ಕಥಾ ಸಂಗಾತಿ
ವೀಣಾ ಹೇಮಂತ್ ಗೌಡ ಪಾಟೀಲ್
“ನೆಲಕ್ಕೆ ಬಿದ್ದ ಹೂಗಳು”


ಕುಸುಮ ತನ್ನ ಮನೆಯ ಹಿತ್ತಲಿನಲ್ಲಿ ತಾನೇ ಬೆಳೆಸಿದ ಪುಟ್ಟ ಕೈತೋಟದಲ್ಲಿ ಆಗತಾನೆ ಸೂರ್ಯನ ಬಿಸಿಲಿಗೆ ಅರಳಿ ಪರಿಮಳ ಸೂಸುತ್ತಿದ್ದ ಹತ್ತು ಹಲವು ಬಗೆಯ ಹೂಗಳನ್ನು ಮುಟ್ಟಿದರೆ ನೋವಾದೀತು ಎಂಬ ರೀತಿಯಲ್ಲಿ ನಿಧಾನವಾಗಿ ಒಂದೊಂದನ್ನೇ ಕಿತ್ತು ತನ್ನ ಎಡಗೈಯಲ್ಲಿದ್ದ ಬುಟ್ಟಿಗೆ ಹಾಕುತ್ತಾ ಮುಂದೆ ಸಾಗಿದಳು.
ಅಡುಗೆ ಮನೆಯ ಕಿಟಕಿಗೆ ತಾಗಿಕೊಂಡಿದ್ದ ಪಾರಿಜಾತ ಮರದ ನೂರಾರು ಹೂಗಳು ನೆಲದ ಮೇಲೆ ಹರಡಿದ್ದವು. ಪಕ್ಕದಲ್ಲಿಯೇ ಇದ್ದ ಮತ್ತೊಂದು ಹೂವಿನ ಗಿಡದಿಂದ ಹಳದಿ ಹೂಗಳು ಕೂಡ ಉದುರಿದ್ದವು. ನೆಲಕ್ಕೆ ಬಿದ್ದ ಈ ಹೂಗಳನ್ನು ಪೂಜೆಗೆ ಬಳಸುವುದಿಲ್ಲ ಎಂಬ ಕಾರಣಕ್ಕಾಗಿ ಅಷ್ಟು ತಾಜಾ ಹೂಗಳಾಗಿದ್ದರೂ ಅವು ಹಾಗೆಯೇ ಹುಟ್ಟಿದ್ದು ಸಾರ್ಥಕವಿಲ್ಲದಂತೆ ದೇವರ ಮುಡಿ ಸೇರದೆ ಕಸವಾಗಿ
ಪರಿಣಮಿಸುತ್ತಿದ್ದವು.
ಆ ಹೂಗಳನ್ನು ನೋಡಿ ಮನದಲ್ಲಿಯೇ ನನ್ನ ಬದುಕು ಕೂಡ ಕೆಳಗೆ ಬಿದ್ದ ಈ ಹೂಗಳಂತೆ ಆಗುತ್ತಿದೆ ಎಂದು ಒಂದು ನಿಡಿದಾದ ಉಸಿರನ್ನು ಬಿಟ್ಟು ಮುಂದಕ್ಕೆ ಸಾಗಿ ಇನ್ನುಳಿದ ಗಿಡದ ಅರಳಿದ ಹೂಗಳನ್ನು ಆರಿಸಿ ಬುಟ್ಟಿಗೆ ತುಂಬಿದ ಆಕೆ ಮನೆಯ ಒಳ ಹೊಕ್ಕು ಹೂವನ್ನು ದೇವರ ಮನೆಯ ಬಾಗಿಲಲ್ಲಿ ಇಟ್ಟು ಬಚ್ಚಲಿಗೆ ನಡೆದು ತನ್ನ ಕಾಲಿಗೆ ಅಂಟಿದ್ದ ಮಣ್ಣನ್ನು ನೀರು ಹಾಕಿ ತೊಳೆದಳು.
ಆಕೆಯ ಮನ ಪ್ರಕ್ಶುಬ್ದವಾಗಿತ್ತು. ಕಳೆದ ವಾರ ತನ್ನನ್ನು ನೋಡಲು ಬಂದ ಎಂಟನೆಯ ವರ ಕೂಡ ಮಧ್ಯವರ್ತಿಗಳ ಮೂಲಕ ಋಣಾನುಬಂಧ ಇಲ್ಲ ಎಂಬ ಮಾತು ಹೇಳಿ ವಿವಾಹದ ಪ್ರಸ್ತಾಪವನ್ನು ಮುರಿದು ಹಾಕಿದ್ದ ಸಂಜೆ ತಾನು ಕೋಣೆಯಲ್ಲಿ ಇರುವ ಸಮಯವನ್ನು ಸಾಧಿಸಿ ಅಪ್ಪ ತಾಯಿಯ ಬಳಿ ಈ ವಿಷಯವನ್ನು ಅದೆಷ್ಟೇ ಮೆಲುವಾಗಿ ಹೇಳಿದರೂ ಆಕೆಗೆ ಕೇಳಿಸಿತ್ತು.
ಬರುವಾಗಲೇ ಅಪ್ಪನ ಸಪ್ಪೆ ಮುಖವನ್ನು ನೋಡಿ ಆಕೆ ವಿಷಯವನ್ನು ಹೀಗೆಯೇ ಇರಬಹುದೆಂದು ಊಹಿಸಿದ್ದಳು, ಆದರೆ ಅಪ್ಪನಿಂದ ವಿಷಯ ಕೇಳಿ ತಿಳಿದ ನಂತರ ಮುಂಜಾನೆಯಿಂದ ಲವಲವಿಕೆಯಿಂದ ಇದ್ದ ತಾಯಿಯ ಮುಖ ಬಾಡಿದ್ದು ನೋಡಿದ ಆಕೆಗೆ ಖಂಡಿತವಾಗಿಯೂ ಇದು ಗಂಡಿನ ಕಡೆಯವರು ಹೇಳಿ ಕಳುಹಿಸಿದ ವಿಷಯದ ಪರಿಣಾಮ ಎಂದು ಸ್ಪಷ್ಟವಾಯಿತು…. ಆದರೆ ತಾನೇ ನೇರವಾಗಿ ಈ ವಿಷಯವನ್ನು ಪಾಲಕರಲ್ಲಿ ಕೇಳಲು ಆಕೆಗೆ ಏನೋ ಒಂದು ರೀತಿಯ ಮುಜುಗರ ಸಂಕೋಚ.
ಅಡುಗೆ ಮನೆಗೆ ಬಂದು ಅಪ್ಪ ಅಮ್ಮ ಹಾಗೂ ತನಗೆ ಚಹಾ ಮಾಡಲು ನೀರಿಗೆ ಎಸರಿಟ್ಟು ಚಹಾ ಪುಡಿ ಮತ್ತು ಸಕ್ಕರೆ ಹಾಕಿದ ಆಕೆ ಅದು ಕುದಿಯಲು ಕಾಯ ತೊಡಗಿದಾಗ ಆಕೆಯ ಮನಸ್ಸು ಕೂಡ ಮೆಲ್ಲನೆ ಯೋಚನೆಗಳ ಭಾರದಿಂದ ಕುದಿಯತೊಡಗಿತು.
ನಿಜ! ತನ್ನ ಕುತ್ತಿಗೆಯ ಮೇಲಿರುವ ಪುಟ್ಟ ಬಿಳಿ ಮಚ್ಚೆ ತೊನ್ನಿನ ಹಾಗೆ ತೋರುತ್ತಿದ್ದು ಅದುವೇ ತನ್ನ ಮದುವೆಗೆ ಅಡ್ಡ ಗೋಡೆಯಾಗಿದೆ. ಈಗಾಗಲೇ ಬಿ ಎ ಮುಗಿಸಿ ಕಳೆದ ವರ್ಷ ಬಿ ಎಡ್ ಕೂಡ ಪೂರೈಸಿರುವ ತಾನು ಶಿಕ್ಷಕರ ನೇಮಕಾತಿ ಪರೀಕ್ಷೆಗೆ ಕೂಡ ಬರೆದದ್ದಾಗಿದೆ.
ಒಳ್ಳೆಯ ಅಂಕಗಳು ಬರುವ ನಿರೀಕ್ಷೆ ಕೂಡ ಇದೆ. ಮುಂದೆ ಶಿಕ್ಷಕಿಯಾಗಿ ನೇಮಕವಾದರೆ ಉತ್ತಮವಾದ ಬದುಕು ಸಾಗಿಸಬಹುದು ಎಂಬ ಆಶಯ ಇತ್ತು. ಕಳೆದ ಆರು ತಿಂಗಳಲ್ಲಿ ಏಳೆಂಟು ಜನ ಯುವಕರು ತನ್ನನ್ನು ನೋಡಲು ಬಂದರೂ ಕೂಡ ತನ್ನ ಮಚ್ಚೆಯ ಕಾರಣ ವಿವಾಹಕ್ಕೆ ಹಿಂದೇಟು ಹಾಕುತ್ತಿರುವುದು ತನಗೆ ಗೊತ್ತಿಲ್ಲದ್ದೇನಲ್ಲ, ಆದರೂ ಕೂಡ ಅಪ್ಪ ಅಮ್ಮನ ಪಿಸು ಮಾತುಗಳು ತನಗೆ ನೋವನ್ನುಂಟು ಮಾಡುತ್ತವೆ.
ಈಕೆಯ ಮದುವೆ ಒಂದಾದರೆ ಸಾಕು ದೂರದ ಚೆನ್ನೈನಲ್ಲಿ ಕೆಲಸ ಮಾಡುತ್ತಿರುವ ಮಗನಿಗೆ ಮದುವೆ ಮಾಡಿ ಮನೆಗೆ ಸೊಸೆಯನ್ನು ಕರೆತರಬೇಕು ಎಂಬ ಪಾಲಕರ ಉತ್ಸಾಹಕ್ಕೆ ತಣ್ಣೀರೆರಚಿದಂತೆ ಆಗಿತ್ತು.
ಪ್ರತಿ ಬಾರಿಯೂ ತನ್ನನ್ನು ನೋಡಲು ಬರುವ ಹೊಸ ವರನಿಗಾಗಿ ಚಂದನೆಯ ಸೀರೆಯಟ್ಟು ತಲೆ ತುಂಬಾ ಹೂವು ಮುಡಿದು ಹಿತಮಿತವಾಗಿ ಅಲಂಕರಿಸಿಕೊಂಡರೆ ಅಪ್ಪ ಅಮ್ಮನ ಕಣ್ಣಲ್ಲಿ ದೀಪಾವಳಿಯ ಹೂಬಾಣದ ಕಾಂತಿ. ಆದರೆ ಸೌಂದರ್ಯಕ್ಕೆ ದೃಷ್ಟಿ ಬೊಟ್ಟಿನಂತೆ ಕುತ್ತಿಗೆಯ ಹಿಂಭಾಗದ ಮಚ್ಚೆ ಎದ್ದು ಕಾಣುತ್ತಿತ್ತು.
ಕಳೆದ ಏಳೆಂಟು ದಿನಗಳಿಂದ ಆಕೆಯ ತಲೆಯಲ್ಲಿ ಕೊರೆಯುತ್ತಿದ್ದ ವಿಷಯ ಇದೀಗ ಸ್ಪಷ್ಟ ರೂಪ ತಳೆಯ ತೊಡಗಿತ್ತು. ನೆನ್ನೆ ಶುಕ್ರವಾರ ದೇವಸ್ಥಾನದಲ್ಲಿ ಸಿಕ್ಕಿದ್ದ ಸ್ನೇಹಿತೆ ತಾನು ಕಾರ್ಯನಿರ್ವಹಿಸುತ್ತಿರುವ ಶಾಲೆಯಲ್ಲಿ ಶಿಕ್ಷಕಿಯೊಬ್ಬರು ಹೆರಿಗೆ ರಜೆಗೆ ಹೋಗುತ್ತಿರುವುದರಿಂದ
ಶೀಘ್ರವೇ ಅವರ ಜಾಗಕ್ಕೆ ಬೇರೊಬ್ಬರನ್ನು ತಾತ್ಕಾಲಿಕವಾಗಿ ತೆಗೆದುಕೊಳ್ಳಲು ಮ್ಯಾನೇಜ್ಮೆಂಟ್ ನವರು ಯೋಜಿಸುತ್ತಿದ್ದು ನೀನು ಅರ್ಜಿ ಹಾಕು ಎಂದು ಒತ್ತಾಯಿಸಿದ್ದಳು.
ಇದ್ದುದರಲ್ಲಿಯೇ ತುಸು ಉತ್ತಮ ಆರ್ಥಿಕ ಸ್ಥಿತಿಯನ್ನು ಹೊಂದಿರುವ ಪಾಲಕರು ಈಗಾಗಲೇ ಸರ್ಕಾರಿ ಕೆಲಸಕ್ಕೆ ಬೇಕಾದರೆ ಹೋಗುವಿಯಂತೆ ಖಾಸಗಿ ಶಾಲೆಗಳಿಗೆ ಕಳುಹಿಸುವುದಿಲ್ಲ ಎಂದು ತಮ್ಮ ತೀರ್ಮಾನವೇ ಅಂತಿಮ ಎಂಬ ರೀತಿಯಲ್ಲಿ ಹೇಳಿದ್ದರಿಂದ ಮರು ಪ್ರಶ್ನಿಸದೆ ಆಕೆ ಸುಮ್ಮನಾಗಿದ್ದಳು. ಆದರೆ ಕಳೆದ ಕೆಲ ದಿನಗಳಿಂದ ಮನೆಯಲ್ಲಿ ಹರಡಿದ್ದ ಮೌನ ಅಸಹನೀಯವಾಗಿದ್ದು ಆಕೆಗೆ ಸುಮ್ಮನೆ ಕುಳಿತಿರುವುದು ದುಸ್ಸಾಧ್ಯವಾಗಿತ್ತು. ಈಕೆಯನ್ನು ಮದುವೆಯಾಗಲು ಯಾರೂ ಒಪ್ಪುತ್ತಿಲ್ಲ ಎಂಬ ದುಃಖ ಆಕೆಯ ತಾಯಿಯಲ್ಲಿ ಒಂದು ಬಗೆಯ ಅಸಹನೆಯನ್ನು ಮೂಡಿಸಿದ್ದು ಕುಸುಮಳಿಗೆ ಅದರ ಬಿಸಿಯ ಝಳ ತಾಗುತ್ತಲೇ ಇತ್ತು.
ಆ ದಿನ ರಾತ್ರಿಯೆಲ್ಲ ಯೋಚಿಸಿದ ಆಕೆ ತಂದೆಯನ್ನು ಕೇಳಿ ಬಿಡಬೇಕು ಎಂದು ತೀರ್ಮಾನಿಸಿದಳು. ಮರುದಿನ ಮುಂಜಾನೆ ತಂದೆ ತಿಂಡಿ ತಿನ್ನುತ್ತಿದ್ದ ಸಮಯದಲ್ಲಿ ಧೈರ್ಯವನ್ನು ಒಗ್ಗೂಡಿಸಿಕೊಂಡ ಕುಸುಮ,
“ಅಪ್ಪ, ಪಕ್ಕದ ಬೀದಿಯಲ್ಲಿರುವ ಶಾಲೆಯಲ್ಲಿ ಕೆಲಸ ಮಾಡುತ್ತಿರುವ ನನ್ನ ಸ್ನೇಹಿತೆ ಹೇಳಿದಳು. ಆ ಶಾಲೆಯಲ್ಲಿ ಶಿಕ್ಷಕರ ಹುದ್ದೆ ಖಾಲಿ ಇದ್ದು ನಾನು ಕೂಡ ಅಪ್ಲೈ ಮಾಡಬೇಕು ಅಂತ ಇದೀನಿ. ಮನೇಲಿ ಕುಳಿತಿದ್ದರೆ ಬೇಸರ ಆಗುತ್ತೆ” ಎಂದು ಮೆಲುವಾಗಿ ಹೇಳಿದಳು.
ಒಂದು ಕ್ಷಣ ಮಗಳತ್ತ ತಲೆಯೆತ್ತಿ ನೋಡಿದ ಅವರಿಗೆ ಕಂಡದ್ದು ನೋವಿನಲ್ಲೂ ಕೂಡ ಅಪಾರ ನಿರೀಕ್ಷೆಯನ್ನು ಹೊತ್ತ ಮಗಳ ಮುಖ ಭಾವದಲ್ಲಿನ ಆರ್ತತೆ. ಇತ್ತೀಚೆಗೆ ತಮ್ಮ ಪತ್ನಿ ಕೂಡ ಸದಾ ಗೊಣಗುತ್ತಿರುವುದನ್ನು ನೋಡುತ್ತಿದ್ದ ಅವರಿಗೆ ಹೌದಲ್ವೆ! ಸದಾ ಕಣ್ಣ ಮುಂದೆ ಇದ್ದರೆ ಹೆಂಡತಿಗೂ ಸದರವಾಗುತ್ತದೆ. ಮಗಳಿಗೆ ಬೇಸರವಾಗುತ್ತದೆ ಎಂದು ಆಲೋಚಿಸಿ “ಆಯ್ತು… ಅಪ್ಲೈ ಮಾಡು.ನೋಡೋಣ” ಎಂದು ಹೇಳಿದರು.
ಕೂಡಲೇ ಸಡಗರದಿಂದ ಸ್ನೇಹಿತೆಗೆ ಕರೆ ಮಾಡಿ ಮಾತನಾಡಿದ ಕುಸುಮ ಇಂದೇ ತಾನು ಶಾಲೆಗೆ ಬಂದು ಅರ್ಜಿ ಹಾಕುವುದಾಗಿ ಹೇಳಿದಳು. ಮುಂದಿನ ಅರ್ಧ ಗಂಟೆಯಲ್ಲಿ ತನ್ನೆಲ್ಲ ಡಾಕ್ಯುಮೆಂಟ್‌ಗಳನ್ನು ಹೊಂದಿಸಿಕೊಂಡು ತಲೆ ಬಾಚಿ, ಜಡೆ ಹೆಣೆದು ಮುಖ ತೊಳೆದು ಸೀರೆಯುಟ್ಟು ತಯಾರಾಗಿ ತಾಯಿಗೆ ಹೇಳಿ ಮನೆಯಿಂದ ಹೊರ ಬಿದ್ದಳು.
ಕಳೆದ ಕೆಲ ತಿಂಗಳುಗಳಿಂದ ಮನೆಯಲ್ಲೇ ಇರುತ್ತಿದ್ದ ಮಗಳ ದಿಢೀರ್ ನಿರ್ಧಾರಕ್ಕೆ ತಾನು ಕೂಡ ಕೊಂಚಮಟ್ಟಿಗೆ ಕಾರಣ ಎಂಬುದು ತಾಯಿಗೆ ಹೊಳೆದಾಗ ಆಕೆಯ ಮನಸ್ಸು ಮುದುಡಿತು. ಹೀಗಾದರೂ ಆಕೆ ನೆಮ್ಮದಿಯಿಂದ ಇರಲಿ. ಮದುವೆ ಗೊತ್ತಾಗುವವರೆಗೆ ಆಕೆ ಕಾರ್ಯನಿರ್ವಹಿಸಲಿ ಬಿಡು ಆಕೆಯು ನೆಮ್ಮದಿಯಿಂದ ಇರಲು ಸಾಧ್ಯವಾಗುತ್ತದೆ ಎಂದು ನಿಟ್ಟುಸಿರು ಬಿಟ್ಟ ಆಕೆ ನನ್ನಷ್ಟೇ ಬೇಸರ ಆಕೆಗೂ ಇರಬಹುದು. ಇನ್ನು ಮೇಲೆ ಆಕೆಗೆ ಮನಸ್ಸು ನೋಯುವಂತೆ ಕೊಣದ ಬಾರದು ಎಂದು ನಿರ್ಧರಿಸಿದರು.
ಕುಸುಮಳ ಎಲ್ಲ ಕಾಗದ ಪತ್ರಗಳನ್ನು ಪರಿಶೀಲಿಸಿದ ಆಡಳಿತ ವರ್ಗದವರು ಮೆಚ್ಚುಗೆ ಸೂಚಿಸಿ ಮರು ತಿಂಗಳ ಒಂದನೇ ತಾರೀಖಿನಿಂದ ಕೆಲಸಕ್ಕೆ ಬರಲು ಆದೇಶಿಸಿದ ಪ್ರತಿಯನ್ನು ಆಕೆಗೆ ನೀಡಿದರು. ಸಂತಸ ಮತ್ತು ಉತ್ಸಾಹದ ಬುಗ್ಗೆಯಾಗಿದ್ದ ಆಕೆ ದಾಪುಗಾಲಿಡುತ್ತಾ ಮನೆಗೆ ಬಂದು ತಾಯಿಗೆ ವಿಷಯ ತಿಳಿಸಿದಳು. ಅವರಿಗೂ ಖುಷಿಯಾಯಿತು. ಸಂಜೆ ಮನೆಗೆ ಬಂದ ತಂದೆಗೆ ಈ ಸಂತಸವನ್ನು ಹಂಚಿಕೊಂಡ ಆಕೆಯ ಮನಸ್ಸು ಅತ್ಯಂತ ನಿರಾಳವಾಗಿತ್ತು.
ಮುಂದಿನ ಕೆಲವೇ ದಿನಗಳಲ್ಲಿ ತಾನು ಪ್ರತಿದಿನ ಶಾಲೆಗೆ ಹೋಗಬೇಕಾದ ಕಾರಣ ತಾನು ತೊಡಬೇಕಾದ ಸೀರೆ ರವಿಕೆ ಪೆಟ್ಟಿಕೋಟ್ ಗಳನ್ನು ಹೊಂದಿಸಿ ಇಟ್ಟುಕೊಳ್ಳುವ ಮತ್ತು ತನಗೆ ಶಾಲೆಯಲ್ಲಿ ಕೊಟ್ಟ ಮೂರನೇ ತರಗತಿಯ ಎಲ್ಲಾ ವಿಷಯಗಳನ್ನು ಒಂದು ಮಟ್ಟಿಗೆ ನೋಡಿಕೊಂಡು ನೋಟ್ಸ್ ಮಾಡಿಕೊಳ್ಳುವುದರಲ್ಲಿಯೇ ದಿನಗಳು ಕಳೆದು ಆಕೆ ಕೆಲಸಕ್ಕೆ ಹೋಗುವ ಮೊದಲ ದಿನ ಬಂತು.
ದೈನಂದಿನ ಕೆಲಸಗಳನ್ನು ಬೇಗ ಬೇಗನೆ ಮುಗಿಸಿ, ಪಾಲಕರ ಕಾಲಿಗೆ ನಮಸ್ಕರಿಸಿ ತಿಂಡಿ ತಿಂದು ತಯಾರಾಗಿ ಶಾಲೆಗೆ ಹೊರಟ ಆಕೆಯಲ್ಲಿ ಉಲ್ಲಾಸ, ಉತ್ಸಾಹ ತುಂಬಿ ತುಳುಕುತ್ತಿತ್ತು.
ಸ್ವಭಾವತಃ ಮಕ್ಕಳನ್ನು ಪ್ರೀತಿಸುವ ಮತ್ತು ಅವರಿಗೆ ಕಲಿಸುವಲ್ಲಿ ಉತ್ಸಾಹಿಯಾಗಿದ್ದ ಕುಸುಮ ಕೆಲವೇ ದಿನಗಳಲ್ಲಿ ಮಕ್ಕಳ ಅಚ್ಚುಮೆಚ್ಚಿನ ಶಿಕ್ಷಕಿಯಾದಳು. ಮೆದುವಾದ ಮಾತು, ಸ್ಪಷ್ಟ ನಿಲುವು ಮತ್ತು ಶಿಕ್ಷಣದೆಡೆಗಿನ ಆಕೆಯ ಆಸಕ್ತಿ ಉಳಿದೆಲ್ಲ ಶಿಕ್ಷಕರ ಮೆಚ್ಚುಗೆಗೂ ಆಡಳಿತ ವರ್ಗದವರ ಸಂತಸಕ್ಕೂ ಕಾರಣವಾಗಿತ್ತು.
ಪಾಠ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಮಕ್ಕಳ ಆಸಕ್ತಿಯನ್ನು ಹೆಚ್ಚಿಸುತ್ತಿದ್ದ, ಮಕ್ಕಳಿಗೆ ಕೊಂಚ ಕಠಿಣತೆ ಬೆರೆಸಿ ದರೂ ಬಹಳಷ್ಟು ಪ್ರೀತಿಯಿಂದ ಕಲಿಸುತ್ತಿದ್ದ ಕುಸುಮಾ ಟೀಚರ್ ಮಕ್ಕಳಿಗೆ ಅತ್ಯಂತ ಪ್ರೀತಿ ಪಾತ್ರಳಾಗಿದ್ದಳು. ಶಾಲೆಗೆ ಸೇರಿ ಆರು ತಿಂಗಳಾಗುತ್ತಾ ಬಂದಿತ್ತು. ಈಗಾಗಲೇ ವಾರ್ಷಿಕ ಪರೀಕ್ಷೆಗಳು ಮುಗಿದು ಹೆರಿಗೆ ರಜೆಗೆ ಹೋಗಿದ್ದ ಶಿಕ್ಷಕರು ಕೂಡ ಮುಂದಿನ ಶೈಕ್ಷಣಿಕ ವರ್ಷದಿಂದ ಬರುತ್ತಿದ್ದ ಕಾರಣ ಆ ವರ್ಷದ ವಾರ್ಷಿಕೋತ್ಸವ ಸಮಾರಂಭದಲ್ಲಿ ಕುಸುಮಳಿಗೆ ಬೀಳ್ಕೊಡುಗೆ ಕೂಡ ಏರ್ಪಡಿಸಲಾಗಿತ್ತು.
ಬೀಳ್ಕೊಡುಗೆ ಸಮಾರಂಭಕ್ಕೆ ತನ್ನ ಪಾಲಕರೊಂದಿಗೆ ಬಂದಿದ್ದ ಕುಸುಮಳಿಗೆ ಅಚ್ಚರಿಯೊಂದು ಕಾದಿತ್ತು. ಕುಸುಮ ಮತ್ತು ಆಕೆಯ ಪಾಲಕರನ್ನು ಶಾಲೆಯ ಆಫೀಸಿನಲ್ಲಿ ಭೇಟಿಯಾದ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ಸೋಮಪ್ಪನವರು ಕುಸುಮಳ ತಂದೆ ತಾಯಿಯನ್ನು ಉದ್ದೇಶಿಸಿ ನಿಮ್ಮ ಮಗಳು ಕುಸುಮ ಎಲ್ಲ ವಿಷಯಗಳಲ್ಲಿಯೂ ಜಾಣೆ ಇಂತಹವರ ಸೇವೆ ನಮಗೆ ಇನ್ನೂ ಬೇಕಾಗುತ್ತದೆ ಎಂಬ ಕಾರಣದಿಂದ ನಮ್ಮ ಹೈಸ್ಕೂಲು ವಿಭಾಗಕ್ಕೆ ನಾವು ಆಕೆಯನ್ನು ಶಿಕ್ಷಕಿಯಾಗಿ ತೆಗೆದುಕೊಳ್ಳಲು ನಿರ್ಧರಿಸಿದ್ದೇವೆ… ಇದಕ್ಕೆ ನಿನ್ನ ಒಪ್ಪಿಗೆ ಇದೆಯ ಕುಸುಮ ಎಂದು ಕೇಳಿದರು. ಬಯಸದೇ ಬಂದ ಭಾಗ್ಯವನ್ನು ಒಪ್ಪದವರುಂಟೆ?
ಅತ್ಯಂತ ಸಂತಸದಿಂದ ಕೈಮುಗಿದು ತನ್ನ ಸಮ್ಮತಿಯನ್ನು ಆಕೆ ಸೂಚಿಸಿದಾಗ ಪಾಲಕರಿಗೂ ಹರ್ಷವಾಗಿತ್ತು.
ಹಾಗೆಯೇ ಇನ್ನೊಂದು ವಿಚಾರ ಎಂದು ಕುಸುಮಳ ಪಾಲಕರ ಗಮನವನ್ನು ಸೆಳೆದ ಸೋಮಪ್ಪನವರು ತಮ್ಮ ಕೈಯಲ್ಲಿದ್ದ ಬಯೋಡಾಟಾ ಒಂದನ್ನು ಕುಸುಮಳ ತಂದೆಗೆ ಹಸ್ತಾಂತರಿಸಿ ಇದು ನನ್ನ ಮಗ ಅವಿನಾಶನ ಬಯೋಡಾಟಾ. ಅವನು ಇದೇ ಸಂಸ್ಥೆಯ ಕಾಲೇಜು ವಿಭಾಗದಲ್ಲಿ ಉಪನ್ಯಾಸಕನಾಗಿದ್ದು ನಿಮ್ಮ ಮಗಳನ್ನು ನೋಡಿ ಮೆಚ್ಚಿಕೊಂಡಿದ್ದಾನೆ. ನಿಮಗೆ ಸಹಮತವಿದ್ದರೆ ನಾವು ಈ ವಿಷಯದಲ್ಲಿ ಮುಂದುವರೆಯೋಣ ಎಂದು ಹೇಳಿದರು.
ಆಗಾಗ ಶಾಲೆಯ ಕಾರಿಡಾರಿನಲ್ಲಿ, ಸಂಸ್ಥೆಯ ಶಿಕ್ಷಕರ ಮೀಟಿಂಗ್ಗಳಲ್ಲಿ ಅವಿನಾಶನನ್ನು ನೋಡುತ್ತಿದ್ದ ಕುಸುಮಳಿಗೆ ಅತ್ಯಂತ ಸ್ಪುರದ್ರೂಪಿಯಾದ ಮತ್ತು ವಿದ್ಯಾರ್ಥಿಗಳ ಮೆಚ್ಚುಗೆಗೆ ಪಾತ್ರನಾದ ಉಪನ್ಯಾಸಕರಿಗೆ ತಾನು ಮೆಚ್ಚಿಗೆಯಾದದ್ದು ಸಂತಸವನ್ನು ತಂದರೂ ಈ ಹಿಂದೆ ಆದ ಹತ್ತಾರು ಕಹಿ ಅನುಭವಗಳಿಂದ ಮಾತನಾಡದೆ ಹೋದರೂ ಆಕೆಯ ಕೈ ಅಪ್ರಯತ್ನವಾಗಿ ತನ್ನ ಕುತ್ತಿಗೆಯೆಡೆ ಹೋಯಿತು.
ಅದನ್ನು ಗಮನಿಸಿದ ಸೋಮಪ್ಪನವರು ಚಿಂತಿಸಬೇಡಮ್ಮ ನನ್ನ ಮಗನಿಗೆ ಅದರ ಅರಿವು ಇದೆ ನಿನ್ನ ಪಾಲಕರ ಒಪ್ಪಿಗೆ ಇದ್ದರೆ ಈ ಕುರಿತು ಆತನ ಅಭಿಪ್ರಾಯವನ್ನು ನೀನೇ ಕೇಳುವಿಯಂತೆ ಎಂದು ಹೇಳಿ ಅಲ್ಲಿಯೇ ಇದ್ದ ಬೆಲ್ಲನ್ನು ಒತ್ತಿ ಒಳಗೆ ಬಂದ ಜವಾನನಿಗೆ ಅವಿನಾಶನನ್ನು ಕರೆತರಲು ಆದೇಶಿಸಿದರು.
ಬಯೋಡಾಟಾ ನೋಡಿದ ಕುಸುಮಳ ತಂದೆ ತಾಯಿ ಪರಸ್ಪರ ಮಾತನಾಡಿಕೊಂಡು ತಮ್ಮ ಒಪ್ಪಿಗೆಯನ್ನು ಸೂಚಿಸಿದರು.
ತಂದೆಯ ಕರೆಯ ಮೇರೆಗೆ ಅಲ್ಲಿಗೆ ಬಂದ ಅವಿನಾಶ ಕುಸುಮ ಮತ್ತು ಆಕೆಯ ಪಾಲಕರನ್ನು ನೋಡಿ ವಿಷಯವನ್ನು ಅರ್ಥೈಸಿಕೊಂಡ. ಕೈ ಮುಗಿದು ಎಲ್ಲರಿಗೂ ನಮಸ್ಕರಿಸಿದ ಮಗನನ್ನು ಕುಳಿತುಕೊಳ್ಳಲು ಹೇಳಿದ ಸೋಮಪ್ಪನವರು ನಿನ್ನ ಆಶಯವನ್ನು ಕುಸುಮ ಮತ್ತು ಅವಳ ಪಾಲಕರಲ್ಲಿ ಹೇಳಿದ್ದು ಅವರಿಗೆ ಒಪ್ಪಿಗೆ ಇದೆ, ಆದರೆ ಕುಸುಮಳಿಗೆ ಕೆಲ ಸಂದೇಹಗಳಿವೆ. ಅದನ್ನು ನೀನೆ ಪರಿಹರಿಸು ಎಂದು ಹೇಳಿದರು. ನಂತರ ಕುಸುಮಳ ಪಾಲಕರನ್ನು ಕುರಿತು ಬನ್ನಿ ನಾನು ನಿಮಗೆ ನಮ್ಮ ಸಂಸ್ಥೆಯನ್ನು ತೋರಿಸುತ್ತೇನೆ ಎಂದು ಹೇಳಿ ಹೊರಗೆ ಕರೆದೊಯ್ದರು.
ಅನಿರೀಕ್ಷಿತವಾಗಿ ಬಂದೆರಗಿದ ಈ ಏಕಾಂತದಲ್ಲಿ ಏನು ಮಾತನಾಡಬೇಕು ಎಂದು ಅರಿಯದ ಕುಸುಮ ಮಾತಿಗಾಗಿ ತಡವರಿಸಿದಾಗ ಆಕೆಯ ಮುಂದೆ ಕುಳಿತಿದ್ದ ಅವಿನಾಶ “ಕುಸುಮ.. ನೀವು ನನ್ನನ್ನು ಕಳೆದ ಆರು ತಿಂಗಳಿಂದ ಗಮನಿಸಿಯೇ ಇರುತ್ತೀರಿ. ನನ್ನ ಕುರಿತು ನಿಮ್ಮ ಅಭಿಪ್ರಾಯವೇನು? ಈ ಮದುವೆಗೆ ನಿಮ್ಮ ಒಪ್ಪಿಗೆ ಇದೆಯೇ?” ಎಂದು ಹೇಳಿದಾಗ ಮನದಲ್ಲಿ ಸಂತಸದ ನೂರಾರು ಚಿಟ್ಟೆಗಳು ಹಾರಾಡುವಂತೆ ಭಾಸವಾಗುತ್ತಿದ್ದರೂ ಅದನ್ನು ಅಡಗಿಸಿ, ನಿಧಾನವಾಗಿ ಸಮ್ಮತಿ ಎಂಬಂತೆ ತಲೆಯನ್ನು ಆಡಿಸಿದ ಆಕೆ “ಆದರೆ ನನ್ನ ಕುತ್ತಿಗೆಯ ಬಿಳಿಯ ಮಚ್ಚೆ…….” ಎಂದು ಹೇಳುತ್ತಿರುವಾಗಲೇ ಆಕೆಯ ಮಾತನ್ನು ಅರ್ಧದಲ್ಲಿ ತಡೆದ ಅವಿನಾಶ “ಅದು ನನಗೆ ಕಾಣುತ್ತದೆ. ನಾನು ನಿಮ್ಮನ್ನು ಇಷ್ಟಪಟ್ಟಿದ್ದು ಕೇವಲ ನಿಮ್ಮ ಬಾಹ್ಯ ಸೌಂದರ್ಯದಿಂದ ಮಾತ್ರವಲ್ಲ ಬದಲಾಗಿ ನಿಮ್ಮನ್ನು ನೀವಿರುವಂತೆಯೇ ನೋಡಲು ಇಷ್ಟಪಡುತ್ತೇನೆ. ಇನ್ನು ನಿಮ್ಮ ಕುತ್ತಿಗೆಯ ಮೇಲಿರುವ ಬಿಳಿಯ ಮಚ್ಛೆ ವಿಜ್ಞಾನದ ಉಪನ್ಯಾಸಕ ಆಗಿರುವ ನನಗೆ ಅದೊಂದು ಸಮಸ್ಯೆಯೇ ಅಲ್ಲ.. ನಿಮ್ಮನ್ನು ನಿಮ್ಮ ವ್ಯಕ್ತಿತ್ವವನ್ನು ಅದರ ಎಲ್ಲಾ ಒಳಿತು ಕೆಡಕುಗಳೊಂದಿಗೆ ನಾನು ಪ್ರೀತಿಸುತ್ತೇನೆ. ನಿಮಗೆ ಇಷ್ಟವಿದ್ದರೆ ಮುಂದುವರೆಯೋಣ” ಎಂದು ತನ್ನ ಕೈ ಚಾಚಿದನು. ಕೇವಲ ಒಂದೆರಡು ಕ್ಷಣಗಳಲ್ಲಿ ಆತನ ಚಾಚಿದ ಕೈಗಳಲ್ಲಿ ತನ್ನ ಕೈಗಳನ್ನು ಇರಿಸಿದ ಆಕೆಯ ಮುಖದಲ್ಲಿ ನೂರು ಸೂರ್ಯರ ಬೆಳಕಿತ್ತು. ಮುಂದಿನ ಐದು ನಿಮಿಷ ಅವರು ಈ ಮುಂಚಿನಿಂದಲೂ ತುಂಬಾ ಪರಿಚಿತರೇನೋ ಎಂಬಂತೆ ನಮ್ಮಿಬ್ಬರ ಮುಂದಿನ ಭವಿಷ್ಯದ ಕುರಿತು ಮಾತನಾಡಿದರು. ನಂತರ
ಕೋಣೆಯ ಹೊರಗೆ ಬರುವತನಕ ಪರಸ್ಪರರ ಕೈಹಿಡಿದು ಹೊರಬಂದ ಅವರು ತಾವಿರುವುದು ಶಾಲೆಯಲ್ಲಿ ಎಂಬ ಕಾರಣದಿಂದ ಕೈ ಬಿಟ್ಟು ಹೊರಗೆ ನಡೆದರು.
ಮರುದಿನ ಮುಂಜಾನೆ ಹೂವನ್ನು ಕೀಳಲು ಹಿತ್ತಲಿಗೆ ತೆರಳಿದ ಕುಸುಮ ನೆಲಕ್ಕೆ ಬಿದ್ದ ಪಾರಿಜಾತದ ಹಾಗೂ ಹಳದಿಯ ಹೂಗಳನ್ನು ನೋಡಿ ವ್ಯಥೆ ಪಡಲಿಲ್ಲ. ಬದಲು ಆ ಹೂಗಳನ್ನು ಕೂಡ ತನ್ನ ಬುಟ್ಟಿಯಲ್ಲಿ ಹಾಕಿ ತಂದು ಪೂಜೆ ಮಾಡುವಾಗ ಮಂಟಪದ ಅಲಂಕಾರಕ್ಕೆ ಬಳಸಿದಳು. ಪೂಜೆಯೆಲ್ಲವೂ ಮುಗಿದು ಮಂಗಳಾರತಿ ಬೆಳಗಿ ನೈವೇದ್ಯ ಮಾಡಿ ದೇವರಿಗೆ ನಮಸ್ಕರಿಸಿದ ಆಕೆಗೆ ನೆಲಕ್ಕೆ ಬಿದ್ದ ಹೂವಿಗೂ ಕೂಡ ಬದುಕಿದೆ. ಆ ದೇವರ ಸೃಷ್ಟಿಯಲ್ಲಿ ಯಾರೂ ನಗಣ್ಯ ಇಲ್ಲ ಎಂಬ ಭಾವ ಮನಸ್ಸನ್ನು ತುಂಬಿ ಮತ್ತಷ್ಟು ಭಕ್ತಿ ಭಾವದಿಂದ ಕೈಮುಗಿದಳು.
———————————————————–
ವೀಣಾ, ಹೇಮಂತಗೌಡ ಪಾಟೀಲ್.



