ಜ್ಞಾನದ ದಿವ್ಯ ಬೆಳಕು ಚೆಲ್ಲುವ ‘ಬುದ್ಧ ಪೌರ್ಣಿಮೆ’
ಜ್ಞಾನದ ದಿವ್ಯ ಬೆಳಕು ಚೆಲ್ಲುವ ‘ಬುದ್ಧ ಪೌರ್ಣಿಮೆ’..!
ಬುದ್ಧ ಪೌರ್ಣಿಮೆಯ ದಿನ ಇದೇ ದಿನಾಂಕ 7 ರಂದು ಇದೆ. ಆ ನೆಪದಲ್ಲಿ ಈ ಬುದ್ಧನ ನೆನೆದು ಈ ಲೇಖನ…
ಬೆಳದಿಂಗಳ ತಂಪು, ಆಹ್ಲಾದ, ನಿರ್ಲಿಪ್ತತೆ, ಶಾಂತಿ, ಏಕಾಂತ, ಪ್ರೇಮ, ಪ್ರಶಾಂತತೆ, ತೇಜಸ್ಸು- ಇವೆಲ್ಲಕ್ಕೂ ಸಂಕೇತವಾಗಿದೆ ಬುದ್ಧ ಪೌರ್ಣಿಮೆ. ತನ್ನ ಅಂಗಳದಲ್ಲಿ ಚೆಲ್ಲಿರುವ ಬೆಳದಿಂಗಳು ತನ್ನದೆಂಬಂತೆ ಕಂಡರೂ ಅದು ತನ್ನದಲ್ಲ ಎಂಬುದು ಮನುಷ್ಯರಲ್ಲಿ ಅಂತರ್ಗತವಾದ ಎಚ್ಚರ. ಬದುಕಿನ ಪ್ರತಿ ಹೆಜ್ಜೆಯಲ್ಲೂ ಈ ಎಚ್ಚರವನ್ನೂ ಕಾಪಿಟ್ಟುಕೊಳ್ಳುವುದೇ ಗುರು ಗೌತಮನ ಉಪದೇಶಗಳಲ್ಲಿ ಮಹತ್ವದ್ದಾಗಿದೆ..!
ಬುದ್ಧ ಹೇಳುವಂತೆ ಬದುಕೆಂಬುದು ಶುದ್ಧ ಬೆಳಕು. ಇಲ್ಲಿ ಯಾವುದೂ ಯಾರ ಸ್ವತ್ತೂ ಅಲ್ಲ. ಸುಖವನ್ನು ವಸ್ತುಗಳಲ್ಲಿ ಅರಸಲು ಹೋಗುವುದರಿಂದಲೇ ಮನುಷ್ಯ ದುಃಖಕ್ಕೀಡಾಗುತ್ತಾನೆ ಎಂದು ಗೌತಮ ಬುದ್ಧ ಹೇಳಿದ್ದರು. ಯಾವುದನ್ನೂ ಸ್ವಂತವೆಂದು ಪರಿಗಣಿಸದವನಿಗೆ ನೋವೂ ಇಲ್ಲ, ನಲಿವೂ ಇಲ್ಲ…
ಅಂತಹ ನಿರ್ಲಿಪ್ತ ಸಮಚಿತ್ತ ಮಾತ್ರ ಬುದ್ಧನ ನಗೆಯಂತಹ ಕಿರು ನಗೆಯನ್ನು ಹೊಳೆಯಬಹುದು. ಆ ನಿರ್ಮಲ ಧ್ಯಾನಸ್ಥ ಮಂದಹಾಸದಲ್ಲಿ ಆತ ಪೂರ್ಣಚಂದ್ರನಷ್ಟು ಶಾಂತ, ದೇದೀಪ್ಯಮಾನ. ತನ್ನ ಮಾತುಗಳು ಮನುಷ್ಯನ ಆಂತರಿಕ ಗುಣವನ್ನು ಕುರಿತು ಹೇಳುವುದರಿಂದ ಅವನ್ನು ಗ್ರಹಿಸುವುದು ಲೌಕಿಕದ ಲಾಲಸೆಗಳಲ್ಲಿ ಮುಳುಗಿರುವವರಿಗೆ ಸುಲಭವಲ್ಲ ಎಂದು ಗೌತಮನಿಗೆ ತಿಳಿದಿತ್ತು…
ಬಯಕೆಗಳ ಗಾಢಾಂಧಕಾರದಲ್ಲಿ ದಾರಿತಪ್ಪಿದವರಿಗೆ ತನ್ನ ಮಾತು ಪಥ್ಯವಾಗುವುದೆ? ಅಂಥವರಿಗೆ ಉಪದೇಶ ನೀಡಲು ಹೋಗಿ ತಾನು ದಣಿಯಲಾರೆನೆ? ಪ್ರಶ್ನೆಗಳು ಎದುರಾಗಿದ್ದವು. ಅದು ತರ್ಕದ ನಿಲುಕಿಗೆ ಮೀರಿದ್ದು. ಒಳಗಣ್ಣಿಗೆ ಮಾತ್ರ ಸ್ವಷ್ಟವಾಗುವಂಥದ್ದು ಅಂತ ತಿಳಿದಿದ್ದರೂ ಸಹಜೀವಿಗಳ ಬಗ್ಗೆ ಅಮಿತ ಕರುಣೆಯ ಬುದ್ಧ ಯಾರ ಆತ್ಮಗಳು ಸತ್ಯವನ್ನು ಕಾಣಲು ತೆರೆದಿರುತ್ತವೋ ಅಂಥವರಿಗೆ ನಾನು ಹೇಳುವುದು ಅರ್ಥವಾದೀತು ಎಂಬ ನಂಬಿಕೆಯಿಂದ ಜನರಲ್ಲಿ ಆತ್ಮಜ್ಞಾನದ ಬಗ್ಗೆ ಒಲವು ಮೂಡಿಸಿದ…
ಒಮ್ಮೆ ಝೆನ್ ಗುರು ಲಿಂಜಿ ಭಿಕ್ಷುಗಳನ್ನುದ್ದೇಶಿಸಿ ಮಾತನಾಡುತ್ತ, ನಾವು ಯಾವುದೇ ಧಾರ್ಮಿಕ ರೀತಿಯಲ್ಲಿ ವರ್ತಿಸಬೇಕಾದ ಅಗತ್ಯವಿಲ್ಲ. ಸಹಜವಾಗಿದ್ದರಷ್ಟೇ ಸಾಕು. ಯಾವುದನ್ನೂ ಹುಡುಕುವ ಅಗತ್ಯವೂ ಇಲ್ಲ. ಕಡೆಗೆ ಬುದ್ಧನನ್ನೂ ಕೂಡ. ಎಷ್ಟೆಂದರೂ ಬುದ್ಧ ಎನ್ನುವುದು ಕೇವಲ ಒಂದು ಶಬ್ದ ಅಷ್ಟೆ, ಸಂಕೇತವಷ್ಟೇ ಎನ್ನುತ್ತಾನೆ…
ಬುದ್ಧ ವ್ಯಕ್ತಿ ಪೂಜೆಯನ್ನು ಪ್ರೋತ್ಸಾಹಿಸಲಿಲ್ಲ ಎಂಬುದರ ನಿರ್ದಿಷ್ಟ ಸಾಕ್ಷಿ ಇದು. ಪೂರ್ಣಚಂದ್ರ ತೇಜಸ್ಸಿನ ಬುದ್ಧ ಅರಮನೆ, ಗುಡಿಸಲು ಎನ್ನದೆ ಎಲ್ಲರ ಅಂಗಳದಲ್ಲೂ ಯಥೇಚ್ಛ ಬೆಳದಿಂಗಳು ಹರಿಸುತ್ತ ನಡೆದ. ರಾಜ ಬಿಂಬಸಾರನೂ, ಕೊಲೆಗಡುಕ ಅಂಗುಲೀಮಾಲನೂ ಅವನ ಕರುಣೆಗೆ ಸಮಾನ ಪಾತ್ರರು…
ಬೆಳದಿಂಗಳನ್ನು ನೋಡಿ ದಣಿವ ಚೇತನ ಪ್ರಾಯಶಃ ಇರಲಾರದು. ಮನಸ್ಸು ಸಂಪೂರ್ಣ ಶಾಂತವಾದಾಗ. ಯೋಗಸೂತ್ರದಲ್ಲಿ ಹೇಳಿರುವಂತೆ ಉಂಟಾಗುವ ಕೇವಲ ಕುಂಭಕ ಅಥವಾ ಕೆಲ ಗಳಿಗೆಗಷ್ಟೆ ಉಸಿರು ಸ್ತಂಭಿತಗೊಳಿಸುವ ಅನುಭವ ಕೊಡುವಂಥದು ಪೌರ್ಣಮಿಯ ಚಂದಿರನ ಬೆಳ್ಳಿ ಕಿರಣಗಳು. ಕ್ಷಣಾರ್ಧದಲ್ಲಿ ಒಳಗಣ್ಣನ್ನು ತೆರೆಸಿ, ಬದುಕಿನ ಕ್ಷಣಭಂಗುರತೆ, ಪ್ರಕೃತಿಯ ಅಗಾಧತೆಗಳ ಕುರಿತು ಧ್ಯಾನಿಸುವಂತೆ ಮಾಡುವಂಥದು…
ವೈಶಾಖ ಶುದ್ಧ ಪೌರ್ಣಿಮಿಯ ರಾತ್ರಿ ಸಿದ್ಧಾರ್ಥ ಬಿಟ್ಟು ಹೊರಟಿದ್ದು ಅರಮನೆಯನ್ನಲ್ಲ. ಸಹಜೀವಿಗಳೊಂದಿಗೆ ಬೆರೆಯಲಾಗದಂತೆ ಮೇಲು-ಕೀಳು ಎಂಬುದನ್ನು ಸೃಷ್ಟಿಸುವ ಅಧಿಕಾರದ ಗದ್ದುಗೆಯನ್ನು; ಪದವಿ, ಐಶ್ವರ್ಯಗಳಿಂದ ಸುಖ ಸಿಗುತ್ತದೆ ಎಂಬ ಭ್ರಾಂತಿಯನ್ನು ಮನುಷ್ಯನ ಮೂಲಭೂತ ಕೊರತೆಗಳನ್ನು ಅರಸೊತ್ತಿಗೆಯಿಂದ ನೀಗಿಸಲು ಸಾಧ್ಯವಿಲ್ಲ ಎಂಬುದನ್ನು ಸಿದ್ಧಾರ್ಥ ಗಮನಿಸುತ್ತಾನೆ..!
ರಾಜಕುಮಾರನೆಂಬ ಭ್ರಮಾಕೋಶ ಕಳಚಿ ಜನರಲ್ಲಿಗೆ ಹೋದಾಗ ಮಾತ್ರ ಅವರ ದುಃಖವನ್ನು ತಾನು ಅರ್ಥಮಾಡಿಕೊಳ್ಳಬಲ್ಲೆ. ಮನುಕುಲಕ್ಕೆ ಸುಖ-ಸಂತೃಪ್ತಿ ದೊರಕುವ ಮಾರ್ಗ ಯಾವುದು ಎಂಬುದಕ್ಕೆ ಉತ್ತರವನ್ನು ಕಂಡುಕೊಳ್ಳಬಲ್ಲೆ ಎಂದು ಬೆಳದಿಂಗಳ ಆ ಇರುಳಿನಲ್ಲಿ ರಾಜ ಪದವಿ ತೊರೆದು ಜನರ ನಡುವೆಯೇ ಹುಡುಕಹೊರಟವನು ಸಿದ್ಧಾರ್ಥ…
ಮಾನವರ ದುಃಖವನ್ನು ದೂರಮಾಡುವ ಮುನ್ನ ಅದರ ಮೂಲವನ್ನು ಆತ ಅರಿಯ ಬೇಕಿತ್ತು. ಆ ಅರಿವಿನ ಹಾದಿ ಹುಡುಕುತ್ತ ಆತ ಮೊದಲು ದೇಹ ದಂಡಿಸಿಕೊಳ್ಳುತ್ತಾನೆ. ಎಷ್ಟೋ ದಿನ ಅನ್ನ, ನೀರು ತೊರೆದು ಪ್ರಕೃತಿಯ ಸರ್ವ ಕಾಠಿಣ್ಯವನ್ನು ತನ್ನನ್ನು ತೆರೆದುಕೊಂಡು ಸತ್ಯ ಅರಿಯಲು ಯತ್ನಿಸುತ್ತಾನೆ…
ಮೂಲತಃ ಪ್ರಜ್ಞಾವಂತನಾದ ಆತ, ದೇಹ ದಂಡನೆಯಿಂದ ಹೆಚ್ಚಿನ ಲಾಭವಿಲ್ಲವೆಂದು ಬೇಗ ಕಂಡುಕೊಳ್ಳುತ್ತಾನೆ. ಸುಜÁತಳಿಂದ ಆಹಾರ ಸ್ವೀಕರಿಸಿ ತನ್ನ ಉಪವಾಸ ಅಂತ್ಯಗೊಳಿಸುತ್ತಾನೆ. ಮೋಕ್ಷವನ್ನರಸುತ್ತಿದ್ದಾನೆ ಎಂದು ನಂಬಿ ಅವನೊಂದಿಗೆ ತಪಶ್ಚರ್ಯೆ ಪಾಲಿಸುತ್ತಿದ್ದ ಐದು ಮಂದಿ ಅನುಯಾಯಿಗಳು ಆತ ಕಷ್ಟಗಳಿಗೆ ಮಣಿದು ಲೌಕಿಕಕ್ಕೆ ಮರಳಿದನೆಂದು ಭ್ರಮಿಸಿ ಆತನ ಸಖ್ಯ ತೊರೆದು ಬಿಡುತ್ತಾರೆ..!
ಇಷ್ಟರಲ್ಲಿ ಬುದ್ಧನಿಗೆ ತಾನು ನಡೆಯಬೇಕಾದ ಹಾದಿ ಧ್ಯಾನ ಮಾರ್ಗವೆಂದು ಮನವರಿಕೆಯಾಗುತ್ತದೆ. ಜಗತ್ತಿನ ಆಗುಹೋಗುಗಳಿಗೆ, ಮನುಷ್ಯನ ತುಮುಲಗಳಿಗೆ ಕಾರ್ಯಕಾರಣ ಸಂಬಂಧದ ಎಳೆ ಹಿಡಿದು ಧ್ಯಾನಿಸಿ ಆತ ಕಂಡುಕೊಂಡದ್ದು ಅತ್ಯಂತ ಸರಳವೆಂದು ಕಾಣುವ ಆಸೆಯೇ ದುಃಖಕ್ಕೆ ಮೂಲ-ಎಂಬ ಸತ್ಯವನ್ನು.
ತನ್ನ ಹುಟ್ಟಿದ ದಿನವೂ ಆದ ಒಂದು ಪೌರ್ಣಮಿಯ ದಿನ ಬೋಧಿವೃಕ್ಷದ ಕೆಳಗೆ, ಜಗತ್ತು ಜ್ಞಾನೋದಯ ಎಂತ ಕರೆಯುವ ಅರಿವಿನ ಬೆಳದಿಂಗಳಿನಲ್ಲಿ ಮಿಂದು ಸಿದ್ದಾರ್ಥ ನಿರ್ಮೋಹಿ ಬುದ್ಧನಾದ..!
ಹೀಗೆ ಬುದ್ಧ ಅರಿವಿನ ಪರಮಾನಂದವನ್ನು ಸವಿಯುತ್ತಿದ್ದಾಗ ಒಬ್ಬ ಗರ್ವಿಷ್ಟ ಪಂಡಿತನೊಬ್ಬ ನಿಜವಾದ ಪಂಡಿತನ ಗುಣವಿಶೇಷಗಳೇನು ಎಂದು ಸವಾಲೆಸೆದ. ಅಹಂಕಾರದಿಂದ ಮುಕ್ತನಾದವನು, ಶುದ್ಧನಾಗಿದ್ದು ಆತ್ಮ ನಿಗ್ರಹವುಳ್ಳವನು, ತಿಳಿದವನೂ ಜ್ಞಾನಿಯೂ ಆದವನು. ಪಾಪಕೃತ್ಯಗಳನ್ನು ತೊರೆದವನು, ತನ್ನ ವರ್ತನೆಯಿಂದ ಇತರ ಜೀವಿಗಳಿಗೆ ಹಾನಿಯುಂಟು ಮಾಡದವನು ಮತ್ತು ಈ ಎಲ್ಲ ಕಾರಣಗಳಿಂದಾಗಿ ಪೂಜ್ಯನಾದವನು ಮಾತ್ರ ನಿಜವಾದ ಪಂಡಿತ ಎಂದ ಬುದ್ಧ…
ಒಮ್ಮೆ ಟೊಕುಸಾನ್ ಎಂಬ ಭಿಕ್ಷು ರುಟಾನ್ ಎಂಬ ಹಿರಿಯ ಭೀಕ್ಷುವನ್ನು ಭೇಟಿಯಾದ. ಆದಾಗಲೇ ಮುಸ್ಸಂಜೆಯಾಗಿತ್ತು. ಟೊಕುಸಾನ್ ತನ್ನನ್ನು ಕಾಡುತ್ತಿದ್ದ ಹಲವಾರು ಪ್ರಶ್ನೆಗಳನ್ನು ಕೇಳುತ್ತಲೇ ಇದ್ದ. ಕೆಲ ಸಮಯದ ಬಳಿಕ, ಈಗ ರಾತ್ರಿ ಬಹಳವಾಗಿದೆ. ಮಲಗಿ ವಿಶ್ರಾಂತಿ ತೆಗೆದುಕೋ ಹೋಗು ಅಂತ ರುಟಾನ್ ಅವನನ್ನೆಬ್ಬಿಸಿದ. ಟೊಕುಸಾನ್ ತಲೆಬಾಗಿ, ತೆರಳುವುದಕ್ಕೆಂದು ಬಾಗಿಲ ಬಳಿ ಹೋದವನು, ಹೊರಗೆ ಬಹಳ ಕತ್ತಲೆ ಎಂದು ನಿಂತುಕೊಂಡ…
ದೀಪವೊಂದನ್ನು ಹಚ್ಚಿ ಅದನ್ನು ಟೊಕುಸಾನ್‍ಗೆ ಕೊಡಲು ಹೋದ ರುಟಾನ್, ಇನ್ನೇನು ಟೊಕುಸಾನ್ ಅವನ ಕೈಯಿಂದ ದೀಪ ತೆಗೆದುಕೊಳ್ಳಬೇಕು ಎನ್ನುವಾಗ ಅದನ್ನು ಊದಿ ಆರಿಸಿಬಿಟ್ಟ ಒಡನೆಯೇ ಜ್ಞಾನೋದಯವಾದ ಟೊಕುಸಾನ್ ಬೆಳಿಗ್ಗೆ ಎದ್ದವನೇ ರುಟಾನ್ ಬಳಿ ಬಂದು, ಕೇಳಲು ನನ್ನಲ್ಲಿ ಯಾವ ಪ್ರಶ್ನೆಯೂ ಉಳಿದಿಲ್ಲ. ಬರುತ್ತೇನೆ ಎಂದು ಹೇಳುತ್ತಾ ಹೊರಟೇಬಿಟ್ಟ. ಇದು ಝೇನ್ ಕತೆ. ಎಷ್ಟೋ ಬಾರಿ ಅನೇಕ ಪ್ರಶ್ನೆ, ತರ್ಕ, ಜಿಜ್ಞಾಸೆಗಳಿಂದ ದೊರಕದ ಉತ್ತರ ಯಾವುದೋ ಪುಟ್ಟ ಘಟನೆಯಿಂದ ಕ್ಷಣಮಾತ್ರದಲ್ಲಿ ಹೊಳೆದುಬಿಡುತ್ತದೆ..!
ಝೇನ್ ಗುರುವೊಬ್ಬ ಹೇಳುವಂತೆ ಸಂಪೂರ್ಣ ಜ್ಞಾನವನ್ನು ಒಂದು ಕ್ಷಣಮಾತ್ರ, ಒಂದು ಕ್ಷಣ ಮಾತ್ರವೇ, ಸಾಕ್ಷಾತ್ಕರಿಸಿಕೊಳ್ಳಬಹುದು. ಮೋಡ ಕವಿದ ಒಂದು ಹುಣ್ಣಿಮೆಯ ರಾತ್ರಿ ಆಗಸದಲ್ಲಿ ನೋಡ ನೋಡುತ್ತಿರುವಂತೆಯೇ ಮೂಡುವ ದಟ್ಟ ಕಾರ್ಮೋಡಗಳ ನಡುವಿನ ಕಿರು ಅಂತರದಲ್ಲಿ ಪೂರ್ಣ ಚಂದ್ರ ಫಕ್ಕನೆ ಪ್ರತ್ಯಕ್ಷವಾಗಿ ಮತ್ತೆ ಮೋಡದ ಮರೆಗೆ ತೆರಳಿದರೆ ಹೇಗೋ ಹಾಗೆ…
ನೋಡುಗನ ಮನಸ್ಸಿನಲ್ಲಿ ಉಳಿಯುವುದು ಕಾರ್ಮೋಡವಲ್ಲ. ಹಾಗೆ ಚಕ್ಕನೆ ದರ್ಶನ ನೀಡಿದ ಪೌರ್ಣಮಿಯ ಚಂದಿರ. ಅರಿವಿಲ್ಲದೇನೇ ಆ ಕ್ಷಣದಲ್ಲಿ ಆಹ್ ಎಂಬ ಉದ್ಗಾರ ಹೊರಟು ಸ್ತಬ್ಧವಾಗಿ ನಿಲ್ಲಬಹುದು…
ಜಗತ್ತಿನ ಮತ್ತು ತನ್ನ ನಡುವಿನ ಸಂಬಂಧದ ಗೂಢವನ್ನು ಮನುಷ್ಯ ಅರ್ಥಮಾಡಿಕೊಂಡಾಗಲೂ ಇದೇ ಬಗೆಯ ದಿವ್ಯ ಆನಂದದ ಅನುಭವವಾಗುತ್ತದೆ ಎನ್ನುತ್ತಾನೆ ಗೌತಮ…
ಮಾನವ ಜೀವಿತದಲ್ಲಿ ಬರುವ ಹುಣ್ಣಿಮೆಗಳು ಅವೆಷ್ಟೋ. ಎಷ್ಟೆಷ್ಟೊ ಬೆಳದಿಂಗಳ ರಾತ್ರಿಗಳಲ್ಲಿ ಆತ ಅನುಭವಿಸಿದ ನೋವು, ಅಪಮಾನ, ಹತಾಶೆ, ಕ್ರೌರ್ಯಗಳ ನೆರಳಿನಲ್ಲಿ ಬೆಳದಿಂಗಳ ತಂತ್ರ ಕಿರಣಗಳೂ ಆತನಿಗೆ ನೋವು ತರಲು ಸಾಧ್ಯವಿದೆ…
ಪ್ರಕ್ಷುಬ್ಧ ಮನಸ್ಸಿನ ಎಲ್ಲ ನೇತ್ಯಾತ್ಮಕ ಭಾವನೆಗಳನ್ನು ಬಡಿದೆಬ್ಬಿಸಿ ನಿಟ್ಟುಸಿರಿಡುವಂತೆ ಮಾಡುವ ಆ ಎಲ್ಲ ಧಗೆಯ ಬೆಳದಿಂಗಳ ರಾತ್ರಿಗಳಲ್ಲಿ ಮತ್ತದೇ ಬುದ್ಧನ ಸ್ನೇಹಮಯಿ, ಪ್ರಶಾಂತ ಬೆಳದಿಂಗಳಿನಂತಹ ಅರಿವಿನ ನಗೆಯಷ್ಟೆ ಸಾಂತ್ವನ, ಸ್ಥೈರ್ಯ ನೀಡಬಲ್ಲದು. ಅಂತಹ ಪ್ರತಿ ಬೆಳದಿಂಗಳ ಜ್ಞಾನಿಗೆ, ಗುರುವಿಗೆ ಶರಣೋ ಶರಣು..!
**************************
ಕೆ.ಶಿವು. ಲಕ್ಕಣ್ಣವರ