ಭಾವಯಾನಿ ಕವಿತೆ -ಕನಸು.

ಬಾಲ್ಯವನ್ನು ಅದ್ಭುತವಾಗಿಯೇ ಕಟ್ಟಿಕೊಟ್ಟಳು ನನ್ನವ್ವ
ನಾಲ್ಕು ಗೋಡೆಗಳ ನಡುವೆ
ಜೀವದಾತೆಯ ಕನಸುಗಳು
ಕರಟಿ ಹೋದುದನ್ನು ಕಂಡಾಗ
ನನ್ನೊಳಗೊಂದು ಹುಚ್ಚು ಹಠ ಮೊಳೆಯುತ್ತಲೇ ಇತ್ತು!
ಆಗಸದೆತ್ತರಕ್ಕೆ ಬೆಳೆಯುತ್ತಲೇ ಇತ್ತು!!

ಅವ್ವನ ಪ್ರತಿರೂಪವಾಗಿತ್ತು
ನನ್ನೆದೆಯಲ್ಲಿ ಅಕ್ಷರ ಬಿತ್ತಿದ ಕರಗಳು
ತೇಜೋಮಯ ರೂಪ
ಅಕ್ಕರೆಯ ನುಡಿಗಳು!
ಅಮ್ಮನಂತಹ ಗುರುಗಳ ಜೊತೆಗಿನ ಭಾವುಕ ಕ್ಷಣಗಳನ್ನು
ಎದೆಯಗೂಡಲ್ಲಿಟ್ಟು ಕಾಪಿಟ್ಟವಳು ನಾನು!
ಕೋಗಿಲೆ ಎಂಬ ನಾಮಕರಣವೇ
ಭಾವಯಾನಿಯ ಗಾನವೈಭವಕ್ಕೆ ಮುನ್ನುಡಿಯಾಗಿತ್ತು!

ಬದುಕಿನ ಜೋಳಿಗೆಯಲ್ಲಿ ತುಂಬಿಸಿಕೊಂಡ
ಒಲವು, ಮಮತೆ, ಸ್ನೇಹ, ಪ್ರೇಮವು
ಭಾವಯಾನವಾದರೆ
ನಂಬಿಸಿ ಕತ್ತು ಕೊಯ್ದವರ ಕಹಿ ನೆನಪುಗಳು
ನೋವ ಯಾನ ವಾಗಿತ್ತು!
ಅದೇ ನನ್ನ ಬದುಕಿನ ಕಾವ್ಯವಾಗಿತ್ತು!!

ಸಾಧನೆ ಮಾಡಬೇಕೆಂದು ಹೊರಟವಳು ಅಲ್ಲ
ಭವ್ಯ ವೇದಿಕೆಯಲ್ಲಿ ಹಾರ ತುರಾಯಿಗಳ ಆಡಂಬರದಲ್ಲಿ ಕಳೆದು ಹೋಗಬೇಕೆಂದು
ಹಂಬಲಿಸಿದವಳೂ ಅಲ್ಲ…
ನನ್ನೊಳಗಿನ ತುಡಿತಕ್ಕೆ
ಕವಿತೆ ಜೊತೆಯಾಗಿತ್ತು….
ಗಾನ ನನ್ನ ಅಪ್ಪಿಕೊಂಡಿತ್ತು!!

ಅಮ್ಮನಂತೆ ಆಪ್ತವಾದ ಜೀವವು
ಮೌನ ಜಾತ್ರೆಯ ಸಂಭ್ರಮವನ್ನು
ಕಣ್ ತುಂಬಿಸಿಕೊಂಡ ಘಳಿಗೆ,
ಧನ್ಯತೆಯ ಭಾವ ನನ್ನೆದೆಯ ಸ್ಪರ್ಶಿಸಿತ್ತು…
ಕೋಗಿಲೆಯ ಕಂಠಕ್ಕೆ
ಮರುಜೀವ ಬಂದಿತ್ತು!!
ಕನಸು ನನ್ನೆಡೆಗೆ ಸುಮ್ಮನೆ ಮುಗುಳ್ನಗು ಬೀರಿತ್ತು!!


Leave a Reply

Back To Top