ವನಜಾ ಜೋಶಿಯವರ ಕವಿತೆ

ಕಾವ್ಯ ಸಂಗಾತಿ

ವನಜಾ ಜೋಶಿಯವರ ಕವಿತೆ

ಮೇಘರಾಜ ಇರುಳೆಲ್ಲ ಎರೆಸಿಹನು ಪ್ರೀತಿಯಿಂದ ಅವಳ ಸಂತೈಸುತ
ಓಘವನು ಮೆಲ್ಲನೆಯೆ ಸರಿಸಿಹನು ಪ್ರೀತಿಯಿಂದ ಅವಳ ಸಂತೈಸುತ

ಅಲ್ಲಗಳೆಯುವುದು ಉಂಟೇ ಇಂಥ ಸಿಂಚನದ ಸೊಗವ
ಮೆಲ್ಲನೆಗೆ ಸುರಿಯುತ ಹರಸಿಹನು ಪ್ರೀತಿಯಿಂದ ಅವಳ ಸಂತೈಸುತ

ಹನಿ ಹನಿಯಾಗಿ ಸುರಿದಿರಲು ಧೂಳೆಲ್ಲ ಮಂಗ ಮಾಯ
ಸೋನೆ ಮಳೆಯನು ಕಳಿಸಿಹನು ಪ್ರೀತಿಯಿಂದ ಅವಳ ಸಂತೈಸುತ

ಹಸಿದವರ ಆಶಾದೀಪ ಬೆಳಗಿ ಎಲ್ಲೆಡೆಯು ಲವಲವಿಕೆ ಹರಡಿಹುದು
ಹಸಿರನೆಲ್ಲ ಹೊನ್ನಾಗಿ ಚಿಗಿಸಿಹನು ಪ್ರೀತಿಯಿಂದ ಅವಳ ಸಂತೈಸುತ
ಕುಸಿದಿರುವ ಭಾವಗಳು ಕೊನರಿದವು ಅವನೊಲುಮೆಯಿಂದ
ಬೆಸೆಯುತ ಬಂಧವ ನಾಚಿಸಿಹನು ಪ್ರೀತಿಯಿಂದ ಅವಳ ಸಂತೈಸುತ

ಸೃಷ್ಟಿ ಕಾರ್ಯದಿ ನಿರತಳಾಗಿಹಳು ಇಳೆ ತಳಮಳವಿರದೆ ಶಾಂತವಾಗಿ
ದೃಷ್ಟಿ ತಗುಲದ ತೆರದಲಿ ರಕ್ಷಿಸಿಹನು ಪ್ರೀತಿಯಿಂದ ಅವಳ ಸಂತೈಸುತ

ಅವನ ಅನುಬಂಧದಿ ವನಸುಮದ ವೃಷ್ಟಿಯಾಗುತಿದೆ ಗಂಧ ಬೀರುತ
ಅವನಿಯೊಡನೆ ಸಲ್ಲಾಪ ನಡೆಸಿಹನು ಪ್ರೀತಿಯಿಂದ ಅವಳ ಸಂತೈಸುತ


ವನಜಾ ಜೋಶಿ

Leave a Reply

Back To Top