ಕಾವ್ಯ ಸಂಗಾತಿ
ಮಂಜುಳಾ ಭಟ್
ತಾಯ್ತನ
ತಾಯಿಯ ಗರ್ಭದಿ ಚಿಗುರುವ ಕುಡಿಯಿರೆ
ಮಾಯದ ಲೋಕವ ಸೃಷ್ಟಿಸಿದೆ/
ನೋಯಿಸಲಾರೆನು ನನ್ನಯ ಮಾತೆಯ
ಬಾಯಿಯ ತೆರೆಯದೆ ಆಡುತಿದೆ//
ಉದರದ ಒಳಗಡೆ ಬೆಳಕಿನ ಗೂಡಿದೆ
ಮಧುರವು ಇಲ್ಲಿನ ಆಸರೆಯು/
ಹೃದಯವು ಅಮೃತ ಸಿಂಚನ ಗೈದಿದೆ
ಒದೆಯಲು ಮೆತ್ತನೆ ಹಾಸಿಗೆಯು//
ಮೆಲ್ಲಗೆ ಕರಗಳು ಮಗುವನು ಸ್ಪರ್ಶಿಸಿ
ಮಲ್ಲಿಗೆ ಹಾಗೆಯೆ ಹಿಡಿಯುತಿವೆ/
ಕಲ್ಲಿನ ಮನವನು ಕರಗಿಸೊ ಕಂದನ
ಮೆಲ್ಲನೆ ತುಳಿತಕೆ ಕಾಯುತಿವೆ//
ಅಮ್ಮನ ಮೊಗದಲಿ ಏನೋ ಹರುಷವು
ಸುಮ್ಮನೆ ತಳಮಳ ಎದೆಯಲ್ಲಿ/
ಘಮ್ಮನೆ ಕಂಪನು ಬೀರಿದೆ ತನುವಿದು
ಹೊಮ್ಮಿದೆ ಕಂಪನ ಒಡಲಲ್ಲಿ//
ಮಡಿಲಲಿ ಮಲಗಿಸಿಕೊಳ್ಳಲು ಆಸೆಯು
ಕಡಲಿನ ಅಲೆ ತರ ವಾತ್ಸಲ್ಯ/
ಕುಡಿಯೊಡನಾಡುವ ಬಯಕೆಯ ತೋರುತ
ಪಡೆವಳು ಬಾಳಿನ ಸಾಫಲ್ಯ //
ಮಂಜುಳಾ ಭಟ್.
ನನ್ನ ರಚನೆಯ ತಾಯ್ತನ ಕವಿತೆಯನ್ನು, ತಮ್ಮ ಸಂಗಾತಿ ಪತ್ರಿಕೆಯಲ್ಲಿ ಪ್ರಕಟಿಸಿದ, ಶ್ರೀ ಮಧುಸೂದನ್ ಸರ್ ರವರಿಗೆ ಹೃತ್ಪೂರ್ವಕ ಧನ್ಯವಾದಗಳು
ಇದನ್ನು ಪತ್ರಿಕೆಗೆ ಕಳುಹಿಸಲು ಕಾರಣರಾದ ಮುಖಪುಟ ಸಹೋದರಿ ರುಕ್ಮಿಣಿ ನಾಯರ್ ಅವರಿಗೂ ಹೃತ್ಪೂರ್ವಕ ಧನ್ಯವಾದಗಳು