ಧಾರಾವಾಹಿ-ಅಧ್ಯಾಯ –9

ಒಬ್ಬ ಅಮ್ಮನ ಕಥೆ

ರುಕ್ಮಿಣಿ ನಾಯರ್

ಮಕ್ಕಳಿಗೆ ಕಿತ್ತಳ ಹಣ್ಣಿನ ಆಕರ್ಷಣೆ ಹುಟ್ಟಿಸಿದ ನಾಣು

ಇಬ್ಬರು ಹೆಣ್ಣು ಮಕ್ಕಳನ್ನು ಹತ್ತಿರ ಬರುವಂತೆ ಹೇಳಿ ಅವರ ತಲೆಯನ್ನು ಪ್ರೀತಿಯಿಂದ ನೇವರಿಸಿ ಪಕ್ಕದಲ್ಲಿ ಕುಳಿತುಕೊಳ್ಳುವಂತೆ ಹೇಳಿದರು ಕಲ್ಯಾಣಿ. ಇಬ್ಬರೂ ಅಕ್ಕ ಪಕ್ಕದಲ್ಲಿ ಬಂದು ಕುಳಿತಾಗ ಎರಡೂ ತೋಳುಗಳಿಂದ ಮಕ್ಕಳನ್ನು ಬಳಸಿ ಹಿಡಿದುಕೊಂಡು ಸ್ವಲ್ಪ ಹೊತ್ತು ಹಾಗೇ ಮೌನವಾಗಿ ಕುಳಿತರು. ಅಮ್ಮನ ಈ ಮೌನ ಮಕ್ಕಳಿಗೆ ಏನೋ ಆಗಿದೆ ಅನ್ನುವ ಸೂಚನೆ ಕೊಟ್ಟಿತು. ಅಮ್ಮ ಈ ರೀತಿ ತಮ್ಮನ್ನು ಹತ್ತಿರ ಕುಳ್ಳಿರಿಸಿಕೊಳ್ಳುವುದು ಭಾವನಾತ್ಮಕವಾಗಿ ವಿಚಲಿತರಾದಾಗ ಮಾತ್ರ. ಹಾಗಾಗಿ ಇಬ್ಬರೂ ಏನನ್ನೂ ಕೇಳದೇ ಅಮ್ಮನ ಮೌನದ ಜೊತೆಗೆ ತಾವೂ ಮೌನವಾಗಿ ಕುಳಿತರು. ಆದರೆ ಸುಮತಿಗೆ ಏಕೋ 

ಅಮ್ಮನ ಈ ಮೌನ ಕಂಡು ಸ್ವಲ್ಪ ಗಾಭರಿ ಆಯಿತು. ಅವಳಿಗೆ ಯಾರೂ ಬೇಸರದಲ್ಲಿ ಇರಬಾರದು ಸದಾ ನಗು ನಗುತ್ತಾ ಇರಬೇಕು ಎಲ್ಲರೂ. ಅದರಲ್ಲೂ ತಾಯಿ ಬೇಸರವಾಗಿದ್ದರೆ ಹೇಳತೀರದು ಸಂಕಟ ಅವಳಿಗೆ. 

ಅಮ್ಮನ ಹೆಗಲ ಮೇಲೆ ತಲೆ ಇಟ್ಟು ಕಣ್ಣು ಮುಚ್ಚಿ ಹಾಗೇ ಕುಳಿತಳು. ಕಲ್ಯಾಣಿ ಮೌನವನ್ನು ಮುರಿದು ಹೇಳಿದರು.

” ಮಕ್ಕಳೇ ಅಪ್ಪ ಮೈಸೂರಿಗೆ ಹೋಗಿ ಬಂದಿದ್ದು ನಿಮಗೆ ಗೊತ್ತೇ ಇದೆ… ಅಲ್ಲಿನ ತೋಟದಿಂದ ತಂದ ಕಿತ್ತಳೆ ಹಣ್ಣುಗಳನ್ನು ನೀವು ತಿಂದಿರುವಿರಿ ಅಲ್ಲವೇ? ನಿಮಗೆ ಕಿತ್ತಳೆ ಹಣ್ಣು ಇನ್ನೂ ಬೇಕು ಅನಿಸುತ್ತಾ ಇದೆಯಾ…. ಈಗ ತಂದಿರುವುದು ಬೇಗ ಮುಗಿದು ಬಿಡುತ್ತದೆ. ಆಮೇಲೆ? ಎಂದು ಇಬ್ಬರಲ್ಲೂ ಪ್ರಶ್ನೆ ಮಾಡಿದರು. 

ಸುಮತಿ ಹೇಳಿದಳು…. “ಕಿತ್ತಳೆ ಹಣ್ಣು ತುಂಬಾನೇ ರುಚಿ ಇತ್ತು. ಇಲ್ಲಿಯವರೆಗೆ ನಾವು ತಿಂದಿದ್ದೆ ಇಲ್ಲ ಅಲ್ಲವೇ ಇಚ್ಚೆಯಿ”…. ( ಅಂದರೆ ಅಕ್ಕ ಎಂದು ಅರ್ಥ ಅಕ್ಕನನ್ನು ಸುಮತಿ ಹಾಗೂ ತಮ್ಮಂದಿರು ಹಾಗೆಯೇ ಕರೆಯುತ್ತಾ ಇದ್ದದ್ದು) ಎಂದು ಹೇಳಿ ಅಮ್ಮನ ಕಡೆಗೆ ನೋಡಿ…. “ಈಗ ಹಣ್ಣುಗಳು ಇಲ್ಲೇ ಇವೆ ಅಲ್ಲವೇ ಮತ್ತೆ ಇನ್ನೂ ಬೇರೆ ಏಕೆ ಎಂದು ಮುಗ್ಧತೆಯಿಂದ ಅಮ್ಮನನ್ನು ಕೇಳಿದಳು”

ಸುಮತಿಯ ಮಾತಿಗೆ ಅವಳ ಅಕ್ಕನೂ ಹೌದು ಎನ್ನುವಂತೆ ತಲೆ ಆಡಿಸಿದಳು. ಕಲ್ಯಾಣಿ ಹೇಳಿದರು “ಹಾಗಲ್ಲ ಇನ್ನೂ ಕಿತ್ತಳೆ ಹಣ್ಣು ತಿನ್ನಬೇಕು ಅನಿಸಿದರೆ ಮೈಸೂರಿಗೆ ಹೋಗಬೇಕು ನಾವು”….  ಎಂದರು ನಗುತ್ತಾ. ಆ ನಗುವಿನಲ್ಲಿ ವಿಷಾದದ ಛಾಯೆ ಇತ್ತು. ಇಬ್ಬರೂ ಕಣ್ಣರಳಿಸಿ….  “ಹೌದಾ ಅಮ್ಮಾ…. ನಾವು ಯಾವಾಗ ಅಲ್ಲಿಗೆ ಹೋಗುತ್ತೇವೆ… ಎಲ್ಲಿ ಅತ್ತೆಯ ಮನೆಗಾ? 

ಕೇರಳ ಬಿಟ್ಟು ನಾವು ಇದುವರೆಗೂ ಬೇರೆ ಎಲ್ಲಿಗೂ ಹೋಗಿಲ್ಲ…. ನಾವೆಲ್ಲರೂ ಅಪ್ಪನ ಜೊತೆ ಹೋಗುತ್ತೀವಾ? ಎಂದು ಒಕ್ಕೊರಲಿನಿಂದ ಕೇಳಿದರು. ಕಲ್ಯಾಣಿ ಸಪ್ಪೆ ಮುಖ ಮಾಡಿಕೊಂಡು…. “ಹೌದು ಮಕ್ಕಳೇ… ಎಂದರು. 

ಅದಕ್ಕೆ ಸುಮತಿ  “ನಾವೆಲ್ಲರೂ ಅಪ್ಪನ ಜೊತೆ ಮೈಸೂರಿಗೆ ಹೋಗುತ್ತಾ ಇದ್ದೇವೆ ಅಂದ ಮೇಲೆ ನೀವು ಏಕೆ ಅದನ್ನು ಬೇಸರದಿಂದ ಹೇಳುತ್ತಾ ಇದ್ದೀರಿ? ತುಂಬಾ ಖುಷಿ ಅಲ್ಲವೇ? ಅಪ್ಪನ ವರ್ಣನೆ ಕೇಳಿ ನಮಗೂ ಅಲ್ಲಿ ಹೋಗಿ ಎಲ್ಲವನ್ನೂ ನೋಡುವಾಸೆ ಆಗಿದೆ”… ಎಂದಳು.  ಅದಕ್ಕೆ ಅವಳ ಅಕ್ಕ “ಸುಮ್ಮನೇ ಇರು ಸುಮತಿ ಅಮ್ಮ ಏನೋ ಹೇಳಬೇಕು ಆದರೆ ಹೇಳಲಾರದೆ ಸಂಕಟ ಪಡುತ್ತಾ ಇದ್ದಾರೆ…. ಮೊದಲು ಪೂರ್ತಿ ವಿಷಯ  ಹೇಳಲಿ ಎಂದಳು. ತನ್ನ ಮನಸ್ಸಿನ ತುಮುಲವನ್ನು ಅರಿತ ದೊಡ್ದ ಮಗಳ ತಲೆಯನ್ನು ಪ್ರೀತಿಯಿಂದ ನೇವರಿಸುತ್ತಾ  ವಿಷಯವನ್ನು ಸ್ಪಷ್ಟವಾಗಿ ವಿವರಿಸಿ ಹೇಳಲು ತೀರ್ಮಾನಿಸಿದರು ಕಲ್ಯಾಣಿ…. 

“ಎಲ್ಲವನ್ನೂ ವಿವರವಾಗಿ ಹೇಳುತ್ತೇನೆ ಮಕ್ಕಳೇ ಕೇಳಿ”….

ಎಂದು ನಾರಾಯಣನ್ ಇಲ್ಲಿಯವರೆಗೂ ಹೇಳಿದ ಎಲ್ಲಾ ವಿಷಯಗಳನ್ನೂ ಚಾಚೂ ತಪ್ಪದೇ ಮಕ್ಕಳಿಗೆ ವಿವರಿಸಿ ಹೇಳಿದರು. ಅಮ್ಮ ಹೇಳುತ್ತಾ ಇರುವ ವಿಷಯವನ್ನು ಕೇಳಿ ನಂಬಲಾಗದೆ ಅಚ್ಚರಿಯಿಂದ ಮರು ಮಾತನಾಡದೇ ಇಬ್ಬರೂ ಸ್ಥಬ್ದರಾಗಿ ಕುಳಿತು ಬಿಟ್ಟರು. ಅಮ್ಮ ಹೇಳುತ್ತಾ ಇರುವುದು ನಿಜವೇ? ತಾವು ಕನಸ್ಸು ಕಾಣುತ್ತಾ ಇದ್ದೇವೆ ಎಂದು ಅನಿಸಿತು ಅವರಿಬ್ಬರಿಗೂ. ಇಂತಹ ವಿಷಯ ಅಮ್ಮ ಹೇಳುತ್ತಾರೆ ಎಂಬ ಅರಿವು ಅವರಿಗೆ ಇರಲಿಲ್ಲ.  ಅಚಾನಕ್ಕಾಗಿ ಅಮ್ಮ ಹೇಳಿದ ವಿಷಯ ಕೇಳಿ ಇಬ್ಬರೂ ಏನು ಹೇಳಬೇಕೆಂದು ತೋಚದೆ ಸುಮ್ಮನೆ ಪಿಳಿ ಪಿಳಿ ನೋಡುತ್ತಾ ಕುಳಿತರು.

ಸುಮತಿ ಅಮ್ಮನ ಮುಖ ನೋಡಿದಳು ಅಮ್ಮ ಹೇಳುತ್ತಾ ಇರುವುದೆಲ್ಲ ಸತ್ಯ ಎಂಬುದು ಖಾತ್ರಿಯಾಯಿತು.

ಕಣ್ಣು ತುಂಬಿ ಬಂದಿದ್ದು ಅಮ್ಮನಿಗೆ ಕಾಣದೇ ಇರಲೆಂದು ಅಲ್ಲಿಂದ ಎದ್ದು ನೇರವಾಗಿ ಕೋಣೆಯ ಕಡೆಗೆ ಓಡಿದಳು. ಮಂಚದ ಮೇಲೆ ದೊಪ್ಪನೆ ಬಿದ್ದು ದಿಂಬನ್ನು ಅವುಚಿ ಅಳತೊಡಗಿದಳು. ಅಮ್ಮ ಹಾಗೂ ಅವಳ ಅಕ್ಕ ಇನ್ನೂ ಮಾತನಾಡುತ್ತಾ ಇರುವುದು ಅಸ್ಪಷ್ಟವಾಗಿ ಕೇಳಿಸುತ್ತಾ ಇತ್ತು  ಆದರೆ ಮಾತುಗಳ ಕಡೆಗೆ ಗಮನ ಕೊಡದೇ ಒಂದೇ ಸಮನೆ ಅಳುತ್ತಾ ಅಮ್ಮ ಹೇಳಿದ ಪ್ರತಿಯೊಂದು ಮಾತುಗಳನ್ನು ನೆನಪಿಗೆ ತಂದುಕೊಂಡು ನಂಬಲಾರದೆ  ದುಖಃ ಉಮ್ಮಳಿಸಿ ಬಂದು ಬಿಕ್ಕಳಿಸಿದಳು. ತಾನು ಹುಟ್ಟಿ  ಆಡಿ ಬೆಳೆದ ತನ್ನ ಪ್ರೀತಿಯ ಊರನ್ನು ಬಿಟ್ಟು ಹೋಗುವುದೇ? ತನ್ನ ಗೆಳತಿಯರು ಇಲ್ಲಿಯೇ ಇರುವರು. ಎಲ್ಲರನ್ನೂ ತೊರೆದು ನಾವು ಬೇರೆ ಕಡೆ ವಾಸಿಸುವುದೇ? ಹೀಗೆ  ಅವ್ಯಕ್ತವಾದ ಹಲವಾರು ಚಿಂತೆಗಳು ಅವಳ ಮನವನ್ನು ಇನ್ನೂ ವ್ಯಾಕುಲ ಗೊಳಿಸಿತು. ಅತ್ತು ಸಾಕಾಗಿ ಸೂರನ್ನು ನೋಡುತ್ತಾ ಸ್ವಲ್ಪ ಹೊತ್ತು ಮಲಗಿದ್ದಳು. ಅಪ್ಪ ಈ ವಿಷಯಗಳನ್ನು ಹೇಳಿದಾಗ ಅಮ್ಮನಿಗೆ ಎಷ್ಟು ಸಂಕಟ ಆಗಿರಬೇಡ. ಅದಲ್ಲದೇ ನಮಗೆ ಹೇಳಲು ಮನಸ್ಸಲ್ಲೇ ಎಷ್ಟು ಒದ್ದಾಡಿರಬಹುದು ಅಮ್ಮ ಅದಕ್ಕೇ ಎಂದಿನ ಕಳೆ ಅಮ್ಮನ ಮುಖದಲ್ಲಿ ಇಲ್ಲ. ಹಾಗೆ ಅನಿಸಿದ ಒಡನೆ ಎದ್ದಳು ಕಣ್ಣುಗಳನ್ನು ಲಂಗದ ತುದಿಯಿಂದ ಒರೆಸಿ ತಾನು ಅತ್ತಿರುವುದು ಅಮ್ಮನಿಗೆ ತಿಳಿಯಬಾರದು ಎಂದು ಕೃತಕ ನಗುವನ್ನು ಮುಖದಲ್ಲಿ ತಂದುಕೊಂಡು ತಮ್ಮಂದಿರನ್ನು ಕರೆಯುತ್ತಾ ” ಬನ್ನಿರೋ ಹೊತ್ತಾಯಿತು ತಿಂಡಿ ತಿನ್ನೋಣ ” ಎಂದು ಕೂಗಿ ಅಡುಗೆ ಮನೆಯ ಕಡೆ ನಡೆದಳು.  ಅಲ್ಲಿ ಹೋದಾಗ ಅಕ್ಕ ಅಮ್ಮ ಇಬ್ಬರೂ ಗಹನವಾದ ಚರ್ಚೆಯಲ್ಲಿ ಇದ್ದರು. ಒಳಗೆ ಬಂದವಳೇ ಅಮ್ಮನನ್ನು ಅಪ್ಪಿ ಹಿಡಿದು ಪಕ್ಕದಲ್ಲಿ ಕುಳಿತಳು. ಅವಳ ಅಪ್ಪುಗೆಯು ಎಂದಿನಂತೆ ಇರಲಿಲ್ಲ. ಅಮ್ಮನಿಗೆ ಮೌನವಾಗಿ ಸಾಂತ್ವನ ಹೇಳುವಂತೆ ಬಿಗಿಯಾಗಿ ಇತ್ತು. 

ಅವಳ ಬಿಗಿಯಾದ ಅಪ್ಪುಗೆ ಕಲ್ಯಾಣಿಯವರಿಗೆ ಆಪ್ಯಾಯಮಾನವಾಗಿ ತೋರಿತು. ಹಾಗೆಯೇ ಮಗಳ ಮುಖವನ್ನು ತಮ್ಮ ಕಡೆಗೆ ತಿರುಗಿಸಿ ನೋಡಿದರು. ಅತ್ತು ಸೊರಗಿದ್ದವು ಕಣ್ಣುಗಳು ಮಂಕಾಗಿತ್ತು ಮುಖ. ಆದರೂ ತೋರ್ಪಡಿಸದೇ ಮುಗುಳು ನಗುತ್ತಾ ಇದ್ದ ಮಗಳ ಮುಖ ನೋಡಿ ಕರುಳು ಕಿವುಚಿದಂತೆ ಆಯ್ತು ಕಲ್ಯಾಣಿಯವರಿಗೆ.

ಹಾಗೇ ನೋಡುತ್ತಾ ಮಗಳ ಮನಸ್ಸಿನಲ್ಲಿ ಉಂಟಾಗುವ ಭಾವನೆಗಳನ್ನು ಅರಿಯುವ ವ್ಯರ್ಥ ಪ್ರಯತ್ನ ಮಾಡಿದರು.

ಸುಮತಿ  ತೋರ್ಪಡಿಸದೆ ಅಡಗಿಸಿ ಇಟ್ಟ ಭಾವ ಅವರಿಗೆ ಗೋಚರಿಸಲೇ ಇಲ್ಲ. ಗಂಡು ಮಕ್ಕಳು ಬಂದು… ” ಅಮ್ಮಾ ಹಸಿವು ಆಗುತ್ತಿದೆ “…. ಎಂದಾಗಲೀ ಕಲ್ಯಾಣಿ ವಾಸ್ತವ ಲೋಕಕ್ಕೆ ಬಂದಿದ್ದು. ಮಕ್ಕಳಿಗೆ ಬೇಯಿಸಿದ ಮರ ಗೆಣಸಿನಿಂದ ಮಾಡಿದ (ಕಪ್ಪ ಪುಳುಕ್ಕು) ಖ್ಯಾದ್ಯವನ್ನು ತಿನ್ನಲು ಕೊಟ್ಟು ತಾವೂ ಕೂಡ ಅವರೊಂದಿಗೆ ತಿಂಡಿ ತಿನ್ನಲು ಕುಳಿತರು. ಸಾಮಾನ್ಯವಾಗಿ ಕೇರಳೀಯರು ಬೆಳಗ್ಗಿನ ಉಪಹಾರವಾಗಿ ಹೆಚ್ಚಾಗಿ ಇದನ್ನೇ ತಿನ್ನುವುದು. ಏಕೆಂದರೆ ಅಲ್ಲಿನ ಪ್ರಮುಖ ಬೆಳೆಯಲ್ಲಿ ಒಂದು  ಮರಗೆಣಸು ಆಗಿದೆ.  ಅಮ್ಮ ಮಕ್ಕಳು  ಅನ್ಯಮನಸ್ಕರಾಗಿ ತಿಂಡಿ ತಿಂದರು.  ಹೆಣ್ಣು ಮಕ್ಕಳು ಇಬ್ಬರೂ ಮನಸ್ಸಿಲ್ಲದ ಮನಸ್ಸಿನಿಂದ ತಿಂಡಿ ತಿಂದು ತಮ್ಮಂದಿರನ್ನು ಜೊತೆಗೆ ಕರೆದುಕೊಂಡು ಒಳ ನಡೆದರು. ಆದರೆ ಇಂದು ಅವರಿಗೆ ತಮ್ಮಂದಿರನ್ನು ಗೋಳು ಹೊಯ್ದು ಕೊಂಡು ಆಟ ಆಡಲು ಮನಸ್ಸು ಇರಲಿಲ್ಲ. ಇಬ್ಬರೂ ಒಂದೊಂದು ಮೂಲೆ ಹಿಡಿದು ಕುಳಿತು ಗಹನವಾದ ಯೋಚನೆಯಲ್ಲಿ ಮುಳುಗಿದರು.  ತಮ್ಮಂದಿರಿಬ್ಬರೂ ಅಕ್ಕಂದಿರ ಹೊಸ ರೀತಿ ಕಂಡು ಅಚ್ಚರಿಯಿಂದ ಅವರ ಬಳಿ ಬಂದು…. ” ಬನ್ನಿ ಇಬ್ಬರೂ ಕಣ್ಣಾ ಮುಚ್ಚಾಲೆ ಆಟ ಆಡೋಣ”….  ಎಂದು ಕೈ ಹಿಡಿದು ಎಳೆದರೂ ಕೂಡಾ ಕುಳಿತಲ್ಲಿಂದ ಇಬ್ಬರೂ ಏಳಲೇ ಇಲ್ಲ. ಕದಲದೇ ಹಾಗೇ ಕುಳಿತಿದ್ದರು ಬೊಂಬೆಗಳಂತೆ. 


ರುಕ್ಮಿಣಿನಾಯರ್

ಕೇರಳ ಮೂಲದವರಾದ ರುಕ್ಮಿಣಿ ನಾಯರ್ (ರುಕ್ಮಿಣಿ ಎ.ವಿ),ಹುಟ್ಟಿದ್ದುಹಾಸನ ಜಿಲ್ಲೆಯ ಸಕಲೇಶಪುರದಲ್ಲಿ.ಸುಮತಿ ಪಿ.ಎಸ್. ಮತ್ತು ವೇಲಾಯುಧನ್ ನಾಯರ್ ಅವರ ಎರಡನೆಯ ಮಗಳಾಗಿ.ನಂತರ ಶ್ರೀದರ್ ಬಿ.ಎಂ.ರವನ್ನು ಮದುವೆಯಾಗಿ ಬೆಂಗಳೂರಲ್ಲಿನೆಲೆಸಿದ್ದಾರೆ..ಕೆಲಕಾಲ ಶಿಕ್ಷಕಿಯಾಗಿಕೆಲಸ ಮಾಡಿದವರೀಗ ಪೂರ್ಣಪ್ರಮಾಣದ ಗೃಹಿಣಿಯಾಗಿ ಬರವಣಿಗೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಪುಸ್ತಕ ಓದುವುದು-ಬರೆಯುವುದು, ಚಿತ್ರ ಬಿಡಿಸುವುದು. ಗಿಡಗಳನ್ನು ಬೆಳೆಸುವುದು ಇವರ ಹವ್ಯಾಸಗಳು

Leave a Reply

Back To Top