ಲೇಖನ ಸಂಗಾತಿ
‘ಡಾ ಅನ್ನಪೂರ್ಣಾ ಹಿರೇಮಠ
‘ಆತ್ಮವಿಶ್ವಾಸ ಅಹಂಕಾರವಲ್ಲ‘
ಆತ್ಮವಿಶ್ವಾಸವೆಂಬುದು ಪ್ರತಿಯೊಬ್ಬ ಮನುಷ್ಯನ ಒಂದು ಅಭಿವೃದ್ಧಿಯ ಸಾಧನ, ಸ್ಪೂರ್ತಿಯ ಸಲೆ, ಮನುಷ್ಯನಿಗೆ ಏನೇ ಮಾಡಬೇಕೆಂದರೂ ಆತ್ಮವಿಶ್ವಾಸ ಬೇಕೇ ಬೇಕು. ಆತ್ಮವಿಶ್ವಾಸ ಜೀವನೋತ್ಸಾಹ ತುಂಬಿ ಮನುಷ್ಯನನ್ನು ಸಬಲನನ್ನಾಗಿಸಿ ,ಸಮರ್ಥನನ್ನಾಗಿ ಮಾಡುತ್ತದೆ . ನಮ್ಮಲ್ಲಿ ಎಷ್ಟೇ ಶಕ್ತಿ ,ಬುದ್ಧಿ ಇದ್ದರೂ, ಆತ್ಮವಿಶ್ವಾಸ ಇಲ್ಲದಿದ್ದರೆ ಎಲ್ಲಾ ವ್ಯರ್ಥವಾಗುತ್ತದೆ .ಕಾರಣ ಆತ್ಮವಿಶ್ವಾಸ ಅಹಂಕಾರವಲ್ಲ, ಅದೊಂದು ಚೈತನ್ಯದ ಚಿಲುಮೆ .ನಮ್ಮ ಆತ್ಮವಿಶ್ವಾಸ ಗಟ್ಟಿಯಾದರಷ್ಟೇ ಬದುಕು ದೃಢವಾಗುತ್ತದೆ .ಏನೇ ಬಂದರೂ ಎದುರಿಸುವ ಶಕ್ತಿ ಹೊಂದುತ್ತೇವೆ.
ಇಲ್ಲಿ ಒಂದು ಕಥೆ ನೆನಪಿಗೆ ಬರುತ್ತದೆ ಒಬ್ಬ ಅನಾಥ ಬಾಲಕ ಪ್ಯಾರಿಸ್ ನಗರದಲ್ಲಿ ಕಿನ್ನ ಮನಸ್ಕನಾಗಿ ಜೀವನವೇ ಬೇಡವೆಂದು ರಸ್ತೆ ಪಕ್ಕ ಹೋಗುತ್ತಿರುತ್ತಾನೆ. ಆಗ ಅದೇ ರಸ್ತೆಯಲ್ಲಿ ಹೋಗುತ್ತಿದ್ದ ಒಬ್ಬ ನಾಯಕ ಕೇಳುತ್ತಾನೆ, ಹೀಗೇಕೆ? ಎಂದು. ಆಗ ಅವನು ಇಲ್ಲ ನನಗೆ ನನ್ನವರೆನ್ನುವವರು ಯಾರೂ ಇಲ್ಲ ,ನಾನು ಒಬ್ಬ ಅನಾಥ, ನನಗೆ ಜೀವನವೇ ಬೇಡವೆನಿಸಿದೆ ,ಬದುಕುವ ಇಚ್ಛೆ ಇಲ್ಲ. ಸತ್ತು ಹೋಗಬೇಕೆಂದು ನಿರ್ಧರಿಸಿರುವೆ ಎಂದ. ಆಗ ಆ ನಾಯಕ ಹೇಳುತ್ತಾನೆ. ಏನಪ್ಪಾ ಎಷ್ಟು ಸುಂದರವಾಗಿದ್ದೀಯ, ನಿನ್ನ ಕೂದಲು ಎಷ್ಟು ಚೆನ್ನಾಗಿದ್ದಾವೆ. ನಿನ್ನ ಕಣ್ಣುಗಳ ಹೊಳಪು ಎಷ್ಟು ಅಂದ, ನಿನ್ನ ಕಣ್ಣು ನನಗಿದ್ದಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು ಎಂದ. ಆಗ ಅವನಿಗೆ ಅನ್ನಿಸಿತು ನಾನು ಸುಂದರವಾಗಿದ್ದೇನೆಯೇ? ಎಂದು ಆಗ ಸಮಾಧಾನದಿಂದ ವಿಚಾರಿಸಿದ ಸಾಯುವ ವಿಚಾರ ಬದಿಗಿಟ್ಟು ,ತನ್ನ ಸೌಂದರ್ಯದ ಬಗ್ಗೆ ಅವನಿಗೆ ಆತ್ಮವಿಶ್ವಾಸ ಬರತೊಡಗಿತು, ಸಾಯುವ ವಿಚಾರ ಬಿಟ್ಟು ತನ್ನ ತಾ ನೋಡಿಕೊಳ್ಳತೊಡಗಿದ. ಸಣ್ಣಪುಟ್ಟ ಕೆಲಸ ಮಾಡಿ ಒಳ್ಳೆ ಬಟ್ಟೆ ತೊಟ್ಟ, ಸುಂದರ ದೃಢಕಾಯದ ಎತ್ತರ ನಿಲುವಿನ ಸುಂದರ ವ್ಯಕ್ತಿಯಾಗಿ ಮಾರ್ಪಾಡಾದ ,ಕೆಲವು ದಿನಗಳ ನಂತರ ಅತ್ಯಂತ ಸುಂದರ ಯುವಕನಾಗಿ ಎಲ್ಲರನ್ನೂ ಆಕರ್ಷಿಸತೊಡಗಿದ. ಕೆಲವು ಕಂಪನಿಗಳಲ್ಲಿ ಜಾಹೀರಾತು ಮಾಡಿದ, ಹಾಗೆ ಒಬ್ಬ ಪ್ರಸಿದ್ಧ ಮಾಡೆಲರ್ ಆಗಿಬಿಟ್ಟ. ನೋಡಿ ಅವನಿಗೆ ತುಂಬಿದ ಆತ್ಮವಿಶ್ವಾಸದ ಒಂದು ಮಾತು ಸಾಯುವವನನ್ನು ಸಾಧನೆ ಮಾಡುವಂತೆ ಮಾಡಿತು.
ಆತ್ಮವಿಶ್ವಾಸವೆಂದರೆ ಅದೊಂದು ಛಲ ,ಅದೊಂದು ಸಾಧನೆಯ ಸಾಧನ. ಗುರಿ ತಲುಪಿಸುವ ನೌಕೆ ,ಆತ್ಮವಿಶ್ವಾಸ ಇಲ್ಲದವರು ಏನೂ ಮಾಡಲಾರರು. ಅಯ್ಯೋ ಅದು ನಂಗೊತ್ತಿಲ್ಲ, ಅಯ್ಯೋ ಅದು ಬರುವುದಿಲ್ಲ, ನನಗೆ ಹೆದರಿಕೆ, ಬೇಡ ಬಿಡಿ, ಭಯವಾಗುತ್ತದೆ, ಅದು ನನ್ನಿಂದಾಗದು, ಎಂಬ ಹಿಂಜರಿಕೆಯ ಭಾವ ನಮ್ಮಲ್ಲಿ ಮೂಡಿತೆಂದರೆ ಮನುಷ್ಯ ಇದ್ದು ಕೂಡ ಸತ್ತಂತಾಗುತ್ತಾನೆ. .ದೇಹದಲ್ಲಿ ಶಕ್ತಿ ಇಲ್ಲದಿದ್ದರೂ ಕೂಡ ಆತ್ಮವಿಶ್ವಾಸ ಜೊತೆಗಿದ್ದರೆ ಎಂತಹ ಕಾರ್ಯವನ್ನಾದರೂ ಮಾಡಿ ಮುಗಿಸಿಬಿಡುತ್ತಾನೆ..
ನನ್ನ ನಾ ನಂಬಿ ಕಾರ್ಯತತ್ಪರರಾಗುವುದು ಆತ್ಮವಿಶ್ವಾಸ .ಇದೇನಾ ನಾ ಬಲ್ಲೆ ,ಮಾಡಬಲ್ಲೆ ಎಂದರೆ ಅದು ತಿಳಿದೇ ತಿಳಿಯುತ್ತದೆ. ಅದು ಅಹಂಕಾರ ಅಲ್ಲವೇ ಅಲ್ಲ. ತನ್ನ ತಾ ನಂಬದವನು ಜೀವನದಲ್ಲಿ ಯಾರನ್ನು ನಂಬಲಾರ, ಅದಕ್ಕೆಂದೇ ಹಿರಿಯರು” ನಂಬಿಕೆನೇ ದೇವರು” “ನಂಬಿ ನೆಚ್ಚಿ ಕರೆದೊಡೆ ಬರಲೊಲ್ಲನೇ ಶಿವನು” ಎಂದಿದ್ದಾರೆ. ಜೀವನವೆಂಬುದು ನಮ್ಮ ಆತ್ಮವಿಶ್ವಾಸದ ನಂಬಿಗೆಯೊಂದಿಗೆ ಬದುಕುವ ಬದುಕು. ಆತ್ಮವಿಶ್ವಾಸವೆಂಬುದು ಮನೆಗೆ ಮುಖ್ಯ ಬೆಲಗು ಹೇಗೋ ಹಾಗೆ. ಬಲವಾದ ಆತ್ಮವಿಶ್ವಾಸ ನಮ್ಮನ್ನು ಬಲಿಷ್ಠರನ್ನಾಗಿಸಿ, ಸಮಾಜದ ಸದೃಢ ನಾಗರಿಕನನ್ನಾಗಿಸಿ, ಯಾರ ಆಸರೆ ಇಲ್ಲದೆ ,ಹಂಗಿಲ್ಲದೆ ಬದುಕುವಂತೆ ಮಾಡಿಬಿಡುತ್ತದೆ. ಯಾವುದೇ ವಿಷಯದಲ್ಲಿ ಪ್ರಬುದ್ಧನಾಗಲು ನಾವು ಮೊದಲು ನಂಬನ್ನು ನಂಬಬೇಕಲ್ಲವೇ ?ಆವಾಗ ನಾವು ತಿಳಿಯುವ ವಿಷಯ ನಮಗೆ ಮನದಟ್ಟಾಗಿ, ಮನಮುಟ್ಟಿ ಅದಕ್ಕಿನ್ನಷ್ಟು ಪುಷ್ಟಿಕೊಟ್ಟು ಗಟ್ಟಿಗೊಳಿಸುತ್ತದೆ. ಆತ್ಮವಿಶ್ವಾಸವೆಂಬುದು ಜೀವನ ಕಟ್ಟುವ ಕಲೆ, ಗುರಿ ಮುಟ್ಟುವ ಕಲೆ ಎಲ್ಲ ಮೆಟ್ಟಿ ನಿಲ್ಲುವ ಕಲೆ ನಮಗೆ ಕಲಿಸಿ ಬಿಡುತ್ತದೆ.
ಮನುಷ್ಯನನ್ನು ಹೇಡಿಯಾಗಿಸದೆ, ಗಡಿ ತಲುಪಿಸುತ್ತದೆ. ಕಾರಣ ಆತ್ಮವಿಶ್ವಾಸ ಅಹಂಕಾರವಲ್ಲ ಅದು ನಮ್ಮ ಅಸ್ಮಿತೆ, ನಮ್ಮ ಶಕ್ತಿ ಸಾಮರ್ಥ್ಯಕ್ಕೆ ಸಾಕ್ಷಿ ಆಗಬಲ್ಲ ಆತ್ಮೀಯ ಸ್ನೇಹಿತ, ಹಿತ ಸಂಬಂಧಿ ,ಸಹಚರ, ಸದಾ ಎಚ್ಚರಿಸುವ ಎಚ್ಚರಿಕೆಯ ಗಂಟೆ, ದಿಟ್ಟನಾಗಿಸುವ ಆಯುಧ, ಗಟ್ಟಿಗೊಳಿಸುವ ಕುಲುಮೆ, ಆತ್ಮ ವಿಶ್ವಾಸ ಒಂದಿದ್ದರೆ ಜಗತ್ತನ್ನೇ ಗೆಲ್ಲಬಲ್ಲೆವು.
ಡಾ ಅನ್ನಪೂರ್ಣಾ ಹಿರೇಮಠ