ಶಾಂತಿವಾಸು ಕವಿತೆ-ಜ್ಯೋತಿಯೇ, ಎನ್ನ ಮನೆಗೂ ಬಾ

ಜ್ಯೋತಿಯೇ, ಎನ್ನ ಮನೆಗೂ ಬಾ…
ಏರಿಳಿತವಿಲ್ಲದ ಉಜ್ವಲ ಬದುಕ ಬೇಡಿದೆನು,
ಓ ಬೆಳಕೇ ಬೆಳಕೇ, ಹೊಸಿಲ ದಾಟದಿರು…
ಮುಸುಕಿದಂದಕಾರಕೆ ಬೇಕಿಹುದು
ಕುಡಿಬೆಳಕಿನ ತೀರ, ನೆಲೆಯಿಂದ ಸರಿಯದಿರು…
ಭಾವಜ್ಯೋತಿಯಾಗಿ ಎನ್ನ ಮನೆಗೂ ಬಾ…

ಜ್ಯೋತಿಯೇ, ಎನ್ನ ಮನೆಗೂ ಬಾ…
ಸಿರಿಬೆಳಕಾಗಿ ಕತ್ತಲ ನುಂಗುವ
ಬಾಯಾರಿಕೆಯಿದೆ ನಿನಗೆ…
ಅಧಿಕವಾಗಿ ಹೊರಚೆಲ್ಲುವ ಬೆಳಕನು,
ಅಡ್ಡಗಟ್ಟಿ ಮುಕ್ಕುವ ಹಸಿವಿದೆ ನನಗೆ…
ಸಂಧ್ಯಾಜ್ಯೋತಿಯಾಗಿ ಎನ್ನ ಮನೆಗೂ ಬಾ…

ಜ್ಯೋತಿಯೇ, ಎನ್ನ ಮನೆಗೂ ಬಾ…
ಹಣತೆ, ಎಣ್ಣೆ, ಬತ್ತಿಯ ಒಗ್ಗಟ್ಟಿನಲೇ
ತಾನು ಬೆಳಕೀವುದೆಂಬುದೇ ಅರಿವು… ಕಣ್ಮುಚ್ಚಿದ ಅಂದರ ಹಂಗ್ಯಾಕೆ ನಿನಗೆ?
ಕತ್ತಲಿನೆಡೆ ಚಾಚಲಿ ನಿನ್ನ ಕರವು…
ನೆಲೆಜ್ಯೋತಿಯಾಗಿ ಎನ್ನ ಮನೆಗೂ ಬಾ…

ಜ್ಯೋತಿಯೇ, ಎನ್ನ ಮನೆಗೂ ಬಾ…
ನಿರೀಕ್ಷಾಹಕ್ಕಿ ರೆಕ್ಕೆಯ ಚಾಚಿ,
ಹಾರಿ ಹಾರಿ ನೆಲೆ ಅರಸುತಿಹುದು…
ನಿರಾಶೆಯ ಪಾಷಾಣಭರಿತ ಕತ್ತಲು, ಆವರಿಸಿ ಅಪ್ಪಲು ಕಾದಿಹುದು…
ಕರುಣಾಜ್ಯೋತಿಯಾಗಿ ಎನ್ನ ಮನೆಗೂ ಬಾ…

ಜ್ಯೋತಿಯೇ, ಎನ್ನ ಮನಕೂ ಬಾ…
ನಿನ್ನ ಬೆಳಕಲೇ ಜಗವ ಕಾಣುವ ಹೊಣೆ ಮರೆತ ಮನವು,
ನೀ ಶಾಶ್ವತ ದಾಟುವ ಮುನ್ನ ಎಚ್ಚರಗೊಂಡಿದೆ…
ಸ್ಥಾಯಿಜ್ಯೋತಿಯಾಗಿ ‘ಶಾವಾ’ಳ ಮನ ಬೆಳಗು ಬಾ…


Leave a Reply

Back To Top