ರಾಧೆ ಹೇಳಿದ್ದು
ಡಾ.ಗೋವಿಂದ ಹೆಗಡೆ
1.
ಅವ ನುಡಿಸಿದ್ದು
ಕೊಳಲನ್ನು
ಅಲ್ಲ ಕಣೇ.
ಕವಿಬೆರಳುಗಳಲ್ಲಿ –
ನನ್ನನ್ನು !
2.
ರಾಧೆ ಎಂದರೆ ಶ್ಯಾಮ
ಶ್ಯಾಮನೆಂದರೆ ರಾಧೆ
ಹಾಲು ಮತ್ತದರ ಬಿಳುಪು
ಬೇರೆ ಬೇರೆ ಹೇಗೆ ?
3.
ನಾನು ಹೆಣ್ಣೇ ಅವ ಗಂಡೇ?
ನಾವು ಸಂಧಿಸಿದ್ದು
ಬೇರೆಯದೇ ಬಿಂದುವಿನಲ್ಲಿ
ಹೆಣ್ಣು ಗಂಡುಗಳಾಗಿ
ನಮ್ಮ ನೋಡುವ ಹಾಡುವ
ಲೋಕದ ಕುರುಡಿಗೆ
ನನ್ನ ಕನಿಕರ !
**