ಯೋಗೀಶ್ ಹೊಸೋಳಿಕೆರವರ ಕೃತಿ “ಎಲಾಡಿಕೆ (ಅರೆಭಾಷೆ)” ಅವಲೋಕನ ವಿಮಲಾರುಣ ಪಡ್ಡoಬೈಲ್

ಪುಸ್ತಕ ಸಂಗಾತಿ

ಯೋಗೀಶ್ ಹೊಸೋಳಿಕೆ

“ಎಲಾಡಿಕೆ (ಅರೆಭಾಷೆ)”

ವಿಮಲಾರುಣ ಪಡ್ಡoಬೈಲ್

ನವ ಚಿಂತನೆಗೆ ದಾಪುಗಾಲಿಟ್ಟ ಎಲಾಡಿಕೆ

                  ಯೋಗೀಶ್ ಹೊಸೋಳಿಕೆ ಅವರು ಗುತ್ತಿಗಾರು ಕಿರಣ ರಂಗ ಅಧ್ಯಯನ ಸಂಸ್ಥೆಯ ಅಧ್ಯಕ್ಷರು, ಬರಹಗಾರರು ಹಾಗೂ ಸಂಘಟಕರು. ಅವರ “ಎಲಾಡಿಕೆ” ಮದುವೆ ನೆನಪಿನ ಪುಸ್ತಕ ವಿಭಿನ್ನ ರೀತಿಯಲ್ಲಿ ಅರೆಭಾಷೆಯಲ್ಲಿ  ಪ್ರಕಟವಾಗಿದೆ. ಇದು ಸಾಹಿತ್ಯ ಲೋಕಕ್ಕೆ ಯೋಗೀಶ್ ಹೊಸೋಳಿಕೆ ಅವರ ಹೆಮ್ಮೆಯ ಕೊಡುಗೆ. ಈಗಾಗಲೇ ಹಲವು ಕೃತಿಗಳನ್ನು ಇವರು ರಚಿಸಿದ್ದಾರೆ. ಆದರೆ ಈ ‘ಎಲಾಡಿಕೆ’ ಒಂದು ವಿಶೇಷ ಕೃತಿ. ಹೊಸ ಚಿಂತನೆಗೆ ಒತ್ತು ಕೊಟ್ಟು ವಿಶಿಷ್ಟವಾದ ಆಲೋಚನೆ ಅವರ ಮನದಾಳದಲ್ಲಿ ಗರಿಗೆದರಿ, ಈ ಹೊತ್ತಿಗೆಯಲ್ಲಿ  ಅರೆಭಾಷೆಯ ಸಂಸ್ಕೃತಿ ಸಂಪ್ರದಾಯಗಳನ್ನು ಓದುಗರ ಮುಂದಿಡಲಾಗಿದೆ. ಎಲಾಡಿಕೆಗೆ ಮುನ್ನುಡಿಯನ್ನು ಹಿರಿಯ ಸಾಹಿತಿ ಬಾರಿಯಂಡ ಜೋಯಪ್ಪನವರು ಬರೆದು ಹಾರೈಸಿದ್ದಾರೆ.

              ‘ಎಲಾಡಿಕೆ’ ಹೆಸರೇ ಸೂಚಿಸುವಂತೆ ಕರಾವಳಿ ಆಚರಣೆಗಳಲ್ಲಿ ಎಲೆ ಮತ್ತು ಅಡಿಕೆಗೆ ತನ್ನದೇ ಆದ ಮಹತ್ವವಿದೆ.  ಶುಭ ಸಮಾರಂಭ, ಪೂಜೆ ಹಾಗೂ ಅಪರ ಕಾರ್ಯಗಳಲ್ಲಿ ಇದರ ಬಳಕೆ ಅನಿವಾರ್ಯ ಎನಿಸಿದೆ. ಅರೆಭಾಷೆಯ ಗೌಡರ ಬದುಕಿನಲ್ಲಿ ಎಲೆ ಅಡಿಕೆಗೆ ತುಸು ಹೆಚ್ಚೇ ಗೌರವ. ಹಾಗಾಗಿ ನವ ಚಿಂತನೆಯ ಹೊಸೋಳಿಕೆಯವರು ಕೃತಿಗೆ  ‘ಎಲಾಡಿಕೆ’ ಶೀರ್ಷಿಕೆಯನ್ನು ಇರಿಸಿ ಕೃತಿಗೆ ದುಪ್ಪಟ್ಟು ಮೆರಗು ತಂದಿದ್ದಾರೆ.
        ಎರಡು ಜೀವಗಳ  ಮಧುರ ಭಾವ ಮತ್ತು ಬಾಂಧವ್ಯವನ್ನು  ಗಟ್ಟಿಗೊಳಿಸುವುದು ವಿವಾಹ. ಅವರವರ ಅಭಿರುಚಿಗೆ ತಕ್ಕಂತೆ ತನ್ನದೇ ರೂಪುರೇಷೆಯನ್ನು ಅದು ಪಡೆಯುತ್ತದೆ. ಕೆಲವರು ಆಡಂಬರದಿಂದ  ಮಾಡಿದರೆ ಇನ್ನು ಕೆಲವರು ಸರಳ ವಿವಾಹಕ್ಕೆ ಮೊರೆ ಹೋಗುತ್ತಾರೆ. ತಮ್ಮ ವಿವಾಹ ವಿಶೇಷತೆಯಿಂದ ಜನಮಾನಸದ ಬಾಯಲ್ಲಿ ಹರಿದಾಡಬೇಕೆಂಬ ನಿಟ್ಟಿನಲ್ಲಿ   ಹಡಗಿನಲ್ಲಿ, ವಿಮಾನದಲ್ಲಿ ಕೋಟಿ ಕೋಟಿ ವೆಚ್ಚದಲ್ಲಿ ವಿವಾಹ ಮಾಡುವ ಶ್ರೀಮಂತರೂ ಇದ್ದಾರೆ. ಆದರೆ ಇಲ್ಲಿ ಸಾಹಿತಿ ಯೋಗೀಶ್ ಹೊಸೋಳಿಕೆ ಮತ್ತು ಜಯಶ್ರೀ ಅವರ  ವಿವಾಹವು 2019ರಲ್ಲಿ ವಳಲಂಬೆಯ  “ಶ್ರೀ ಶಂಖಪಾಲ ಸುಬ್ರಹ್ಮಣ್ಯ ಸಭಾಮಂಟಪ” ದಲ್ಲಿ, ಗೌಡ ಸಂಪ್ರದಾಯ ಪ್ರಕಾರ ಶಾಸ್ತ್ರೋಕ್ತವಾಗಿ ನಡೆಯಿತು. ಇದರಲ್ಲಿ ವಿಶೇಷವೇನಿದೆ ಎನ್ನುವ ಪ್ರಶ್ನೆ ನಿಮ್ಮನ್ನು ಕಾಡಬಹುದು. ಇವರ ವಿವಾಹ ಮಂಟಪ ಕೇವಲ ಸಪ್ತಪದಿಗೆ ಸೀಮಿತವಾಗಿರಲಿಲ್ಲ. ಸಾಹಿತ್ಯದ ಹಿತ ಸ್ಪರ್ಶ ವಿವಾಹದ ಮೆರಗನ್ನು ಇಮ್ಮಡಿ ಗೊಳಿಸುವುದರೊಂದಿಗೆ ಸಾರಸ್ವತ ಲೋಕಕ್ಕೆ ಹೊಸ ಸಿಂಚನವನ್ನು ಮೂಡಿಸಿ  ಪ್ರಶಂಶೆಗೆ ಪಾತ್ರವಾಯಿತು. ಇಷ್ಟಕ್ಕೆ  ಮೌನವಹಿಸದ ಕವಿ  ಇನ್ನೂ ಒಂದು ಹೆಜ್ಜೆಯನ್ನು ಮುಂದಿಟ್ಟರು. ಶಾಲೆ,ಜಾತ್ರೆ,ಸಂಘ ಸಂಸ್ಥೆಗಳ ಕಾರ್ಯಕ್ರಮದ  ಸ್ಮರಣ ಸಂಚಿಕೆ  ತಯಾರಿಸುವಂತೆ, ತಮ್ಮ ವಿವಾಹದ  ಹೊಸ ಪ್ರಯತ್ನದ ನೆನಪು ಮುಂದಿನ ಪೀಳಿಗೆಗೆ  ಮಾದರಿಯಾಗಬೇಕೆಂಬ ದೃಷ್ಟಿಯಿಂದ ‘ಎಲಾಡಿಕೆ’ ಕೃತಿಯನ್ನು ಮುಂದಿಟ್ಟರು. ಇಲ್ಲಿ ಅವರು ತಮ್ಮದೇ  ವಿವಾಹದ ಅನುಭವ ಮತ್ತು ಶಾಸ್ತ್ರಗಳನ್ನು  ಅಚ್ಚುಕಟ್ಟಾಗಿ ದಾಖಲಿಸಿದ್ದಾರೆ.  ಸಂಪ್ರದಾಯದಂತೆ  ನಡೆದ ಈ ಶುಭ ಕಾರ್ಯದಲ್ಲಿ  ಅರೆಭಾಷೆಯ ಉಳಿವು ಹಾಗೂ ಸಂಸ್ಕೃತಿಗೆ ಹೆಚ್ಚು ಒತ್ತು ನೀಡಿದ್ದಾರೆ. ಮದುವೆಯ ಕರೆಯೋಲೆ ಅರೆಭಾಷೆಯಲ್ಲಿಯೇ ಮುದ್ರಿತಗೊಂಡಿದೆ. ಕಾರ್ಯಕ್ರಮಕ್ಕೆ ಸಾಕ್ಷಿ ಎಂಬಂತೆ ಮದುವೆ ಶಾಸ್ತ್ರಗಳಿಗೆ ಪೂರಕವಾಗಿ ತಮ್ಮದೇ ಮದುವೆಯ ಭಾವಚಿತ್ರಗಳನ್ನು ಅಳವಡಿಸಿದ್ದಾರೆ.
           ಮದುವೆ ಮಾತುಕತೆ, ಸೋದರ ಮಾತಾಡಿಸುವುದು, ಸೋದರ ಮಾವನ ಮನೆಗೆ ಹೋಗಿ ಗುರುಕಾರೋಣರಿಗೆ ಬಡಿಸಿ ಆಶೀರ್ವಾದ ಪಡೆಯುವುದು, ವೀಳ್ಯಶಾಸ್ತ್ರ, ಮದರಂಗಿ ಶಾಸ್ತ್ರ, ಧಾರಾಕಾರ್ಯ, ಹೆಣ್ಣು ಇಳಿಸಿ  ಕೊಡುವುದು ಈ ಎಲ್ಲಾ ಶಾಸ್ತ್ರಗಳ ಬಗ್ಗೆ ವಿಸ್ತೃತ ಮಾಹಿತಿ  ಕೃತಿಯಲ್ಲಿ ಅನಾವರಣಗೊಂಡಿದೆ.

ಅರೆಭಾಷೆ ಕವಿಗೋಷ್ಠಿ :  ಮದುವೆಯ ಮಧುರ ಬಂಧನಕ್ಕೆ ಸೂಕ್ತವೆಂಬಂತೆ, ಅರೆಭಾಷೆಯಲ್ಲಿ ಕವಿಗಳು ಕವನ ವಾಚಿಸಿದರು. ಈ ಕವನಗಳೆಲ್ಲವೂ “ಎಲಾಡಿಕೆ’ ಕೃತಿಯಲ್ಲಿ ಸ್ಥಾನವನ್ನು ಗಿಟ್ಟಿಸಿಕೊಂಡಿದೆ.
ಭಜನಾ ಕಾರ್ಯಕ್ರಮವು ಜನರ ಮನಸ್ಸನ್ನು ತಣಿಸಿದೆ.
 ಪುಸ್ತಕ ಬಿಡುಗಡೆ:  ಹೊಸೋಳಿಕೆಯವರು ರಚಿಸಿದ ರೂಪಕ ಅರೆಭಾಷೆಯ ‘ಪುಣ್ಯಕೋಟಿ’ ಧಾರಾಕಾರ್ಯದ ನಂತರ ಬಿಡುಗಡೆಗೊಂಡಿತು. ಹಾಗೆಯೇ ಮದುವೆಗೆ ಬಂದ ಅತಿಥಿಗಳಿಗೆ ಪುಸ್ತಕವನ್ನು ನೀಡಿ ಓದುಗರಿಗೆ  ಭೂರಿಬೋಜನದೊಂದಿಗೆ ಸಾಹಿತ್ಯದ ಒಲವನ್ನು ಉಣಬಡಿಸಿದ್ದಾರೆ.
           ಮದುವೆಗೆ ಬಂದ ಅತಿಥಿಗಳು ತಮ್ಮ ಹೊಸ ಚಿಂತನೆಯನ್ನು ಸ್ವೀಕರಿಸುತ್ತಾರಾ ಎಂಬ ಆತಂಕ ಕವಿ ಹೃದಯವನ್ನು ಕಾಡಿದ್ದು ಅರಿವಾಗುತ್ತದೆ. ಆದರೆ ಇವರ ಆಲೋಚನೆಗೆ ಉತ್ತಮ ಪ್ರತಿಕ್ರಿಯೆ ದಕ್ಕಿದ್ದು, ಹಲವಾರು ಪತ್ರಿಕೆಗಳಲ್ಲೂ ಇವರ  ಸಪ್ತಪದಿಯೊಂದಿಗೆ ನವ ಚಿಂತನೆಯ ಸಾಹಿತ್ಯ ಅನಾವರಣಗೊಂಡಿದೆ.ಈ ಮೂಲಕ ಜನರ ಮೆಚ್ಚುಗೆಗೂ ಇವರು ಪಾತ್ರರಾಗಿದ್ದಾರೆ.

                     ಒಟ್ಟಿನಲ್ಲಿ ಕವಿಹೃದಯ ಬಯಸುತ್ತಿರುವುದು   ಸಂಪ್ರದಾಯ ಬದ್ಧವಾದ  ಕಡಿಮೆ ಖರ್ಚಿನ   ವಿವಾಹವನ್ನು. ಏಕೆಂದರೆ  ಆಧುನಿಕ ಬದುಕಿನ ವಿಕಾರಗಳಿಗೆ ಬಲಿ ಬಿದ್ದು   ದುಬಾರಿ ವೆಚ್ಚ ಮಾಡಿ ವಿವಾಹವಾದರೆ ಹಣ ಮತ್ತು  ನೆಮ್ಮದಿ ಕಳೆದುಕೊಳ್ಳಬೇಕಾಗುತ್ತದೆ.  ಅಂತಹ ಹಣವನ್ನು ಸಮಾಜದ ಕಲ್ಯಾಣಕ್ಕೆ ಅಥವಾ ತಮ್ಮದೇ ಅಗತ್ಯ ಕೆಲಸಗಳಿಗೆ ವಿನಿಯೋಗಿಸಿದರೆ ಜೀವನ ಸರ್ವಸುಂದರ ಎಂಬುದು ಲೇಖಕರ ಮನದಾಳದ ಮಿಡಿತ.
          ಅರೆಭಾಷೆ ಗೌಡರ ಭಾಷೆಯ ಸೊಗಡು, ಮದುವೆ, ಆಚಾರ ವಿಚಾರ, ಸಂಪ್ರದಾಯಗಳ  ಕೈಗನ್ನಡಿ ಈ ಎಲಾಡಿಕೆ.  ಅರೆಭಾಷಿಕ ಸಾರಸ್ವತ ಲೋಕದಲ್ಲಿ ಮೊಟ್ಟ ಮೊದಲಿಗೆ ದಾಖಲೆಯಾದ ಈ ಕಿರುಕೃತಿಯನ್ನು ನೀಡಿದ  ಸಾಹಿತಿ ಯೋಗೀಶ್ ಹೊಸೋಳಿಕೆಯವರಿಗೆ ಹೃತ್ಪೂರ್ವಕ ಅಭಿನಂದನೆಗಳು. ಇನ್ನಷ್ಟು ಹೊಸ ಚಿಂತನೆಗಳು ಇವರ ಲೇಖನಿಯಿಂದ ಮೂಡಿಬರಲಿ.


  ವಿಮಲಾರುಣ ಪಡ್ಡoಬೈಲ್ 

Leave a Reply

Back To Top