ಪ್ರಬಂಧ ಸಂಗಾತಿ
ಸರೋಜ ಪ್ರಭಾಕರ್
“ಶಾಲೆಯಾ ಪಕ್ಕದಲ್ಲೊಂದು ಮನೆಯ ಮಾಡಿ………”
ಶಾಲೆ ಪಕ್ಕ ಮನೆ ಇರಬಾರದಂತೆ’ ಇದು ನಾನು ಹೇಳಿದ್ದಲ್ಲ; ನಾವು ಬೆಂಗಳೂರಿನಲ್ಲಿ ಮನೆ ಹುಡುಕುವ ಸಂದರ್ಭದಲ್ಲಿ ನಮ್ಮ ಮನೆಯವರ ಸ್ನೇಹಿತರೊಬ್ಬರು ಇಟ್ಟ ಬಾಂಬ್ ಇದು. ಶಾಲೆ ಪಕ್ಕ ಇದ್ದ ಮನೆಯೊಂದನ್ನು ಆ ಕಾರಣಕ್ಕಾಗಿಯೇ ಬಿಟ್ಟಾಯ್ತು. ಆದರೆ ವಿಧಿ ಬರೆದದ್ದು ತಪ್ಪಿಸಲಾಗುವುದಿಲ್ಲ, ಎಲ್ಲಿಂದಾದರೂ ಸುತ್ತಿಕೊಂಡು ಬಂದೇ ತೀರುತ್ತದೆ ಎನ್ನುವ ಅನುಭವಿಕರ ಮಾತು ನಿಜವೇ ಹೌದು.
ನಾವು ಬ್ಯಾಂಕ್ ಮಂದಿ ಪರ‍್ಮನೆಂಟ್ ಅಡ್ರೆಸ್ ಇರದವರು. ಕೆಲವರಿಗಂತೂ ಊರೂರು ಸುತ್ತಿ ಸುತ್ತಿ ತಮ್ಮೂರು ಯಾವುದೆಂಬುದೇ ಮರೆತುಹೋಗಿರುತ್ತದೆ. ಆಧಾರ್ ಕಾರ್ಡ್, ವೋಟರ್ ಐಡಿ ಎಲ್ಲ ಇದ್ದೂ ಇಲ್ಲದವರು ನಾವು. ನಮ್ಮ ಮನೆಯಲ್ಲಿ ಮನೆಸಾಮಾನಿಗಿಂತ ಪ್ಯಾಕಿಂಗ್ ಮಾಡುವ ಸಾಮಾನೇ ಜಾಸ್ತಿ. ಒಂದು ಬಾಕ್ಸ್ ಬರಲಿಕ್ಕಿಲ್ಲ, ನಮ್ಮವರು “ಅಯ್ಯೋ ಮಾರಾಯ್ತಿ, ನಿನಗೆ ಎಷ್ಟು ಸಲ ಹೇಳುವುದು ಅದೆಲ್ಲ ಎಸೆಯಬೇಡ ಎಂದು. ಪ್ಯಾಕ್ ಮಾಡಲು ಬೇಕು” ಎಂದು ಎತ್ತಿ ಎತ್ತಿ ಮೇಲ್ಗಡೆ ಎಸೆಯುತ್ತಾರೆ. ನಮ್ಮದು ಜಾತಕ ನೋಡಿ ವಿವಾಹ; ಹಾಗಾಗಿ ನಾನು ಅವರ ಸಂಪೂರ್ಣ ವಿರುದ್ಧ. ನನಗೆ ಮನೆ ತುಂಬಾ ಆ ಥರ ಪ್ಯಾಕಿಂಗ್ ಬಾಕ್ಸ್ ಇರುವುದು ಒಂಥರಾ ಕಿರಿಕಿರಿ. ಬಂದ ತಕ್ಷಣ ಎತ್ತಿ ಕಸದ ಬುಟ್ಟಿಗೆ ಹಾಕಿಬಿಡುತ್ತೇನೆ.
ವೃತ್ತಿ ಮುಗಿದು ನಿವೃತ್ತಿಯಾಗಿ ಇನ್ನು ಬೆಂಗಳೂರಿನಲ್ಲೊಂದು ಖಾಯಂ ವಿಳಾಸ ಮಾಡಿಕೊಳ್ಳುವುದು ಎಂದು ನಿರ್ಧರಿಸಿದ್ದಾಯ್ತು.
ಬೆಂಗಳೂರಿನಲ್ಲಿ ಮಕ್ಕಳು ಮನೆ ನೋಡಿ ಓಕೆ ಆಗಿ ಯಥಾಪ್ರಕಾರ ಪ್ಯಾಕರ‍್ಸ ಮೂವರ‍್ಸ ಹಿಡಿದು ಮನೆ ಸಾಮಾನೆಲ್ಲ ಅವರು ಈ ದೊಡ್ಡ ಮನೆಗೆ ತಂದು ಎಸೆದು ಹೋಗಿದ್ದಾಯ್ತು. ನಾವು ಬಾಕ್ಸ್ ಬಿಚ್ಚಿ ಇಡುತ್ತಿರುವ ಭಾನುವಾರ ಆ ಏರಿಯಾವೆಲ್ಲ ನಿಶ್ಯಬ್ಧ. ಹುಬ್ಬಳ್ಳಿಯಲ್ಲಿ ನಾವು ಮನೆ ಕಟ್ಟುವಾಗ ಆ ಏರಿಯಾದಲ್ಲಿ ಮನೆಗಳೇ ಇರಲಿಲ್ಲ; ಹದಿನೆಂಟು ವರ್ಷದ ನಂತರ ಹೋದಾಗ ನಾವೇ ನಂಬಲಾಗದಷ್ಟು ಏರಿಯಾ ಬದಲಾಗಿಹೋಗಿ ಮನೆ ಮುಂದೆ ಸಿಟಿ ಬಸ್ ಓಡಾಡುತ್ತಿತ್ತು. ರಸ್ತೆಯನ್ನು ನಾವು ಹೋದ ಬಳಿಕ ಹೈವೇನವರು ಹೈವೆಯಂತೆ ದೊಡ್ಡದಾಗಿ ಮಾಡಿದ್ದರು. ಬೈಕ್ ಓಡಿಸುವವರು ನಮ್ಮ ಕಿವಿತಮಟೆ ಒಡೆದುಹೋಗುವ ಹಾಗೆ ಜೋರಾಗಿ ಹಾರ್ನ್ ಹೊಡೆಯುತ್ತಾ ಓಡಿಸುವುದಕ್ಕೆ ನಾವು ಅಸಹಾಯಕರಾಗಿ ಮನೆಯೊಳಗೆ ಕೂತು ಅವರಿಗೆ ಹಿಡಿಶಾಪ ಹಾಕುತ್ತಿದ್ದೆವು.
ಬೆಂಗಳೂರಿಗೆ ಶಿಫ್ಟ್ ಮಾಡಿ ಒಂದು ರಾತ್ರಿ ಕಳೆದು ಮುಂಜಾನೆ ಮನೆ ಸಾಮಾನೆಲ್ಲ ಬಿಚ್ಚುತ್ತ ಕುಳಿತಿದ್ದೆವು. ಹಿಂಬಾಗಿಲಿನಿಂದ ಗಲಗಲ ಕಲಕಲ ಸದ್ದು ಕೇಳಿಸತೊಡಗಿತು. ಸ್ವಲ್ಪ ಹೊತ್ತಿನಲ್ಲೇ ಡಂಡಂ ಎಂದು ಡ್ರಮ್ ಸದ್ದು ಕಿವಿಗೆ ಬಡಿಯತೊಡಗಿತು. ನಮ್ಮ ಗಮನ ಸಾಮಾನು ಅನ್‌ಪ್ಯಾಕ್ ಮಾಡುವುದರಲ್ಲೆ ಇತ್ತು. ಮಧ್ಯಾನ್ಹ ಊಟದ ವೇಳೆಯಾಗುತ್ತಿದ್ದ ಹಾಗೆ ‘ಅನ್ನಪೂರ್ಣೆ ಸದಾಪೂರ್ಣೆ’ಯನ್ನು ಮಕ್ಕಳು ಹಾಡಿದಂತಾಯ್ತು. ಆಗ ನಮಗೆ ಇಲ್ಲೆಲ್ಲೋ ಶಾಲೆ ಇರಬಹುದಾ? ಎನ್ನುವ ಸಂಶಯ ಶುರುವಾಯ್ತು.
ಮನೆ ಮಾಲಿಕರು ಬಂದ ಕೂಡಲೇ ಅವರಿಗೆ ನಮ್ಮ ಮೊದಲ ಪ್ರಶ್ನೆ, ‘ಶಾಲೆ ಇದೆಯಾ ಹತ್ತಿರದಲ್ಲಿ?’. ಅವರು ಮನೆ ಹಿಂದುಗಡೆಯೇ ಕೈ ತೋರಿಸಿ ‘ಅದೇ ನೋಡಿ ಶಾಲೆ, ಈಗ ಒಂದು ವರ್ಷದಿಂದ ಶುರುವಾಗಿದೆ’ ಎಂದು ಹೊಸಾ ಬಾಂಬ್ ಇಟ್ಟರು.
ಶಾಲೆಯ ಚಟುವಟಿಕೆಗಳು ಹೆಚ್ಚುಕಡಮೆ ನನಗೆ ಮರೆತೇ ಹೋಗಿತ್ತು. ಈಗ ಅದನ್ನು ಮತ್ತೊಮ್ಮೆ ಪಡೆಯುವ ಅವಕಾಶ ತೆರೆದುಕೊಂಡಿತ್ತು.
ಶಾಲೆಯ ಪಕ್ಕದಲ್ಲಿದ್ದರೆ ಒಂದು ಲಾಭವೂ ಉಂಟು; ನಾವೇನಾದರೂ ಮಗ್ಗಿ ಮರೆತಿದ್ದರೆ, ಶಾಲಾಪಾಠವನ್ನು ಮರೆತಿದ್ದರೆ ಇಲ್ಲಿ ಎಲ್ಲವನ್ನೂ ಪುಕ್ಕಟೆಯಾಗಿ ಕಲಿಯುವ ಸದವಕಾಶ ತನ್ನಿಂತಾನೇ ಒದಗಿ ಬರುತ್ತದೆ. ಆದರೆ ಆ ದಿನಗಳಲ್ಲಿ ಕನ್ನಡದ ಮಗ್ಗಿ ನಮ್ಮ ಬಾಯಿಯಲ್ಲಿ ನಲಿದಾಡುತ್ತಿದ್ದರೆ, ಈಗ ಮಕ್ಕಳು ‘ಟೂ ವನ್ ಝಾ ಟೂ… ಟೂ ಟೂ ಝಾ ಫೋರ್’ ಎಂದು ಒದರಬೇಕಾಗಿದೆ. ಅದು ಅವರ ಮನಸ್ಸಿಗೆ ಹೃದಯಕ್ಕೆ ತಾಕುವುದೋ ಇಲ್ಲವೋ ಅಂತೂ ಟೀಚರಮ್ಮ ಕೂಗುತ್ತಿರುತ್ತಾರೆ, ಮಕ್ಕಳು ಅವಳೊಟ್ಟಿಗೆ ಕೂಗುತ್ತಾರೆ. ಎ ಫಾರ್ ಆಪಲ್ಲೋ, ಇನ್ನಾವುದೋ ಪಾಠವೋ ಸದಾ ಶಾಲೆ ನಡುಗುವಂತೆ ಮಕ್ಕಳು ಕೂಗುತ್ತಾರೆ. ಏನೇ ಆದರೂ ಗಂಟೆ ಒಂದಾದ ತಕ್ಷಣ ‘ಅನ್ನಪೂರ್ಣೆ ಸದಾಪೂರ್ಣೆ’ ಮಾತ್ರ ರಾಗವಾಗಿ ಮಕ್ಕಳು ಹಾಡುತ್ತಿದ್ದರೆ ನನಗೆ ‘ಅಯ್ಯೋ ಇನ್ನೂ ಅಡುಗೆ ಆಗಿಲ್ಲ ಅರ್ಧಾನೂ ಆಗಿಲ್ಲ’ ಎಂದು ಪುನಃ ಹೃದಯದ ಬಡಿತ ಹೆಚ್ಚುತ್ತದೆ. ನನ್ನ ದೃಷ್ಟಿಯಲ್ಲಿ ಮನೆ ಪಕ್ಕದಲ್ಲಿ ಶಾಲೆ ಇದ್ದರೆ ಹೃದಯಕ್ಕೆ ಒಳ್ಳೆಯದು.
ಯಾಕೆಂದರೆ ಮುಂಜಾನೆ ಆಗುತ್ತಿದ್ದಂತೆ ಮಾರ್ಚ್ ಫಾಸ್ಟ್ ಮಾಡುವ ಡ್ರಮ್‌ನ ಡಂಡಂ ಸದ್ದು ಎದೆಬಡಿತವನ್ನು ಹೆಚ್ಚಿಸುತ್ತಿರುತ್ತದೆ. ಬೆಂಗಳೂರು ಸೇರಿದಾಗಿನಿಂದ ತಮಟೆ ಎಂಬ ಸಾಧನದ ಕರ್ಣಕಠೋರ ಸದ್ದನ್ನು ಕೇಳಿದ್ದೆ. ಆದರೆ ಈ ಡ್ರಮ್ ಎಂಬ ಸಾಧನ ಹೃದಯದ ಬಡಿತವನ್ನೇ ಏರಿಳಿತ ಮಾಡುವಂತಿರುತ್ತದೆ. ನಮ್ಮ ಏರಿಯಾದಲ್ಲಿ ಕನ್ನಡದ ಹಾಡನ್ನು ತಿರುಚಿ ‘ಒಣಕಸ ಹಸಿಕಸ ಬೇರೆ ಮಾಡಿ, ಗಾಜಿನ ಸೀಸೆ ಬೇರೆ ಇಡಿ’ ಎಂದೆಲ್ಲ ಅದಕ್ಕೆ ಸೇರಿಸಿ ಹಾಡನ್ನಾಗಿ ಮಾಡಿ ಆ ಹಾಡನ್ನು ನಮ್ಮ ಕಸದ ವ್ಯಾನ್‌ನವನು ಹಾಕಿಕೊಂಡು ಬರುತ್ತಿರುತ್ತಾನೆ. ಆ ಹಾಡು ಕಿವಿಗೆ ಬಿದ್ದೊಡನೆ ನಾವು ಮನೆಮನೆಯ ಹೆಂಗಸರೆಲ್ಲ ‘ಬಂದರು ಬಂದರು’ ಎನ್ನುತ್ತಾ ಓಡುತ್ತೇವೆ; ನಾವು ಓಡುವ ರೀತಿಯಿಂದ ಮನೆಗೆ ಐಟಿಯವರೇನಾದರೂ ರೇಡ್‌ಗೆ ಬಂದರಾ ಎಂದು ಮನೆಮಂದಿ ಗಾಬರಿಗೊಳ್ಳುತ್ತಾರೆ. ಒಂದು ದಿನ ಶಾಲೆಯ ಡ್ರಮ್ ಡಂಡಂ ಎಂದು ಒಂದೇ ತಾಲದಲ್ಲಿ ಹೊಡೆದುಕೊಳ್ಳುತ್ತಿತ್ತು; ಕಸದವನ ವ್ಯಾನ್ ಆಗಲೆ ಬಂದು, ನನಗೆ ಆ ದಿನ ಅವನ ಹಾಡು ಕಿವಿಗೆ ಬೀಳದೆ ಕಸ ಕೊಡುವುದು ತಪ್ಪಿಯೇ ಹೋಯ್ತು. ಅಂದೆಲ್ಲ ನನಗೆ ಮೂಡ್ ಆಫ್. ಕಸ ಮನೆಯಿಂದ ಹೊರಹೋದರೆ ಅದೆಷ್ಟು ನೆಮ್ಮದಿ ಅನಿಸುತ್ತದೆಯೋ, ಅದು ಇದ್ದರೆ ಅಷ್ಟೇ ಕಿರಿಕಿರಿ. ಶಾಲೆಯ ಡಂಡಂ ಡ್ರಮ್ಮಿಗೆ ಒಂದಷ್ಟು ಬಯ್ದದ್ದಾಯ್ತು. ಶಾಲೆಯ ಪಕ್ಕ ಮನೆ ಮಾಡಿದ್ದಕ್ಕೆ ಮಕ್ಕಳಿಗೂ ‘ನೋಡಿಕೊಂಡು ಮಾಡಬೇಕಿತ್ತು’ ಎಂದು ಬಯ್ದದ್ದಾಯ್ತು.
ಶಾಲೆಗೂ ರಾಷ್ಟ್ರೀಯ ಹಬ್ಬಗಳಿಗೂ ಅಂಟಿದ ನಂಟು. ನಾವೆಲ್ಲ ರಾಷ್ಟ್ರೀಯ ಹಬ್ಬ ಬಂತೆಂದರೆ ‘ಸುತ್ತೋಣ ಭಾರತ ಸಖಿ ಬಾರೆ…’ ಎಂದು ಸುತ್ತುತ್ತಾ ಡ್ಯಾನ್ಸ್ ಮಾಡುತ್ತಿದ್ದೆವು. ಆಗೆಲ್ಲ ಈಗಿನಂತೆ ಸಿನೆಮಾ ಹಾಡುಗಳಿರಲಿಲ್ಲ. ನಮ್ಮ ಅತ್ತೆಯೊಬ್ಬಳಿದ್ದಳು; ಅವಳೇ ನಮ್ಮ ಡ್ಯಾನ್ಸ್ ಟೀಚರ್. ಆಕೆಗೆ ಬರುವುದೇ ಒಂದೋ ಎರಡೋ ಡ್ಯಾನ್ಸ್. ಅದನ್ನೇ ತಿರಗಾ ಮುರಗಾ ಹೇಳಿಕೊಟ್ಟು ನಮ್ಮನ್ನು ಸ್ಟೇಜ್ ಹತ್ತಿಸುತ್ತಿದ್ದಳು. ನಮಗೋ ಆಕೆ ಎಂದರೆ ಅದ್ಭುತ ಕಲಾವಿದೆಯಾಗಿ ಕಾಣಿಸುತ್ತಿದ್ದಳು. ಡ್ಯಾನ್ಸ್ ಡ್ರೆಸ್ ಎಂದರೂ ಅಷ್ಟೆ; ಅಮ್ಮನ ಸೀರೆಯೋ, ಅಕ್ಕನ ಲಂಗವೋ ಮನೆಯಲ್ಲೇ ಇರುವ ಅಪ್ಪನ ಪಂಚೆಯೋ ಅಣ್ಣನ ಪ್ಯಾಂಟೋ ಹೀಗೆ.. ಅದನ್ನೇ ನಮ್ಮೂರ ಯಾವುದೋ ಅಕ್ಕ ನಮಗೆ ಸುತ್ತಿಕೊಡುತ್ತಿದ್ದಳು. ಅವರೇ ನಮ್ಮ ಪಾಲಿನ ಮೇಕಪ್‌ಮೆನ್‌ಗಳು. ಈಗೆಲ್ಲ ಸಿನೆಮಾ ಹಾಡಿನ ಯುಗ. ಶಾಲೆಯಲ್ಲಿ ಸಾಂಸ್ಕೃತಿಕ ವಿಭಾಗವೇ ಇರುತ್ತದೆ. ಆ ವಿಭಾಗದ ಡ್ಯಾನ್ಸ್, ಹಾಡು ಸಂಗೀತ ತಬಲಾ ಎಲ್ಲ ಗುಂಯ್ ಎಂದು ನಮ್ಮ ಕಿವಿಗೂ ಬಡಿಯುತ್ತಿರುತ್ತದೆ.
ನವೆಂಬರ್ ಒಂದಂತೂ ಈ ಬಾರಿ ಆಚರಿಸಿದಷ್ಟು ಭರ್ಜರಿಯಾಗಿ ನಾವು ಎಂದೂ ಆಚರಿಸಿರಲಿಲ್ಲವೆಂದೇ ನನ್ನ ಭಾವನೆ. ಒಂದು ಬಗೆಯಲ್ಲಿ ನವೆಂಬರ್ ಒಂದು ಮರೆತೇ ಹೋಗಿತ್ತು. ಈ ಬಾರಿ ನಾವು ಈ ಮನೆಗೆ ಬಂದದ್ದು ಅಕ್ಟೋಬರ್ ೨೯. ನವೆಂಬರ್ ಒಂದರ ತಯ್ಯಾರಿ ಶಾಲೆಯಲ್ಲಿ ಭರ್ಜರಿ ಯಾಗಿ ನಡೆಯುವ ಹೊತ್ತು. ಕನ್ನಡವೇ ನಮ್ಮಮ್ಮ ಅವಳಿಗೆ ಕೈ ಮುಗಿಯಮ್ಮ.. ಎಂದು ಒಂದು ಗುಂಪು ಜೋರಾಗಿ ಹಾಡುತ್ತಿದ್ದರೆ ಇನ್ನೊಂದು ಸ್ವಲ್ಪ ಹೊತ್ತಿನಲ್ಲಿ ಒನಕೆ ಓಬವ್ವನ ಕಥೆಯನ್ನು ಹೇಳುವ ನಾಗರಹಾವು ಸಿನೆಮಾದ ಸಂಭಾಷಣೆ ನಮ್ಮ ಮನೆಯನ್ನು ತುಂಬಿಕೊಂಡಿತು. ಅಷ್ಟರಲ್ಲೇ ಇನ್ನೊಂದು ಗುಂಪಿನ ಧ್ವನಿ ದೊಡ್ಡದನಿಯಲ್ಲಿ ರಾಗವಾಗಿ ಕನ್ನಡ ನಾಡಿನ ವೀರರಮಣಿಯಾ.. ಎಂದು ತಾಳವಿದ್ದೂ ತಾಳವಿಲ್ಲದಂತೆ ಹಾಡತೊಡಗಿತು. ಮತ್ತೊಂದು ಕಡೆಯಿಂದ ಕೀರಲು ಕಂಠವೊಂದು ಕಾವೇರಿ ತಾಯಿ ನಮ್ಮಮ್ಮ ಎಂದು ಕರ್ಣಕಠೋರವಾಗಿ ಹಾಡತೊಡಗಿತು. ನಾಟಕದ ತಾಲೀಮು ನಮಗೆ ಪ್ರಾಕ್ಟೀಸ್ ಆಯಿತು. ಅಷ್ಟರಲ್ಲಿ ‘ಅನ್ನಪೂರ್ಣೆ ಸದಾಪೂರ್ಣೆ’ ಸಮಯ ಬಂತು. ಆ ಬಳಿಕ ಕನ್ನಡಮ್ಮನ ದೇವಾಲಯ ಎಂದು ಇನ್ನೊಂದು ಗುಂಪಿನ ಕಾಗೆ ಕಂಠವು ಕೇಳಿಬಂತು. ಅಂತೂ ಮೂರುಮೂರು ದಿನ ನಾವೂ ಕನ್ನಡ ರಾಜ್ಯೋತ್ಸವದ ತಯ್ಯಾರಿ ಮಾಡಿದಂತ ಅನುಭವವಾಯ್ತು. ಕೊನೆಯಲ್ಲಿ ಒಂದು ದಿನ ನಿಜವಾದ ಕನ್ನಡ ರಾಜ್ಯೋತ್ಸವ ಆಯಿತು. ಬೆಂಗಳೂರು ಎಂದರೆ ಹಬ್ಬಗಳ ಊರು; ಗಣೇಶೋತ್ಸವ ನವೆಂಬರ್ ವರೆಗೆ ಮಾಡಿದರೆ, ರಾಜ್ಯೋತ್ಸವವನ್ನು ಡಿಸೆಂಬರ್ ವರೆಗೆ ಮಾಡುತ್ತಾರೆ. ಅಷ್ಟು ಕನ್ನಡದ ಮೇಲೆ ಪ್ರೀತಿ ಬೆಂಗಳೂರಿಗರಿಗೆ. ಹೊಸ ವರ್ಷ ಬಂದ ಮೇಲೆ ಅದರ ಆಚರಣೆ. ನಡುನಡುವೆ ಅಣ್ಣಮ್ಮನಿಗೆ ಉತ್ಸವ ಮಾಡಿ ಅಣ್ಣಮ್ಮನ ಡ್ಯಾನ್ಸ್ ಮಾಡಿ ತಣಿಯುತ್ತಾರೆ. ನಮ್ಮ ಪಕ್ಕದ ಶಾಲೆಯಲ್ಲೂ ನವೆಂಬರ್ ಮೂರು ದಿನಗಳ ವರೆಗೂ ಕನ್ನಡಮ್ಮನ ದೇವಾಲಯ.. ಹಾಡು ಕೇಳುತ್ತಲೇ ಇತ್ತು. ಒಂದು ದಿನವಂತೂ ನಾವೇನು ಸಿನೆಮಾ ಟಾಕಿಸ್ ಪಕ್ಕದಲ್ಲಿ ಮನೆ ಮಾಡಿದ್ದೇವಾ ಎನ್ನುವ ಅನುಭವ.
ನವೆಂಬರ್ ಮುಗಿಯಿತೋ, ಟೂ ವನ್ ಝಾ ಟೂ.. ಶುರುವಾಯ್ತು.
ಡಿಸೆಂಬರ್ ಬಂದೇ ಬಂದದ್ದು, ಶಾಲೆಯಲ್ಲಿ ಕ್ರೀಡೋತ್ಸವಗಳ ಗದ್ದಲವೋ ಗದ್ದಲ. ಮಿಸ್‌ಗಳು ಮೈಕ್‌ನಲ್ಲಿ ಆಟೋಟಗಳ ಕಾಮೆಂಟರಿ ಹೇಳಿದ್ದೇ ಹೇಳಿದ್ದು, ನಾವು ಕೇಳಿದ್ದೇ ಕೇಳಿದ್ದು. “ಈಗ ಬಾಲ್ ಕೌಂಪೌಂಡ್ ಹೊರಗಡೆ ಹೋಗಿದೆ. ನಮ್ಮ ಹುಡುಗರು ಕೌಂಪೌಂಡ್ ಗೋಡೆ ಹತ್ತಿ ಬಾಲ್ ತರುತ್ತಿದ್ದಾರೆ..” ಎಂದು ಮಿಸ್ಸಮ್ಮ ಕಾಮೆಂಟರಿ ಹೇಳುತ್ತಿದ್ದರೆ ನಾಲ್ಕು ದಾಂಡಿಗರ ಥರದ ಹುಡುಗರು ಎತ್ತರದ ಕೌಂಪೌಂಡ್ ಗೋಡೆ ಹತ್ತಿಬಿಡುವುದೆ. ಹತ್ತಿದ್ದು ಅಲ್ಲದೆ ಬಾಲ್ ತಂದಿದ್ದು ಅಲ್ಲದೆ, ಒಬ್ಬ ಹುಡುಗ ಇನ್ನೊಮ್ಮೆ ಬಾಲ್ ಬಿದ್ದರೆ ತರುವುದಕ್ಕೆಂದು ಅಲ್ಲೇ ಸೆಟಲ್ ಆಗಿಬಿಟ್ಟ. ಅದು ಯಾರದೋ ಮಹಾನುಭಾವರ ಎಕರೆಗಟ್ಟಲೆ ಜಾಗ. ದನಕುರಿಗಳು ಹಾಯಾಗಿ ಮೇಯುವ ಜಾಗವದು. ಇವನು ಅವರೊಡನೆ ಹಾಯಾಗಿ ಕೆಲಕಾಲ ಶಾಲೆಯ ಕಿರಿಕಿರಿ ಇಲ್ಲದೆ ಕಳೆಯುವ ಅವಕಾಶವನ್ನು ತಪ್ಪಿಸಿಕೊಳ್ಳಲಿಲ್ಲ. ಅಂತೂ ಬಾಲ್ ಬಂದದ್ದೆ ಬಂದದ್ದು, “ಈಗ ಮತ್ತೆ ಆಟ ಶುರುವಾಗಿದೆ. ಬಾಲ್ ಇನ್ನೊಂದು ಕೋರ್ಟ್ ಗೆ ಹೋಗಿದೆ..” ಎಂದೆಲ್ಲ ಮಿಸ್ಸಮ್ಮ ಕಾಮೆಂಟರಿ ಕೂಗುತ್ತಿದ್ದರೆ, ಹುಡುಗರು ಹೋ ಎಂದು ತಮ್ಮ ಕೂಗುವ ಶಕ್ತಿಯ ಪ್ರದರ್ಶನ ಮಾಡಿ ಯುವಶಕ್ತಿಯ ಸಾಮರ್ಥ್ಯ ತೋರಿದರು.
ಅಂತೂ ನಾಲ್ಕೋ ಐದೋ ದಿನ ಇದೇ ರೀತಿ ಕಾಮೆಂಟರಿ ಕೂಗು ನಡೆದು ಕ್ರೀಡೋತ್ಸವ ಮುಗಿದು ಪುನಃ ಶುರುವಾಯ್ತು ‘ಟೂ ವನ್ ಝಾ ಟೂ..’. ಒಂದು ಕ್ಲಾಸ್‌ನ ಮಕ್ಕಳಂತೂ ದಿನವಿಡೀ ಮಿಸ್ಸಮ್ಮ ಏನೋ ಹೇಳುತ್ತಾರೆ, ಮಕ್ಕಳು ಅದನ್ನೇ ರಿಪೀಟ್ ಮಾಡುತ್ತ ಕೂಗುತ್ತಾರೆ; ನಾವು ಪರಸ್ಪರ ಮಾತಾಡಿದ್ದೇ ಕೇಳದಷ್ಟು ನಮ್ಮ ಕಿವಿ ಗದ್ದಲದಿಂದ ತುಂಬಿಹೋಗುತ್ತದೆ.
ಇದೆಲ್ಲದರ ನಡುವೆ ಇನ್ನೊಂದು ತಮಾಷೆಯೆಂದರೆ ನಾವು ಟೆರೇಸಿಗೆ ಹೋದೆವೆಂದರೆ ದೊಡ್ಡ ಮಕ್ಕಳು ಕ್ಲಾಸಿನ ಕಿಟಕಿಗೆ ಮುಖ ತಂದು ‘ಆಂಟಿ, ಆಂಟಿ ಆಂಟಿ’ ಎಂದು ನಮ್ಮನ್ನೇ ಕರೆಯುತ್ತಾರೆ. ಒಬ್ಬ ಕರೆದ, ನಾನು ಪ್ರತ್ಯುತ್ತರ ನೀಡಲಿಲ್ಲ, ಇನ್ನೊಬ್ಬ ತಾನ್ಯಾಕೆ ಪ್ರಯತ್ನಿಸಬಾರದೆಂದು ಶುರುವಿಟ್ಟ, ‘ಆಂಟಿ, ಆಂಟಿ, ಆಂಟಿ’. ಹೀಗೆ ಇಬ್ಬರು ಮೂವರೆಂದು ಪ್ರಯತ್ನಿಸಿದರೂ ನಾನು ಮಾತ್ರ ಜಪ್ಪೆನ್ನಲಿಲ್ಲ. ಕಂಡರೂ ಕಾಣದಂತೆ ನನ್ನ ಕೆಲಸ ಮುಗಿಸಿ ಬಂದು ನಮ್ಮವರಿಗೆ ಹೇಳಿದರೆ, ಅವರು ‘ಅಯ್ಯೋ ನನ್ನನ್ನು ಹಾಗೆ ಕರೆದರು,‘ಅಂಕಲ್ ಅಂಕಲ್’ ಎಂದು; ನಾನು ‘ಬಾರೋ ಇಲ್ಲಿಗೆ’ ಎಂದೆ. ಗಪ್‌ಚುಪ್ ಆದರು: ಎಂದು ಹೇಳಿದಾಗ ಆಂಟಿ ಅಂಕಲ್‌ಗಳನ್ನು ಕಂಡರೆ ಶಾಲಾಮಕ್ಕಳಿಗೆ ಅದೆಷ್ಟು ಪ್ರೀತಿ ಎಂದು ನಾನೂ ಅವರೊಡನೆ ದನಿಗೂಡಿಸಿದೆ.
ನಾವೆಲ್ಲ ಹಳ್ಳಿಶಾಲೆಯಲ್ಲಿ ಬಿಂದಾಸ್ ಕಳೆದು ಬಂದವರು. ನಾವು ಎಷ್ಟು ಕೂಗಿದರೂ ಹೇಳುವವರಿಲ್ಲ ಕೇಳುವವರಿಲ್ಲ; ಕ್ಲಾಸಿನಲ್ಲೇ ಹುಣಿಸೆಹಣ್ಣು ಉಪ್ಪು ತಿಂದು ಹಾಯಾಗಿ ಕಳೆದು ಬಂದವರು ನಾವು. ಒಮ್ಮೊಮ್ಮೆ ಈ ಮಕ್ಕಳನ್ನು ನೋಡಿದಾಗ ಕನಿಕರವೆನಿಸುತ್ತದೆ. ದಿನವಿಡೀ ಏನೇನೋ ಚಟುವಟಿಕೆ, ಬೇಕೋ ಬೇಡವೋ ಎಲ್ಲವನ್ನೂ ತಲೆಯಲ್ಲಿ ತುರುಕಿಸಿಕೊಳ್ಳಬೇಕಾದ ಅನಿವಾರ‍್ಯತೆ. ಶಿಕ್ಷಕರ ಕಥೆಯೂ ಹಾಗೆ; ಎಷ್ಟೇ ತುಂಟತನ ಮಾಡಲಿ ಮಕ್ಕಳಿಗೆ ಹೊಡೆಯುವಂತಿಲ್ಲ. ನಮಗೊಬ್ಬ ಶಿಕ್ಷಕರಿದ್ದರು; ಅವರ ಬಳಿ ಯಾವಾಗಲೂ ಕರೆಂಟ್ ವಾಯರ್‌ನ ಸುತ್ತಿಸುತ್ತಿ ಮಾಡಿದ ಹಗ್ಗವೊಂದಿರುತ್ತಿತ್ತು. ಹಾಗಾಗಿ ಅವರಿಗೆ ‘ವಾಯರ್ ಕಟ್ಟಿನ ಮಾಸ್ತರ್’ ಎಂದೇ ಹೆಸರಾಗಿತ್ತು. ಮಕ್ಕಳು ಏನೇ ಚಿಕ್ಕ ತಪ್ಪು ಮಾಡಿದರೂ ಕೈ ಚಾಚು ಎಂದು ಹೇಳುತ್ತಿದ್ದರು; ಚಾಚಿದ ಕೈಗೆ ಫಟೀರ್ ಎಂದು ಹೊಡೆಯುತ್ತಿದ್ದರು. ತುಂಟಮಕ್ಕಳಂತೂ ಅವರಿಂದ ಅದೆಷ್ಟು ಹೊಡೆತ ತಿಂದಿದ್ದರೋ, ಕಣ್ಣು ಬೇರೆ ಕೆಂಪಗಾಗಿರುತ್ತಿತ್ತು. ನೋಡಲಿಕ್ಕೂ ಕೆಂಪುಬಣ್ಣವೆ. ಅಬ್ಬಾ! ಅವರಿಗೆ ವರ್ಗವಾದ ದಿನ ಇಡೀ ಊರಿಗೆ ಊರೇ ಸಂಭ್ರಮಿಸಿತ್ತು. ಆದರೂ ಯಾರೂ ಅವರ ಬಗ್ಗೆ ಕಂಪ್ಲೆಂಟ್ ಮಾಡಿರಲಿಲ್ಲ. ಆ ದಿನಗಳು ಹಾಗೆ; ಶಿಕ್ಷಕರು ಏನೇ ಮಾಡಲಿ, ಪಾಲಕರು ಅವರಿಗೆ ಏನೂ ಹೇಳುತ್ತಿರಲಿಲ್ಲ. ನಮಗೆ ಮನೆಯಲ್ಲಿ ಒಬ್ಬರೋ ಇಬ್ಬರನ್ನೇ ಸುಧಾರಿಸುವುದು ಕಷ್ಟ; ಅದರಲ್ಲಿ ಅಷ್ಟೊಂದು ಮಕ್ಕಳನ್ನು ಸುಧಾರಿಸುವುದೆಂದರೆ!
ಈಗ ದಿನವಿಡೀ ಕೋಲಾಟದ ಕೋಲಿನ ಸದ್ದು, ಅದೇನೋ ಹಾಡು, ಡ್ಯಾನ್ಸ್ ಗೆಜ್ಜೆ ಸದ್ದು ಸದಾ ಕಿವಿಗೆ ಬೀಳುತ್ತಿದೆ. ಅಂದರೆ ಶಾಲಾ ವಾರ್ಷಿಕೋತ್ಸವ ಬಂದಿದೆ ಎಂದರ್ಥ. ಹಾಗಾಗಿ
‘ಶಾಲೆಯಾ ಪಕ್ಕದಲ್ಲೊಂದು ಮನೆಯ ಮಾಡಿ
ಗದ್ದಲಕ್ಕಂಜಿದೊಡೆಂತಯ್ಯಾ…’
ಎಂದು ದಿನಕ್ಕೊಮ್ಮೆ ಹೇಳಿಕೊಂಡು ಶಾಲಾದಿನಗಳ ‘ಸುತ್ತೋಣ ಭಾರತ’ ನೆನಪಿಸಿಕೊಳ್ಳುತ್ತಿದ್ದೇನೆ.
—————————————
ಸರೋಜ ಪ್ರಭಾಕರ್
ಚೆನ್ನಾಗಿ ಮೂಡಿಬಂದಿದೆ
ಚೆನ್ನಾಗಿದೆ
ಚೆನ್ನಾಗಿ ಬರೆದಿದ್ದೀರಿ ಸರೋಜಾ ಮೇಡಂ