ಡಾ.ಸುಮತಿ ಪಿ. ಸ್ನೇಹಪರತೆ ಬದುಕಿಗೆ ವರ-

ಲೇಖನ

ಡಾ.ಸುಮತಿ ಪಿ.

ಸ್ನೇಹಪರತೆ ಬದುಕಿಗೆ ವರ-

ಸ್ನೇಹಪರತೆ ಮನುಜ ಜೀವನದ ಅತ್ಯಂತ ಪ್ರಮುಖವಾದ ಸಂಪತ್ತುಗಳಲ್ಲಿ ಒಂದಾಗಿದೆ. ಮನುಷ್ಯನ ಬದುಕೆಂಬುದು ಸ್ನೇಹ ಸಂಬಂಧದ ತಳಪಾಯದ ಮೇಲೆ ಗಟ್ಟಿಯಾಗಿ ನಿಲ್ಲಲು ಸಾಧ್ಯವಾಗುತ್ತದೆ.ಬದುಕಿನುದ್ದಕ್ಕೂ ಅನೇಕರ ಸ್ನೇಹ ಸಂಬಂಧಗಳ ಸರಮಾಲೆಯೇ ಹೆಣೆದು ಬದುಕನ್ನು ಸುಂದರಗೊಳಿಸಬಹುದು.

ಸ್ನೇಹ ಎಂಬುದು ಎಂದೆಂದಿಗೂ ಬಿಡಿಸಲಾರದ ನಂಟು. ವ್ಯಕ್ತಿಯೋರ್ವನ ಜೀವನದ ಎಲ್ಲಾ ಹಂತಗಳಲ್ಲೂ ಸ್ನೇಹಿತರ ಪಾತ್ರ ಪ್ರಮುಖವಾದದ್ದು. ಸ್ನೇಹಿತರ ಮುಂದೆ ಮನಸ್ಸು ಪಾರದರ್ಶಕವಾಗಿರುತ್ತದೆ. ಮನಸ್ಸಿನಲ್ಲಿ ಹುದುಗಿ ಕೊರೆಯುತ್ತಿರುವ ಭಾವನೆಗಳೆಲ್ಲಾ ಹೊರಗೆ ಬಂದು ಮನಸ್ಸು ನಿರಾಳವಾಗುತ್ತದೆ. ಅದಕ್ಕೇ ನಾವು ಯಾವುದೇ ವಿಷಯವನ್ನು ಸ್ನೇಹಿತರ ಜೊತೆಗೆ ಹಂಚಿಕೊಳ್ಳಲು ಹಿಂಜರಿಯುವುದಿಲ್ಲ. ಹೆತ್ತವರ ಮುಂದೆ ಹೇಳಿಕೊಳ್ಳಲಾಗದ ಅನೇಕ ವಿಷಯಗಳನ್ನೂ ಸಹ ಕೆಲವೊಮ್ಮೆ ಸ್ನೇಹಿತರ ಮುಂದೆ ನಾವು ಮುಚ್ಚುಮರೆಯಿಲ್ಲದೆ ಬಿಚ್ಚಿಡುತ್ತೇವೆ. ಅಷ್ಟೊಂದು ನಂಬಿಕೆ, ವಿಶ್ವಾಸ, ಸ್ನೇಹಿತರ ಮೇಲೆ ನಮಗಿರುತ್ತದೆ. ಸ್ನೇಹವೆಂಬುವುದು ನಂಬಿಕೆ ವಿಶ್ವಾಸದಿಂದಲೇ ಗಟ್ಟಿಯಾಗಿ ಬಾಂಧವ್ಯ ಬೆಳೆಯುತ್ತದೆ.

ಸ್ನೇಹಿತರು ನಮ್ಮ ಸಂಗಡ ಇದ್ದರೆ ಯಾವುದೇ ಕೆಲಸವನ್ನು
ಮಾಡುವುದಕ್ಕೆ ಆಗಲಿ ಅಥವಾ ಜೀವನದಲ್ಲಿ ಎದುರಾಗುವ ಕಷ್ಟಗಳನ್ನು ಎದುರಿಸುವುದಕ್ಕಾಗಲಿ, ಸವಾಲೊಡ್ಡುವ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವುದಕ್ಕಾಗಲಿ ನಮಗೆ ಧೈರ್ಯ ಬರುತ್ತದೆ .ಸ್ನೇಹಿತರ ಬೆಂಬಲದ ಮಾತು ಸ್ಪೂರ್ತಿಯಾಗಿ ನಮ್ಮನ್ನು ಮುನ್ನಡೆಯುವಂತೆ ಪ್ರಚೋದನೆ ನೀಡುವುದಲ್ಲದೆ ,ಪ್ರತಿಯೊಂದು ಹಂತದಲ್ಲಿಯೂ ಸ್ನೇಹಿತರ ಸಹಾಯ,ಸಹಕಾರ ನಮ್ಮನ್ನು ಸಾಧನೆಯ ದಾರಿಯಲ್ಲಿ ಕೊಂಡೊಯ್ಯುತ್ತದೆ .ನಮ್ಮ ಬದುಕಿನ ಹಾದಿಯಲ್ಲಿ ಎದುರಾಗುವ ಸಮಸ್ಯೆಗಳನ್ನು ಪರಿಹರಿಸುವ ದೈರ್ಯ ಮೂಡುತ್ತದೆ. ಜೀವನದಲ್ಲಿ ಒಂದು ರೀತಿಯ ಸುರಕ್ಷಿತ ಭಾವನೆ ನಮಗೆ ಸ್ನೇಹಿತರಿಂದ ಸಿಗುತ್ತದೆ .ಹಾಗಾಗಿ ಸ್ನೇಹ ಎಂಬುವುದು ವರವೇ ವಿನಃ ಶಾಪವಲ್ಲ. ಆದರೆ ಗಳಿಸಿದ ಸ್ನೇಹವನ್ನು ಉಳಿಸಿಕೊಂಡು, ನಮ್ಮತನವನ್ನು ಕಾಪಾಡಿಕೊಂಡು ಬದುಕುವ ಚಾಕಚಕ್ಯತೆ ನಮ್ಮಲ್ಲಿ ಇರಬೇಕಾಗುತ್ತದೆ .ಇಲ್ಲವಾದಲ್ಲಿ ಸ್ನೇಹಪರತೆ ಶಾಪವಾಗಬಹುದು.ಇಂತಹ ಸಂದರ್ಭಗಳು ತೀರಾ ಕಡಿಮೆ.

ಜೀವನವೆಂದರೆ ಪರಸ್ಪರ ಸಹಕಾರ,ಸಹಾಯ,ಸಹನೆ ತಾಳ್ಮೆ ಸಾಮರಸ್ಯ ಇವೆಲ್ಲಾ ಅಗತ್ಯವಾಗಿ ಮೈಗೂಡಿಸಿ ಕೊಳ್ಳಬೇಕಾಗುತ್ತದೆ.ಮಾನವೀಯ ಗುಣಗಳನ್ನು ಮೈಗೂಡಿಸಿಕೊಂಡಿರುವಂತಹ ಮನುಷ್ಯನಲ್ಲಿ ಬಹಳಷ್ಟು ಸ್ನೇಹಿತರು ಇರುತ್ತಾರೆ. ಅವರು ಎಂತಹ ಕಷ್ಟದ ಕಾಲದಲ್ಲೂ ಸ್ನೇಹಿತನ ಕೈಬಿಡದೆ ಹೆಗಲಿಗೆ ಹೆಗಲು ಕೊಟ್ಟು, ಸ್ನೇಹಿತನ ಸಮಸ್ಯೆಯನ್ನು ನಿವಾರಿಸುವುದಕ್ಕೆ ಆಗಲಿ ಆತ ಪ್ರಗತಿಯ ಹಾದಿಯಲ್ಲಿ ಆಗಲಿ, ಬೇರೆ ಯಾವುದೇ ಸಂದರ್ಭದಲ್ಲಿ ಯಾವುದೇ ಅಪಾಯ ಎದುರಾದರೂ ಸಹ ಅದನ್ನು ಪರಿಹರಿಸುವಲ್ಲಿ ಹಗಲು ರಾತ್ರಿ ಎನ್ನದೆ ಸದಾ ಜೊತೆಗಿದ್ದು ಪ್ರಾಣಕ್ಕೆ ಪ್ರಾಣವ ಕೊಡಲು ಸಹ ಸಿದ್ಧರಾಗಿರುತ್ತಾರೆ. ಇಂತಹ ಸ್ನೇಹಿತರಿದ್ದರೆ ಸ್ನೇಹಪರತೆ ಎಂಬುದು ಮನುಜನ ಬದುಕಿಗೆ ವರವೇ ಸರಿ. ಉತ್ತಮ ಸ್ನೇಹಿತರನ್ನು ಪಡೆದುಕೊಳ್ಳುವುದು ಮನುಜನ ಅದೃಷ್ಟವೇ ಸರಿ .ಎಲ್ಲರಿಗೂ ಉತ್ತಮ ಸ್ನೇಹಿತರು ಸಿಗಲಾರರು. ಕೆಲವೊಮ್ಮೆ ಸ್ನೇಹಿತರಂತೆ ವರ್ತಿಸಿದರೂ ಅವರ ಮೇಲೆ ನಂಬಿಕೆ ವಿಶ್ವಾಸ ಬಾರದು. ನಿಜವಾದ ಸ್ನೇಹ ವೆಂದರೆ ಸಮಾನ ಅಭಿರುಚಿಗಳನ್ನು ಹಂಚಿಕೊಂಡಿರುವ ಸಮಾನಮನಸ್ಕರ ಎರಡು ಆತ್ಮಗಳ ಸಮ್ಮಿಲನ ಎಂದು ಹೇಳಬಹುದು. ಒಮ್ಮೆ ಸ್ನೇಹಿತರಾದರೆ ನಿಜವಾದ ಸ್ನೇಹಿತರು ತಮ್ಮ ಸ್ನೇಹಿತರಿಗೆ ಯಾವ ತ್ಯಾಗವನ್ನಖ ಮಾಡಲು ಸಹ ಸಿದ್ಧರಾಗಿರುತ್ತಾರೆ .ಆದುದರಿಂದ ಸ್ನೇಹಪರತೆ ಎಂಬುದು ಮನುಷ್ಯನಿಗೆ ಎಲ್ಲಾ ಸಂದರ್ಭದಲ್ಲಿಯೂ ವರ ಎಂದೇ ಹೇಳಬಹುದು .ಶಾಪವಾಗಿ ಪರಿಣಮಿಸುವುದು ಅದು ನಮ್ಮ ದುರ್ವತನೆಯಿಂದ ಅಥವಾ ಅಸಹನೆಯಿಂದ ಅಥವಾ ದುರಾದೃಷ್ಟದಿಂದ .ಕೆಲವೊಂದು ಅಪರೂಪದ ಸಂದರ್ಭಗಳಲ್ಲಿ ಸಂಭವಿಸಬಹುದು ಮನುಷ್ಯನು ಸಂಘಜೀವಿ .ಎಷ್ಟೇ ತಾನು ಸ್ವತಂತ್ರವಾಗಿ ಸ್ವಾವಲಂಬಿ ಜೀವನವನ್ನು ನಡೆಸುತ್ತೇನೆ ಎಂದು ಪ್ರಯತ್ನ ಮಾಡಿದರೂ ಒಂದಲ್ಲ ಒಂದು ರೀತಿಯಲ್ಲಿ ಇತರರನ್ನು ಅವಲಂಬಿಸಿಯೇ ಬದುಕಬೇಕಾಗುತ್ತದೆ .ಹಾಗಿರುವಾಗ ಬದುಕನ್ನು ಸುಸೂತ್ರವಾಗಿ ನಡೆಸಬೇಕಾದರೆ ಸ್ನೇಹಪರತೆ ಇರಲೇಬೇಕು.

ಸಂಬಂಧ ,ಸಹಬಾಳ್ವೆ ,ಸಮಾಜ ನಮಗೆ ನೀಡಿದ ಕೊಡುಗೆಗಳು .ಸ್ನೇಹದಲ್ಲಿ ಒತ್ತಾಯ ಅಥವಾ ಒತ್ತಡಗಳಿರಬಾರದುಸ್ನೇಹವನ್ನು ಸಂಪಾದಿಸಬೇಕು ಸಂಪಾದಿಸಿದ ಸ್ನೇಹದಲ್ಲಿ ಬಿರುಕುಗಳು ಉಂಟಾದರೆ ಅಥವಾ ಭಿನ್ನಾಭಿಪ್ರಾಯಗಳು ಮೂಡಿದರೆ ಅದನ್ನು ಸಾಮರಸ್ಯದಿಂದ ಪರಿಹರಿಸಿಕೊಂಡು ಸ್ನೇಹ ಸಂಬಂಧವನ್ನು ಗಟ್ಟಿಗೊಳಿಸುವ ಚಾತುರ್ಯ ನಮ್ಮಲ್ಲಿರಬೇಕು.

ಸ್ನೇಹವೆಂಬುದು ಪರಸ್ಪರ ಪ್ರೀತಿ ,ನಂಬಿಕೆ, ವಿಶ್ವಾಸದ ಮೇಲೆ ಗಟ್ಟಿಯಾಗಿ ಬಿಗಿದು ಬಿಟ್ಟರೆ ಅಂತಹ ಸ್ನೇಹಿತರು ಎಂತಹ ಆಪತ್ಕಾಲದಲ್ಲೂ ನಮ್ಮ ನೆರವಿಗೆ ಧಾವಿಸಿ ಬರುತ್ತಾರೆ,
ಸ್ನೇಹವೊ ಪ್ರೀತಿ ನಂಬಿಕೆಗಳ ಮೇಲೆ ,ಸ್ವಾರ್ಥ ರಹಿತ ರೀತಿಯಲ್ಲಿ ಸುರಕ್ಷಿತವಾಗಿರುತ್ತದೆ .ಇಂತಹ ಸ್ನೇಹ ಎಂತಹ ಸಂದರ್ಭದಲ್ಲಿ ಕೂಡ ಬದಲಾಗದು. ಅದು ನಿಜವಾದ ಸ್ನೇಹಪರತೆಯಾಗಿರುತ್ತದೆ .ಮನುಷ್ಯನ ಜೀವನದಲ್ಲಿ ಕಾಲು ಎಳೆಯುವವರು ಇದ್ದೇ ಇರುತ್ತಾರೆ. ಅಂತಹ ಸಂದರ್ಭದಲ್ಲಿ ಮನುಷ್ಯನ ಮಾನಸಿಕ ಪ್ರಕ್ಷುದ್ಧತೆಯ ಹಂತದಲ್ಲಿ ಗೆಳೆಯರು ತುಂಬಾ ಸಹಕಾರಿಯಾಗುತ್ತಾರೆ .ಬೇರೆ ಯಾರಲ್ಲಿಯೂ ಬಿಚ್ಚಿಡಲಾಗದ ,ಬಚ್ಚಿಟ್ಟ ವಿಷಯವನ್ನು ಸ್ನೇಹಿತರಲ್ಲಿ ಹೇಳಿ ಮನಸಿನ ಒತ್ತಡವನ್ನು ಕಡಿಮೆ ಮಾಡಿ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು .ಮಾನಸಿಕ ಸ್ಥಿತಿಯನ್ನು ಸಮತೋಲನಕ್ಕೆ ತರಬಹುದು. ಆದುದರಿಂದ ನಾನು ಹೇಳುವ ಅಂಶ ಸ್ನೇಹಪರತೆ ಎಂಬುದು ಮನುಷ್ಯನ ಜೀವನದಲ್ಲಿ ಬಹಳ ಪ್ರಾಮುಖ್ಯವಾದ ಪಾತ್ರವನ್ನು ವಹಿಸುತ್ತದೆ .ಇದಕ್ಕೆ ನಾವು ಅನೇಕ ನಿದರ್ಶನಗಳನ್ನು ಕೊಡಬಹುದು. ಒಂಟಿಯಾಗಿರುವಂತಹ ಕೆಲವರು ತಮ್ಮ ಮನಸ್ಸಿನ ಉದ್ವೇಗಳನ್ನು ಹೇಳಿಕೊಳ್ಳಲು ಬೇರೆ ಯಾರೂ ಸಿಗದೆ,ಮನಸಿನ ಒಳಗೊಳಗೆ ಬಳಲಿ, ಬೆಂದು ಮಾನಸಿಕ ರೋಗಿಗಳಾಗಿ ಮಾರ್ಪಾಡಾದಂತಹ ಅನೇಕ ಉದಾಹರಣೆಗಳು ನಮ್ಮ ಕಣ್ಣ ಮುಂದೆ ನಾವು ಕಾಣಬಹುದು .ಆದುದರಿಂದ ಸಂಘಜೀವಿಯಾದ ಮಾನವನ ಬದುಕಿನಲ್ಲಿ ಸ್ನೇಹಪರತೆ ಎಂಬುದು ಇರಲೇಬೇಕು .ಅದು ನಾವು ಸಮಾಜದಲ್ಲಿ ಆರೋಗ್ಯಕರವಾಗಿ ಬದುಕಲು ಸಹಾಯಮಾಡುತ್ತದೆ. ಅಂದರೆ ಸ್ನೇಹಪರತೆ ಎಂಬುದು ವರವಾಗಿ ನಮ್ಮ ಬದುಕನ್ನು ಸಂತೃಪ್ತಿಗೊಳಿಸುತ್ತದೆ.


ಡಾ.ಸುಮತಿ ಪಿ

Leave a Reply

Back To Top