ನಿರಚನಾ ಅವರ ಕವಿತೆ-ಅವನಿಲ್ಲದ ಮನೆ….

ಕಾದಿರುವೆ
ಅಹಲ್ಯೆಯಂತೆ ನಿನ್ನ ಪಾದ ಸ್ಪರ್ಶಕೆ
ಶ್ರೀರಾಮನಾಗಿ ಬರುವೆಯಾ?
ದ್ರೌಪದಿಯ ತೆರದಿ
ಕೈ ಮುಗಿದು ಮೊರೆಯಿಡುವೆ
ಶ್ರೀಕೃಷ್ಣನಂತೆ ಪೊರೆಯುವೆಯಾ?

ಅಪ್ಪುವೆನು ಮಾರ್ಕಾಂಡೇಯನಂತೆ
ಎಡೆ ಬಿಡದೆ ಭಜಿಸುವೆ ಪ್ರಹ್ಲಾದನಂತೆ
ನಿನ್ನ ದರುಶನ ಭಾಗ್ಯ ನೀಡುವೆಯಾ?
ದಾರಿ ಕಾಣದೆ
ಅಲೆದೇ ಅಲೆದೆನು ಅಕ್ಕನಂತಾದೆ
ಅನುದಿನವೂ
ನೆನೆದು ನೆನೆದು ದುಃಖದಿ ಮೀರಾಳನೂ ಮೀರಿಸಿದೆ.

ಬಾಳ ಕಡುಗತ್ತಲು ಕವಿಯುತಿರೆ
ಕನಕನಂತೆ ಗೋಗರೆವೆನು
ಕಿರುಕಿಂಡಿಯಲಿ ಬೆಳಕು ತೋರುವೆಯಾ?

ಅಪ್ಪ…
ನೀನಿಲ್ಲದ ಈ ಮನೆಯಲಿ
ನಿನ್ನ ನೆನಪಿನ ನಂದಾದೀಪ ಉರಿಯುತಿದೆ
ನಿನ್ನ ನೆನಪಲೇ ಮನೆ ಮನ ಬೇಯುತಿದೆ..
ಮರಳಿ ಮತ್ತೆ ನೀ ಬರುವೆಯಾ?
—————–

Leave a Reply

Back To Top