ಲಹರಿ ಸಂಗಾತಿ
ಜಯಶ್ರೀ.ಜೆ. ಅಬ್ಬಿಗೇರಿ
‘ಮಿಂಚಿರಲಿ ಮಳೆ ಹನಿಯಿರಲಿ ಪ್ರಣಯ ಸಾಗುತಲಿರಲಿ’
ಪ್ರಿಯ ಇನಿಯ,
ಕನಸಿನ ತುಂತುರಿನಲ್ಲೂ ನಿನ್ನದೇ ಮನಸ್ಸಿನ ಆಲಾಪನೆ. ಮನಸಿಗೂ ನಿನ್ನ ಮೇಲೆ ಮನಸಾಗಿದೆ ಕಣೋ.ಎಲ್ಲೆ ನೀ ಇದ್ದರೂ ಹೇಗೆ ಇದ್ದರೂ ನೀ ಎಂದೆಂದಿಗೂ ನನ್ನವನು. ಎಂದು ಈ ಹೃದಯ ಸಾರಿ ಸಾರಿ ಹೇಳುತ್ತಿದೆ. ಮುಂಜಾನೆ ಸಕ್ಕರೆಯ ಸವಿ ನಿದ್ದೆಯಲ್ಲೂ ನಿನ್ನದೇ ಸವಿ ಗುಂಗಲ್ಲಿ ತಲೆದಿಂಬು ಬಾಚಿಕೊಂಡು ತಬ್ಬಿ ಹೂ ಮುತ್ತು ಕೊಡುತ್ತೇನೆ. ನನ್ನಷ್ಟಕ್ಕೆ ನನಗೆ ನಾಚಿಕೆಯಾಗಿ ಮುಗಳ್ನಗುತ್ತೇನೆ. ಅರೆ! ಇಂಥ ಆಸೆಗಳು, ಈ ಹೃದಯದ ಸುತ್ತಲೂ ಕಣ್ಗಾವಲು ಇಟ್ಟು ಕಾಯುತ್ತಿರುವಾಗಲೂ ಅದಾವ ಮೂಲೆಯಿಂದ ಬರುತ್ತಿವೆಯೋ ಗೊತ್ತಾಗುತ್ತಿಲ್ಲ. ಮಿಂಚನ್ನು ಮೀರಿಸುವ ನಿನ್ನ ಕಂಗಳ ಹೊಳಪು ನೆನೆದಾಗ ನನ್ನ ಮನದಲ್ಲಿ ಮಿಂಚಿನ ಸಂಚಾರ ಶುರುವಾಗುತ್ತದೆ.
ಅದೇನು ಮೋಡಿ ಮಾಡಿರುವೆಯೋ ಕಿರುಬೆರಳಲ್ಲಿ ಕಿರುಬೆರಳ ಜೋಡಿಸಿ ಕುಣಿಯುವಾಸೆ ಬೆಂಬಿಡದೇ ಕಾಡುತ್ತಿದೆ. ಎದೆಯಲ್ಲಿ ಒಲವಿನ ಜೋಕಾಲಿ ಜೀಕುವಂತೆ ಮಾಡಿದ ಜಾದೂಗಾರ ನೀನು. ತಂಗಾಳಿಯ ನೆಪದಲ್ಲಿ ನನ್ನ ಕೆನ್ನೆ ಮೇಲೆ ಮುತ್ತಿಡುವ ಮುಂಗುರುಳಿಗೂ ನಿನ್ನ ಬೆರಳುಗಳಾಟ ಬೇಕೆಂದು ಹಟ ಹಿಡಿದಿವೆ.
ಹೃದಯವನ್ನು ಹೀಗೆ ಕದ್ದು ಬಿಟ್ಟು ಹಾರಾಡುವ ಚಿಟ್ಟೆಯನ್ನು ಎದೆಯಲ್ಲಿ ಬಿಟ್ಟು ದೂರ ನಡೆದರೆ ಈ ಹೆಣ್ಣು ಜೀವ ತಾಳಿಕೊಳ್ಳುವುದಾದರೂ ಹೇಗೆ ಹೇಳು ಗೆಳೆಯ.?
ಚಂದಿರನ ಸೋಲಿಸುವ ನಿನ್ನ ಚೆಂದದ ನಗು ನಿದಿರೆಯನ್ನೂ ಕದ್ದೊಯ್ದಿದೆ. ಪ್ರತಿ ಉಸಿರಿನಲ್ಲಿಯೂ ನಿನ್ನದೇ ಒಲವಿನ ಹೊಸ ರಾಗ ಪಿಸುಗುಡುತಿದೆ. ಪುಸ್ತಕದ ಕೊನೆ ಪುಟದಲ್ಲಿ ನನ್ನ ನಿನ್ನ ಹೆಸರನು ಕೂಡಿಸಿ ಕೂಡಿಸಿ ಗೀಚುತಿರುವೆ.ಗೆಳತಿಯರು ನಿನ್ನ ಹೆಸರಿನಿಂದ ನನ್ನ ಛೇಡಿಸಿದರೆ ಸಾಕು ಕೆನ್ನೆಗಳು ರಂಗೇರುತ್ತವೆ. ದೇಹದ ಬಿಸಿ ಏರಿಸುವ ಎಲ್ಲ ಆಸೆಗಳ ರಾಶಿ ರಾಶಿಯಾಗಿ ನಿನ್ನ ಮುಂದೆ ಸುರಿದು ಒಮ್ಮೆ ತೀರಿಸಿಕೊಂಡು ಬಿಡಬೇಕೆಂದು ತುಂಟ ಹೃದಯ ಢವಗುಟ್ಟಿ ಹೇಳುತ್ತಿದೆ.
ಸಲುಗೆಯಿಂದ ನಿನ್ನ ಕೈಯನ್ನು ಬಿಗಿಯಾಗಿ ಒತ್ತಿ ಹಿಡಿದು ಕನಸುಗಳ ಸಾಲು ಸಾಲಾಗಿ ನಿಲ್ಲಿಸಿ ಒಂದೊಂದನ್ನೇ ಹೇಳಿ ಬಿಡಬೇಕೆನಿಸುತಿದೆ.
ಮೊದಲ ಭೇಟಿ ನೆನದರಂತೂ ಅಮಲು ಮಿತಿ ಮೀರಿದಷ್ಟು ಏರಿ ಬಿಡುತ್ತದೆ. ನಿನ್ನೆದೆಯ ಮೇಲಿನ ರೋಮಗಳ ಜೊತೆ ಹಾಯಾಗಿ ಆಟವಾಡುತ್ತ ಚಿಕ್ಕದೊಂದು ಎಳೆ ರಂಗೋಲಿ ಹಾಕಿ ಬಿಡುವ ಕನಸನ್ನು ನನ್ನ ಕಣ್ಣು ಅದೆಷ್ಟು ದಿನಗಳಿಂದ ತನ್ನ ರೆಪ್ಪೆಯಲ್ಲಿ ಜತನದಿಂದ ಕಾಪಿಟ್ಟುಕೊಂಡು ಬರುತ್ತಿದೆ.
ಜೀವನದ ಗಹನ ವಿಚಾರಗಳಿಗೆ ಪ್ರತಿಕ್ರಿಯಿಸುವ ತಾಳ್ಮೆ ನನ್ನ ಮನಸ್ಸಿಗಿಲ್ಲ. ಅದು ನಿನ್ನ ಅನುರಾಗದ ಸಾಗರದಲ್ಲಿ ಮುಳುಗೇಳುತಿದೆ. ಮಿಡಿವ ಹೃದಯಕೆ ನಿನ್ನದೊಂದೇ ಜಪವಾಗಿ ಹೋಗಿದೆ. ನೂರು ನೂರು ರಸಗವಿತೆಗಳ ನಿನಗೆ ಹೇಳಲೆಂದೇ ಕೂಡಿಟ್ಟಿದ್ದೇನೆ. ಅಕಸ್ಮಾತ್ತಾಗಿ ನೀನೀಗ ಸಿಕ್ಕು ಬಿಟ್ಟರೆ ಇರುಳಲ್ಲಿ ಕಂಡ ಬೆಳದಿಂಗಳ ಕಿರುನಗೆ ಕಾಣುವೆ. ನಿನ್ನ ಕೈ ಹಿಡಿದು ಒಲವಿನ ದಾರಿಯಲಿ ಪಿಸುಮಾತುಗಳಾಡುತ ಹೆಜ್ಜೆ ಹಾಕುವೆ.
ಹೊಸ ಕನಸುಗಳ ನಿನ್ನೆದೆಯಲಿ ಬಿತ್ತುವೆ ಗೆಳೆಯ.
ಅದೇನೋ ಗೊತ್ತಿಲ್ಲ ನಿನ್ನ ಕಂಡಾಗ ಮೈ ಮನದಲ್ಲಿ ಸಂತೋಷದ ಹೊನಲು ಹರಿಯುತ್ತದೆ. ಹೃದಯದ ವೀಣೆಯನು ನೀನು ಹಿತವಾಗಿ ಮೀಟಿದಂಥ ಭಾವ. ಪ್ರೀತಿಯಲ್ಲಿ ಬಿದ್ದ ಮೇಲೆ ಸಾವಿರ ಸಾವಿರ ಬಯಕೆಗಳ ಮಾಲೆಗಳ ಪರಿಮಳ ಹೀಗೆ ಕಾಡುವದೆಂದು ಕೇಳಿದ್ದೆ. ಈಗ ಆ ಪುಳಕದ ಅನುಭವ ಆಗುತ್ತಿದೆ ಗೆಳೆಯ. ಈ ಜೀವ ಸೋತಿದೆ.ನೀನು ಮರೆಯಾದಾಗಿನಿಂದ ನೋವು ಮನೆ ಮಾಡಿದೆ. ನಿನಗೂ ಗೊತ್ತು ನಿನ್ನಾಸೆ ನನ್ನಾಸೆ ಎಂದೆಂದಿಗೂ ಒಂದೇ ಎಂದು. ನನ್ನ ಜೀವನದ ಕಣ್ಣು ನೀನು. ನೀನಿರದಿರೆ ಬಾಳೇ ಕುರುಡು. ತನು ಮನವೆಲ್ಲ ನಿನ್ನ ಕಣ್ಣ ಮಿಂಚಲಿ ತೇಲುತಿದೆ. ದಿನೇ ದಿನೇ ನಿನ್ನ ಮೋಹ ಅತಿಯಾಗುತಿದೆ.
ಅದೊಂದು ಸಂಜೆ, ಜೊತೆಯಲ್ಲಿ ಹಾಸ್ಯ ನಗೆಯಲ್ಲಿ ಹೊತ್ತು ಸರಿದಿದ್ದೇ ತಿಳಿಯಲಿಲ್ಲ. ನಿನ್ನ ಮಗುವಿನಂಥ ಮನ ರಸಕಾವ್ಯದಂಥ ಯೌವ್ವನದಲ್ಲಿ ಬೆರೆತು ಮೈ ಮರೆತು ಬಿಟ್ಟೆ. ‘ಅಗಲಿ ನಿನ್ನನು ಬಾಳಲಾರೆನು,’ ಎಂದು ನಿನ್ನ ಹರವಾದ ಎದೆಯ ಮೇಲೊರಗಿ,ಹೇಳಲಾಗದ ಸುಖ ಅನುಭವಿಸುತ, ಎದೆಯಾಳದಿಂದ ಗುನುಗಿದೆ. ನಿನ್ನ ಹೃದಯವೂ ಅದೇ ರಾಗವನ್ನು ಮಿಡಿಯುತ್ತಿತ್ತು. .ನಿನ್ನ ನನ್ನ ಮೈ ಸೋಕಿದವು. ಇನ್ನೂ ನೀನು ಬಳಿ ಬಂದು ‘ನೀನೇ ನೀನೇ ಇನ್ನೆಲ್ಲ ಬೇರೆ ಏನು ಬೇಕಿಲ್ಲ.’ ಎಂದು ಮೆಲ್ಲನೇ ಕಿವಿ ಕಚ್ಚಿ ನುಡಿದಾಗ ನನ್ನ ಮೈ ಬಿಸಿ ಏರತೊಡಗಿತು.ಹಿತವೆನಿಸ ತೊಡಗಿತು.ಆದರೂ ಮನದಲ್ಲೇನೋ ಹೊಸ ಭಯ ತುಂಬಿ ನಸು ನಾಚಿದೆ. ಹೂ ಮಂಚದ ಕನಸು ಕಣ್ಣಲ್ಲಿ ಮೂಡತೊಡಗಿತು.
ಮುತ್ತಲ್ಲೇ ನನ್ನನ್ನು ಶೃಂಗರಿಸುತ್ತಿದ್ದ ಮಧುರ ಅನುಭೂತಿಗೆ ಒಳಗಾಗಿ ತಪ್ಪುತ್ತಿರುವ ಎದೆ ತಾಳಕೆ ಹೆದರಿದೆ. ಓಡಿ ಹೋಗುತ್ತಿದ್ದ ನನ್ನ ಕೈಯನು ಗಟ್ಟಿಯಾಗಿ ಹಿಡಿದು, ‘ಹೆದರಿಕೆ ಏಕೆ ಜಿಂಕೆ ನಾ ಬಳಿ ಇರುವಾಗ.’ ಎಂದೆ.
ಅಂದಿನಿಂದ ಹುಸಿ ಮುನಿಸು ನಿನಗೆ. ಹೊಸ ಬಾಳಿನ ಹೊಸ್ತಿಲು ತುಳಿಯುವ ಮುನ್ನ ಹೊಸ ಜೀವಕೆ ಜೀವ ನೀಡುವುದು ಸರಿಯಲ್ಲ. ಇದೆಲ್ಲ ಚೆನ್ನ ಅಲ್ಲ. ಸುಖಾಂತವೂ ಅಲ್ಲ. ಹೀಗೆ ಕ್ಷಣ ಸುಖಕೆ ಮನಸೋತು ಅದೆಷ್ಟೋ ಜೀವಗಳು ಜೀವ ಕಳೆದುಕೊಂಡಿರುವುದನ್ನು ನೋಡಿರುವೆ. ವಿದ್ಯಾವಂತರಾದ ನಾವೇ ಹೀಗೆ ಕಾಲು ಜಾರಿ ಜೀವನಕ್ಕೆ ಗಾಯ ಮಾಡಿಕೊಂಡರೆ ಹೆತ್ತವರ ನೊವು ಕೇಳುವವರಾರು? ನಮ್ಮಿಂದ ಸಮಾಜದ ಸ್ವಾಸ್ಥ್ಯವೂ ಹದಗೆಡುತ್ತದೆ ಅಲ್ಲವೇ? ಹೀಗಾಗಿ ನಿನ್ನಿಂದ ಪಾರಾಗಿ ಓಡಿದೆ. ಗೆಳೆಯ. ಇದೆಲ್ಲವೂ ನಿನಗೂ ಗೊತ್ತು. ತಿಳಿದೂ ತಿಳಿದು ತಪ್ಪು ಮಾಡುವುದು ತರವಲ್ಲ ಆದರೆ,ಮುಂದೆ ಇಂಥದೊಂದು ವಿರಹ ಕಾಡುತ್ತದೆಂದು ಊಹಿಸಿಯೇ ಇರಲಿಲ್ಲ
ಇನಿಯ ಹಗಲಲ್ಲಿ ಇರುಳಲ್ಲಿ ನಿನ್ನ ನೆನಪಲ್ಲಿ ನೊಂದು ಹೋಗಿರುವೆ. ತಪ್ಪು ತಿಳಿಯಬೇಡ ಎಂದೆಂದಿಗೂ ನಾ ನಿನ್ನವಳೆ. ಮರಿದುಂಬಿಯಾಗಿ ಈ ಜೇನನು ಸವಿಯುವ ಹಕ್ಕು ನಿನಗೆ ಮಾತ್ರ ಇರೋದು.
ಹಡೆದವ್ವನ ಮುಂದೆ ನಮ್ಮೀರ್ವರ ಒಲವ ಹೇಳಿರುವೆ. ಅಪ್ಪನ ಒಪ್ಪಿಗೆಯೂ ಸಿಕ್ಕಿದೆ. ತಡವೇಕೆ ಜೇನ ಹೊಳೆಯಲಿ ತೇಲುವ ಸಮಯ ಹತ್ತಿರ ಬರುತಿದೆ. ನಿನ್ನಾಸೆಯಂತೆ ನಿನ್ನ ತೋಳಲಿ ಸೆರೆಯಾಗುವೆ. ಮತ್ತೇರಿ ತೂರಾಡುತಿಹ ಒಡಲಿಗೆ ಆಸರೆಯಾಗಲು ಬಾ ಗೆಳೆಯ.ತಲೆ ತುಂಬ ಘಮ ಘಮಿಸುವ ಮಲ್ಲಿಗೆ ರೋಜಾ ಮುಡಿದು, ಒಲವ ಹಣತೆ ಹಚ್ಚಲು ತುದಿಗಾಲಲ್ಲಿ ನಿಂತಿರುವೆ. ಹೂವಲ್ಲಿ ಗಂಧ ಸೇರಿದಂತೆ ನಾವು ಸೇರಿ ದೇಹ ಹಂಚಿಕೊಳ್ಳೋಣ.
‘ಮಿಂಚಿರಲಿ ಮಳೆ ಹನಿಯಿರಲಿ ಪ್ರಣಯ ಸಾಗುತಲಿರಲಿ.’ ಎಂಬ ನಿನ್ನ ಹೊನ್ನಾಸೆ ಪೂರೈಸಲು ಕಾದಿರುವೆ ಹುಸಿಗೋಪ ಬಿಟ್ಟು ಬಾ ಇನಿಯ.
ಇಂತಿ ನಿನ್ನ ಪ್ರಣಯದೊಡತಿ
ಜಯಶ್ರೀ.ಜೆ. ಅಬ್ಬಿಗೇರಿ
Super. CONGARATULATIONS. Good. Night.