ನನಗೆ ಇಷ್ಟವಾದ ಶಾಸಕರ ಕೃಷಿ ಕಾಯಕ- ಗೊರೂರು ಅನಂತರಾಜು, ಹಾಸನ.

ಪುಸ್ತಕ ಸಂಗಾತಿ

ನನಗೆ ಇಷ್ಟವಾದ ಶಾಸಕರ ಕೃಷಿ ಕಾಯಕ

ಗೊರೂರು ಅನಂತರಾಜು, ಹಾಸನ.

ನೇಗಿಲ ಹಿಡಿದು ಹೊಲದೊಳು ಹಾಡುತ ಉಳುವಾ ಯೋಗಿಯ ನೋಡಲ್ಲಿ
ಫಲವನು ಬಯಸದೆ ಸೇವೆಯ ಪೂಜೆಯು ಕರ್ಮದ ಇಹಪರ ಸಾಧನವು
ಕಷ್ಟದೊಳನ್ನವ ದುಡಿವನೆ ತ್ಯಾಗಿ ಸೃಷ್ಟಿ ನಿಯಮದೊಳಗವನೇ ಭೋಗೀ..

ಕವಿ ಕುವೆಂಪು ಅವರ ಈ ಹಾಡಿನ ಸಾಲಿನೊಂದಿಗೆ ನನ್ನ ಓದು ಪ್ರಾರಂಭವಾಯಿತು. ಇವತ್ತು ದೀಪಾವಳಿ. ಮನೆಯಲ್ಲಿ ಮಡದಿ ಬೆಳೆಗ್ಗೆ ಬೇಗನೇ ಎದ್ದು ಮನೆ ಮುಂದೆ ರಂಗೋಲಿ ಬರೆದು ಮದ್ಯೆ ಸಗಣಿಯನ್ನು ಗುಪ್ಪೆ ಮಾಡಿ ಅದರೊಳಗೆ ಹೂವುಗಳನ್ನು ಇರಿಸಿ ಶೃಂಗರಿಸಿದ್ದಳು. ಪ್ಲಾಸ್ಟಿಕ್ ಕವರ್‌ನಲ್ಲಿ ಪ್ಯಾಕ್ ಮಾಡಿದ್ದ ಸಗಣಿಗೆ ಕಾಡು ಹೂವುಗಳಿಗೆ ಇಂದು ರೇಟಿದೆ. ಹಿಂದೆ ನಮ್ಮ ತಿಪ್ಪೆ ಮೇಲೆ ಬೆಳೆಯುತ್ತಿದ್ದ ಕುಂಬಳಕಾಯಿ ಪಲ್ಯವನ್ನು ತಿನ್ನಲು ಮೂಗು ಮುರಿಯುತ್ತಿದ್ದ ನಾನು ಇಂದು ಮೂರು ದೊಸೆ ಇದೇ ಪಲ್ಯದ ಕಾಂಬಿನೇಷನ್‌ನಲ್ಲಿ ಚಪ್ಪರಿಸಿದೆ.‘ಕುಂಬಳಕಾಯಿ ಪಲ್ಯದಲ್ಲೂ ಸಹಿ ಇದೆಯೆಲ್ಲೇ.. ಮಡದಿಯನ್ನು ರೇಗಿಸಿದೆ. “ಪರ‍್ವಾಗಿಲ್ಲ ತಿನ್ರೀ, ನಿಮ್ಮ ಶುಗರ್ ಏನೂ ಇದ್ರಿಂದ ರೈಜ್‌ ಆಗಲ್ಲ. ಮಟನ್‌ ತಿನ್ನಬೇಕಾದ್ರೇ ಈ ಮಾತೇ ಇಲ್ಲ.. ರಿವಸ್೯ ಗೇರ್ ಹಾಕಿ ನನ್ನ ಬಾಯಿ ಮುಚ್ಚಿಸಿ ಹಂಚಿನ ಮೇಲೆ ದೊಸೆ ಚುಯ್ಯಂಗುಡಿಸಿದಳು.
ದೊಸೆ ತಿಂದವನೇ ಓದಲು ಪುಸ್ತಕ ಭಂಡಾರದೊಳಗೆ ಕೈ ಹಾಕಿದೆ. ಎ.ಟಿ.ರಾಮಸ್ವಾಮಿ ಭೂ ಕಬಳಿಕೆಗೆ ಅಂಕುಶ ಪುಸ್ತಕ ಸಿಕ್ಕಿತು. ಪತ್ರಿಕೋದ್ಯಮ ಸ್ನಾತಕೋತ್ತರ ಪದವೀಧರರಾದ ಡಿ.ಚೆಲುವರಾಜು ಅವರು ದೂರದರ್ಶನದ ಸುದ್ಧಿ ವಿಭಾಗ ಅಲ್ಲದೇ ಪತ್ರಿಕೆಗಳಲ್ಲಿ ಕರ್ತವ್ಯ ನಿರ್ವಹಿಸಿ ಇವರು ಸಾಕ್ಷ್ಯ ಚಿತ್ರ ನಿರ್ದೇಶನ ಮಾಡಿರುವರು. ವಿಧಾನ ಮಂಡಲಗಳ ಜಂಟಿ ಸದನ ಸಮಿತಿ ಅಧ್ಯಕ್ಷರಾಗಿ ಎ.ಟಿ.ರಾಮಸ್ವಾಮಿಯವರು ದೊರಕಿದ ೧೭ ತಿಂಗಳ ಅವಧಿಯಲ್ಲಿ ಭೂಗಳ್ಳತನ ಪ್ರಕರಣಗಳ ಕುರಿತು ದೂರು ದಾಖಲೆಗಳನ್ನಾಧರಿಸಿ ನಡೆಸಿರುವ ತನಿಖೆ, ನೀಡಿರುವ ವರದಿ ಮತ್ತು ಅದರ ಜಾರಿಗೆ ನಡೆದ ಹೋರಾಟ ಇಂತಹ ವಸ್ತು ಆಧರಿಸಿ ರಚಿಸಿರುವ ಕೃತಿ ಪತ್ರಿಕಾ ವ್ಯವಸಾಯದ ಫಲದಂತೆ ಮೂಡಿ ಬಂದಿದೆ ಎಂದಿದ್ದಾರೆ ಬೆನ್ನುಡಿಯಲ್ಲಿ ಹೆಚ್.ಎಸ್.ದೊರೆಸ್ವಾಮಿ ಹಿರಿಯ ಸ್ವಾತಂತ್ರ್ಯ  ಹೋರಾಟಗಾರರು. ಕೃತಿಯ ಪ್ರಾರಂಭದಲ್ಲಿ ಎ.ಟಿ.ರಾಮಸ್ವಾಮಿಯವರ ಕೃಷಿ ಕ್ಷೇತ್ರದ ಸಾಧನೆಯನ್ನು ಸಂಕ್ಷಿಪ್ತವಾಗಿ ಪರಿಚಯಿಸುತ್ತಾರೆ.
ಅರಕಲಗೊಡು ತಾ. ಕೆ.ಅಬ್ಬೂರು ಎ.ಟಿ.ರಾಮಸ್ವಾಮಿ ಅವರ ಜನ್ಮ ಸ್ಥಳ ದಿನಾಂಕ ೨೬-೧೧-೧೯೫೧. ತಂದೆ ಎ.ಟಿ.ತಿಮ್ಮೇಗೌಡರು ತಾಯಿ ಕಾಳಮ್ಮನವರು. ಕೆ.ಅಬ್ಬೂರಿನಲ್ಲಿ ಪ್ರೈಮರಿ, ಬನ್ನೂರು ಮಾಧ್ಯಮಿಕ, ಕೊಣನೂರು ಹೈಸ್ಕೂಲು, ಮೈಸೂರು ಪಿಯುಸಿ  ಧಾರವಾಡ ಕೃಷಿ ಕಾಲೇಜಿನಲ್ಲಿ ಅಗ್ರಿಕಲ್ಚರಲ್ ಬಿಎಸ್ಸಿ ಇವರ ವ್ಯಾಸಂಗದ ಹಾದಿ. ವಿದ್ಯಾರ್ಥಿ ಪ್ರತಿನಿಧಿಯಾಗಿ ಚುನಾಯಿತರಾಗಿ ವಿದ್ಯಾರ್ಥಿ ನಿಲಯದ ಕಾರ್ಯದರ್ಶಿ ಆಗಿ ಕಾಲೇಜಿನ ವಾರ್ಷಿಕೋತ್ಸವ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಬಂದ  ಅಂದಿನ ಕೃಷಿ ಸಚಿವರು ಎನ್.ಚಿಕ್ಕೇಗೌಡರಿಂದ ಸನ್ಮಾನಿತರಾಗಲು ಕಾರಣ ಪ್ರಾಮಾಣಿಕ ವಿದ್ಯಾರ್ಥಿ ಕಾಲೇಜಿನ ಅಭಿವೃದ್ಧಿ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದಿದ್ದು.
೧೯೭೪ರಲ್ಲಿ ಕೃಷಿ ಪದವೀಧರರಾಗಿ ಮೊದಲೇ ನಿರ್ಧರಿಸಿದಂತೆ ಗ್ರಾಮದಲ್ಲೇ ಉಳಿದು ಕೃಷಿ ಕಾಯಕದಲ್ಲಿ ತೊಡಗಿದರು. ಸರ್ಕಾರಿ ಉದ್ಯೋಗದತ್ತ ಆಕರ್ಷಿತರಾಗಲಿಲ್ಲ. ತಾನು ಕಲಿತ ಕೃಷಿ ವಿದ್ಯೆಯನ್ನು ತನ್ನ ಪರಿಸರದಲ್ಲಿ ಯಶಸ್ವಿಯಾಗಿ ಪ್ರಯೋಗಿಸಿ ಗ್ರಾಮೀಣ ಜನರೊಟ್ಟಿಗೆ ನೆಮ್ಮದಿಯ ಜೀವನ ನಡೆಸಬೇಕೆಂಬುದು ಇವರ ಸಂಕಲ್ಪ. ಶಿಕ್ಷಣ ಮುಗಿಸಿ ಕೆಲಸಕ್ಕೆ ಏಕೆ ಸೇರಲಿಲ್ಲ..? ಎಲ್ಲೋ ಫೇಲ್‌ ಆಗಿರಬೇಕೆಂಬ ಗುಮಾನಿ ಕೆಲವರಿಗೆ.
ಇವರ ಅವಿಭಕ್ತ ಕುಟುಂಬದಲ್ಲಿ ಇದ್ದಿದ್ದು ೧೦ ಎಕರೆ ಖುಷ್ಕಿ ೨ ಎಕರೆ ಕೆರೆ ಆಶ್ರಯದ ತರಿ ಜಮೀನು. ಮಳೆ ಆಶ್ರಯದಲ್ಲಿ ಕೃಷಿ ಮಾಡಬೇಕಾದ ಅನಿವಾರ್ಯತೆ. ವಿದ್ಯಾರ್ಥಿ ಜೀವನದಲ್ಲಿ ರಜಾ ದಿನಗಳಲ್ಲಿ ಊರಿಗೆ ಬಂದರೆ ಹೊಲ ತೋಟದ ಕೆಲಸ ಮಾಡುತ್ತಿದ್ದರು. ಬೆಳೆದ ತರಕಾರಿಯನ್ನು ೧೬ ಕಿ.ಮೀ. ದೂರದ ಸೋಮವಾರಪೇಟೆ ಸಂತೆಗೆ ಹೊತ್ತೊಯ್ದು ಮಾರಾಟ ಮಾಡುತ್ತಿದ್ದರು. ವಾಹನ ಸೌಕರ್ಯವಿಲ್ಲದ ಆ ದಿನಗಳಲ್ಲಿ ತಲೆ ಮೇಲೆ ಹೊರೆ ಹೊತ್ತು ಸಾಗಿಸಬೇಕು. ಭಾರ ಹೊತ್ತು ಸಾಗುತ್ತಿದ್ದರೆ ಅದರ ಬಿಸಿಗೆ ತಲೆಯಲ್ಲಿ ಹೊಗೆ ಬರುವಂತಹ ಧಗೆ. ಸಂತೆಯಲ್ಲಿ ತರಕಾರಿಯನ್ನು ಗುಡ್ಡೆ ಇಟ್ಟು ಮಾರಾಟ ಮಾಡುವುದು. ಸಂಜೆ ವೇಳೆಗೆ ಮಾರಾಟ ಆಗದೆ ಉಳಿದರೆ ಸಿಕ್ಕಷ್ಟು ಬೆಲೆಗೆ ಮಾರಾಟ ಮಾಡುವುದು. ೧೯೭೫ರಲ್ಲಿ ಹೈನುಗಾರಿಕೆ ಕೈಗೊಂಡರು. ಮೂರು ಮಿಶ್ರ ತಳಿ ಹಸುಗಳನ್ನು ಸಾಕಿದರು. ಕೆ.ಅಬ್ಬೂರಿನಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘ ಸ್ಥಾಪಿಸಿ ಸಂಸ್ಥಾಪಕ ಅಧ್ಯಕ್ಷರಾದರು. ಕೊಣನೂರಿನಲ್ಲಿ ರಸಗೊಬ್ಬರ ಮಾರಾಟ ಪ್ರತಿನಿಧಿಯಾಗಿ ಸ್ವಂತ ಮಳಿಗೆ ಆರಂಭಿಸಿದರು. ಕೃಷಿ, ಡೈರಿ, ವ್ಯಾಪಾರ ಕೈ ಹಿಡಿದು ಆರ್ಥಿಕವಾಗಿ ಸುಧಾರಣೆ ಕಂಡರು.
೧೯೭೭-೭೮ರಲ್ಲಿ  ೨೭ನೇ ವಯಸ್ಸಿಗೆ ಬನ್ನೂರು ಗ್ರಾಮ ಪಂಚಾಯಿತಿಗೆ ಕೆ.ಅಬ್ಬೂರು ಗ್ರಾಮದ ಸದಸ್ಯರಾಗಿ ಗೆದ್ದು ಅಧ್ಯಕ್ಷರು ಆದರು. ಐದು ವರ್ಷ ವಿವಿಧ ಅಭಿವೃದ್ಧಿ ಕಾರ್ಯದಲ್ಲಿ ಸಾಫಲ್ಯ ಕಂಡು ಸದಸ್ಯರ ವಿಶ್ವಾಸ ಗಳಿಸಿ ಯಾವುದೇ ವಿವಾದ ಕಳಂಕಕ್ಕೆ ಅವಕಾಶವಿಲ್ಲದ ಯಶಸ್ವಿ ಆಡಳಿತ ಇವರದಾಯಿತು. ೧೯೮೧ರಲ್ಲಿ ಅರಕಲಗೊಡು ತಾ. ಕೃಷಿಕ ಸಮಾಜದ ಅಧ್ಯಕ್ಷರಾಗಿ ಅರಕಲಗೊಡಿನಲ್ಲಿ ರೈತ ಭವನ ನಿರ್ಮಿಸಿದರು. ಇಷ್ಟರಲ್ಲಿ ಊರಿನಲ್ಲಿ ತಂದೆಯವರ ಜಮೀನು ಅಲ್ಲದೇ ಬಿಸಲಹಳ್ಳಿಯಲ್ಲಿ ಮತ್ತಷ್ಟು ಜಮೀನು ಖರೀದಿಸಿ ೧೯೯೮ರಲ್ಲಿ  ಬಿಸಲಹಳ್ಳಿಗೆ ಹೋಗಿ ಇವರೇ ಬೆಳೆಸಿರುವ ತೋಟವಿದೆ. ೧೯೮೦-೮೧ರಲ್ಲಿ ಕರ್ನಾಟಕದಲ್ಲೇ ಅತಿ ಹೆಚ್ಚು ಭತ ಇಳುವರಿ ಪಡೆದ ರೈತ ಎಂದು ಗುರುತಿಸಲ್ಪಟ್ಟರು. ಕೃಷಿ ಇಲಾಖೆ ಇವರಿಗೆ ಪ್ರಶಂಸಾ ಪತ್ರದೊಂದಿಗೆ ಪ್ರಶಸ್ತಿ ನೀಡಿ ಸನ್ಮಾನಿಸಿ ಗೌರವಿಸಿತು.  ಸ್ವತ: ಉಳುಮೆ ಮಾಡಿ ಕಷ್ಟದ ಕೃಷಿ ಕಾಯಕ ಮಾಡಿದ್ದೇ ಮುಂದೆ ಹೋರಾಟಕ್ಕೂ ಸ್ಫೂರ್ತಿ ಎನ್ನುವ ಇವರ ಮುಂದಿನ ರಾಜಕೀಯ ನಡಿಗೆ ವಿಧಾನ ಸೌಧದತ್ತ.. ಎಂಬಲ್ಲಿಗೆ ಸಂಕ್ಷಿಪ್ತ ಪರಿಚಯ ಮುಗಿಸುತ್ತಾರೆ. ೯ನೇ ವಿಧಾನ ಸಭೆಗೆ ೧೯೮೯ರಲ್ಲಿ ಅರಕಲಗೊಡು ಕ್ಷೇತ್ರದಿಂದ ಗೆದ್ದು ಶಾಸಕರಾಗಿ ರಾಜಕೀಯದಲ್ಲಿ ಮೇಲೇರಿದರೂ ಇಂದಿಗೂ ಕೃಷಿ ಕಾಯಕದಲ್ಲಿ ನಿರತರಾಗಿರುವುದು ರೈತರಿಗೆ  ಸ್ಪೂರ್ತಿಯೇ ಸೈ

ಯಾರೂ ಅರಿಯದ ನೇಗಿಲ ಯೋಗಿಯೇ ಲೋಕಕೆ ಅನ್ನವನೀಯವನು
ಹೆಸರನು ಬಯಸದೆ ಅತಿ ಸುಖ ಗಳಿಸದೆ ದುಡಿವನು ಗೌರವಕಾಶಿಸದೆ
ನೇಗಿಲ ಕುಲದೊಳಗಡಗಿದೆ ಕರ್ಮ ನೇಗಿಲ ಮೇಲೆಯೆ ನಿಂತಿದೆ ಧರ್ಮ..
   ————————

ಗೊರೂರು ಅನಂತರಾಜು,

Leave a Reply

Back To Top