ಕಾವ್ಯ ಸಂಗಾತಿ
ಡಾ ಅನ್ನಪೂರ್ಣಾ ಹಿರೇಮಠ
ಅವರ ಹೊಸ ಕವಿತೆ
ಗಜಲ್
ಅರಸುತಿಹ ಕಂಗಳ ನೋಟಕೆ ಪ್ರೀತಿಪರವಶದ ಎರಕ ಹೊಯ್ದುಬಿಡು
ಅಳುತಲಿಹ ಭಾವದೀಟಿಯ ಪ್ರೇಮದಮಲಿನ ತಾರಕ ಏರಿಸಿಬಿಡು
ನವಿಲುಗರಿಯ ಅಂಚಿನ ಕುಂಚಿಂದ ಬರೆದ ಪತ್ರದಕ್ಷರಗಳ ಮುದ್ದಿಸು
ಜಿನುಗುಡುತಿಹ ಎದೆಯ ನೆನಪಿನಂಗಳಕೆ ಸ್ಪರ್ಶಿಸಿ ಪುಳಕ ನೀಡಿಬಿಡು
ಎಲ್ಲ ಗಳಿಗೆಗಳಲೂ ಆತುರ ಕಾತುರದಿಂದ ಕಾಯುತಲೇ ಇರುವೆ
ಗೆಜ್ಜೆ ಸಪ್ಪಳಕೆ ಉನ್ಮತ್ತನಾಗಿ ದೇಹ ಮೃದಂಗದ ತಾಳಕೆ ಬಾರಿಸಿಬಿಡು
ಸರಿ ಸಮಯದ ಸಲ್ಲಾಪಕೆ ಚಡಪಡಿಸುತಿದೆ ಹಂಬಲದ ಈ ಜೀವ
ಕುಸಿಯುತಿಹ ಕಂಪನಗಳ ತಡೆದು ಒಲವ ಜಳಕ ಮಾಡಿಸಿಬಿಡು
ಒಡನಾಟದ ಸಿಹಿಜೇನ ಸವಿಯಲು ತುದಿಗಾಲಲಿಂದು ನಿಂತಿರುವೆ
ಎದೆಬನದಲಿ ಹಸಿರಾದ ಹೊಂಗನಸಿಗೆ ತಂಬೆಲರ ತವಕ ತದಿಕಿಬಿಡು
ಸನಿಹ ಬಯಸಿ ಬಯಸಿ ಅನುರಾಕ್ತಳಾಗಲು ಕಾತರಿಸುತಿರುವೆ
ಭಾವದಲೆಯಲಿ ಬಡಬಡಿಸುತಿಹ ಬಯಕೆಗೆ ಭಾವುಕ ಆಗಿಬಿಡು
ಸರಸ ಸಲ್ಲಾಪದ ಗಳಿಗೆಗಳ ಕಾದು ಕಾದು ಬಲು ತಪ್ತಳಾಗಿರುವೆ
ಜೀವಕುಸುಮದ ಪರಾಗಗಳ ಸ್ಪರ್ಶಿಸುತ ತೃಷಿಕ ಎಂದೆನಿಸಿಬಿಡು
ನೆನಪಿನಲೆಯಲಿ ಕೊಚ್ಚಿ ಹೋಗುತಿಹ ಆಸೆಗಳಾ ಬಚ್ಚಿಟ್ಟುಕೋ
ಅಚ್ಚಾದ ಚಿತ್ರಕೆ ಬಣ್ಣ ಬಳಿದು ಅಂದಗೊಳಿಸಿ ಮೋಹಕ ಎನಿಸಿಬಿಡು
ಅನುಳಂತರಾಳದ ಮಧುರ ಪಿಸುಮಾತಿನ ಹಾವಳಿಗೆ ಬೆಚ್ಚಿರುವೆನು
ಪ್ರೇಮದಕ್ಷರಗಳಲಿಹ ಮೋಹಕ ಪದಗಳಿಗೆ ರಸಿಕ ಕವಿಯಾಗಿಬಿಡು
ಡಾ ಅನ್ನಪೂರ್ಣಾ ಹಿರೇಮಠ