ಭಾರತ ಭಾಗ್ಯವಿಧಾತನಿಗೆ ನಮನ-ರಮೇಶ್.ಎಮ್. ಗೋನಾಲ್.

ವಿಶೇಷ ಲೇಖನ

ರಮೇಶ್.ಎಮ್. ಗೋನಾಲ್.

ಭಾರತ ಭಾಗ್ಯವಿಧಾತನಿಗೆ ನಮನ


ಆಮಿಷಕ್ಕೆ ಸತ್ತುದು ಕೋಟಿ
ಹೊನ್ನು ಹೆಣ್ಣು ಮಣ್ಣಿಂಗೆ ಸತ್ತುದು ಕೋಟಿ.
ಗುಹೇಶ್ವರಾ ನಿಮಗಾಗಿ ಸತ್ತವರನಾರನೂ ಕಾಣೆ.


ಅಂದು ಅಲ್ಲಮ ಪ್ರಭುಗಳು ಅನುಭಾವದ ಹಿನ್ನೆಲೆಯಲ್ಲಿ ನಿನಗಾಗಿ ಸತ್ತವರನಾರು ಕಾಣೆ ಗುಹೇಶ್ವರ ಎಂದು ಮಾರ್ಮಿಕವಾಗಿ ಹೇಳಿದ್ದಾರೆ. ಇದನ್ನು ನಾವು ‘ದೇಶ’ ಕ್ಕೆ ಆಪಾದಿಸಿ ನೋಡಿದಾಗ ಸುಭಾಷ್ ಚಂದ್ರ ಬೋಸ್, ಮಹಾತ್ಮ ಗಾಂಧೀಜಿ,ಡಾ.ಬಿ‌.ಆರ್.ಅಂಬೇಡ್ಕರಂತಹ ಇನ್ನು ಮುಂತಾದ ಅನೇಕ ಮಹನೀಯರು ದೇಶಕ್ಕಾಗಿ ಇಡೀ ಜೀವನವೇ ಮುಡಿಪಾಗಿಟ್ಟಿದ್ದು ನಮ್ಮ ಕಣ್ಣ ಮುಂದೆ ಬರುತ್ತದೆ.
‘ದೇಶ’ ಅಂದರೆ ಅರ್ಥಾತ್ ಇಲ್ಲಿ ಜನರು. ತೆಲುಗು ಕವಿ ಗುರುಜಾಡ ಆಪ್ಪರಾವ್ ಹೇಳುವ “ದೇಶಮಂಟೆ ಮಟ್ಟಿಕಾದು ದೇಶಮಂಟೆ ಮನುಷಲೈ” ಎಂಬ ಮಾತನ್ನು ಸ್ಮರಿಸಬಹುದು.
ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ‘ವಿಶ್ವ ಕಂಡ ಮಹಾಜ್ಞಾನಿ’ ‘ಸಾಮಾಜಿಕ ಚಿಂತಕ’ ‘ಮಹಾ ಮಾನವತಾವಾದಿ’, ಮುಂತಾಗಿ ಇಡೀ ಜಗತ್ತೇ ಗುರುತಿಸಿದೆ. ಆದರೆ ಭಾರತದ ಸಂದರ್ಭದಲ್ಲಿ ಕೆಲವು ಸಂಕುಚಿತ ಮನಗಳು ಸಂಚಿನಿಂದ ಅಂದಿನಿಂದ ಇಂದಿನವರೆಗೂ ಸಹ ‘ಅಸ್ಪೃಶ್ಯರ ವಿಮೋಚಕ’, ‘ದಲಿತರ ನಾಯಕ’ ಎಂದು ಬಿಂಬಿಸುತ್ತಲೇ ಬರುತ್ತಲಿವೆ. ಇನ್ನೂ ಭಾರತದ ಸ್ವಾತಂತ್ರ್ಯದ ಹೋರಾಟದ ಸಂದರ್ಭದಲ್ಲಿ ಅಂಬೇಡ್ಕರ್ ರವರು ಇತರ ಸ್ವಾತಂತ್ರ್ಯ ಹೋರಾಟಗಾರರ ಜೊತೆಗೆ ತಮ್ಮ ತಾತ್ವಿಕ ಭಿನ್ನಾಭಿಪ್ರಾಯದಿಂದ ಬೆರೆಯದ ಕಾರಣಕ್ಕೆ ಅವರು ಸ್ವಾತಂತ್ರ್ಯ ಹೋರಾಟಗಾರರಲ್ಲ, ‘ಬ್ರಿಟಿಷರ ಏಜೆಂಟ್’ ಎಂದು ಸುಳ್ಳು ಸುದ್ದಿ ಹಬ್ಬಿಸಿದ್ದು ಇಂತಹುದೇ ಜಾತಿವಾದಿ ಮನಸ್ಥಿತಿಗಳೆಂದರೆ ಸುಳ್ಳಲ್ಲ!.
ಭಾರತದ ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಬಹುತೇಕ ಸ್ವಾತಂತ್ರ್ಯ ಹೋರಾಟಗಾರ ಉದ್ದೇಶ ದೇಶವನ್ನು ಬ್ರಿಟೀಷರ ಕಪಿಮುಷ್ಟಿಯಿಂದ ಮುಕ್ತಗೊಳಿಸುವುದು ಮಾತ್ರವಾಗಿತ್ತು. ಭಾರತ ದೇಶದಲ್ಲಿ ಆಂತರಿಕವಾಗಿ ನೆಲೆಯೂರಿರುವ ಜಾತಿ, ಅಸ್ಪೃಶ್ಯತೆಯಂತಹ ಸಾಮಾಜಿಕ ಪಿಡುಗುಗಳ ಕುರಿತು ಯಥಾವತ್ತಾದ ಮನೋಭಾವ ಉಳ್ಳವರಾಗಿದ್ದರು. ಆದರೆ ಡಾ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸ್ವಾತಂತ್ರ್ಯ ಹೋರಾಟದ ಮಾರ್ಗ ಉಳಿದ ಸ್ವಾತಂತ್ರ್ಯ ಹೋರಾಟಗಾರರಿಗಿಂತ ಭಿನ್ನವಾಗಿತ್ತಲ್ಲದೇ, ಅವರು ಬ್ರಿಟಿಷರ ಆಡಳಿತದಿಂದ ಭಾರತವನ್ನು ಬಿಡುಗಡೆಗೊಳಿಸುದು ಮಾತ್ರವಲ್ಲದೇ, ಭಾರತದ ಸ್ವಾತಂತ್ರ್ಯದ ತರುವಾಯ ಸಮಾನತೆ, ಸಾಮಾಜಿಕ ನ್ಯಾಯದ ಹಿನ್ನೆಲೆಯಲ್ಲಿ ಪುನರ್ ನಿರ್ಮಾಣ ಮಾಡುವ ಆಕಾಂಕ್ಷೆ ಹೊಂದಿದ್ದರು.


ಡಾ .ಬಾಬಾ ಸಾಹೇಬ್ ಅಂಬೇಡ್ಕರ್ ಅವರು ೧೯೩೦ ಆಗಸ್ಟ್ ೦೮ ನಾಗಪುರದಲ್ಲಿ ನಡೆದ “ಅಖಿಲ ಭಾರತ ದಮನಿತ ವರ್ಗಗಳ ಸಮ್ಮೇಳನದ ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ “ಭಾರತದಲ್ಲಿರುವ ಜಾತಿ-ಜನಾಂಗ, ಧರ್ಮ ಮತ್ತು ಭಾಷೆಯ ಅನೇಕತೆಗಳು ಇಲ್ಲಿಯ ವೈವಿಧ್ಯತೆಯನ್ನು ಸಾರುತ್ತವೆಯೇ ವಿನಾಃ ಅವು ಎಂದೂ ಭಾರತದ ಸ್ವಾತಂತ್ರ್ಯದ ದಾರಿಯಲ್ಲಿ ಅಡ್ಡಿಯಾಗಲಾರವು,ಭಾರತದ ಬಡತನಕ್ಕೆ ಇಲ್ಲಿಯ ಅಸಂಖ್ಯಾತರ ದುಸ್ಥಿತಿಗೆ ಬ್ರಿಟಿಷರೇ ಕಾರಣರಾಗಿದ್ದಾರೆ‌. ಅಸ್ಪೃಶ್ಯರ ಮೇಲಿನ ಭಾರವನ್ನು ಕಡಿಮೆ ಮಾಡಲು ಶೋಷಿತ ರೈತಾಪಿಗಳ ಹಾಗೂ ದಯನೀಯ ಸ್ಥಿತಿಯಲ್ಲಿರುವ ಕಾರ್ಮಿಕರ ಬದಲಾವಣೆ ತಪ್ಪಿಸಲು ಬ್ರಿಟಿಷ್ ಸರ್ಕಾರ ಏನೂ ಮಾಡುತ್ತಿಲ್ಲ“ ಎಂದು ಕಟುವಾಗಿ ಟೀಕಿಸಿದ್ದರು. ಅಲ್ಲದೆ “ಬ್ರಿಟಿಷರೇನೋ ನನ್ನ ವೈರಿಗಳು ಹೌದು, ಅಂತೆಯೇ ಮೇಲ್ಜಾತಿಯ ರಾಷ್ಟ್ರೀಯವಾದಿಗಳು ನನ್ನ ಶತ್ರುಗಳೇ ಆಗಿದ್ದಾರೆ.” ಎಂದು ಹೇಳುತ್ತಿದ್ದರು. ೧೯೩೦ ರ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಈ ಭಾಷಣವು ಅವರು ಒಬ್ಬ ಪಕ್ಕ ರಾಷ್ಟ್ರೀಯವಾದಿ ಎಂಬುದನ್ನು ತೊರಿಸಿಕೊಟ್ಟಿತು ಎಂದು ಅಂಬೇಡ್ಕರ್ ಅವರ ಬದುಕು-ಬರಹ, ಹೋರಾಟ-ಚಿಂತನೆಗಳ ಕುರಿತು ಸಂಶೋಧನೆ ಮಾಡಿದ ಗೇಲ್ ಆಮ್ ವೆಡ್ಟ್ ರವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇನ್ನು ದಲಿತರಿಗೆ ವರವಾಗಲಿದ್ದ ‘ಪೂನಾ ಒಪ್ಪಂದ’ ವನ್ನು
ಮಹಾತ್ಮ ಗಾಂಧೀಜಿಯವರು ಅಮರಣಾಂತ ಉಪವಾಸದಿಂದ ತಪ್ಪಿಸಿ, ಸಮಗ್ರ ದೇಶದ ಹಿತದೃಷ್ಟಿಯಿಂದ ಉಳಿಸಿಕೊಂಡದ್ದು ಬಾಬಾಸಾಹೇಬರ ರಾಷ್ಟ್ರ ಪ್ರೇಮಕ್ಕೆ ಸಾಕ್ಷಿಯಲ್ಲವೇ?!
ಹೀಗೆ ಬಾಬಾಸಾಹೇಬರು ಸ್ವಾತಂತ್ರ್ಯ ಹೋರಾಟದಲ್ಲಿ ವಿಶಿಷ್ಟ ಪಾತ್ರ ವಹಿಸಿರುವುದು ಚರಿತ್ರೆಯ ಮೂಲಕ ತಿಳಿಯಬಹುದಾಗಿದೆ.

……………
ಇಂತಹ ಮಹಾನ್ ಚೇತನಕ್ಕೆ ನಮ್ಮ ನಮನಗಳು ಸಲ್ಲಿಸುತ್ತ ಈ ನೆಪದಲ್ಲಾದರೂ ಮತ್ತೆ ಮತ್ತೆ ಬಾಬಾಸಾಹೇಬ್ ರನ್ನು ಓದಿನ ಮೂಲಕ ಎದುರುಗೊಳ್ಳೋಣ….

“ಇತಿಹಾಸ ಮರೆತವರು ಇತಿಹಾಸ ಸೃಷ್ಟಿಸಲಾರರು”

————————————–

ರಮೇಶ್.ಎಮ್. ಗೋನಾಲ್

One thought on “ಭಾರತ ಭಾಗ್ಯವಿಧಾತನಿಗೆ ನಮನ-ರಮೇಶ್.ಎಮ್. ಗೋನಾಲ್.

Leave a Reply

Back To Top