ಕಾವ್ಯ ಸಂಗಾತಿ
ಸುಪ್ತದೀಪ್ತಿ
ಕಪ್ಪು
ಬೇಕಾಗಿದೆ ಕಪ್ಪು
ನೂಲು
ಬಣ್ಣದ ಬಟ್ಟೆಯ ತೂತುಗಳಲ್ಲಿ
ಹಾಸುಹೊಕ್ಕಾಗಿ ಹೊಲಿದು
ಕೊಂಡು ತೇಪೆಯಾಗಲು
ಬಣ್ಣ ಮರೆಸದೆ ತೂತು ಮರೆಸಲು
ಎಲ್ಲಾ ಬಣ್ಣ ನುಂಗುವ ಮಸಿ
ಕೆನ್ನೆಯಲ್ಲೊಂದು ಚುಕ್ಕೆ
ಸೌಂದರ್ಯಕ್ಕೆ
ಆಂತರ್ಯಕೆ ಇಳಿದುಕೊಂಡಾಗ
ಬವಳಿಬರುವ ಬಿಕ್ಕುಗಳಿಗೆ
ಇಲ್ಲವೇ ಇಲ್ಲ ದಿಕ್ಕು
ಹಸಿದ ಹೊಟ್ಟೆಯ ಮಲಿನ ಬಟ್ಟೆ
ತಾನೇ ತಾನಾದಾಗ
ಬದುಕು ಮೂರಾಬಟ್ಟೆ
ಬಣ್ಣವಿಲ್ಲದ ಬಾಳಿನಲ್ಲಿ
ಕಪ್ಪು ಮಾತ್ರ ಸ್ಥಾಯಿ
ಬೆಳಕಿಲ್ಲದ ಬಾಳಿನಲ್ಲಿ
ಕಪ್ಪು ತಾನೇ ಮಾಯಿ
ಬೆಳಕಿನೊಳಗಣ ಬಣ್ಣ ಕಾಣುವ
ಕಣ್ಣಿಗೆಟಕುವುದೆ ಕಾಡಿಗೆಯಂಚು?
ಕಾಣುವುದೆ ಬಾಳಬಿಂಬ
ಕಪ್ಪಿಲ್ಲದ ಕನ್ನಡಿಯಲ್ಲಿ?
ಕಪ್ಪು ಹಬ್ಬಿದ ಮಣ್ಣಿನಲ್ಲೇ ಬೆಳೆವ ಬಿಳಿ ಹತ್ತಿ
ತಬ್ಬಿ ಹಬ್ಬಲಿ ಒಡಲುಗಳನು,
ಮಲಿನವಾಗದಿರಲಿ ಬಾಳ ಬಣ್ಣದ ಬುತ್ತಿ.
ಸುಪ್ತದೀಪ್ತಿ.
ಅರ್ಥಪೂರ್ಣ ಕವಿತೆ
ಕವಿತೆ ಚೆನ್ನಾಗಿದೆ