ಮೀನಾಕ್ಷಿ ಸೂಡಿ-ಭಾವಗೀತೆ

ನಿನ್ನ ಪ್ರೀತಿಯ ಕಡಲಲಿ
ನಗುತ ನೆಗೆವ ಅಲೆಯು ನಾನು
ನಿನ್ನ ಪ್ರೇಮದಂಬರದ ಸ್ವಾತಿ ಮಳೆಯ ಹನಿಯು ನಾನು

ನಿನ್ನ ಮಾತಿನ ವೇಣುಗಾನಕೆ
ಹೃದಯ ನವಿಲಿನ ನರ್ತನಾ
ಕಣ್ಣ ಕೊಳದ ಪನ್ನೀರಿನಲ್ಲಿ
ನಿನ್ನ ಪ್ರೀತಿಯ ಸಿಂಚನಾ.

ನನ್ನೆದೆಯ ನೆಲದ ಹಸಿರು
ನಿನ್ನುಸಿರ ತುಂತುರು ಬಯಸಿದೆ
ಇರುಳ ಪ್ರೀತಿಯ ಕನಸ ಹಾದಿಗೆ
ತಾರೆಮಾಲೆಯ ಸಿರಿ ಹೊಳಪಿದೆ

ಗಿರಿಶಿಖರ ಮೀರಿ ನಿಂತ
ಒಲವ ಧಾರೆ ನಿನ್ನದು
ಹನಿ ಹನಿಯು ನನ್ನೊಡಲಲಿ
ಸುಖದ ಆಲಾಪ ನನ್ನದು


Leave a Reply

Back To Top