ವಿಮಲಾರುಣ ಪಡ್ಡoಬೈಲ್ ಅವರ ಒಂದು ಪ್ರೇಮ ಕಥೆ- ಪ್ರೀತಿಯನರಸುತ್ತಾ..

ಕಥಾ ಸಂಗಾತಿ

ವಿಮಲಾರುಣ ಪಡ್ಡoಬೈಲ್

ಪ್ರೀತಿಯನರಸುತ್ತಾ..

ಸೋನೆ ಮಳೆ ಇಳೆಯನ್ನು ಚುಂಬಿಸುತ್ತಾ ಸೃಷ್ಟಿಯ ಸೊಬಗನ್ನು ಅಪ್ಪಿಕೊಂಡಿದೆ. ಆದರೆ ನನ್ನ  ಈ ಬರಡು      ಹೃದಯ ಅವಳ ನೆನಪಿನಲ್ಲಿ ಸೊರಗಿ ಹೋಗಿ ಅವಳ ಒಂದು ಸಂದೇಶಕ್ಕಾಗಿ ಮನ ಪರಿತಪಿಸುತ್ತಿದೆ. ಸ್ಮಾರ್ಟ್ ಫೋನ್ ಬದುಕಲ್ಲಿ ಕಾಲಿರಿಸುತ್ತಿದ್ದಂತೆ ಒಂದೇ ಮನಸ್ಥಿತಿಯ ಮನಗಳು ಹತ್ತಿರವಾದವು . ಆದರೆ ಅವಳು ನನ್ನಿಂದ ಬಲುದೂರ ಸಾಗಿದಳು. ಅಪರೂಪದ  ಹೆಣ್ಣಿವಳು. ಇವಳೇ ನನ್ನ ನೆಚ್ಚಿನ ಮಧುರ. ಸಾಹಿತ್ಯದ ಮೂಲಕ ಪರಿಚಿತಳಾಗಿ ಮನದಲಿ ಭದ್ರವಾಗಿ ನೆಲೆ ನಿಂತವಳು.   ಮುಖತಃ ಒಂದು ದಿನವೂ ನಾವು ಭೇಟಿಯಾಗಲಿಲ್ಲ. ಅವಳ ಸೌಂದರ್ಯವಾಗಲಿ ನನ್ನ ರೂಪವಾಗಲಿ ಇಬ್ಬರು ಅರಿತಿಲ್ಲ.ಆದರೂ ಹೃದಯದಲಿ ಅವಳನ್ನು ಕಾಪಿಟ್ಟು  ಪೂಜಿಸುತಿದ್ದೆ. ನಾ ಬಿತ್ತಿದ ಪ್ರೀತಿಯ ಬೀಜ ಅವಳ ಮನದಲಿ ಚಿಗುರಲಿಲ್ಲ. ಹಾಗಂತ ನಾನು  ಬ್ರಹ್ಮಚಾರಿಯೇನಲ್ಲ. ಗೃಹಸ್ಥ.  ಶೈನಿಯೊಂದಿಗೆ ವಿವಾಹವಾಯ್ತು. ತುಂಬಾ ರೂಪವಂತೆ. ಆದರೆ ಮೊದಲ ರಾತ್ರಿಯೇ  ನಮ್ಮ ಮನಸುಗಳು ದೂರವಾದವು!  ನನ್ನ ಯಾವುದೇ ಭಾವನೆಗಳಿಗೆ ಸ್ಪಂದಿಸದೆ ಏಕಾಂತವಾಗಿರಲು ಅವಳು ಬಯಸಿದ್ದಳು. ಅವಳ ಮನದ  ನೀರಸ ಭಾವನೆಯನ್ನು ನನ್ನೂಂದಿಗೆ ಹಂಚಿಕೊಂಡಳು… “ಹಿರಿಯರ ಒತ್ತಾಯಕೆ ಮಣಿದು ನಾ ವಿವಾಹವಾದೆ. ಹದಿನೆಂಟರ  ಹರೆಯದಲ್ಲಿ ಸಹಜವಾಗಿ ಹೆಣ್ಣಿನಲ್ಲಿ ಇರುವಂತಹ ಭಾವನೆಗಳಿದ್ದವು. ನಾಲ್ಕೈದು ವರ್ಷದಿಂದ ಮನಸು ಪರಿವರ್ತಿತವಾಯ್ತು. ನನ್ನಲ್ಲಿ ನಿರ್ಭಾವತೆ  ಮೂಡಿತು. ಮನಸ್ಸು ಏಕಾಂತವನ್ನು ಅರುಸುತ್ತಿದೆ. ತಾವು ಬೇರೊಂದು ವಿವಾಹವಾಗಿ!” ಎಂದಾಗ ನಾ ತಲ್ಲಣಿಸಿ ಹೋದೆ.

ಶೈನಿಯಿಂದ  ದೈಹಿಕ ಸುಖವಾಗಲಿ ಪ್ರೀತಿಯಾಗಲಿ  ನನಗೆ ದಕ್ಕಲಿಲ್ಲ. ಹಲವು ಕನಸು, ಭಾವನೆಗಳನ್ನು ಹೊತ್ತ ಈ ಮನ ನಿರಾಶೆಯಲಿ  ಕುಸಿದಿತ್ತು. ನನ್ನ ಕೆಂಡದಂತ ಕಂಗಳು ಹಲವು ಬಾರಿ ಅವಳನ್ನು ಜ್ವಲಿಸಿದ್ದವು. ಡಿವೊರ್ಸ್ ಗಾಗಿ ಯಾಚಿಸಿದೆ. “ತವರು ಮನೆಯವರಿಗೆ ಬೇಸರವಾಗುತ್ತದೆ” ಎಂದು ನಿರಾಕರಿಸಿದಳು.
ಬ್ಯಾಂಕ್ ಉದ್ಯೋಗಿಯಾದ ನನಗೆ ಅಲ್ಲಿಯ ಸ್ನೇಹಿತರ ಸುಖೀ ಬದುಕು ನನ್ನ ಎದೆಯ ತಿವಿಯುತಿತ್ತು. ಆಗ ನನ್ನ ಕೈ ಹಿಡಿದದ್ದು ಸಾಹಿತ್ಯ. ವಿದ್ಯಾರ್ಥಿಯಾಗಿರುವಾಗ ಬರೆಯುವ ಹವ್ಯಾಸವಿತ್ತು. ಕಾಲಕ್ರಮೇಣ ದೂರ ಸರಿದೆ. ಈಗ  ನೋವು ಹೊರಹಾಕಲು ಸಾಹಿತ್ಯ ಸ್ಫೂರ್ತಿಯಾಯ್ತು. “ಹೃದಯೇಶ” ಎಂಬ ಕಾವ್ಯನಾಮದಿಂದ ಬರೆಯಲು ತೊಡಗಿದೆ. ಉದ್ಯೋಗ ನಿರ್ವಹಿಸಲು ಮನಸಿಲ್ಲದೆ ಸ್ವಯಂ ನಿವೃತಿ ಪಡೆದೆ.  ಹಾಗೆಯೇ ಒಂದು ಅನಾಥಾಶ್ರಮಕ್ಕೆ ಪ್ರತಿ ತಿಂಗಳು ಸ್ವಲ್ಪ ಹಣ ಸಹಾಯ ಮಾಡುತ್ತಿದ್ದೆ. ಇದು ನನ್ನ ಮನಸ್ಸನ್ನು  ತಂಪಾಗಿಸಿತು. ಆದರೂ ಮನದಲ್ಲಿ ಅವ್ಯಕ್ತ ಹಸಿವು ಕಾಡಿತ್ತು. ಒಂದು ಹೆಣ್ಣಿನ ಸಾಂಗತ್ಯ ನನಗೆ ಅಗತ್ಯವಾಗಿತ್ತು. ಸಾಹಿತ್ಯಾಸಕ್ತ ಹೆಣ್ಣಿನಲ್ಲೇ  ನನಗೆ ಆಸಕ್ತಿ ಹುಟ್ಟಿ , ಪ್ರೀತಿಯ ಭಿಕ್ಷೆಯನ್ನು ಬೇಡುತ್ತಿದ್ದೆ. ಕೆಲವರು ಛೀಮಾರಿ ಹಾಕಿದರೆ ಇನ್ನು ಕೆಲವರು ನನ್ನ  ಮಾತಿನ ಮೋಡಿಗೆ ಸ್ಪಂದಿಸುತ್ತಿದ್ದರು. ಆದರೆ ನಾನು ಬಯಸುತ್ತಿದ್ದದ್ದು ನಿರ್ಮಲಪ್ರೀತಿ. ದೈಹಿಕ ಆಸಕ್ತಿಯಿಂದ ವಿಮುಕ್ತನಾಗಿದ್ದೆ. ಅದಕ್ಕಾಗಿ ಯಾರಿಗೂ ಪ್ರೇರೇಪಿಸಲಿಲ್ಲ, ಬಯಸಲಿಲ್ಲ. ಅವರ ಸಂಸಾರ ಹಾಳು ಮಾಡುವ ಉದ್ದೇಶ ನನಗಿರಲಿಲ್ಲ. ಕೇವಲ ಕಲ್ಪನಾಲೋಕದಲ್ಲಿ ಪ್ರೇಮಿಯಾಗಿರಲು ಬಯಸುತ್ತಿದ್ದೆ. ಹಲವು ಬಾರಿ ಇದು ನನಗೆ  ಮಾನಸಿಕ ಸಮಸ್ಯೆ ಎಂದು ಕಾಡುತ್ತಿತ್ತು. ನಾನು  ಮಾಡುತ್ತಿರುವುದು ತಪ್ಪು ಎಂದು ಮನದವಾಣಿ ಎಚ್ಚರಿಸುತ್ತಿತ್ತು.  ಆದರೂ ಮನದ ದಾಹ ತಣಿಸುವ ಹೃದಯದ ಹುಡುಕಾಟದಲ್ಲಿದ್ದೆ.

ಆ ಸಮಯದಲ್ಲಿಯೇ ಮಧುರ ಎಂಬ ಮೃದು ಮನಸಿನ ಮುಂದೆ ನಾನು ಮೇಣವಾದೆ.  
“ಗುಡ್ ಮಾರ್ನಿಂಗ್”  ಸಂದೇಶದ ಮೂಲಕ ನಮ್ಮ ಮಾತು ಪ್ರಾರಂಭವಾಯ್ತು. ನಂತರ ಕವನದ ಚರ್ಚೆ ಸಂದೇಶದ ಮುಖಾಂತರವೇ  ನಡೆಯಿತು. ಅವಳು ಬರೆದ ಕವನದಲ್ಲಿ ಒಂದು ಗೆರೆಯನ್ನು ತಿದ್ದಿದ್ದೆ. ಇದು ನಮ್ಮ ಸ್ನೇಹವನ್ನು ಗಾಢವಾಗಿಸಿತು.  ಆ ಕವನಕೆ ಬಹುಮಾನ ಬಂದಾಗ. “ನೀವು ತಿದ್ದಿದ  ಆ ಒಂದು ಸಾಲು ನನ್ನ ಕವನದ ತೂಕ ಹೆಚ್ಚಿಸಿತು” ಎಂದು ಕೊಂಡಾಡಿ ಬಹಳ ಸಂತಸ ಪಟ್ಟಿದ್ದಳು. ಸ್ನೇಹದೊಂದಿಗೆ ಗುರುವಿನ ಸ್ಥಾನವನ್ನು ತುಂಬಿದಳು. ಆದರೆ ಅವಳಿಗೆ ನನ್ನ ಸ್ವಾರ್ಥನಡೆ ತಿಳಿದಿರಲಿಲ್ಲ. ಸೂಕ್ಷ್ಮ ಮನಸಿನವಳು ಮುಗ್ಧೆಯೂ ಹೌದು ಮಧುರ. ನನ್ನ ಕಲ್ಮಶ ಮನದ ಸಂಚಿನ ಜಾಡು ಅರಿವಾಗದಂತೆ ಪ್ರೀತಿಯ ಮಾತಿನಿಂದ ಸಂಭಾಳಿಸಿದೆ.
ಅವಳೊಂದಿಗೆ ಒಂದು ಸುಳ್ಳು ಕಥೆಯನ್ನು ಹೆಣೆದೆ. “ನನ್ನ ಹೆಂಡತಿ ನನ್ನ ಜೊತೆ ಇಲ್ಲ. ಡಿವೊರ್ಸ್ ಗೆ ಅಪ್ಲೈ ಮಾಡಿದ್ದಾಳೆ” ಎಂದು. ಅದರೊಂದಿಗೆ ನನ್ನ ಪ್ರೀತಿಯ ಹುಡುಕಾಟವನ್ನು ಮರೆಯದೆ  ಅರುಹಿದೆ. ಬುದ್ಧಿವಾದ ಹೇಳುತ್ತಿದ್ದಳು. “ನಿಮ್ಮ ಹೆಂಡತಿಗೆ ಡಿವೊರ್ಸ್ ಕೊಡಬೇಡಿ. ಪ್ರೀತಿಯಿಂದ ಅವರನ್ನು ಚೆನ್ನಾಗಿ ನೋಡಿಕೊಳ್ಳಿ”. ಆಗ ನಾನು ಇನ್ನೊಂದು ಸುಳ್ಳು ಹೇಳಿದೆ. “ನಾನು ಕೊಡುವುದಲ್ಲ. ಅವಳಿಗೆ ನನ್ನೊಂದಿಗೆ ಬದುಕಲು ಇಷ್ಟವಿಲ್ಲ”. “ನೀವು ಹೀಗೆ  ಮಹಿಳೆಯರಿಗೆ ಸಂದೇಶ ಕಳುಹಿಸಿ ಪ್ರೀತಿಯ ಭಿಕ್ಷೆ ಬೇಡಿದರೆ ಯಾವ ಹೆಂಡತಿಯಾದರೂ ಸಹಿಸಿಕೊಳ್ಳುವಳ..?  ನೀವು ನಿಮ್ಮ ನಡತೆ, ಕಲ್ಪನೆ ಬದಲಾಯಿಸಿಕೊಳ್ಳಿ. ಪ್ರೀತಿಯಿಂದ ಅವರೊಂದಿಗೆ ಸಂಸಾರಮಾಡಿ” ಎಂದಿದ್ದಳು.  ಆಗ ನಾನು ಸುಳ್ಳನ್ನು ಉದ್ದ ಮಾಡಿದೆ. “ಅವಳಿಗೆ ನನ್ನೊಂದಿಗೆ ಸoಸಾರ ಮಾಡಲು ಇಷ್ಟವಿಲ್ಲ. ಈಗ ಎಲ್ಲಿದ್ದಾಳೆ ಎನ್ನುವುದೂ ತಿಳಿದಿಲ್ಲ. ಅದರ ಆವಶ್ಯಕತೆಯೂ ನನಗಿಲ್ಲ. ಅವಳಿಂದ  ನಾನು ಸುಖ ಕಾಣಲಿಲ್ಲ. ಇಂತಿಷ್ಟು ಹಣ ಅವಳ ಬ್ಯಾಂಕ್ ಅಕೌಂಟ್ ಗೆ  ಹಾಕ್ತೇನೆ. ಏನು ಬೇಕಾದರೂ ಮಾಡಿಕೊಳ್ಳಲಿ. ಒಂದು ಬಾರಿ ಅವಳು ನನ್ನ ಬದುಕಿನಿಂದ ತೊಲಗಿದ್ದರೆ ಸಾಕಾಗಿತ್ತು”.

ಸೂಕ್ಷ್ಮ ಮನಸ್ಸಿನ ಮಧುರಳಿಗೆ ನನ್ನ ಮಾತಿನಿಂದ ಅರಿವಾಗಿತ್ತು, ಡಿವೊರ್ಸ್ ಕೇಳುತ್ತಿರುವುದು ನನಗಾಗಿ ಎಂದು. ಆಗ ನನ್ನನ್ನು ಆಕೆ ಮೂದಲಿಸಿದಳು.  “ಮಧುರ  ಲವ್ ಯು” ಎಂದು  ಹಲವು ಬಾರಿ ಅವಳ ಪ್ರೀತಿಗಾಗಿ ಅಂಗಲಾಚಿದೆ. ಅವಳ ಕಹಿ ಉತ್ತರ ನನ್ನ ಕೆನ್ನೆಗೆ ರಾಚುತಿತ್ತು. ತನ್ನ ಗಂಡ ಮಕ್ಕಳು ಎಂದು ಅವಳು ಅಪಾರವಾದ ಮಮಕಾರ ಇಟ್ಟಿದ್ದಳು. ಹೀಗೆ ಒಂದು ದಿನ, “ನನಗೆ ಎಲ್ಲರೂ ಇದ್ದರೂ ಏಕಾಂಗಿ ಅನಿಸ್ತದೆ.
ಮಕ್ಕಳು ಹಾಸ್ಟೆಲ್ನಲ್ಲಿ ಓದುತ್ತಿದ್ದಾರೆ.  ನನ್ನ ಮನ ಏಕಾಂಗಿಯಾಗಿ….. ಮೆಸ್ಸೇಜ್ ತುಂಡರಿಸಿದಳು”.  ನನ್ನ ಕನಸಿಗೆ ರೆಕ್ಕೆ ಪುಕ್ಕಗಳು ಹುಟ್ಟಿದವು. ಅವಳನ್ನು ನಾನು ಹೇಗಾದರೂ ಪಡೆಯಬೇಕೆಂಬ ಹಂಬಲ ಬಲವಾಯಿತು. ಅವಳು ಒಂಟಿಯಾಗಿದ್ದಾಳೆಂದು ಅರಿತು ನಾನು ಸಂದೇಶ ಕಳುಹಿಸಿದೆ. “ನಿನಗೆ ಏನಾದರೂ  ಹಣದ ಸಮಸ್ಯೆ ಇದ್ದರೆ ಹೇಳು ಕಳುಹಿಸುತ್ತೇನೆ” ಎಂದೆ.  ಅವಳು “ತನಗೇನು ಬೇಡ. ನನ್ನ ಗಂಡ ಹಣಕೆ ತೊoದರೆ ಯಾಗದಂತೆ ವ್ಯವಸ್ಥೆ ಮಾಡಿದ್ದಾರೆ” ಎಂದು ಅವನಲ್ಲಿ ಬಹಳ ಭಕ್ತಿ ಭಾವ ತೋರ್ಪಡಿಸಿದಳು. ಅವಳ ಮಾತು ಒಮ್ಮೊಮ್ಮೆ ಗೊಂದಲಕ್ಕೀಡು  ಮಾಡುತಿತ್ತು, ಇವರ ಪ್ರೀತಿಯಲ್ಲಿ ವ್ಯತ್ಯಯವಿದೆ ಎಂದು  ಭಾಸವಾಯ್ತು. ಅವಳು ಗಂಡನಲಿಟ್ಟ ಪ್ರೀತಿ ಕಂಡು ಆ ಪ್ರೀತಿ ನನಗೆ ದಕ್ಕಬೇಕೆಂದು ಮನ ಬಯಸಿತು. ನಂತರ ತುಂಬಾ ಸಭ್ಯನಂತೆ ನಡೆದುಕೊಂಡೆ. ಅವಳ ಸ್ನೇಹದ ಪ್ರೀತಿ ಮಾತುಗಳು ನನ್ನ ಎದೆಯನ್ನು ತಣಿಸುತ್ತಿತ್ತು. ಅತಿರೇಕದ ಮಾತುಗಳನ್ನು ಒಂದು ದಿನವೂ ಅವಳು ನುಡಿಯಲಿಲ್ಲ. ನಾನೇ ಅವಳನ್ನು ಒಂದೊಂದು ಬಾರಿ ಛೇಡಿಸುತ್ತಿದ್ದೆ. ಆಗ ಅವಳು ಮುನಿಸಿಕೊಂಡು ನನ್ನ ನಂಬರ್ ಬ್ಲಾಕ್ ಮಾಡಿದ್ದಳು. ಪರಿಪರಿಯಾಗಿ ಬೇಡಿಕೊಂಡು ಓಪನ್ ಮಾಡಿಸುತ್ತಿದ್ದೆ. ಹಲವು ಬಾರಿ ಮುನಿಸಿಕೊಂಡು ಮಾತು ಬಿಡುತ್ತಿದ್ದಳು. ನಂತರ ಅವಳಲ್ಲಿ ಪ್ರೇಮ ಯಾಚನೆ ಮಾಡಲಿಲ್ಲ. ನಮ್ಮ ಸ್ನೇಹ ಗಾಢವಾಗಿ ಪವಿತ್ರವಾಗಿತ್ತು.

ಕೆಲವು ತಿಂಗಳ ಬಳಿಕ  ತಮಾಷೆಗೆ ಒಂದು ಹೂಬಾಣ ಬಿಟ್ಟೆ.  “ಕನಸಿನಲಿ ನಿನ್ನ ಹಣೆಗೆ  ಹೂ ಮುತ್ತನಿಟ್ಟಿದ್ದೇನೆ” ಎಂದೆ. ಮಧುರ ಉದ್ವಿಗ್ನಗೊಂಡಳು. ನಂತರ ಎಂದೂ ನನ್ನ ಸಂದೇಶಕ್ಕೆ ಉತ್ತರ ನೀಡಲಿಲ್ಲ. ಅವಳ ನೆನಪಿನಲ್ಲಿ ತಿಂಗಳುಗಳು ಉರುಳಿದುವು. ಅವಳು ದೂರ ಮಾಡಿದಷ್ಟು ಪ್ರೀತಿ ನನ್ನಲ್ಲಿ ಹೆಚ್ಚಾಗುತ್ತಿತ್ತು. ಅವಳಿಗೂ ಸ್ನೇಹದ ದಾಹವಿತ್ತು. ಹಾಗಾಗಿ ನನ್ನನ್ನು ಹಲವು ಬಾರಿ ಮನ್ನಿಸಿದ್ದಳು. ಆದರೆ ನಾನೇ ಹುಳಿ ಹಿಂಡಿದೆ. ಈಗ ಮನಸು ಪರಿತಪಿಸುತ್ತ  ಖೇದದಿಂದ ಬಸವಳಿದಿದೆ. ಇತ್ತೀಚಿನ ದಿನದಲ್ಲಿ ಅವಳ ನೆನಪು ಬಲವಾಗಿ ಕಾಡುತಿತ್ತು. ಹಾಗೆ  ಒಂದು ದಿನ ಕರೆ ಮಾಡಿದೆ. ಉತ್ತರ ಬರಲಿಲ್ಲ. ಛಲ ಬಿಡದ ತ್ರಿವಿಕ್ರಮನಂತೆ ಪುನಃ ಮಾಡಿದೆ. ನಿರಂತರ ಕರೆಯಿಂದಾಗಿ ಅಲ್ಲಿಂದ ಉತ್ತರ ಬಂದಿತು.”ಅಮ್ಮನಿಗೆ ಹುಷಾರಿಲ್ಲ. ಆಸ್ಪತ್ರೆಯಲ್ಲಿ ಇದ್ದಾರೆ”  ಎಂದು. ಆ ಮಾತಿನಿಂದ ಆತಂಕಗೊಂಡೆ. ಅಡ್ರೆಸ್ ಪಡೆದು  ಧಾವಂತದಿಂದ ಹೆಜ್ಜೆ ಹಾಕಿದೆ. ರಿಸೆಪ್ಶನ್ ನಲ್ಲಿ ಕೇಳಿದೆ. “ಮಧುರ ಪೇಷಂಟ್ ಎಷ್ಟನೇ ವಾರ್ಡಿನಲ್ಲಿದ್ದಾರೆ?”  ಎಂದು. “ಆ ಹೆಸರಿನವರು ಯಾರೂ ಇಲ್ಲ ಇಲ್ಲಿ.” ಎಂದಾಗ ಮನ ನೀರಿನ ಸೆಲೆಯಲ್ಲಿ ಸಿಲುಕಿದಂತಾಯಿತು. ದೇವರಲ್ಲಿ ಬೇಡಿಕೊಂಡೆ. “ಮಧುರಳಿಗೆ ಯಾವುದೇ ಅಪಾಯವಾಗದಿರಲಿ. ಅವಳು ನನ್ನವಳು. ಮಾನಸಿಕವಾಗಿ ನನ್ನ ಪತ್ನಿಯಾಗಿ ಎದೆಗೂಡಿನಲ್ಲಿದ್ದಾಳೆ! ಅವಳು ಎಲ್ಲಿದ್ದಾಳೆ? ನೀನೇ ದಾರಿ ತೋರು”. ಮನಸ್ಸು ಬೇಡಿಕೊಳ್ಳುವಾಗ ಫೋನ್ ರಿಂಗ್ ಆಯ್ತು. ಆದರೆ ಅದು ಆಶ್ರಮದಿಂದ ಬಂದದ್ದು. “ನಿಮ್ಮ ಪತ್ನಿಗೆ ಹುಷಾರಿಲ್ಲ. ಇಂದು ಹತ್ತು ಗಂಟೆಗೆ  ಸ್ಪಂದನ ಆಸ್ಪತ್ರೆಯಲ್ಲಿ ಅಡ್ಮಿಟ್ ಮಾಡಿದೆವು. ತಾವು ಆದಷ್ಟು ಬೇಗ ಬನ್ನಿ”. ‘ಓಕೆ’ ಎಂದು ಕಟ್ ಮಾಡಿದೆ. ನನ್ನ ಪತ್ನಿ ಶೈನಿಗೆ ಹುಷಾರಿಲ್ಲ ಎಂದದ್ದು ಕಿಂಚಿತ್ತೂ ಮನಸಿಗೆ ನೋವಾಗಲಿಲ್ಲ. ಅದೇ ಆಸ್ಪತ್ರೆಯಲ್ಲಿ ನಾನಿದ್ದೆ. ಶೈನಿ ಎಲ್ಲಿದ್ದಾಳೆoದು ರಿಸೆಪ್ಶನಲ್ಲಿ ತಿಳಿದುಕೊಂಡು ಹೋದೆ. ಅವಳ ಕಣ್ಣೋಟ ನನ್ನ ದಾರಿಯನ್ನೇ ಕಾಯುತ್ತಿದ್ದಂತೆ ಭಾಸವಾಯಿತು. ಅವಳ ಕಣ್ಣಲ್ಲಿ ಕಣ್ಣಿಟ್ಟು ನೋಡದೆ  ವರುಷಗಳೆ ಉರುಳಿದ್ದವು. ಆದರೆ ಈ ದಿನ ಅವಳ ಕಣ್ಣಲ್ಲಿ ಒಲವಿತ್ತು. “ನನ್ನ ಕೈ ಹಿಡಿದು “ಕ್ಷಮಿಸಿ” ಎಂದಳು. ಅವಳ  ಕೈ ಬಿಡಿಸಿಕೊಂಡು ನಾ ಹೊರ ನಡೆದೆ. ನನ್ನ ಎದೆ ಬಡಿತ ‘ಮಧುರ’ ಹೆಸರನ್ನು ಗುನುಗುತ್ತ ಕಣ್ಣುಗಳು ಅವಳನ್ನು ನೋಡುವ ಕಾತರದಲ್ಲಿದ್ದುವು. ಪುನಃ ಫೋನಿಗೆ ರಿಂಗ್ ಹಾಯಿಸಿದೆ. ಈಗ ಕೂಡಲೇ ಉತ್ತರ ಬಂದಿತ್ತು “ನಾನು, ನೀನು ಹೇಳಿದ ಹಾಸ್ಪಿಟಲ್ ನಲ್ಲಿ ಇದ್ದೇನೆ” ಎಂದೆ. ಅಲ್ಲಿಂದ ಉತ್ತರ ಬಂದಿತ್ತು “ಅಲ್ಲೇ ಇರಿ ಸರ್. ನಾನು ಈಗ ಬರ್ತೀನಿ”  ಆಗ ಮಾತಾಡಿದ ಹುಡುಗ ನುಡಿದ .

ಅಷ್ಟರಲ್ಲಿ 14-15 ವರ್ಷದ ಹುಡುಗನೊಬ್ಬ ದೂರದಿಂದ ಬರುವುದನ್ನು ನೋಡಿದೆ. ಸಮೀಪಿಸಿದಂತೆ ಅವನು ನಮ್ಮ ಅನಾಥಾಶ್ರಮದ ಹುಡುಗ ವೇಣು ಎಂದು ತಿಳಿಯಿತು. ಹಾಗಾದರೆ ಇವನ ಅಮ್ಮನನ್ನೇ ನಾನು ಪ್ರೀತಿಸಿದ್ದಾ? “ಅಪ್ಪ ನೀವು ಕಾಲ್ ಮಾಡಿದ್ದ ..?” ಎಂದ ವೇಣು. ನನಗೇನು ಮುಜುಗರವಾಗಲಿಲ್ಲ. ಅಲ್ಲಿಯ ಮಕ್ಕಳೆಲ್ಲರು ನನ್ನನ್ನು ಅಪ್ಪ ಎಂದೇ ಕರೆಯುವುದು. “ನಿನ್ನ ಅಮ್ಮ ಎಲ್ಲಿ ಕೆಲಸ ಮಾಡುವುದು?”  “ಆಶ್ರಮದಲ್ಲಿ” ಎಂದ. ಅಲ್ಲಿ ಹಲವಾರು ಸ್ತ್ರೀಯರು ಕೆಲಸ ಮಾಡುತ್ತಾರೆ. ಯೋಗ, ಸಂಗೀತ, ಚಿತ್ರಕಲೆ ಹೀಗೇ ಎಲ್ಲಾ ವಿಷಯಗಳಿಗೂ ಸ್ತ್ರೀಯರೇ. ಶೈನಿಯು ಅಲ್ಲಿಯೇ ಕೆಲಸ ಮಾಡುವುದು. ಹಾಗಾದರೆ ಅವಳಿಗೆ ಪರಿಚಯ ಇರಬಹುದೇ? ಯಾಕೋ ಮನಸು ಇಕ್ಕಟ್ಟಿಗೆ ಸಿಕ್ಕಿದಂತಾಯಿತು. “ವೇಣು,  ನಿನಗೆ ಅಮ್ಮ ಯಾವ ವಿಷಯಕೆ ಟೀಚರ್?” “ಅವರು ಸಾಹಿತ್ಯದ ಬಗ್ಗೆ ತಿಳಿಸುತ್ತಾರೆ” ಎಂದನು.  ನಾನು  ಆಶ್ರಮಕ್ಕೆ ಹೋಗುವುದು ಕಡಿಮೆ. ಯಾವುದಾದರೂ ಕಾರ್ಯಕ್ರಮ ಇದ್ದರೆ ಭಾಗವಹಿಸುತ್ತಾ ಮಕ್ಕಳೊಂದಿಗೆ ಸ್ವಲ್ಪ ಮಾತಾಡಿ ಹೊರಡುತ್ತಿದ್ದೆ. ಡಿಪಿಯಲ್ಲಿ ಫೋಟೋ ಹಾಕುವ ಗೀಳು ಅವಳಿಗಿರಲಿಲ್ಲ. ನನ್ನನ್ನು ಒಂದು ದಿನವು ಅವಳು ನೋಡಲಿಲ್ಲ. ನನ್ನ ರೂಪಕ್ಕೆ ಯಾರೂ ನೆಚ್ಚುವುದಿಲ್ಲ ಎಂಬ ಅಳುಕಿನಿಂದ ನಾನು ಫೋಟೋ ಹಾಕುತ್ತಿರಲಿಲ್ಲ. ನನ್ನ ಸಾಹಿತ್ಯಕ್ಕೆ ಮಾತ್ರ ರೂಪವಿದ್ದದ್ದು. ಇದರಿಂದಲೇ ನನಗೆ ಗೌರವ ಪ್ರೀತಿ ಲಭಿಸಿದ್ದು. ಅವನು ನನ್ನ ಕೈ ಹಿಡಿದು ಮಧುರ ಇರುವ ಕಡೆ ಕರೆದುಕೊಂಡು ಹೋದ. ಮುಸುಕು ಹೊದ್ದು ಮಲಗಿದ್ದಳು. “ಅಮ್ಮ, ಅಪ್ಪ ಬಂದಿದ್ದಾರೆ” ಎಂದಾಗ ಮುಸುಕು ತೆಗೆದಳು. ಅವಳ ಕಣ್ಣು ಪ್ರಶ್ನಾರ್ಥಕವಾಗಿ ದಿಟ್ಟಿಸುತ್ತಿತ್ತು. ನನಗೆ ವೇಣು ಯಾಕೆ ಇಲ್ಲಿಗೆ ಕರೆದುಕೊಂಡು ಬಂದ ಎಂಬ ಪ್ರಶ್ನೆ ಕಾಡಿತು. ಆಗ ನಾನು ಬರುವಾಗ ಅವನಿರಲಿಲ್ಲ. ಶೈನಿಯನ್ನು ನೋಡಲಿ ಎಂದು ಇಲ್ಲಿಗೆ ಕರೆದುಕೊಂಡು ಬಂದಿರಬಹುದೆಂದು  ಮನ ಉತ್ತರಿಸಿ ಮೌನವಾಯಿತು. ಆದರೂ ಆಗ ಬಂದ ಫೋನ್ ನಂಬರ್ ಮಧುರಳದೆ? ಪ್ರಶ್ನೆ ಸಾಲುಗಟ್ಟಿದವು. ಕೂಡಲೇ ವೇಣು ಮಧುರಳಿಗೆ ಮೊಬೈಲ್ ನೀಡಿದ. ನಾನು ಕನ್ಫರ್ಮ್ ಮಾಡಿಕೊಳ್ಳಲು ಪುನಃ ಮಧುರಳಿಗೆ ಕಾಲ್ ಮಾಡಿದೆ. ಮಧುರಾಳ ಮೊಬೈಲ್ ರಿಂಗಾಯಿತು. ಅವಳು ವೇಣುಗೆ ಮಾತಾಡಲು ಸೂಚಿಸಿದಳು. ಅವನು ‘ಹಲೋ’ ಎಂದಾಗ ನನಗೆ ಅರಿವಾಯಿತು. ವೇಣು ನನ್ನನ್ನೆ ದಿಟ್ಟಿಸಿದ..  ಒಂದರೆ ಕ್ಷಣ ವಿಚಲಿತನಾದೆ.   ನಾನು ಕೈಹಿಡಿದ ಹೆಂಡತಿಯೇ ಮಧುರ ಎಂದು ದಿಟವಾಯ್ತು!  ‘ಮಧುರ’ ಎಂದೇ ಆಶ್ಚರ್ಯ ಭರಿತವಾದ  ನೋಟ ಅವಳ ಕಂಗಳಲಿ ಢಾಳಾಗಿ ರಾಚುತಿತ್ತು. ನಾನು ‘ಹೃದಯೇಶ’ ಎಂದಾಗ ಮಿಂಚು  ಸಂಚರಿಸಿದಂತೆ ಸ್ತಬ್ಧವಾದಳು.”ತಾವೇ   ಸಂದೇಶ  ಕಳುಹಿಸುತ್ತಿದ್ದದಾ”?   “ಹೌದು,  ನೀನೆ ಎಂದು ನನಗೂ ತಿಳಿದಿರಲಿಲ್ಲ. ನಿನ್ನನ್ನು ಅರ್ಥೈಸಿಕೊಳ್ಳದೆ ದೂರವಿಟ್ಟೆ ನನ್ನನ್ನು ಕ್ಷಮಿಸಿಬಿಡು”. ಅವಳ ಮುಂಗೈ ಹಿಡಿದು ಕ್ಷಮೆ ಯಾಚಿಸಿ,  ಹಣೆಗೆ ಹೂ ಮುತ್ತನಿಟ್ಟೆ..

———————————-

ವಿಮಲಾರುಣ ಪಡ್ಡoಬೈಲ್

3 thoughts on “ವಿಮಲಾರುಣ ಪಡ್ಡoಬೈಲ್ ಅವರ ಒಂದು ಪ್ರೇಮ ಕಥೆ- ಪ್ರೀತಿಯನರಸುತ್ತಾ..

  1. ನಮ್ಮ ಸ್ಕಾರ ಕಥೆ ಚೆನ್ನಾಗಿದೆ ಎಲ್ಲ ಘಟನೆ ಕಣ್ಮುಂದೆ ಬಂದಂತ್ತೆ ಭಾಸವಾಗಿತ್ತು. ಹೀಗೆ, ಮುಂದುವರಿಸಿ ಸಾಹಿತ್ಯ ಮೇಡಂ

Leave a Reply

Back To Top