“ಕೋರ್ಟು ಕೊಠಡಿಯೊಳಗೆ” ಒಂದುನೋಟ ಡಾ. ಜಿ. ಪಿ. ಕುಸುಮಾ ಮುಂಬಯಿ

ವಿಶೇಷ ಬರಹ

ಡಾ. ಜಿ. ಪಿ. ಕುಸುಮಾ ಮುಂಬಯಿ

“ಕೋರ್ಟು ಕೊಠಡಿಯೊಳಗೆ”

ಕೋರ್ಟ್ ಕೊಠಡಿಯೊಳಗೆ  ಆಕೆಯ ಬದುಕಿನ ಪುಸ್ತಕದ ಪುಟಗಳು ಒಂದೊಂದೇ ತೆರೆಯಲ್ಪಟ್ಟವು. ಅಲ್ಲಿ ಅದೆಷ್ಟೋ ಜನರ ಬದುಕಿನ ಕಥೆಗಳು ಅನಾವರಣಗೊಳ್ಳುತ್ತವೆ. ನಂಬಲರ್ಹವಾದ,ನಂಬಲನರ್ಹವಾದ, ಅರಗಿಸಿಕೊಳ್ಳಲಾಗುವ, ಅರಗಿಸಿಕೊಳ್ಳಲಾಗದಂತಹ ಕಥೆಗಳು.

 ಹೆಣ್ಣು ಕೆಲವೊಮ್ಮೆ ಯಾವ ರೀತಿಯ ಸುಳಿಗೆ ಸಿಕ್ಕಿ ತೊಳಲಾಡುತ್ತಾಳೆ, ಯಾವ ರೀತಿ ಸುಳಿಗೆ ತಾನಾಗಿಯೇ ಬಿದ್ದು ನರಳಾಡುತ್ತಾಳೆ ಎನ್ನುವುದನ್ನು ಈ ನೆಲದಲ್ಲಿ ಊಹಿಸುವುದೂ ಕಷ್ಟ.

ಅಂದೊಮ್ಮೆ ಮುಂಬಯಿಯ ಸೆಷನ್ಸ್ ಕೋರ್ಟ್ ನ  ಕಟಕಟೆಯಲ್ಲಿ ನಿಂತವಳು 17 ವರ್ಷದ ರಂಜಿತಾ. ಆಕೆಯ ಬಗ್ಗೆ ಸ್ವಲ್ಪದರಲ್ಲಿ ಹೇಳುವುದಾದರೆ ಗೌರ ವರ್ಣದ ಸುಂದರಿ. ಎಂತಹವರೂ ಅರೆಕ್ಷಣ ನಿಂತು ಆಕೆಯತ್ತ ನೋಡುವಂತೆ ಮಾಡುವ ಆಕರ್ಷಕ ಮುಖದ ರಂಜಿತಾ ಜೀವನದಲ್ಲಿ ಎದುರಾದ ಸಂಕಷ್ಟದಲ್ಲಿ ಸೋತು ಸುಣ್ಣವಾಗಿದ್ದಾಳೆ ಎನ್ನುವುದನ್ನು ಆಕೆಯ ನಿಸ್ತೇಜ ಕಣ್ಣುಗಳು ಸಾರುತ್ತಿದ್ದವು. ಸೊಂಟದಲ್ಲಿ ಸಿಕ್ಕಿಸಿಕೊಂಡಿದ್ದ ಸುಮಾರು ಒಂದೂವರೆ ವರ್ಷದ ಹೆಣ್ಣು ಮಗುವನ್ನು ತಂದೆಯ ಕೈಗಿಟ್ಟು ನಿಂತಿದ್ದಾಳೆ. ಹೆಸರಿನ ಮುಂದೆ ತಂದೆಯ ಹೆಸರು ಮತ್ತು ಅಡ್ಡ ಹೆಸರು ನೀಡುತ್ತಾಳೆ.

 ರೇಪ್ ಕೇಸ್ ನಂ. xxx/20 ಕಾಲೌಟ್ ಆಗಿ ಎವಿಡೆನ್ಸ್ ರೆಕಾರ್ಡಿಂಗ್ ಪ್ರಾರಂಭವಾಗುತ್ತದೆ. ಸರಕಾರಿ ವಕೀಲರು ಪ್ರಶ್ನಿಸಲು ಪ್ರಾರಂಭಿಸುತ್ತಾರೆ.. ಪ್ರಶ್ನೆಗಳ ಸುರಿಮಳೆಯಲ್ಲಿ ರಂಜಿತಾ ಕಳೆದ ಬದುಕಿನ ದಿನಗಳನ್ನು ತೊಳೆಯಲು ಪ್ರಯತ್ನಿಸುತ್ತಾಳೆ. ಆಕೆ ಮನೆ ಕೆಲಸಕ್ಕಾಗಿ ಹೋಗುತ್ತಿದ್ದ  ಮನೆಯಲ್ಲಿದ್ದ  ಮಂಜಪ್ಪ ಮದುವೆಯಾಗಿ ಹೆಂಡತಿ ಮಕ್ಕಳನ್ನು ತನ್ನ ಊರಲ್ಲಿ ಬಿಟ್ಟು ಮುಂಬಯಿಯ ಡಾಕ್ ಯಾರ್ಡ್ ರೋಡ್ ನಲ್ಲಿ ಬಾಡಿಗೆ ಮನೆ ಮಾಡಿಕೊಂಡಿದ್ದ. ಈಕೆ ಮನೆಯೊಳಗೆ ಕೆಲಸದಲ್ಲಿರುವಾಗ ಅವಳ ಬಾಯಿಗೆ ಕೈ ಹಿಡಿದು  ಕಾನೂನಿನ ಭಾಷೆಯಲ್ಲಿ ಹೇಳುವುದಾದರೆ ಆಕೆಯನ್ನು ರೇಪ್ ಮಾಡುತ್ತಾನೆ. ಯಾರಿಗಾದರೂ ತಿಳಿಸಿದರೆ ನಿನ್ನನ್ನು ಮತ್ತು ನಿನ್ನ ಮನೆಯವರನ್ನು ಕೊಲ್ಲುತ್ತೇನೆ ಎಂದು ಬೆದರಿಕೆ ಹಾಕುತ್ತಾನೆ.

ಆಕೆ ಮುಚ್ಚಿದ ಬಾಯಿಯನ್ನು ಬಿಚ್ಚದೆ ಮನೆ ಸೇರುತ್ತಾಳೆ. ದೈಹಿಕ ಯಾತನೆಯಿಂದ ನರಳುತ್ತಾಳೆ. ಭಯದಿಂದ ನಡುಗುತ್ತಾಳೆ.
 ಮರುದಿನ ತಾಯಿ ಮತ್ತೆ ಅಟ್ಟುತ್ತಾಳೆ ಮನೆಗೆಲಸಕ್ಕೆ. ಹುಡುಗಿ ಹೆದರಿಕೊಂಡು ಮಂಜಪ್ಪನ ಮನೆ ಸೇರುತ್ತದೆ. ಆತನ ಧೈರ್ಯ ಈಗ ಇಮ್ಮಡಿಯಾಗಿ ಮಗದೊಮ್ಮೆ ಆಕೆಯ ಮೇಲೆ ಸವಾರಿ ಮಾಡುತ್ತಾನೆ. ಒಂದೆರಡು ತಿಂಗಳಲ್ಲಿ ತಾಯಿ ಪರಲೋಕ ಸೇರಿದಾಗ ಅವಿವಾಹಿತೆ ರಂಜಿತಾ ಗರ್ಭಿಣಿಯಾಗುತ್ತಾಳೆ. ಅಣ್ಣ ಹೊಡೆದು ಬಡಿದು ಬಾಯಿ ಬಿಡಿಸುತ್ತಾನೆ. ಆಕೆ ಮಂಜಪ್ಪನ ಹೆಸರು ಹೇಳಿದಾಗ, ಅಣ್ಣ ಪೊಲೀಸರಿಗೆ ತಿಳಿಸಿ ಮಂಜಪ್ಪನನ್ನು ಜೈಲಿಗೆ ಕಳುಹಿಸುತ್ತಾನೆ. ಗರ್ಭಪಾತಕ್ಕೆ ಸಮಯ ಮೀರಿ ಹೋದಾಗ ಅಣ್ಣ ಹತಾಶನಾಗುತ್ತಾನೆ. ಒಂಭತ್ತು ತಿಂಗಳು ತುಂಬಿ ಆಕೆ ಹೆಣ್ಣು ಮಗುವಿಗೆ ಜನ್ಮ ನೀಡುತ್ತಾಳೆ. ಮಗುವಿಗೆ ಆರು ತಿಂಗಳಾದಾಗ ಆತ ಜಾಮೀನಿನ ಮೇರೆಗೆ ಜೈಲಿನಿಂದ ಹೊರ ಬರುತ್ತಾನೆ. ಕೋರ್ಟಿನಲ್ಲಿ ಕೇಸು ನಡೆಯುತ್ತಿದ್ದು ಮಂಜಪ್ಪನೂ ಹಾಜರಾಗುತ್ತಿರುತ್ತಾನೆ.

 ಆತ ಆಕೆ ಕೋರ್ಟಿಗೆ ಬಂದಾಗಲೆಲ್ಲ, ಕೋರ್ಟ್ ಕೇಸು ಮುಗಿಯಲಿ. ನೀನು ಏನೂ ಹೇಳಕೂಡದು. ನಾನು ನಿರಪರಾಧಿ ಎಂದು ಸಾಬೀತಾದಲ್ಲಿ ನಿನ್ನನ್ನು ಬದುಕಲು ಬಿಡುತ್ತೇನೆ. ಇಲ್ಲದಿದ್ದಲ್ಲಿ ನಿನ್ನನ್ನೂ ನಿನ್ನ ಅಣ್ಣನನ್ನೂ ಕೊಲ್ಲಿಸುತ್ತೇನೆ  ಎಂದು ಹೇಳುತ್ತಿರುತ್ತಾನೆ. ಆತನ ಮಾತಿಗೆ ಹೆದರಿ  ರಂಜಿತಾ  prosecution ವತಿಯಿಂದ ಕೇಳಲಾದ ಪ್ರಶ್ನೆಗೆ ಏನೋನೊ ಉತ್ತರ ನೀಡುತ್ತಾಳೆ.

ಆದರೆ, ಅಂದು ಆಕೆ ನುಡಿದ ಒಂದು ವಾಕ್ಯ  ಎಂಥವರನ್ನೂ ದಂಗುಬಡಿಸುವಂತಿತ್ತು. ನನ್ನನ್ನು ಬಲಾತ್ಕಾರ ಮಾಡಿದ್ದು ಮಂಜಪ್ಪನಲ್ಲ ಆತನ ಮನೆಯ ಒಡೆಯ ಸಂಕರಪ್ಪ ಹಾಗೂ ಆತನ ಮಗ ರವಿ. ಇಬ್ಬರೂ ಜೊತೆಯಾಗಿ ನನ್ನನ್ನು ಬಲತ್ಕಾರ ಮಾಡಿ ಮಂಜಪ್ಪನ ಹೆಸರನ್ನು ಪೊಲೀಸರಿಗೆ ಹೇಳಬೇಕೆಂದು ಬೆದರಿಸಿದ್ದರು. ಆದ್ದರಿಂದ ನಾನು ಅಣ್ಣನಿಗೆ ಮತ್ತು ಪೊಲೀಸರಿಗೆ ಮಂಜಪ್ಪನ ಹೆಸರು ಹೇಳಿದೆ ಎನ್ನುತ್ತಾಳೆ. ನ್ಯಾಯಾಧೀಶರು ಆಕೆಗೆ ಪ್ರಶ್ನಿಸುತ್ತಾರೆ ಹಾಗಾದರೆ ಈ ಘಟನೆ ನಡೆದ ಹೊತ್ತಲ್ಲಿ ಮನೆಯ ಒಡೆಯ ಮತ್ತು ಅವನ ಮಗ ಆ ಮನೆಯಲ್ಲಿಯೇ ಇದ್ದರೆ?

ರಂಜಿತಾ ತಬ್ಬಿಬ್ಬಾಗುತ್ತಾಳೆ. ‘ಹೌದು’ ಎನ್ನುವ ಆಕೆಯ ಉತ್ತರ ಮುಂದಿನ ಸವಾಲುಗಳಿಗೆ ಕಡಿವಾಣ ಹಾಕುತ್ತದೆ. ನ್ಯಾಯಾಧೀಶರು ಮನೆಯ ಒಡೆಯ ಮತ್ತು ಆತನ ಮಗನನ್ನು ಕೋರ್ಟ್ ನೆದುರು ಕರೆಯಲು ಆದೇಶಿಸುತ್ತಾರೆ.

ರಂಜಿತಾಳ ಕಣ್ಣಂಚಿನಲ್ಲಿ ನಿಂತು ಗಲ್ಲದ ಆಸರೆ ಪಡೆದು ಕಣ್ಣೀರು ಹರಿಯುತ್ತಿತ್ತು. ಹುಡುಗಿ ಸುಳ್ಳು ಹೇಳುತ್ತಿದ್ದಾಳೆ ಎನ್ನುವುದನ್ನು ಅದು ಸಾಬೀತು ಪಡಿಸುತ್ತಿತ್ತು. 17ರ ವಯಸ್ಸಿನಲ್ಲಿ 57ರ ವಯಸ್ಸು ಆಕೆಯನ್ನು ಆವರಿಸಿತ್ತು. ಬದುಕನ್ನು ಬದುಕುವ ಮುನ್ನವೇ ಬದುಕು ಬರಿದಾಗಿತ್ತು.

ಎಲ್ಲರೂ ಆಕೆಯ ಮುಖವನ್ನು ನೋಡುತ್ತಿದ್ದರು. ಆರೋಪಿ ಮಂಜಪ್ಪನಿಗೆ ತನ್ನ ಪಾಪಗಳು ಮಂಜಿನಂತೆ ಕರಗುತ್ತಿವೆ ಎಂದು ಭಾಸವಾಗುತ್ತಿರುವಷ್ಟರಲ್ಲಿ,
ನ್ಯಾಯಾಧೀಶರ ಆದೇಶ ಬರಸಿಡಿಲಿನಂತೆ ಎರಗಿತು.

ಮನೆಯೊಡೆಯ ಮತ್ತು ಅವನ ಮಗ ಕೋರ್ಟ್ ಗೆ ಬಂದರೆ ನನ್ನ ಪಾಪದ ಹೊರೆಯನ್ನು ಹೇಗೆ ಹೊರಲಿ…
ಯೋಚಿಸುತ್ತಿದ್ದಂತೆ ತಲೆಸುತ್ತು ಬಂದು ಅಲ್ಲೇ ದೊಪ್ಪನೆ ನೆಲಕ್ಕೆ ಬೀಳುತ್ತಾನೆ.

ಆತನನ್ನು ಕೋರ್ಟ್ ಆವರಣದಲ್ಲಿರುವ ವೈದ್ಯರು ಬಂದು ಪರೀಕ್ಷಿಸಿ ಮೃತಪಟ್ಟನೆಂದು ಘೋಷಿಸುತ್ತಾರೆ.  
ಆಗ ರಂಜಿತಾ ಭಯಮುಕ್ತಳಾದಂತೆ ಒಮ್ಮೊಲೇ ಕಿರಿಚುತ್ತಾಳೆ. ನ್ಯಾಯಾಧೀಶರೇ, ‘ಈ ರಾಕ್ಷಸನೇ ನನ್ನ
ಬದುಕನ್ನು ಬಣ್ಣಗೆಡಿಸಿದವನು.’ ಆತನಿಗೆ ದೇವರೇ ಶಿಕ್ಷೆ ಕೊಟ್ಟ. ಕೋರ್ಟ್ ನಲ್ಲಿ ಸುಳ್ಳು ಹೇಳುವಂತೆ ನನ್ನನ್ನು ಬೆದರಿಸಿದ್ದ. ಅವ ಸಾಯದಿರುತ್ತಿದ್ದರೆ ನಾನು ನ್ಯಾಯದೇವತೆಗೆ  ಅವಮಾನ ಮಾಡಿದಂತಾಗುತ್ತಿತ್ತು.

ಧೈರ್ಯದಿಂದ ಬದುಕಬೇಕಮ್ಮ. ಸತ್ಯಕ್ಕೆ ಎಂದಿಗೂ ಜಯವಿರುತ್ತೆ ಎಂದು ನ್ಯಾಯಾಧೀಶರು ನುಡಿದಾಗ ರಂಜಿತಾಳ ಕಣ್ಣುಗಳು ತೇವಗೊಂಡವು.

ಡಾ. ಜಿ. ಪಿ. ಕುಸುಮಾ.
 ಮುಂಬಯಿ.

One thought on ““ಕೋರ್ಟು ಕೊಠಡಿಯೊಳಗೆ” ಒಂದುನೋಟ ಡಾ. ಜಿ. ಪಿ. ಕುಸುಮಾ ಮುಂಬಯಿ

  1. ಮಾಡಮ, ಕೋರ್ಟ್ನಲ್ಲಿ ನಿಮ್ಮ ಕಣ್ಣೆದುರಿಗೆ ನಡೆದ ಘಟನೆಯನ್ನು ಈ ಲೇಖನ ಓದುವವರಿಗೆ
    ಸಚಿತ್ರ ಅರ್ಥವತ್ತಾದ ಶಬ್ದಗಳಿಂದ ಕಣ್ಣ ಮುಂದೆ ಇಟ್ಟಿರುವಿರಿ.ಆ ನತದೃಷ್ಟ ಹೆಣ್ಣಿನ ಬಗ್ಗೆ ಮೂಡಿ ದ ನಿಮ್ಮ ಕೋಮಲ ಹೃದಯದ ಪರಿಚಯವೂ
    ಅನಾಯಾಸವಾಗಿ ಆಗುತ್ತದೆ.ನನಗೆ ಹಿಡಿಸಿತು.ಅಭಿನಂದನೆಗಳು.

Leave a Reply

Back To Top