ಬುದ್ಧ ಪೂರ್ಣಿಮಾ ವಿಶೇಷ

  ‘ಮುಟ್ಟಿದರೆ ಕೆಡುಕಿಲ್ಲ ಮುಟ್ಟದಿರೆ ಒಳಿತು’

Close Up Photo White Buddha Statue

 ವಸುಂಧರಾ ಕದಲೂರು

  ‘ಮುಟ್ಟಿದರೆ ಕೆಡುಕಿಲ್ಲ ಮುಟ್ಟದಿರೆ ಒಳಿತು’

             ಈ ಸಾಲುಗಳು ಮಾಸ್ತಿಯವರ ‘ಯಶೋಧರ’ ನಾಟಕದಲ್ಲಿದೆ ಎಂಬ ನೆನಪು. 

          ರಾಜಕುಮಾರನಾಗಿದ್ದ ಸಿದ್ಧಾರ್ಥನು ಬುದ್ಧನಾಗಿ, ಜೀವನದ ಪರಮಸತ್ಯವನ್ನು ಕಂಡು, ಅದನ್ನು ಜಗತ್ತಿಗೆ ಬೋಧಿಸಿದ. ತನ್ನ ಉಪದೇಶ ಮಾತ್ರದಿಂದಲೇ ಲೋಕದ ಕಣ್ತೆರೆಸಿದವನು, ಜನರ ದುಃಖ ಮರೆಸಿದವನು, ಕಣ್ಣೀರನು ಒರೆಸಿದವನು ಹೀಗೆಲ್ಲಾ ಹೇಳುತ್ತಾರೆೆ. ಬುದ್ಧನ ವಿಚಾರದಲ್ಲಿ ಇದೆಲ್ಲಾ ನಿಜವಿರಬಹುದು. 

      ಮುಂದೆ ಯಾವಾಗಲೋ ಸಿದ್ಧಾರ್ಥನಿಂದ ಬುದ್ಧನಾಗಿ ಪರಿವರ್ತಿತನಾದ ಮಹಾನುಭಾವನು  ಒಮ್ಮೆ ಮರಳಿ ತನ್ನೂರಿಗೆ ಬಂದಿರುತ್ತಾನೆ. ಆತನಿಂದ ಆಶೀರ್ವಚನ ಪಡೆಯಲು ಗುಂಪುಗಟ್ಟುವ ಮಂದಿಯಲ್ಲಿ  ಪೂರ್ವಾಶ್ರಮದ ಪತ್ನಿ ‘ಯಶೋಧರಾ’ ಸಹ ತನ್ನ ಮಗ ರಾಹುಲನೊಡನೆ ನಿಂತಿರುತ್ತಾಳೆ. 

   ಒಂದು ಕಾಲದ ತನ್ನ ಪ್ರಿಯ ಪತಿ ಈಗ ಜಗತ್ತಿನ ಮಹತ್ತಿನ ಧರ್ಮಶ್ರೇಷ್ಠನಾಗಿದ್ದಾನೆ. ಆತನನ್ನು ಇದಿರುಗೊಂಡಿರುವ ತಾನು ಆತನನ್ನು ಮುಟ್ಟಿ ಆಶೀರ್ವಾದ ಪಡೆಯಬಹುದೇ? ಮುಟ್ಟುವುದು ತಪ್ಪೇ..? ಮುಟ್ಟದಿರುವುದು ಸರಿಯೇ..? ಹೀಗೆ ಜಿಜ್ಞಾಸೆಯಲಿ ಮುಳುಗಿರುವ ಯಶೋಧರಾ ತನ್ನ ಈ ಗೊಂದಲ ನಿವಾರಿಸುವಂತೆ ಬುದ್ಧನನ್ನೇ ಕೇಳಿಕೊಂಡಾಗ ಆ ಮಹಾನುಭಾವ “ಮುಟ್ಟಿದರೆ ಕೆಡುಕಿಲ್ಲ ಮುಟ್ಟದಿರೆ ಒಳಿತು” ಎಂದನಂತೆ..!

      ಇದು ಮಾಸ್ತಿಯಂತಹ ಮಹಾನ್ ಮಾನವತಾವಾದಿ ಬರಹಗಾರರ ಕಲ್ಪನಾ ಮೂಸೆಯಿಂದ ಮೂಡಿ ಬಂದಿರುವ ಪರಮಾದ್ಭುತ ಸಾಲು! 

         ಈ ಸಾಲಿನಲ್ಲಿ ನಮಗೆ, ಬಿಟ್ಟು ಹೋದ ಗಂಡ ಮರಳಿ ಬಂದಾಗ ಆತನ ರೂಪಾಂತರವನ್ನು ಒಪ್ಪುವ ಯಶೋಧರೆ ಒಂದೆಡೆ ಕಂಡರೆ, ಪತ್ನಿ ಪರಿತ್ಯಜಿಸಿ ಪರಿವ್ರಾಜಕನಾಗಿ ಬಂದರೂ ಸಹ ಪೂರ್ವಾಶ್ರಮದ ವಾಸನೆಗೆ ಪುನಃ ಸಿಲುಕುವ ಅಭದ್ರತೆಯ ಭಾವ ಕಾಡಿರಬಹುದಾದ ಬುದ್ಧನನ್ನು ಮತ್ತೊಂದೆಡೆ ಕಾಣದಿರಲಾಗದು.  ಇರಲಿ, ಇದೆಲ್ಲಾ ಓದುಗರ ಊಹೆಗೆ ಬಿಟ್ಟ ವಿಚಾರಗಳು. 

     ಬುದ್ಧನನ್ನು ‘ಏಷ್ಯಾದ ಜ್ಯೋತಿ’ ಎನ್ನುತ್ತಾರೆ. ಅದರ ಬಗ್ಗೆ ಸ್ವತಃ ಯಶೋಧರೆಗೂ ತಕರಾರಿರಲಾರದು. ಆದರೆ ಆತ ಕೆಲವು ನಿರ್ವಹಿಸಲೇಬೇಕಾದ ಕರ್ತವ್ಯಗಳನ್ನು ಮರೆತುದಕ್ಕೆ, ನಿರ್ವಹಿಸದೇ ಇದ್ದುದಕ್ಕೆ ಹೆಣ್ಣಾಗಿ ಆಕೆ ಒಮ್ಮೆಯಾದರೂ ಆಕ್ಷೇಪಿಸದಿರಲಾರಳೇ?! ಅಂದು ಯಶೋಧರೆಯ ಮನಸ್ಥಿತಿ ಹೇಗಿತ್ತೋ ಗೊತ್ತಿಲ್ಲ. ಆದರೆ ಹೆಣ್ಣಾಗಿ ನಮ್ಮ ಭಾವಕೋಶದ ಆದ್ಯತೆಯನ್ನು ನಾವು ಊಹಿಸಲಾರೆವೆ?

            ನನ್ನ ಹೆರಿಗೆಯ ದಿನ ವೈದ್ಯರೊಡನೆ ಚರ್ಚೆ, ನಿಗದಿತ ಫಾರ್ಮ ಭರ್ತಿ ಮಾಡುವುದು, ಶುಲ್ಕ ತುಂಬುವುದು, ಆಸ್ಪತ್ರೆ- ಮನೆಯ ನಡುವಿನ ಓಡಾಟ, ಆಪರೇಷನ್ ಥಿಯೇಟರಿನ ಮುಂದೆ ಚಡಪಡಿಕೆಯಲ್ಲಿ ಕಾಯುವುದು ಹೀಗೆ ಇಡೀ ದಿನ ಅವಿಶ್ರಾಂತರಾಗಿದ್ದ ನನ್ನ ಗಂಡ, ಮಗುವನ್ನೂ ನನ್ನನ್ನೂ ವಾರ್ಡ್ ಗೆ ಸ್ಥಳಾಂತರಿಸಿದ ಮೇಲೆ ತಡರಾತ್ರಿಯವರೆಗೂ ಜೊತೆಯಲ್ಲಿದ್ದರು. ಆಸ್ಪತ್ರೆಯ ಸಮಯ ಮೀರಿದಂತೆ, ಬಾಣಂತಿ ಹಾಗೂ ಮಗುವಿನೊಡನೆ ಒಬ್ಬರಿಗೆ ಮಾತ್ರ ಆಸ್ಪತ್ರೆಯಲ್ಲಿ ಇರಬಹುದಾದ ಅವಕಾಶ ಇದ್ದುದರಿಂದ ಸಹಜವಾಗಿ ನನ್ನ ತಾಯಿ ನನ್ನೊಡನೆ ಉಳಿದರು. ಗಂಡ, ಅತ್ತೆ-ನಾದಿನಿ, ಅಕ್ಕ- ಭಾವ ಮೊದಲಾದ ಸಕಲ ಬಂಧುಗಳು ಅನಿವಾರ್ಯ ಮನೆಗೆ ಮರಳಿದರು. 

      ನನಗೋ ಹೆರಿಗೆಯ ಅನಂತರ ಮುದ್ದು ಮಗುವಿನ ಮುಖ ನೋಡಿದ ಸಂಭ್ರಮ ಒಂದೆಡೆಯಾದರೆ, ಸಿಸೇರಿಯನ್ನಿನ ನೋವು, ಹಾಲು ಕುಡಿಯಲೂ ಬಾರದ ಮಗುವಿನ ಅಸಹಾಯಕತೆ, ಹೊಟ್ಟೆ ಹಸಿವಿನಿಂದಲೋ ಅಥವಾ ಸುರಕ್ಷಿತವಾಗಿದ್ದ ಗರ್ಭದಿಂದ ಈಗ ಎಲ್ಲಿಗೆ ಬಂದಿರುವೆ ಎಂಬ ಅಭದ್ರತೆಯ ಭಾವದಿಂದಲೋ ಅಳುವ ಮಗುವನ್ನು ನೋಡಿ ನನಗೂ ಅಳು. ವಾಸ್ತವ ಹಾಗೂ ಕಲ್ಪನೆಯ ಸಮ್ಮಿಶ್ರಭಾವದಲ್ಲಿ, ಸುಖದುಃಖಗಳ  ಮೇಳೈಸುವಿಕೆಯಲ್ಲಿ ಮುಳುಗೇಳುತ್ತಿದ್ದೆ. ನನಗೆ ಯಾವಾಗ ನಿದ್ದೆ ಬಂತೋ…

        ಬೆಳಗಾದುದೇ ತಡ ಮಗುವಿನ ಅಪ್ಪ ಯಾವಾಗ ಬಂದಾರೋ ಎಂಬ ಕಾತರ. ಆಗಲೇ ಗಂಡನ ಸ್ಥಾನದಿಂದ ಅಪ್ಪನ ಸ್ಥಾನದಲ್ಲಿಟ್ಟು ನೋಡಬಯಸಿದ ನನ್ನ ಮನಸ್ಥಿತಿಯ ಬಗ್ಗೆ ನನಗೇ ಅಚ್ಚರಿಯಾಗಿತ್ತು. ಡ್ಯೂಟಿ ಡಾಕ್ಟರ್ ಬಂದು ನನ್ನ ಆರೋಗ್ಯ ವಿಚಾರಿಸಿಕೊಂಡರು, ಮಕ್ಕಳ ತಜ್ಞರು ಬಂದು ಮಗುವಿನ ಆರೋಗ್ಯ ಪರೀಕ್ಷಿಸಿದರು, ಆಸ್ಪತ್ರೆಯ ನರ್ಸ್ ಮಗುವನ್ನು ಶುಚಿಗೊಳಿಸಿ ತಂದುಕೊಟ್ಟರು, ಗಂಟೆ ಅಂತೂ ಇಂತು ಒಂಬತ್ತೂವರೆ ದಾಟಿ ಹತ್ತರ ಬಳಿ ಸಾಗುತ್ತಿತ್ತು. ನಾನೂ ಸಹ ಅಮ್ಮ ಹಾಗೂ ಆಸ್ಪತ್ರೆಯ ಸಹಾಯಕರ ಸಹಕಾರದಿಂದ ಶುಚಿಯಾಗಿ, ಬೇರೆ ಬಟ್ಟೆ ಧರಿಸಿದೆ. ಆಸ್ಪತ್ರೆಯವರೇ ಕೊಟ್ಟ ಕಾಫಿ- ತಿಂಡಿ ಮುಗಿಸಿದೆ.. ಆದರೆ ಇನ್ನೂ ‘ಅವರು’ ಬಂದಿರಲಿಲ್ಲ…

    ಇಷ್ಟು ಬೇಗ ನನ್ನನ್ನೂ ಮಗುವನ್ನೂ ಮರೆತು ಬಿಟ್ಟರೇ…? ಎಂದು ತಳಮಳಿಸಿದೆ. ಮಗುವಿನ ಅಳುವನ್ನು ನೆಪವನ್ನಾಗಿ ಇಟ್ಟುಕೊಂಡು ನಾನೂ ಅಳಲು ಶುರುಮಾಡಿದ್ದೆ. ಅಷ್ಟರಲ್ಲಿ ‘ಇವರು’ ಬಂದರು. 

      ಛೇ, ನೆನ್ನೆ ಇಡೀ ದಿನ ಒಬ್ಬರೇ ಓಡಾಡಿ ದಣಿದಿರುತ್ತಾರೆ. ತಡ ರಾತ್ರಿ ಮನೆ ತಲುಪಿದ್ದರಿಂದ ಮಲಗುವುದೂ ತಡವಾಗಿರುತ್ತದೆ. ಹಾಗಾಗಿ ಆಯಾಸದಿಂದ ಬೆಳಿಗ್ಗೆ ಬೇಗನೆ ಎದ್ದಿಲ್ಲ ಎಂದು ಆ ದಿನ ಅವರು ತಡವಾಗಿ ಬಂದುದೇಕೆ ಎಂಬುದರ ಸತ್ಯ ನನಗೆ ಬಹಳ ದಿನಗಳಾದ ಮೇಲೆ ಹೊಳೆಯಿತು. 

       ’ಇವರು‘ ಬಂದದ್ದೇ ಅಮ್ಮ ಎದ್ದು ಹೊರಗೆ ಹೋದರು.  ಯಾರೂ ಇಲ್ಲದ್ದರಿಂದ ನನ್ನ ಹತ್ತಿರ ಬಂದವರೇ ಹೂಮುತ್ತನಿತ್ತು, ಮೃದುವಾಗಿ ಕೆನ್ನೆಚಿವುಟಿ, ಮಗು ಮಲಗಿದ್ದ ತೊಟ್ಟಿಲಿನತ್ತ ಬಾಗಿದಾಗ ನನ್ನ ಅಳು ಮಾಯವಾಗಿ ಹೃದಯ ಒಲವಿನ ನಗಾರಿ ಬಾರಿಸಿತ್ತು.

       ಆ ಯಶೋಧರೆ ಕೂಡ ಸಾವಿರಾರು ವರ್ಷಗಳ ಹಿಂದೆ ಹೀಗೇ ಹಡೆದು ಮಲಗಿದ್ದಳಲ್ಲವೇ? ಮಗುವಿನ ಬಳಿ ಅದರ ಅಪ್ಪ ಎಂದು ಬಂದಾನೆಂದು ಕಾದಿದ್ದಳಲ್ಲವೇ? ಅವಳ ಕಾಯುವಿಕೆ ಕೊನೆಗೊಂಡದ್ದು ಯಾವಾಗ? ಆ ಯಶೋಧರೆ ಬಯಸಿದ್ದು ಅಥವಾ ಕಳೆದುಕೊಂಡದ್ದು ಏನು? ಹೆಣ್ಣೊಬ್ಬಳ ಮನಸ್ಸಿನ ವಿಚಾರಗಳು ಜಗತ್ತಿನ ಉದ್ಧಾರದ ವಿಷಯ ಬಂದಾಗ ಮಹತ್ತಿನದ್ದು ಎನಿಸುವುದೇ ಇಲ್ಲವಲ್ಲ…! 

    ಏಕೋ ಬುದ್ಧನ ವಿಷಯ ಪ್ರಸ್ತಾಪವಾದಾಗೆಲ್ಲಾ ಹಡೆದು ಮಲಗಿದ ಯಶೋಧರೆ ; ಅಪ್ಪನಿಗಾಗಿ ಅರಸಿದ ರಾಹುಲ ನೆನಪಾಗುತ್ತಾರೆ…. ಬುದ್ಧ ನನಗೆ ಮರೆಯಾಗುತ್ತಾನೆ.

*******

Leave a Reply

Back To Top