“ಮೆಟ್ರಿಕ್ ಮೇಳ” ಮಕ್ಕಳ ಕಲಿಕೆಯಲ್ಲಿ ಒಂದು ಹೊಸ ಹಾದಿ ಲೇಖನ-ಹೆಚ್.ಕೆ. ಪುಷ್ಪಲತಾ

ಶಿಕ್ಷಣ ಸಂಗಾತಿ

“ಮೆಟ್ರಿಕ್ ಮೇಳ”

ಮಕ್ಕಳ ಕಲಿಕೆಯಲ್ಲಿ

ಒಂದು ಹೊಸ ಹಾದಿ

ಹೆಚ್.ಕೆ. ಪುಷ್ಪಲತಾ

ಶಿಕ್ಷಣ ಒಂದು ಜ್ಞಾನ ದೀವಿಗೆ, ಇಂದಿನ ಶೈಕ್ಷಣಿಕ ವ್ಯವಸ್ಥೆಯಲ್ಲಿ ಕಲಿಕಾ ಪ್ರಕ್ರಿಯೆ ನಿರಂತರವಾಗಿದ್ದು ಸದಾ ಒಂದಿಲ್ಲೊಂದು ಚಟುವಟಿಕೆಗಳಿಂದ ಕೂಡಿರುತ್ತದೆ. ಇಂದು ‘ಅಂಕಗಳ ಗಳಿಕೆಯೊಂದೇ ಮಗುವಿನ ಅಂತಿಮ ಗುರಿಯಲ್ಲ’ ಎಂಬುದನ್ನು ಮನವರಿಕೆ ಮಾಡಿಕೊಡುವುದು ಬಹಳ ಮುಖ್ಯವಾಗಿದೆ.

ಕಳೆದ ಎರಡು ಮೂರು ವರ್ಷಗಳಿಂದ ಕೋವಿಡ್ ಮಹಾಮಾರಿಯ ಕಾರಣದಿಂದ ಮಕ್ಕಳಲ್ಲಿ ಕಲಿಕೆಯ ಕೊರತೆಯುಂಟಾಗಿರುವುದು ಎಲ್ಲರಿಗೂ ತಿಳಿದ ವಿಷಯವಾಗಿದೆ. ಜೊತೆಗೆ ಮಕ್ಕಳಲ್ಲಿ ಕಲಿಕಾ ಆಸಕ್ತಿಯೂ ಕಡಿಮೆಯಾಗಿದೆ. ಮಕ್ಕಳ ಕಲಿಕಾ ಕೊರತೆ ನೀಗಿಸಲು ವಿಶಿಷ್ಟ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಮಕ್ಕಳ ಕಲಿಕಾ ಮಟ್ಟ ಮತ್ತು ಕಲಿಕಾ ಆಸಕ್ತಿಯನ್ನು ಹೆಚ್ಚಿಸುವ ದೃಷ್ಟಿಯಿಂದ ಹಾಸನ ಜಿಲ್ಲೆಯಲ್ಲಿ ಪ್ರತಿ ಮಾಹೆ ವಿಶೇಷ ಮತ್ತು ವಿಶಿಷ್ಟ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. 2023-24ನೇ ಸಾಲನ್ನು ಸರ್ಕಾರವು ‘ಗುಣಾತ್ಮಕ ಶೈಕ್ಷಣಿಕ ವರ್ಷ’ ಎಂದು ಘೋಷಿಸಿರುವ ಹಿನ್ನೆಲೆಯಲ್ಲಿ ಹಾಸನ ಜಿಲ್ಲೆಯಲ್ಲಿ ಮಕ್ಕಳ ಕಲಿಕಾ ಕೊರತೆಯನ್ನು ಹೋಗಲಾಡಿಸುವ ದೃಷ್ಟಿಯಿಂದ ಎಲ್ಲಾ ಅನುಷ್ಠಾನಾಧಿಕಾರಿಗಳ ಸಹಕಾರದೊಂದಿಗೆ ಮಾಹೆವಾರು ವಿವಿಧ ಕಾರ್ಯಕ್ರಮಗಳನ್ನು ರೂಪಿಸಿ ಅನುಷ್ಠಾನಗೊಳಿಸಲಾಗುತ್ತಿದೆ. ಜೂನ್ ಮಾಹೆಯನ್ನು ಸೇತುಬಂಧ ಮಾಸವಾಗಿ, ಜುಲೈ, ಮಾಹೆಯನ್ನು ಎಫ್.ಎಲ್ ಎನ್. ಮಾಸವಾಗಿ, ಆಗಸ್ಟ್ ಮಾಹೆಯನ್ನು ಭಾಷಾ ಮಾಸವಾಗಿ ಯಶಸ್ವಿಯಾಗಿ ಆಚರಿಸಲಾಗಿದೆ. ಸೆಪ್ಟೆಂಬರ್ ಮಾಹೆಯನ್ನು ಸಂದರ್ಶನ ಮಾಸವಾಗಿ ಯಶಸ್ವಿಯಾಗಿ ಆಚರಿಸಲಾಗಿದೆ. ಅದೇ ರೀತಿ ನವೆಂಬರ್ ಮಾಹೆಯಲ್ಲಿ ಗಣಿತ ಮಾಸಾಚರಣೆ ಮತ್ತು ಮೆಟ್ರಿಕ್ ಮೇಳ, ಡಿಸೆಂಬರ್ ಮಾಹೆಯಲ್ಲಿ ತಪಾಸಣಾ ಮಾಸಾಚರಣೆ, ಜನವರಿ-24 ಮಾಹೆಯನ್ನು ಇಂಗ್ಲಿಷ್ ಫೆಸ್ಟ್ ಮತ್ತು ಫೆಬ್ರವರಿ ಮಾಹೆಯಲ್ಲಿ ವಿಜ್ಞಾನ ಮಾಸಾಚರಣೆಯನ್ನಾಗಿ ಆಚರಿಸಲು ಯೋಜಿಸಲಾಗಿದೆ.

ನವೆಂಬರ್-23ರ ಮಾಹೆಯನ್ನು ಗಣಿತ ಮಾಸವನ್ನಾಗಿ ಆಚರಿಸಲಾಗುತ್ತಿದ್ದು, ಮಕ್ಕಳಿಗೆ ಗಣಿತದ ಪರಿಕಲ್ಪನೆಗಳನ್ನು ಮೂಡಿಸಲು ದಿನವಹಿ ಚಟುವಟಿಕೆಗಳ ಸಾಹಿತ್ಯವನ್ನು ರಚಿಸಿ ಶಾಲೆಗಳಿಗೆ ಸಾಹಿತ್ಯವನ್ನು ಹಂಚಿಕೊಳ್ಳಲಾಗಿದೆ. ಮಾಹೆಯ ಅಂತ್ಯದಲ್ಲಿ ಒಂದು ವಿನೂತನ, ವಿಭಿನ್ನ, ವಿಶಿಷ್ಟ ಹಾಗೂ ವೈವಿಧ್ಯಮಯ ಕಾರ್ಯಕ್ರಮವಾದ ಮೆಟ್ರಿಕ್ ಮೇಳವನ್ನು ಮೌಲ್ಯಮಾಪನ ಚಟುವಟಿಕೆಯಾಗಿ ಆಯೋಜಿಸಲಾಗುತ್ತಿದೆ. ಮೆಟ್ರಿಕ್ ಮೇಳವನ್ನು ವಿಶಿಷ್ಟ ಹಾಗೂ ವಿನೂತನವಾಗಿ ಆಚರಿಸುತ್ತಿದ್ದು ಇದಕ್ಕಾಗಿ ಸಾಹಿತ್ಯವನ್ನು ಸಂಪನ್ಮೂಲ ಶಿಕ್ಷಕರ ತಂಡದಿಂದ ಸಿದ್ಧಪಡಿಸಿ ಸಾಫ್ಟ್ ಪ್ರತಿಯನ್ನು ಪ್ರತಿ ಶಾಲೆಗೆ ನೀಡಲಾಗಿದೆ. ಮೆಟ್ರಿಕ್ ಮೇಳದ ಮೂಲಕ ಮಕ್ಕಳ ಕಲಿಕೆಯನ್ನು ಅವರಿಗೆ ಅರಿವಿಲ್ಲದಂತೆ ಮೌಲ್ಯಮಾಪನ ಮಾಡಲು ಸಾಹಿತ್ಯದಲ್ಲಿ ಚಟುವಟಿಕೆಗಳನ್ನು ನೀಡಲಾಗಿದೆ. ಗಣಿತದ ಕಲಿಕಾಫಲಕ್ಕೆ ಪೂರಕವಾಗಿರುವಂತೆ ಸದರಿ ಚಟುವಟಿಕೆಗಳನ್ನು ಸಿದ್ಧಪಡಿಸಲಾಗಿದೆ.

ಗಣಿತ ವಿಷಯವನ್ನು ‘ಕಬ್ಬಿಣದ ಕಡಲೆ’ ಎಂದು ಕೆಲವರು ಬಿಂಬಿಸುತ್ತಾರೆ. ಆದರೆ ಗಣಿತ ಕಲಿಕೆಯೂ ಸಂತಸ ದಾಯಕ ಎಂಬುದನ್ನು ನಿರೂಪಿಸುವ ಯತ್ನವನ್ನು ಈ ಮಾಸಾಚರಣೆ ಮೂಲಕ ಸಾಬೀತುಗೊಳಿಸಲು ಯತ್ನಿಸಲಾಗುತ್ತಿದೆ. 1 ರಿಂದ 9ನೇ ತರಗತಿಯವರೆಗೂ ಬರುವ ಪ್ರಮುಖ ಕಲಿಕಾಂಶಗಳನ್ನು ಇಡೀ ಮಾಹೆ ಕಲಿಸುವುದರ ಜೊತೆಗೆ ಮಕ್ಕಳಿಗೆ ಅರಿವಿಲ್ಲದಂತೆ ಮೌಲ್ಯಮಾಪನ ಚಟುವಟಿಕೆ ಕಾರ್ಯವನ್ನು ಮೆಟ್ರಿಕ್ ಮೇಳದ ಮೂಲಕ ಮಾಡಲಾಗುತ್ತಿದೆ.

ಮೆಟ್ರಿಕ್ ಮೇಳವನ್ನು ಜಿಲ್ಲೆಯ 264 ಗ್ರಾಮ ಪಂಚಾಯಿತಿಗಳಲ್ಲಿ ಏಕಕಾಲದಲ್ಲಿ ಆಯೋಚಿಸಲಾಗುತ್ತಿದ್ದು ಜೊತೆಗೆ ಪೋಷಕರ ಸಹಕಾರದಿಂದ ಮಕ್ಕಳ ಸಂತೆಯನ್ನು ನಡೆಸುವಂತೆ ಕಾರ್ಯಕ್ರಮ ರೂಪಿಸಲು ಮಾರ್ಗದರ್ಶಿಸಲಾಗಿದೆ. ಮೆಟ್ರಿಕ್ ಮೇಳದಂತಹ ವಿಶೇಷ ಕಾರ್ಯಕ್ರಮವು ವಿಭಿನ್ನ ಉದ್ದೇಶಗಳನ್ನು ಹೊಂದಿದೆ. ಗಣಿತದ ಮೂಲಭೂತ ಪರಿಕಲ್ಪನೆಗಳನ್ನು ಮಕ್ಕಳಲ್ಲಿ ಮೂಡಿಸುವುದು. ಗಣಿತದ ಪರಿಕಲ್ಪನೆಗಳ ಕಲಿಕೆಯನ್ನು ಉಂಟುಮಾಡುವುದು. ಪ್ರಾಯೋಗಿಕವಾದ ಚಟುವಟಿಕೆಯ ಆಧಾರಿತ ಕಲಿಕೆಗೆ ಆದ್ಯತೆ ನೀಡುವುದು. ತರಗತಿಯ ಕಟ್ಟ ಕಡೆಯ ಮಗುವಿಗೂ ಕಲಿಕೆಯನ್ನು ಜೀವನದಲ್ಲಿ ಅನ್ವಯಿಸಿ ಅಳವಡಿಸಿಕೊಳ್ಳುವುದು. ಅಪೇಕ್ಷಿತ ಕಲಿಕಾ ಫಲ ಆಧಾರಿತ ಕಲಿಕೆಗೆ ಆದ್ಯತೆ ನೀಡುವುದು, ಅನೌಪಚಾರಿಕ ಅಳತೆಗಳೊಂದಿಗೆ ಔಪಚಾರಿಕ ಅಳತೆಯನ್ನು ಹೋಲಿಸಿ ತಿಳಿದುಕೊಳ್ಳುವುದು, ಮಕ್ಕಳಲ್ಲಿ ವ್ಯವಹಾರ ಜ್ಞಾನವನ್ನು ಹೆಚ್ಚಿಸುವುದು.’ ಮಕ್ಕಳ ಬಾಲ್ಯದ ಆಟಗಳೊಂದಿಗೆ ಗಣಿತದ ಸಂಬಂಧವನ್ನು ಅರ್ಥೈಸುವುದು. ಮಕ್ಕಳಲ್ಲಿ ಅನುಭವಾತ್ಮಕ ಕಲಿಕೆ ಉಂಟು ಮಾಡುವುದು. ಮಕ್ಕಳಲ್ಲಿ ಗಣಿತದ ಬಗ್ಗೆ ಇರುವ ಭಯವನ್ನು ಹೋಗಲಾಡಿಸುವುದು. ಇಂತಹ ವಿಭಿನ್ನ ಉದ್ದೇಶಗಳೊಂದಿಗೆ ಪ್ರಾರಂಭವಾಗಿರುವ ಕಾರ್ಯಕ್ರಮವೇ ಈ ಮೆಟ್ರಿಕ್ ಮೇಳವಾಗಿದೆ.

ಹಾಸನ ಡಯಟ್ ಮೆಟ್ರಿಕ್ ಮೇಳವನ್ನು ವಿಶೇಷ ಒತ್ತು ನೀಡುವ ಮೂಲಕ ಕೈಗೆತ್ತಿಕೊಂಡು ಉತ್ತಮ ರೀತಿಯಲ್ಲಿ ಆಯೋಜಿಸುತ್ತಿದೆ. ಮೆಟ್ರಿಕ್ ಮೇಳದಲ್ಲಿ ಅಪೇಕ್ಷಿತ ಕಲಿಕಾ ಫಲಗಳ ಕಲಿಕೆ ಮಕ್ಕಳಿಗೆ ಅರಿವಿಲ್ಲದಂತೆ ಮನರಂಜನೆಯ ರೀತಿಯಲ್ಲಿ ಮೌಲ್ಯಮಾಪನ ಚಟುವಟಿಕೆಗಳನ್ನು ರೂಪಿಸಿ ಮೌಲ್ಯಮಾಪನ ಮಾಡಲು ಯೋಜಿಸಲಾಗಿದೆ. ಅದಕ್ಕಾಗಿ ಮೆಟ್ರಿಕ್ ಮೇಳದಲ್ಲಿ ವಿದ್ಯಾರ್ಥಿ ಗುರುತಿನ ಪತ್ರವನ್ನು ರಚಿಸಿದ್ದು ಮಕ್ಕಳ ಕಲಿಕೆಯನ್ನು ನಮೂದಿಸುವಂತೆ ವ್ಯವಸ್ಥೆ ಮಾಡಲಾಗಿದೆ. ಪೋಷಕರು ಮಕ್ಕಳು ಸಮುದಾಯ ಭಾಗವಹಿಸಿ ಈ ಕಾರ್ಯಕ್ರಮದ ಉದ್ದೇಶವನ್ನು ತಿಳಿದುಕೊಳ್ಳುವ ನಿಟ್ಟಿನಲ್ಲಿ ವ್ಯವಸ್ಥೆ ಮಾಡಲಾಗಿದೆ. ನಾಲ್ಕರಿಂದ ಏಳನೇ ತರಗತಿವರೆಗಿನ ಮಕ್ಕಳಿಗೆ ಅಂದರೆ 4ನೇ ತರಗತಿಯಲ್ಲಿ ಓದುತ್ತಿರುವ 10761 ಮಕ್ಕಳು, 5 ನೇ ತರಗತಿಯಲ್ಲಿ ಓದುತ್ತಿರುವ 11415 ಮಕ್ಕಳು 6ನೇ ತರಗತಿಯಲ್ಲಿ ಓದುತ್ತಿರುವ 7772 ಮಕ್ಕಳು ಹಾಗೂ 7ನೇ ತರಗತಿಯಲ್ಲಿ ಓದುತ್ತಿರುವ 10912 ಮಕ್ಕಳು ಒಟ್ಟಾರೆ 40860 ಮಕ್ಕಳು ಮೆಟ್ರಿಕ್ ಮೇಳ ಕಾರ್ಯಕ್ರಮಲ್ಲಿ ಇಡಿ ಜಿಲ್ಲೆಯಾದ್ಯಂತ ಒಂದೇ ದಿನಾಂಕ ಅಂದರೆ 4/12/2023 ರಂದು ಈ ಮೆಟ್ರಿಕ್ ಮೇಳ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಯೋಜನೆಯನ್ನು ರೂಪಿಸಲಾಗಿದೆ.

ಮಕ್ಕಳಲ್ಲಿ ಗಣಿತದ ಪರಿಕಲ್ಪನೆಗಳಾದ ಸಂಕಲನ, ವ್ಯವಕಲನ, ಗುಣಾಕಾರ, ಭಾಗಾಕಾರ, ಭಿನ್ನರಾಶಿ, ಸ್ಥಾನಬೆಲೆ, ಸಮಯ, ಹಣ, ಎತ್ತರ, ತೂಕ, ಉದ್ದ – ಗಿಡ್ಡ , ಔಪಚಾರಿಕ ಮತ್ತು ಅನೌಪಚಾರಿಕ ಅಳತೆಗಳು, ಹೆಚ್ಚು ಮತ್ತು ಕಡಿಮೆ, ಅಂದಾಜು ಎಣಿಕೆ, ಮಗ್ಗಿ ಹೇಳುವಿಕೆ, ಆಕೃತಿಗಳು, ಆಕೃತಿಗಳ ಜೋಡಣೆ, ಜಿಯೋ ಬೋರ್ಡ್, ಜಾಲಾಕೃತಿಗಳು, ಕ್ಯಾಲೆಂಡರ್ ಮತ್ತು ಕಾಲಗಳು, ಗಣಿತದ ಸೂತ್ರಗಳು, ಗಣಿತದ ಕಿಟ್ ಬಳಕೆ, ಸರಿ- ಬೆಸ ಸಂಖ್ಯೆಗಳು, ಬಾಯ್ದರೆ ಲೆಕ್ಕಗಳು, ಮಿಂಚು ಪಟ್ಟಿಗಳು, ಮೋಜಿನ ಗಣಿತ, ಭಾಗಲಬ್ಧ ಮತ್ತು ಅಭಾಗಲಬ್ಧ ಸಂಖ್ಯೆಗಳು ಹಾಗೂ ಲಾಭ ಮತ್ತು ನಷ್ಟ ಮುಂತಾದ ಗಣಿತದ ಪರಿಕಲ್ಪನೆಗಳ ಕಲಿಕೆಯನ್ನು ಮಕ್ಕಳಲ್ಲಿ ಉಂಟುಮಾಡಿ ತಮ್ಮ ನಿತ್ಯ ಜೀವನದಲ್ಲಿ ಗಣಿತದ ಬಳಕೆಯನ್ನು ಆನ್ವಯಿಸಿಕೊಳ್ಳುವಂತೆ ಮಾಡುವುದು ಪ್ರಮುಖ ಉದ್ದೇಶವಾಗಿದೆ.

ಕಾರ್ಯಕ್ರಮದ ಮುಖ್ಯ ಉದ್ದೇಶ ಗಣಿತದ ಮೂಲಭೂತ ಪರಿಕಲ್ಪನೆಗಳನ್ನು ಮಕ್ಕಳಲ್ಲಿ ಮೂಡಿಸುವುದು. ಮಕ್ಕಳಲ್ಲಿ ಗಣಿತದ ಪರಿಕಲ್ಪನೆಗಳ ಕಲಿಕೆ ಉಂಟುಮಾಡುವುದು. ಪ್ರಾಯೋಗಿಕವಾದ ಚಟುವಟಿಕೆಯಾಧಾರಿತ ಕಲಿಕೆಗೆ ಆದ್ಯತೆ ನೀಡುವುದು ತರಗತಿ ಕೋಣೆಯ ಕಲಿಕೆಯನ್ನು ಜೀವನದಲ್ಲಿ ಅನ್ವಯಿಸಿ, ಅಳವಡಿಸಿಕೊಳ್ಳುವುದು. ಅಪೇಕ್ಷಿತ ಕಲಿಕಾಫಲ ಆಧಾರಿತ ಕಲಿಕೆಗೆ ಆದ್ಯತೆ ನೀಡುವುದು, ಅನೌಪಚಾರಿಕ ಅಳತೆಗಳೊಂದಿಗೆ ಔಪಚಾರಿಕ ಅಳತೆಯನ್ನು ಹೋಲಿಸುವುದು. ಮಕ್ಕಳಲ್ಲಿ ವ್ಯವಹಾರ ಜ್ಞಾನವನ್ನು ಹೆಚ್ಚಿಸುವುದು ಮಕ್ಕಳ ಬಾಲ್ಯದ ಆಟಗಳೊಂದಿಗಿನ ಗಣಿತದ ಸಂಬಂದವನ್ನು ಅರ್ಥೈಸುವುದು. ಮಕ್ಕಳಲ್ಲಿ ಅನುಭವಾತ್ಮಕ ಕಲಿಕೆ ಉಂಟು ಮಾಡುವುದು.ಮಕ್ಕಳಲ್ಲಿ ಗಣಿತದ ಬಗ್ಗೆ ಇರುವ ಭಯವನ್ನು ಹೋಗಲಾಡಿಸುವುದು. ಮಕ್ಕಳಿಗೆ ಮುಂದಿನ ಜೀವನಕ್ಕೆ ವ್ಯವಹಾರಿಕ ಜ್ಞಾನ ಅತ್ಯಾವಶ್ಯಕ. ವ್ಯವಹಾರ ಜ್ಞಾನವು ಜೀವನದ ಅವಿಭಾಜ್ಯ ಅಂಗವಾಗಿದೆ ಎಂಬುದನ್ನು ಮಕ್ಕಳಿಗೆ ಮನವರಿಕೆ ಮಾಡಲು ಇದು ಸಹಕಾರಿಯಾಗಿದೆ. ಮಕ್ಕಳಿಗೆ “ಅಂಕಗಳ ಗಳಿಕೆಯೊಂದೇ ಅಂತಿಮ ಗುರಿಯಲ್ಲ” ಎಂಬುದನ್ನು ಮನವರಿಕೆ ಮಾಡಿಕೊಡುವುದು ಬಹಳ ಮುಖ್ಯವಾಗಿದೆ. ಪ್ರತಿ ನಿತ್ಯ ಮಕ್ಕಳು, ಮನೆಯವರು ಮಾಡುವ ವ್ಯವಹಾರವನ್ನು ವೀಕ್ಷಿಸುವ ಮೂಲಕ ತಾವು ಕೂಡ ವ್ಯವಹರಿಸಬೇಕೆಂಬ ಭಾವನೆ ಮಕ್ಕಳಲ್ಲಿ ಉಂಟಾಗಿರುತ್ತದೆ, ಅದಕ್ಕಾಗಿ ಮೆಟ್ರಿಕ್ ಮೇಳದ ಮೂಲಕ ಅವರಿಗೆ ಅವಕಾಶ ಮಾಡಿಕೊಟ್ಟು ಅವರ ವ್ಯವಹಾರ ಜ್ಞಾನವನ್ನು ಉತ್ತಮೀಕರಿಸ ಬಹುದಾಗಿದೆ.

ಒಟ್ಟಾರೆ ಮೆಟ್ರಿಕ್ ಮೇಳಕ್ಕೆ ಅಗತ್ಯ ಪೂರ್ವ ಸಿದ್ಧತೆ ಮಾಡಿಕೊಳ್ಳವುದು ಮೆಟ್ರಿಕ್ ಮೇಳ ನಡೆಸುವ ಎಲ್ಲಾ ಅನುಷ್ಠಾನಾಧಿಕಾರಿಗಳ ಹಾಗೂ ಗಣಿತ ಶಿಕ್ಷಕರ ಜವಾಬ್ದಾರಿಯಾಗಿದೆ. ಮೆಟ್ರಿಕ್ ಮೇಳದಲ್ಲಿ ಮೌಲ್ಯಮಾಪನಕ್ಕಾಗಿ ಐಡಿ ಕಾರ್ಡ್ ಸಿದ್ಧಗೊಳಿಸಿಕೊಳ್ಳುವುದರಿಂದ ಹಿಡಿದು ಮೌಲ್ಯ ಮಾಪನದ ಎಲ್ಲಾ ಇಪ್ಪತ್ತೈದು ಚಟುವಟಿಕೆಗಳಲ್ಲಿ ಮಕ್ಕಳನ್ನು ಭಾಗವಹಿಸುವಂತೆ ಮಾಡುವುದು ಅತ್ಯವಶ್ಯಕವಾಗಿದೆ. ವಿನೋದ ಗಣಿತಕ್ಕೆ ಚಟುವಟಿಕೆಗಳನ್ನು ಅಳವಡಿಸಬೇಕಾಗುತ್ತದೆ. ಮಕ್ಕಳೇ ಚಟುವಟಿಕೆಯನ್ನು ನಿರ್ವಹಿಸುವಂತೆ ಹಾಗೂ ಎಲ್ಲಾ ಚಟುವಟಿಕೆಗಳಲ್ಲಿ ಎಲ್ಲಾ ಮಕ್ಕಳೂ ಭಾಗವಹಿಸುವಂತೆ ಕ್ರಮ ವಹಿಸಬೇಕಾಗುತ್ತದೆ. ತನ್ಮೂಲಕ ಗಣಿತ ಮೂಲ ಪರಿಕಲ್ಪನೆಗಳನ್ನು ಮಕ್ಕಳು ಹೊಂದುವಂತೆ ಮಾಡುವುದು ಈ ಕಾರ್ಯಕ್ರಮದ ಮೂಲ ಆಶಯವಾಗಿದೆ.


ಹೆಚ್.ಕೆ. ಪುಷ್ಪಲತಾ

Leave a Reply

Back To Top