ಶರಣಪ್ಪ ತಳ್ಳಿ ಕುಪ್ಪಿಗುಡ್ಡ- ಬೆಂಕಿ ಇಲ್ದಾ ಹೊಗೆ ಯಂಗಾತು

ನಾ ಹೇಳಿನಂತ
ಹೇಳ್ಬೇಡ ಯಾರಿಗೂನು-?
ಬಿರುಗಾಳಿನ ಕರಿಸಿ
ನಮಗss ನಾವ ತೂರಿ ಹೋಗಿವಿ

ನಮ್ ಕೇರಿ ಗುಡಿಸಲೊಳಗsss
ಕಿಚ್ಚಿನ ಮ್ಯಾಲ
ಬೆಚ್ಚಗ ಮಲಿಗೆದ್ದು
ತಾಂಬೂಲ ಜಗಿದು
ಝರಿಯಾಗಿ ಹರಿದು
ರತಿ ತೇವ ಮೇಯ್ದು
ಸದ್ದಿಲ್ದಂಗsss ಅವ್ರು-
ಹೊರಗ ಬರಾ ಹೊತ್ತಿನಗss
ನಾವು –
ಎಚ್ಚರ ಇದ್ರುನೂ ನಿದ್ದಿ ಮಾಡುತ್ತಿದ್ದಂಗ ಇರ್ತೀವಿss

ನಾ ಹೇಳಿನಂತ
ಹೇಳ್ಬೇಡ ಯಾರಿಗೂನು?
ಪಾಪಸ್ ಕಳ್ಳಿ ಮುಳ್ಳಿನ
ಅಳುಕಿಗೆ ಸತ್ಗಿತ್ತಬಿಟ್ಟೇವು

ನಾವು ಹುಚ್ಚರಂಗss
ಅರಿವು-ಇರಿವು
ಮರೆತುಬಿಟ್ಟೀವಿ sss
ನಮಗನೂ ಕ್ವಾಪ ಬರ್ತದsss
ಬುಸುಗುಡುತ ಚಿತ್ತ
ಅವ್ರು ಕುತಗಿ ಕೊಳವಿ
ಕಡುಕಂದು ತಿಂದ್ ಬಿಡಾಣ
ಅನಿಸ್ತದ ಮತ್ಸರದ ಮತ್ತss
ಏನ್ ಮಾಡತಿ….?
ನಮ್ ಜನರ ಕೈ-ಬಾಯಿಗೆ
ಮುಸುರಿ ಎಂಜಲಿರುತೈತಿ!

ನಾ ಹೇಳಿನಂತ
ಹೇಳ್ಬೇಡ ಯಾರಿಗೂನು?
ನಮ್ ಕಳ್ಳುಬಳ್ಳಿನೆ ತಾಯ್ಗಂಡರು
ಗುಪ್ತ ಒಪ್ಪಂದದ ಮ್ಯಾಲ
ತಾವಾ ಒತ್ತೆ ಬಿದ್ದಾರsss

ಓಣಿ ಹೆಂಗಸ್ರು
ಒಂದೀಟ ನಕ್ಕಬಿಟ್ರss
ಅವ್ರು ಗುಂಗು
ಸುಂಟರ ಗಾಳ್ಯಾಗಿ ಸುತ್ತತದsss
ಮೈನಗss ಮನಸಿನಗ ss
ಬೆಸಿತದ ಹಸಿವು
ಕಂಗಳ ಅಂಗಳದಗ ವಿರಹ
ಸುಡಾಗ್ನಿ ಕುರುಹಾಗ್ತೈತಿ

ನಾ ಹೇಳಿನಂತ
ಹೇಳ್ಬೇಡ ಯಾರಿಗೂನು?
ನಗು ನಗುತಾ ಎದೆ ಬಗದು
ಗಾಸಿ ಮಾಡಾ ನಮ್ ನೆರಳು
ಬೆಂಕಿಯಿಲ್ದಾ ಹೊಗೆ ಯಂಗಾಗ್ತಾದ!

ನಮ್ತಾವsss ಬಲವಿಲ್ಲ
ಬದುಕಕಾsss ನೆಲವಿಲ್ಲ
ಅವ್ರ-
ಹಾವಭಾವಕss ಅಣಿಯಾಗಿ
ದೀಪಕ ಸುತ್ತಾ ಹುಳ
ಉರುದು ಬಿದ್ದಂಗsss
ಸಂಜಿಯಾತಂದ್ರ sss
ಇಳಿಗಣ್ಣ ಹೋದಂಗ
ಅಂಜಿಕೆಯಾಗುತೈತಿ!
——————————

Leave a Reply

Back To Top