೀಠಕ್ಕೆ ಪ್ರಥಮ ಭಾಜನರಾದರು

ಓ ನನ್ನ ಚೇತನ ಆಗು ನೀ ಅನಿಕೇತನ
ನಮ್ಮೀ ನಾಡಿನ ಶ್ರೇಷ್ಠ ಕವಿಗೀ ನಮನ
ವಿಶ್ವಮಾನವ ಸಂದೇಶದ ಅಭಿಯಾನ
ವೈಚಾರಿಕತೆ ನಾಟಕಗಳೊಂದಿಗೆ ಯಾನ

ರಾಷ್ಟ್ರ ಕವಿ ಎಂಬುವ ಬಿರುದಿನಿಂದ
ಕುವೆಂಪು ಎಂಬ ಕಾವ್ಯನಾಮದಿಂದ
ಹೆಸರಾದರು ಕನ್ನಡಮ್ಮನ ಕಂದನಾಗಿ
ಉಸಿರಾಯಿತು ಕನ್ನಡವೇ ಜೀವವಾಗಿ

ಮನುಜಮತ ವಿಶ್ವಪಥದ ಘೋಷಣೆ
ಕನ್ನಡ ಕನ್ನಡಿಗರಿಗೆ ಮೊದಲ ಮನ್ನಣೆ
ಭಾಷೆಯ ಮರೆತವನಾರು ಕನ್ನಡಿಗನಲ್ಲ
ಕನ್ನಡಕ್ಕೆ ನಮಿಸಿ ನಡೆಯಲು ಸೋಲಿಲ್ಲ

ಕವಿಶೈಲವಾಯ್ತು ಜನಿಸಿದ ಕುಪ್ಪಳ್ಳಿಯು
ಕನ್ನಡ ಸಾಹಿತ್ಯದ ಅಗ್ರಮಾನ್ಯ ಕವಿಯು
ಎಲ್ಲಾದರೂ ಇರು ನೀ ಎಂತಾದರೂ ಇರು
ಎಂದೆಂದಿಗೂ ಕನ್ನಡವಾಗಿರೆಂದು ಸಾರಿದರು


One thought on “ರಸ ಋಷಿ ಕುವೆಂಪು ನೆನಪಿನಲ್ಲಿ,ನಳಿನಾ_ದ್ವಾರಕನಾಥ್ ಕವಿತೆ

  1. ಚೆಂದದ ವಿನ್ಯಾಸದೊಂದಿಗೆ ಪ್ರಕಟಿಸಿದ ಆನ್ಲೈನ್ ಪತ್ರಿಕಾ ಬಳಗಕ್ಕೆ ಧನ್ಯವಾದಗಳು..

Leave a Reply

Back To Top