ಲೇಖನ ಸಂಗಾತಿ
ವೀಣಾ ಹೇಮಂತ್ ಗೌಡ ಪಾಟೀಲ್
ಕನ್ನಡದ ಕಾದಂಬರಿಗಳ
ಪಿತಾಮಹ ಗಳಗನಾಥರು,
ಅದೊಂದು ದಿನ ಸಾಯಂಕಾಲದ ಸಮಯದಲ್ಲಿ ತಮ್ಮನ್ನು ಭೇಟಿಯಾಗಲು ಬಂದ ಸ್ನೇಹಿತರೊಂದಿಗೆ ವಾಯು ವಿಹಾರಕ್ಕೆ ಹೊರಟು ಕೆರೆಯ ದಡದಲ್ಲಿ ಕುಳಿತಿದ್ದ ಕನ್ನಡದ ಪ್ರಖ್ಯಾತ ಲೇಖಕ ಕಾದಂಬರಿಕಾರ ಬೀ ಚಿ ಯವರನ್ನು ಕುರಿತು ವೃದ್ಧರೊಬ್ಬರು ತಮ್ಮ ಕೈಯಲ್ಲಿದ್ದ ಗಂಟನ್ನು ಕೆಳಗೆ ಇಳಿಸುತ್ತಾ ಇದನ್ನು ಸ್ವಲ್ಪ ಹೊತ್ತು ನೋಡಿಕೊಳ್ಳುತ್ತೀರಾ ಎಂದು ಕೇಳಿದರು. ಅದಕ್ಕೆ ಬೀಚಿಯವರು ಒಪ್ಪಿಕೊಂಡರು. ತಕ್ಷಣವೇ ಆ ವೃದ್ದ ವ್ಯಕ್ತಿ ಕೆರೆಯ ದಡದಲ್ಲಿ ತಮ್ಮ ಮೈ ಮೇಲಿದ್ದ ಬಟ್ಟೆಗಳನ್ನು ತೆಗೆದು ಒಗೆದು ಒಣಹಾಕಿ ಕೆರೆಯಲ್ಲಿ ಮುಳುಗಿ ಸ್ನಾನ ಮಾಡಿ ಸಂಧ್ಯಾವಂದನೆ ಪೂರೈಸಿ ತಮ್ಮ ಗಂಟನ್ನು ಪಡೆಯಲು ಇವರ ಬಳಿ ಬಂದರು.. ವೃದ್ಧರ ಈ ಚರ್ಯೆಯನ್ನು ಗಮನಿಸಿದ ಬೀಚಿ ಮತ್ತು ಅವರ ಸ್ನೇಹಿತರು ತುಸು ಆಶ್ಚರ್ಯದಿಂದ ಈ ಗಂಟಿನಲ್ಲೇನಿದೆ ಎಂದು ಕೇಳಿದರು. ಅದಕ್ಕೆ ಉತ್ತರವಾಗಿ ಆ ವೃದ್ಧರು ಈ ಗಂಟಿನಲ್ಲಿ ಕನ್ನಡ ಸಾಹಿತ್ಯದ ಮೇರು ಲೇಖಕರ ಪುಸ್ತಕಗಳು ಇದ್ದು ಅವುಗಳನ್ನು ತಾನು ಊರೂರಿಗೆ ಹೊತ್ತೊಯ್ದು ಮಾರುತ್ತಿರುವುದಾಗಿ ಹೇಳಿದರು. ಸ್ವತಃ ಲೇಖಕರಾದ ಈ ಇಬ್ಬರು ಸ್ನೇಹಿತರು ಆ ವೃದ್ಧರ ಹೆಸರನ್ನು ಕೇಳಿದರು. ಗಳಗನಾಥ ಅಂತ ಕರಿತಾರ್ರಿ ಎಂದು ಆ ವೃದ್ಧರು ಹೇಳುವುದೇ ತಡ ಈ ಇಬ್ಬರು ಸ್ನೇಹಿತರು ಆ ವೃದ್ಧರ ಕಾಲಿಗೆ ದೀರ್ಘ ದಂಡ ನಮಸ್ಕಾರ ಮಾಡಿದರು. ಹೀಗೆ ಆ ಸ್ನೇಹಿತದ್ವಯರಿಂದ ನಮಸ್ಕರಿಸಿಕೊಂಡ ಆ ಕನ್ನಡದ ಮೇರು ವ್ಯಕ್ತಿಯೇ ನಮ್ಮ ಕನ್ನಡ ಸಾಹಿತ್ಯ ಲೋಕದಲ್ಲಿ ‘ಕಾದಂಬರಿಗಳ ಪಿತಾಮಹ’ ಎನಿಸಿಕೊಂಡ ಗಳಗನಾಥರು.
ಇನ್ನೊಂದು ಪ್ರಕರಣದಲ್ಲಿಯೂ ಕೂಡ ಕನ್ನಡದ ಇನ್ನೋರ್ವ ಪ್ರಸಿದ್ಧ ಸಾಹಿತಿ ಹಾ ಮಾ ನಾಯಕ್ ಅವರು ತಾವು ಚಿಕ್ಕ ಹುಡುಗನಾಗಿದ್ದಾಗ, ಪುಸ್ತಕದ ಹೊರೆ ಹೊತ್ತು ತಿರುಗುತ್ತಿದ್ದ ಗಳಗನಾಥರನ್ನು ಸೀರೆ ಮಾರುವ ವ್ಯಕ್ತಿ ಎಂದು ಮನೆಗೆ ಕರೆತಂದದ್ದನ್ನು , ಅವರು ಬಿಚ್ಚಿದ ಗಂಟಿನಲ್ಲಿ ಇದ್ದ ಪುಸ್ತಕದ ಭಂಡಾರವನ್ನು ಕಂಡು, ಆ ಪುಸ್ತಕಗಳ ಕರ್ತೃ ಆ ಗಂಟನ್ನು ಹೊತ್ತು ತಿರುಗುತ್ತಿದ್ದ ವ್ಯಕ್ತಿಯೇ ಎಂದು ಅರಿತು ತನ್ನ ಊರಿನ ಜನರು ಬೆಕ್ಕಸ ಬೆರಗಾದದ್ದನ್ನು ತಮ್ಮ ಒಂದು ಲೇಖನದಲ್ಲಿ ನೆನಪಿಸಿಕೊಂಡಿದ್ದಾರೆ. ಹೀಗೆ ಕನ್ನಡದ ಸಾರ್ವಕಾಲಿಕ ಶ್ರೇಷ್ಠ ಕವಿಗಳ, ಸಾಹಿತಿಗಳ ಪುಸ್ತಕಗಳನ್ನು ಮನೆಮನೆಗೆ ಮುಟ್ಟಿಸುವ ಕೆಲಸ ಮಾಡಿದ ವ್ಯಕ್ತಿ ಗಳಗನಾಥರು.
1869ರ ಜನವರಿ 5ರಂದು ಹಾವೇರಿಯ ಗಳಗನಾಥ ಎಂಬ ಊರಿನಲ್ಲಿ ತ್ರಿವಿಕ್ರಮ(ತಿರುಕೋ) ಭಟ್ಟ ಮತ್ತು ಏಣುಬಾಯಿ ಎಂಬ ದಂಪತಿಗಳ ಹಿರಿಯ ಮಗನಾಗಿ ಹುಟ್ಟಿದ ವೆಂಕಟೇಶ ಬಾಲ್ಯದಿಂದಲೂ ಚೂಟಿಯಾಗಿದ್ದ ಮಗು. ತನ್ನೂರು ಗಳಗನಾಥದ ಗಳಗೇಶ್ವರ ದೇವಸ್ಥಾನದ ಆವರಣದಲ್ಲಿದ್ದ ಪಾಠಶಾಲೆಯಲ್ಲಿ ಗುರುಕುಲ ಪದ್ದತಿಯಲ್ಲಿ ವಿದ್ಯೆ ಕಲಿತ ವೆಂಕಟೇಶ ಮುಂದೆ ಮುಲ್ಕಿ ಪರೀಕ್ಷೆಯನ್ನು ಪೂರೈಸಿ ಶಿಕ್ಷಕರ ತರಬೇತಿಯನ್ನು ಪಡೆದುಕೊಂಡರು. ಮಾತೃಭಾಷೆಯ ಕುರಿತಾದ ಪ್ರೀತಿ ವಿಶೇಷ ರೂಪ ತಾಳಿದ್ದು ಅವರು ಧಾರವಾಡದಲ್ಲಿ ಶಿಕ್ಷಣ ಪಡೆಯುತ್ತಿದ್ದಾಗ. ಆದ್ದರಿಂದಲೇ ಧಾರವಾಡಕ್ಕೆ ಒಂದು ವಿಶೇಷ ಸ್ಥಾನ ಅವರ ಜೀವನದಲ್ಲಿ ಲಭಿಸಿತು. ಧಾರವಾಡದಲ್ಲಿ ಅವರು ಶಾಲೆಗೆ ಉಪಯುಕ್ತವಾಗುವ ಹಲವು ಸಣ್ಣಪುಟ್ಟ ಪುಸ್ತಕಗಳನ್ನು ಲೇಖನಗಳನ್ನು ಬರೆದರು. ಈ ಸಮಯದಲ್ಲಿ ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘವು ಅವರಿಗೆ ಬೆನ್ನೆಲುಬಾಗಿ ನಿಂತಿತ್ತು.
ಶಿಕ್ಷಕರ ತರಬೇತಿಯನ್ನು ಪಡೆದುಕೊಳ್ಳುತ್ತಿರುವ ಸಮಯದಲ್ಲಿ ಉತ್ತರ ಕರ್ನಾಟಕದಲ್ಲಿ ಕನ್ನಡ ಪತ್ರಿಕೆಗಳು ಲಭ್ಯವಾಗುತ್ತಿರಲಿಲ್ಲವಾದ ಕಾರಣ ಉತ್ತರ ಕರ್ನಾಟಕದ ಜನರು ಸುದ್ದಿಗಳಿಗಾಗಿ ಲೋಕಮಾನ್ಯ ತಿಲಕರ ಕೇಸರಿ ಮತ್ತು ಹರಿನಾರಾಯಣ ಅಪ್ಟೆಯವರ ಕರಮಣುಕ್ ಎಂಬ ಮರಾಠಿ ಪತ್ರಿಕೆಗಳ ಮೊರೆ ಹೋಗುತ್ತಿದ್ದರು. ಆಗ ವೆಂಕಟೇಶನಿಗೆ ಈ ಎಲ್ಲಾ ಪತ್ರಿಕೆಗಳು ಕನ್ನಡದಲ್ಲಿ ಲಭ್ಯವಿದ್ದರೆ ಅದೆಷ್ಟು ಚಂದ ಎಂದು ತೋರುತ್ತಿತ್ತು.
ಗಳಗನಾಥರು ‘ಶೇಷಾಚಲ ಗ್ರಂಥಮಾಲೆ’ ಯನ್ನೂ ಆನಂತರ ‘ಗಳಗನಾಥ ಸುರಸ ಗ್ರಂಥಮಾಲೆ’ಯನ್ನೂ ಆರಂಭಿಸಿ ಬಹುಕಾಲ ನಡೆಯಿಸಿಕೊಂಡು ಬಂದರು. ತಮ್ಮ ಕಾದಂಬರಿಗಳನ್ನು, ಧಾರ್ಮಿಕ ಗ್ರಂಥಗಳನ್ನೂ ಅಲ್ಲದೆ ಇತರರು ಬರೆದ ಗ್ರಂಥಗಳನ್ನೂ ಅವರು ಪ್ರಕಟಿಸಿದರು.ಪರಿಣಾಮವಾಗಿ 1809ರಲ್ಲಿ ಸದ್ಬೋದ ಚಂದ್ರಿಕೆ ಎಂಬ ಪತ್ರಿಕೆಯನ್ನು ಅವರು ಪ್ರಾರಂಭಿಸಿದರು. ಹರಿನಾರಾಯಣ ಅಪ್ಟೆಯವರ ಹಲವಾರು ಕಾದಂಬರಿಗಳನ್ನು ಕನ್ನಡಕ್ಕೆ ಅನುವಾದಿಸಿದ ಗಳಗನಾಥರು, ಬಂಗಾಳ ಸಾಹಿತ್ಯ ಕ್ಷೇತ್ರಕ್ಕೆ ಬಂಕಿಮಚಂದ್ರರು, ಮರಾಠಿ ಸಾಹಿತ್ಯಕ್ಕೆ ಹರಿನಾರಾಯಣ ಅಪ್ಟೆಯವರು ನೀಡಿದ ಕೊಡುಗೆಯನ್ನು ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಕೊಡ ಮಾಡಿದರು.
ಗಳಗನಾಥರು ತಮ್ಮ ಪತ್ರಿಕೆ ಸದ್ಬೋದ ಚಂದ್ರಿಕೆಯಲ್ಲಿ ಸ್ವತಹ ತಾವು ಬರೆಯುವುದಲ್ಲದೆ ಅನೇಕ ಲೇಖಕರಿಂದ ಲೇಖನಗಳನ್ನು ಬರೆಸುತ್ತಿದ್ದರು. ಅತ್ಯಂತ ಕಡಿಮೆ ಸಮಯದಲ್ಲಿ ಪತ್ರಿಕೆಯ ಪ್ರತಿಗಳ ಮಾರಾಟ ಏಳು ಸಾವಿರದ ಗಡಿಯನ್ನು ಮುಟ್ಟಿದವು. ಇದರ ಜೊತೆ ಜೊತೆಗೆ ಮರಾಠಿಗರ ಸ್ವಾತಂತ್ರ್ಯದ ಕಿಚ್ಚನ್ನು ಕನ್ನಡದ ಜನರಿಗೂ ಹಚ್ಚಿಸಿದ್ದು ವೆಂಕಟೇಶರೇ.
ಮುಂದೆ 1919 ರಲ್ಲಿ ಸದ್ಗುರು ಎಂಬ ಪತ್ರಿಕೆಯನ್ನು ಆರಂಭಿಸಿದ ವೆಂಕಟೇಶರು ಗಳಗನಾಥ ಎಂಬ ಹೆಸರಿನಿಂದಲೇ ಬರೆಯಲಾರಂಭಿಸಿದರು. ಅವರ ಒಟ್ಟು 24 ಕಾದಂಬರಿಗಳಲ್ಲಿ 18 ಕಾದಂಬರಿಗಳನ್ನು ಅನುವಾದಿಸಿದ್ದರೆ,3 ಸತ್ಪುರುಷರ ಚರಿತೆಗಳು 8 ಪ್ರಬಂಧಗಳು ಮತ್ತು 9 ಪೌರಾಣಿಕ ಕಥೆಗಳನ್ನು ಅವರು ಬರೆದಿದ್ದಾರೆ. ಅವರ ಅನುವಾದಿತ ಕಾದಂಬರಿಗಳಲ್ಲಿ ಕೂಡ ವಿಶೇಷವಾಗಿ ನಮ್ಮ ನೆಲದ ಸೊಗಡಿಗೆ ತಕ್ಕಂತಹ ವಿಷಯಗಳನ್ನು, ಗಾದೆ ಮಾತುಗಳನ್ನು ಬಳಸಿ ರಚಿಸುತ್ತಿದ್ದರು. ಇವರ ಸಾಹಿತ್ಯವೆಂದರೆ ಇಡೀ ಕರ್ನಾಟಕದ ಎಲ್ಲ ಭಾಗದವರಿಗೂ ಒಂದೇ ಎಂಬ ರೀತಿಯ ಸಾಹಿತ್ಯವಾಗಿತ್ತು. ಹೀಗೆ ಇಡೀ ಕರ್ನಾಟಕದಲ್ಲಿನ ವಿವಿಧ ಬಗೆಯ ಕನ್ನಡ ಮಾತನಾಡುವ ಜನರಿಗೆ ಕನ್ನಡದ ಏಕರೂಪತೆಯನ್ನು ನೀಡಿದ ಆದ್ಯ ಪುರುಷರಲ್ಲಿ ಒಬ್ಬರಾಗಿರುವ ಗಳಗನಾಥರಿಗೆ ಮೈಸೂರಿನ ಮಹಾರಾಜ ಕಾಲೇಜಿನ ಕರ್ನಾಟಕ ಸಂಘವು ಮಾನಪತ್ರವನ್ನು ನೀಡಿ ಗೌರವಿಸಿತ್ತು.
ಕನ್ನಡ ಪತ್ರಿಕೆಗಳನ್ನು, ಪುಸ್ತಕಗಳನ್ನು ಮನೆ ಮನೆಗೆ ತಲುಪಿಸಬೇಕು ಎಂಬ ಅವರ ಮಹದಾಶಯದ ಭಾಗವಾಗಿ ತಾವೇ ತಮ್ಮ ಪುಸ್ತಕಗಳ ಜೊತೆ ಜೊತೆಗೆ ಕನ್ನಡದ ಎಲ್ಲ ಲೇಖಕರ ಪುಸ್ತಕಗಳನ್ನು ಹೊತ್ತು ತಿರುಗಿ ಮಾರುತ್ತಿದ್ದರು ಗಳಗನಾಥರು. ಕನ್ನಡ ನಾಡು-ನುಡಿಯ ಬಗ್ಗೆ ಅಪಾರ ಪ್ರೇಮವನ್ನು ಹೊಂದಿದ್ದ ಅವರು ತಮ್ಮ ಸಾಹಿತ್ಯದ ಮೂಲಕ ಸ್ವಾತಂತ್ರ್ಯದ ಕಿಚ್ಚನ್ನು ಹೆಚ್ಚಿಸಿದರಲ್ಲವೇ ಪ್ರೀತಿ ಪ್ರೇಮ, ಶೌರ್ಯ, ವಿರಸ, ಮಾನವೀಯತೆ, ವಿಶ್ವಮಾನವ ಪ್ರಜ್ಞೆ ,ಈಶ್ವರಿಯ ತತ್ವಗಳು ಹೀಗೆ ಹತ್ತು ಹಲವು ವಿಷಯಗಳ ಕುರಿತ ಲೇಖನಗಳನ್ನು ಬರೆದು ಪ್ರಕಟಿಸಿದರು.
ಪತ್ರಿಕಾ ಪ್ರಕಟಣೆಯ ಜೊತೆ ಜೊತೆಗೆ ತಮ್ಮ ಶಿಕ್ಷಕ ವೃತ್ತಿಯನ್ನು ಕೂಡ ನಿರ್ವಹಿಸುತ್ತಿದ್ದ ಗಳಗನಾಥರು, ಅವಧಿ ಪೂರ್ಣವಾಗುವ ಮುನ್ನವೇ ತಮ್ಮ ಶಿಕ್ಷಕ ವೃತ್ತಿಗೆ ರಾಜೀನಾಮೆ ನೀಡಿ ಸಂಪೂರ್ಣವಾಗಿ ಸಾಹಿತ್ಯ ಕ್ಷೇತ್ರಕ್ಕೆ ತಮ್ಮನ್ನು ತಾವು ಅರ್ಪಿಸಿಕೊಂಡರು. ತಮ್ಮ ಜೀವಿತದ ಕೊನೆಯವರೆಗೂ ಅಗಡಿಯ ಆನಂದವನದಲ್ಲಿ ನೆಲೆಸಿದ್ದ ಅವರು ತಮ್ಮ ಅಲ್ಪ ನಿವೃತ್ತಿ ವೇತನದ ಹಣದಲ್ಲಿ ಜೀವನ ಸಾಗಿಸಿದರು. ತಮ್ಮ ಅಂತಿಮ ದಿನಗಳಲ್ಲಿ ಕ್ಯಾನ್ಸರ್ ಕಾಯಿಲೆಯಿಂದ ಬಳಲಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಸಮಯದಲ್ಲಿಯೂ ಕೂಡ ಕನ್ನಡ ಸಾಹಿತ್ಯದ ಕುರಿತಾದ ಅವರ ಉತ್ಕಟ ಅಭಿಮಾನವನ್ನು ಕಂಡು ಎಲ್ಲರೂ ವಿಸ್ಮಿತರಾಗಿದ್ದರು. ಅವರ ಪರಿಸ್ಥಿತಿಯನ್ನು ಕಂಡು ಸ್ನೇಹಿತರು, ಸಂಬಂಧಿಕರು ನೊಂದುಕೊಂಡಾಗ ಎಲ್ಲಿಯವರೆಗೆ ನನ್ನ ಕನ್ನಡ ಪುಸ್ತಕಗಳು ಇರುತ್ತವೆಯೋ ಅಲ್ಲಿಯವರೆಗೂ ನಾನು ಜನರ ಮನಸ್ಸಿನಲ್ಲಿ ಜೀವಂತ ಇರುತ್ತೇನೆ, ನನ್ನ ಪರಿಸ್ಥಿತಿಗಾಗಿ ಯಾರು ನೊಂದುಕೊಳ್ಳಬಾರದು ಎಂದು ಸಮಾಧಾನ ಹೇಳಿದ ಮಹಾನ್ ಚೇತನ ಗಳಗನಾಥರು.
ಕನ್ನಡ ಸಾಹಿತ್ಯವು…. ಪ್ರತಿಯೊಬ್ಬ ಕನ್ನಡಿಗರ ಮನೆಯ ಸಂಪತ್ತಾಗಬೇಕು, ಕನ್ನಡ ಸಾಹಿತ್ಯವನ್ನು ಕೊಂಡು ಓದಿ ಬೆಳೆಸಬೇಕು ಎಂಬ ಮಹದಾಶಯ ಹೊತ್ತ ಗಳಗನಾಥರಂತಹ ಮಹಾನ ಲೇಖಕರು ಮತ್ತೆ ಮತ್ತೆ ಈ ಪುಣ್ಯಭೂಮಿಯಲ್ಲಿ ಹುಟ್ಟಿ ಬರಲಿ ಎಂಬ ಹಿರಿದಾಶಯ ಸಮಸ್ತ ಕನ್ನಡಿಗರದು.
ವೀಣಾ ಹೇಮಂತ್ ಗೌಡ ಪಾಟೀಲ್