ಡಾ.ರೇಮಾಸಂ ಅವರ ಕವಿತೆ-ಕರುಣಾಕರ

ನುಂಗಿರುವೆ ಅದೆಷ್ಟು ನೋವನು
ಕ್ರೂರಿ ಮನಸುಗಳ ನಂಜನು
ಕಲ್ಲು ಮಣ್ಣು ಮಸಿ ಬೀಸಿದರು
ಮುಳ್ಳಿನ ಕಿರೀಟವ ಹಾಕಿದರು

ಮುಗ್ಧ ನಗೆಯ ಹೊನಲು
ಹರಿಸಿದಿ ಪ್ರೇಮದ ಕಡಲು
ಶಿಲುಬೆಗೆ ಏರಿಸಿ ಕಟ್ಟಿದರಲ್ಲ
ಕ್ಷಮಿಸುತ್ತಿದ್ದೆ ನೀ ಅವರನ್ನೆಲ್ಲ

ಮೊಳೆ ಬಡೆಯುವರಿಗೆ ಹೇಳಿದೆ
ಜಾಗ್ರತೆ ನಿಮಗೂಬಡಿದೀತೆಂದು
ಹೇ ಸಹನತೆಯ ಸರದಾರನೇ
ಅದೆಷ್ಟು ಕ್ಷಮಾಶೀಲ ನೀನು

ಎಷ್ಟೊಂದು ನಿರ್ದಯಿ ಹೊಡೆತಗಳು
ರಕ್ತ ಸುರಿಯುವ ಗಾಯಗಳು
ಬೆತ್ಲಹೆಮ್ಮಿನ ಕರುಣೆಯ ಜ್ಯೋತಿಯೇ
ತೋರಿಸಿಬಿಟ್ಟೆ ಜಗಕೆಲ್ಲ ಬೆಳಕನು


Leave a Reply

Back To Top