ಧಾರಾವಾಹಿ-ಅಧ್ಯಾಯ –12

ಒಬ್ಬ ಅಮ್ಮನ ಕಥೆ

ರುಕ್ಮಿಣಿ ನಾಯರ್

ಅಂತೂ ವಿಲೇವಾರಿಯಾದ ಆಸ್ತಿ

ಪತ್ನಿಯು ಹೇಳಿದ ಮಾತುಗಳನ್ನು ಕೇಳಿ ನಾರಾಯಣನ್ ಹೇಳಿದರು….” ನಿನಗೆ ಇನ್ನೂ ಹೇಗೆ ವಿವರಿಸಿ ಹೇಳಲಿ ಕಲ್ಯಾಣೀ…. ನನಗೆ ತಿಳಿಯದು…. ಎಂದೂ ಯಾವ ಕಾರ್ಯಕ್ಕೇ ಆಗಲಿ ಎದುರು ಹೇಳದ ನೀನು ಇದೊಂದು ವಿಷಯದಲ್ಲಿ ಏಕೆ ಹೀಗೆ?…. ನಾನು ಎಂದಾದರೂ ನಿಮಗೆ ಅಥವಾ ನಮ್ಮ ಕುಟುಂಬಕ್ಕೆ ಕೆಡುಕಾಗುವಂತೆ ಯಾವುದಾದರೂ ತೀರ್ಮಾನ ತೆಗೆದುಕೊಂಡಿದ್ದೇನೆಯೇ?

ನಿಮ್ಮೆಲ್ಲರ ಹಿತ ಯೋಗಕ್ಷೇಮ ಒಳಿತು ಬಿಟ್ಟು ಇಲ್ಲಿಯವರೆಗೆ ನಾನು ಬೇರೆ ಏನನ್ನಾದರೂ ಚಿಂತಿಸಿದ್ದೇನೆಯೇ….ನೀನು ನನ್ನ ಮುದ್ದಿನ ಪತ್ನಿ…. ಎಂದಾದರೂ ನಿನ್ನನ್ನು ವಿನಾಕಾರಣ ನೋಯಿಸಿರುವೆನೇ? ನನ್ನ ಯಾವುದೇ ನಿರ್ಧಾರಗಳಿಗೂ ನಿನ್ನಿಂದ ಇಲ್ಲಿಯವರೆಗೆ ಇಂತಹ ವ್ಯವಹಾರ ನೋಡಿಲ್ಲ….ಇಲ್ಲಿಯವರೆಗೂ ನಾವಿಬ್ಬರೂ ಕೂಡಿ ತೆಗೆದುಕೊಂಡ ಯಾವ ನಿರ್ಧಾರವೂ ವಿಫಲವಾಗಿದ್ದೇ ಇಲ್ಲ. ಎಲ್ಲವೂ ನಮಗೆ ಅನುಕೂಲಕರವಾಗಿಯೇ ನಡೆದಿದೆ.  ಇದೂ ಕೂಡಾ ಹಾಗೆಯೇ…..ಯಾರು ಒಪ್ಪಲಿ ಬಿಡಲಿ ಈ ಬಾರಿ ನಾನು ನನ್ನ ಈ ತೀರ್ಮಾನದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಇದೊಂದು ಬಾರಿ ನಿನ್ನ ಇಚ್ಛೆಯ ವಿರುದ್ಧವೇ ನಾನು ತೀರ್ಮಾನ ಕೈಗೊಳ್ಳುವಂತೆ ನೀನು ಮಾಡಿಬಿಟ್ಟೆ….. ನಿನ್ನಿಂದ ನಾನು ಈ ರೀತಿಯ ನೀರಸ ಪ್ರತಿಕ್ರಿಯೆ ಎದುರು ನೋಡಿರಲಿಲ್ಲ….. ಎಂದು ತುಸು ಖಾರವಾಗಿಯೇ ಹೇಳಿ ಕಣ್ಣು ಮುಚ್ಚಿ ಮಲಗಿ ಬಿಟ್ಟರು. 

ಅನಿರೀಕ್ಷಿತವಾಗಿ ಪತಿಯ ಈ ರೀತಿಯ ಮಾತು ನಡವಳಿಕೆ ಕಲ್ಯಾಣಿಯಲ್ಲಿ ದಿಗ್ಭ್ರಮೆ ಉಂಟುಮಾಡಿತು. ಮಕ್ಕಳ ಮೌನ ತನ್ನ ಕಣ್ಣೀರಿನಿಂದ ಕೂಡಿದ ನಿವೇದನೆ  ಇವರ ಗಮನಕ್ಕೆ ಬಂದರೂ ಇಷ್ಟೊಂದು ಕಠೋರ ನಿರ್ಧಾರ ತೆಗೆದು ಕೊಂಡರಲ್ಲ ಎಂಬುದು ಕಲ್ಯಾಣಿಯವರ ಮನಸ್ಸಿನ ಮೇಲೆ ಅನಿರೀಕ್ಷಿತ ಆಘಾತ ಉಂಟುಮಾಡಿತು. ಸ್ತಬ್ಧವಾಗಿ ಹಾಗೇ ಮರು ಮಾತನಾಡದೇ ಕುಳಿತು ಬಿಟ್ಟರು ಕಲ್ಯಾಣಿ.  ಅವರಿಗೇ ಅರಿವಿಲ್ಲದಂತೆ ಕಣ್ಣೀರು ಹರಿದು ಅವರ ಅಂಗವಸ್ತ್ರವನ್ನು ಒದ್ದೆಮಾಡಿತು.

ತನ್ನ ಪತಿ ಇನ್ನು ಯಾರ ಮಾತನ್ನೂ ಕೇಳುವುದಿಲ್ಲ ಎಂದು ಕಲ್ಯಾಣಿಯವರಿಗೆ ಅರ್ಥವಾಗಿ ಹೋಯಿತು. ಲಾಂದ್ರವನ್ನು ಆರಿಸಿ ಮೆಲ್ಲನೆ ಕಿಟಕಿಯ ಬಳಿ ಬಂದು ನಿಂತರು.  ನೀರವ ಮೌನ ತುಂಬಿ ಎಲ್ಲವೂ  ಬದಲಾದಂತೆ ಅನಿಸುತ್ತಿರುವ ರಾತ್ರಿ…. ಕಗ್ಗತ್ತಲೆ….ಎತ್ತ ನೋಡಿದರೂ ಕಾರಿರುಳು ಮತ್ತದೇ ಗೂಬೆಯ ಕೂಗು ನರಿ ನಾಯಿಗಳು ಊಳಿಡುವ ಧ್ವನಿ. ಆಕಾಶದ ಎತ್ತರದಲ್ಲಿ ಮರಕುಟಿಕ ಹಕ್ಕಿ ವಿಚಿತ್ರವಾಗಿ ಕೂಗಿ ಹಾರಿ ಹೋಯ್ತು. ದೊಡ್ಡ ಮರವೊಂದಕ್ಕೆ  ನೇತು ಬಿದ್ದ ಬಾವಲಿಗಳ ಚೀರಾಟದ ಕರ್ಕಶ ಸದ್ದು ಕೇಳಿ ಕಲ್ಯಾಣಿ ಎರಡೂ ಕೈಗಳಿಂದ ಕಿವಿ ಮುಚ್ಚಿ ಕೊಂಡರು. ಆಕಾಶದಲ್ಲಿ ಕಾರ್ಮುಗಿಲು ಒಮ್ಮೆಲೇ ಎಲ್ಲಿಂದಲೋ ಬಂದು ಸೇರಿದವು. ಫಳೀರೆಂದು ಕೋಲ್ಮಿಂಚು ಕಣ್ಣು ಕೋರೈಸುವಂತೆ ಬಾನಲ್ಲಿ ಮೂಡಿ ಮಾಯವಾಯಿತು. ಹಿಂದೆಯೇ ಭಾರೀ ಸದ್ದಿನೊಂದಿಗೆ ಎದೆ ನಡುಗಿಸುವ ಹಾಗೆ ಗುಡುಗು ಜೊತೆಗೆ ಭಾರೀ ಸಿಡಿಲೊಂದು ಅನತಿ ದೂರದಲ್ಲೇ ತೆಂಗಿನ ಮರದ ನೆತ್ತಿಯನ್ನು ಸೀಳಿ ಬೆಂಕಿ ಹೊತ್ತಿಕೊಂಡು  ಮರ ಧಗಧಗನೆ ಉರಿಯಲು ಪ್ರಾರಂಭಿಸಿತು.  ಮೊದಲೇ ಪತಿಯ ಅನಿರೀಕ್ಷಿತ ಮಾತುಗಳಿಂದ ತತ್ತರಿಸಿದ್ದ ಕಲ್ಯಾಣಿಯವರ ಮನಸ್ಸು ಇದ್ದಕ್ಕಿದ್ದಂತೆ ವಾತಾವರಣದಲ್ಲೂ ಆದ ಬದಲಾವಣೆಯಿಂದ ಹೆದರಿಹೋಯಿತು. ಹೊರಗಿನ ತಂಗಾಳಿಗೆ ಮುಖವೊಡ್ಡಿ ನೋವನ್ನು ಮರೆಯಬೇಕು ಎಂದಿದ್ದ ತನಗೆ ಎದುರಾದದ್ದು ಪ್ರಕೃತಿ ಮಾತೆಯ ಮುನಿಸು ತುಂಬಿದ ಪ್ರತಿಕ್ರಿಯೆ.  ಪ್ರಕೃತಿ ಮಾತೆಯು ಕೂಡಾ ತಾವು ಇಲ್ಲಿಂದ ಬೇರೆಡೆ ಹೋಗುವುದನ್ನು ಇಚ್ಛಿಸುತ್ತ ಇಲ್ಲ ಎಂದು ಸೂಚಿಸುತ್ತಾ ಇರುವಂತೆ ಕಲ್ಯಾಣಿಗೆ ಭಾಸವಾಯಿತು.  ಪ್ರಕೃತಿಯೊಂದಿಗೆ ನಿವೇದಿಸಿ ಕೊಂಡರು… “ತಾಯೀ ನೀನೇ ಏನಾದರೂ ಮಾರ್ಗ ತೋರಿಸಿ ನನ್ನ ಪತಿಯ ಮನಸ್ಸನ್ನು ಬದಲಾಯಿಸು”…. ಎಂದು ಅಂಗಲಾಚಿ ಬೇಡಿತು ಅವರ ಮನ. ಆದರೇನು ಫಲ! ಮುಂದೆ ನಡೆಯಲಿರುವುದುನ್ನು ತಪ್ಪಿಸಲು ಅವರ ಇಷ್ಟ ದೈವ ಶ್ರೀ ಕೃಷ್ಣನಿಂದಲೂ ಕೂಡಾ ಸಾಧ್ಯವಾಗದೇ ಹೋಯಿತು.

ಕಲ್ಯಾಣಿಯವರ ತವರಿನವರು ಉಪದೇಶಿಸಿದರು, ಊರಿನ ಹಿರಿಯರು ಮನವೊಲಿಸಲು ನೋಡಿದರೂ ನಾರಾಯಣನ್ ತನ್ನ ಪಿತ್ರಾರ್ಜಿತ ಹಾಗೂ ತಾನು ಸಂಪಾದಿಸಿ ಸೇರಿಸಿದ್ದ ಆಸ್ತಿಯನ್ನು ಮಾರುವ ವಿಚಾರದಿಂದ ಹಿಂದೆ ಸರಿಯಲಿಲ್ಲ. ಅತೀ ಶೀಘ್ರದಲ್ಲಿ ಮನೆ ತೋಟ ಗದ್ದೆ ಹಾಗೂ ಅವರ ಎಲ್ಲಾ ಆಸ್ತಿಯ ವಿಲೇವಾರಿ ಆಯಿತು. ಇನ್ನು ಸ್ವಲ್ಪ ದಿನದಲ್ಲೇ ಊರನ್ನು ಬಿಟ್ಟು ಹೋಗುವುದೆಂದು ತೀರ್ಮಾನವಾಯಿತು. 

ತೋಟ ಮನೆಯನ್ನು ಕೊಳ್ಳುವವರು ಬಂದು ಎಲ್ಲವನ್ನೂ ಚಾಚೂ ತಪ್ಪದೇ ಅಳೆಯಲು ಪ್ರಾರಂಭ ಮಾಡಿದರು. ತೋಟವನ್ನು ಬೆಳೆಗಳ ಸಮೇತ ಅಳೆದಾಯ್ತು. ಇನ್ನು ದೊಡ್ಡ ಮನೆಯನ್ನು ಅದರಲ್ಲಿ ಇರುವ ಪ್ರತೀ ವಸ್ತುಗಳನ್ನು ಲೆಕ್ಕ ಹಾಕುವ ಅಳೆಯುವ ಸರದಿ. ಮನೆಯಲ್ಲಿ ಅಪರಿಚಿತರ ಧ್ವನಿ ಕೇಳಿ ಸುಮತಿ ಹೊರಗೆ ಬಂದಳು. ಕುಟುಂಬದ ಕಾರ್ಯಸ್ಥನ್ ಒಂದು ದೊಡ್ಡ ಪುಸ್ತಕ ಲೇಖನಿ ಹಿಡಿದು ನಿಂತಿದ್ದನ್ನು ನೋಡಿದಳು. ಕಾರ್ಯಸ್ಥನ್ ಎಂದರೆ ಕುಟುಂಬದ ತೋಟದ ಎಲ್ಲಾ ಕಾರ್ಯಗಳ ಮೇಲುಸ್ತುವಾರಿ ನೋಡಿಕೊಳ್ಳುವವರು. ಅವರು ನಾರಾಯಣನ್ ಗಿಂತ ವಯಸ್ಸಲ್ಲಿ ಹಿರಿಯರು. ಅವರ ಬಳಿ ಸಮಾಲೋಚನೆ ನಡೆಸಿಯೇ ನಾರಾಯಣನ್ ಯಾವುದೇ ಕೆಲಸ ಕಾರ್ಯಗಳನ್ನು ಕೈಗೊಳ್ಳುತ್ತಾ ಇದ್ದರು. ದೊಡ್ಡ ತರವಾಡು ಮನೆ ಅದಾಗಿತ್ತು. ತರವಾಡಿಗೆ  ‘ಕೊಯಿಕ್ಕಲ್ ತರವಾಡು’ ಎಂದು ಹೆಸರು ಇಟ್ಟಿದ್ದರು. ಆ ತರವಾಡನ್ನು  ಉತ್ತಮ ಮರದ ಹಲಗೆಗಳನ್ನ ಉಪಯೋಗಿಸಿ  ಕಟ್ಟಲ್ಪಟ್ಟಿತ್ತು. ‘ಅರ ನೆರ’ ಇದ್ದಂತಹ ಬಹು ದೊಡ್ಡ ಮನೆಯಾಗಿತ್ತು ಕೊಯಿಕ್ಕಲ್ ತರವಾಡು. ಅರ ನೆರ ಎಂದರೆ ಕೃಷಿ ಉತ್ಪನ್ನಗಳನ್ನು ದೊಡ್ಡ ಮಟ್ಟದಲ್ಲಿ ಶೇಖರಿಸಿ ಇಡುವಂತಹ ದೊಡ್ಡ ಉಗ್ರಾಣ. ಮನೆಯ ಪ್ರತಿ ಇಂಚನ್ನೂ ಅಳೆಯಲು ದಿನಗಳೇ ಬೇಕು. ಇನ್ನು ಮನೆಯ ವಸ್ತುಗಳು ಬೆಳ್ಳಿ ತಾಮ್ರ ಹಿತ್ತಾಳೆ ಗಾಜಿನ ವಸ್ತುಗಳು ಪಿಂಗಾಣಿ ವಸ್ತುಗಳು ಮರದ ಕೆತ್ತನೆಗಳು ಪೀಠೋಪಕರಣಗಳು ಹೀಗೇ ದೊಡ್ಡದೊಂದು ಪಟ್ಟಿ ಮಾಡಬಹುದು. ಎಲ್ಲಾ ವಸ್ತುಗಳ ಲೆಕ್ಕವನ್ನು ಎಲ್ಲೆಲ್ಲಿ ಏನೇನಿದೆ ಎಂಬುದನ್ನು ಕಾರ್ಯಸ್ಥನ್ ವಿವರಿಸಿ ಪಟ್ಟಿ ಮಾಡಿಕೊಳ್ಳುತ್ತಾ ಇರುವುದನ್ನು ಸುಮತಿ ಮೌನವಾಗಿ  ನೋಡುತ್ತಾ ನಿಧಾನವಾಗಿ ಚಾವಡಿಯ ಬಳಿ ಬಂದಳು.

ಅಂದ ಹಾಗೆ ಸುಮತಿಯ ತರವಾಡಿನಲ್ಲಿ ಆನೆ ಕೇಶವನ್ ಕೂಡಾ  ಅವರ ಕುಟುಂಬದ ಅಚ್ಚು  ಮೆಚ್ಚಿನ ಸದಸ್ಯ. ಮನೆಯ ಮುಂದಿನ ಚಾವಡಿಯ ಎದುರಿನಲ್ಲಿ ಅವನ ಆವಾಸ. ತಿರುವಾಂಕೂರು ಉತ್ಸವದಲ್ಲಿ ಅವನು ಪಾಲ್ಗೊಂಡಿದ್ದು ಇದೆ. ಸುಮತಿಯನ್ನು ಕಂಡೊಡನೆ ಕೇಶವನ್ ಮೊರದಗಲದ ಕಿವಿಯನ್ನು ಚಾಮರದಂತೆ ಬೀಸುತ್ತಾ ಪ್ರೀತಿಯಿಂದ ತಲೆ ಅಲ್ಲಾಡಿಸಿದ. ಅಪ್ಪನ ಅಪ್ಪಣೆ ಇಲ್ಲದೆ ಕೇಶವನ ಬಳಿ ಯಾರೂ ಹೋಗುವಂತೆ ಇರಲಿಲ್ಲ. ಆದರೂ ಸ್ವಲ್ಪ ಭಯದಿಂದಲೇ ಅತ್ತ ಇತ್ತ ನೋಡುತ್ತಾ ಯಾರೂ ಇಲ್ಲದ್ದನ್ನು ಗಮನಿಸಿ ಇಂದು ಸುಮತಿ ಮೆಲ್ಲನೆ ಹತ್ತಿರ ಹೋದಳು. ಅವನ ಮುಂಗಾಲನ್ನು ಮುಟ್ಟಿ ವಂದಿಸಿದಳು. ಅವನು ಸೊಂಡಿಲಿನಿಂದ ಅವಳ ಬೆನ್ನನ್ನು ಸವರುತ್ತ ತಲೆ ಅಲ್ಲಾಡಿಸಿದ. ಅವನ ಪ್ರೀತಿಯನ್ನು ಕಂಡು ಸುಮತಿಯ ಕಣ್ಣು ತೇವವಾಯ್ತು. ಇವನನ್ನು ಬಿಟ್ಟು ಹೋಗುತ್ತೇವೆ ಅಲ್ಲವೇ? ಎನ್ನುವ ನೋವು ಅವಳ ಮನಸ್ಸನ್ನು ಹಿಂಡಿತು. ಅವಳ ಮನಸ್ಸನ್ನು ಅರಿತವನಂತೆ ತಲೆ ಅಲ್ಲಾಡಿಸಿ ಕಣ್ಣನ್ನು ಮುಚ್ಚಿ ತೆರೆದ ಅವನ ಕಣ್ಣಲ್ಲೂ ಸಣ್ಣಗೆ ಕಂಬನಿ ಮಿಡಿಯಿತು. ಮೆಲ್ಲನೆ ಮಂಡಿಯೂರಿ ಕುಳಿತ ಕೇಶವ. ಸುಮತಿ ಅವನ ಸೊಂಡಿಲನ್ನು ನೇವರಿಸಿ ಮೆಲ್ಲನೆ ಮುದ್ದಿಸಿದಳು. ಸೊಂಡಿಲನ್ನು ಬಿಗಿಹಿಡಿದು ಅಪ್ಪಿಕೊಂಡಳು. ಕೇಶವ ತಲೆ ಅಲ್ಲಾಡಿಸುತ್ತಲೇ ಇದ್ದ. ಅವನ ಕತ್ತಿನಲ್ಲಿ ಕಟ್ಟಿದ್ದ ಗಂಟೆಯ ಸದ್ದು ಕೇಳಿ ಕಾರ್ಯಸ್ಥನ್ ಅಲ್ಲಿಗೆ ಬಂದರು. ಅಲ್ಲಿನ ದೃಶ್ಯವನ್ನು ಕಂಡು ಆ ವೃದ್ಧನ ಕಣ್ಣುಗಳು ಮಂಜಾದವು. ಸುಮತಿಯ ಮೃದು ಗುಣವನ್ನು ತಿಳಿದಿದ್ದ ಅವರು ಪ್ರೀತಿಯಿಂದ ಕರೆದರು…. “ಮಗೂ ಅಪ್ಪ ಕಂಡರೆ ತೊಂದರೆ ಆದೀತು ಅವನನ್ನು ಬಿಟ್ಟು ಬೇಗ ಒಳಗೆ ನಡೆ…. ಈಗ ನಾಣು ಬರುವ ಹೊತ್ತಾಯಿತು”…. ಎಂದು ಸುಮತಿಯನ್ನು ಎಚ್ಚರಿಸಿದರು.


ರುಕ್ಮಿಣಿ ನಾಯರ್

ಕೇರಳ ಮೂಲದವರಾದ ರುಕ್ಮಿಣಿ ನಾಯರ್ (ರುಕ್ಮಿಣಿ ಎ.ವಿ),ಹುಟ್ಟಿದ್ದುಹಾಸನ ಜಿಲ್ಲೆಯ ಸಕಲೇಶಪುರದಲ್ಲಿ.ಸುಮತಿ ಪಿ.ಎಸ್. ಮತ್ತು ವೇಲಾಯುಧನ್ ನಾಯರ್ ಅವರ ಎರಡನೆಯ ಮಗಳಾಗಿ.ನಂತರ ಶ್ರೀದರ್ ಬಿ.ಎಂ.ರವನ್ನು ಮದುವೆಯಾಗಿ ಬೆಂಗಳೂರಲ್ಲಿನೆಲೆಸಿದ್ದಾರೆ..ಕೆಲಕಾಲ ಶಿಕ್ಷಕಿಯಾಗಿಕೆಲಸ ಮಾಡಿದವರೀಗ ಪೂರ್ಣಪ್ರಮಾಣದ ಗೃಹಿಣಿಯಾಗಿ ಬರವಣಿಗೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಪುಸ್ತಕ ಓದುವುದು-ಬರೆಯುವುದು, ಚಿತ್ರ ಬಿಡಿಸುವುದು. ಗಿಡಗಳನ್ನು ಬೆಳೆಸುವುದು ಇವರ ಹವ್ಯಾಸಗಳು

Leave a Reply

Back To Top