ಕಾವ್ಯ ಸಂಗಾತಿ
ಭಾವಯಾನಿ ಪ್ರಮೀಳಾ ರಾಜ್
ಧರಣಿಯೊಲವು
ಎಲ್ಲಿ ಹೋಗುವೆಯೋ ಮೇಘರಾಜನೆ
ಬಂದು ನನ್ನ ತಣಿಸು…
ಬಾಯಾರಿ ಬಸವಳಿದು
ನಿನ್ನ ಕಾದಿಹೆ ನಾನು
ಸೋನೆ ಮಳೆಯಾಗಿ ಸುರಿಸು!!
ಉರಿ ಬಿಸಿಲ ಕಾವು
ಮೈ ಮನವ ಸುಡಲು
ಎಂದು ಬರುವೆಯೋ ಎಂಬ ಕಾತರಿಕೆಯು…
ತಂಪಿಲ್ಲ ಇಂಪಿಲ್ಲ
ಮನದೊಳಗೆ ಖುಷಿಯಿಲ್ಲ
ನಿತ್ಯ ನಿನದೇ ಹಂಬಲಿಕೆಯೂ!!
ಥರಗುಟ್ಟಿದೆ ಜೀವ ಬಾಯಾರಿದೆ ಒಡಲು
ನಾನೊಮ್ಮೆ ಖುಷಿಯಿಂದ ಹಾಡಾಗಬೇಕು
ನಿನ್ನಲ್ಲಿ ಮಿಂದು, ನಿನ್ನೊಳಗೆ ಬೆಸೆದು
ಮನದಣಿಯೆ ನಿನ್ನಲಿ ಒಂದಾಗಬೇಕು!!
ಸಾಕು ಬಿಡು ಈ ಹಠವು
ಬಂದು ಬಿಡು ಒಮ್ಮೆ…
ನೀ ಬಂದರೆ ತಾನೇ ಜೀವ ಜಲವು
ಮುನಿಸು ಮರೆತು ಒಮ್ಮೆ ರಮಿಸಿಬಿಡು ನನ್ನ
ಹೊಸತು ಮೊಳಕೆಗೆ ಧನ್ಯ ನನ್ನ ಚೆಲುವು!!
ಭಾವಯಾನಿ ಪ್ರಮೀಳಾ ರಾಜ್