ರಾಧಿಕಾ ವಿ ಗುಜ್ಜರ್ ಕವಿತೆ ಅಪ್ಪ

ಕಾವ್ದ ಸಂಗಾತಿ

ರಾಧಿಕಾ ವಿ ಗುಜ್ಜರ್

ಅಪ್ಪ

ಕಂಪನಿಯ ದಪ್ಪ ಕರಿ ಬೂಟೊರೆಸಿ
ಸೈರನ್ ವೇಳೆಗೆ ಸರಿಯಾಗಿ ಧರಿಸಿ
ಹುಗ್ ಹುಗ್ ಹೊರಡುವ ಅಪ್ಪ, ಸಿಪಾಯಿ
ಸಂಜೆಗೆ ಬಿಚ್ಚಿಡುವ ಮತ್ತದೇ ಶ್ರದ್ಧೆಯಲಿ

ಅವ್ವನೋ ಅಜ್ಜಿಯೋ ಬಟ್ಟೆಯಡಿ ಹಿಡಿದು
ಕೊಟ್ಟರೆ ಅರಿಶಿನ, ಎಣ್ಣೆ ಕಾಸಿದ ಬಟ್ಟಲು
ಅಪ್ಪನ ಕಾಲಿನ ಸುಟ್ಟ ಗಾಯಕ್ಕೆಂದು
ಸಾರಿ ಹೇಳುತ್ತಿತ್ತು ಮುಖಗಳ ನೋವು

ಶರಾಯಿಗೆ ಅಚ್ಚುಗಳಿಂದ ಸಿಡಿದ
ಅವೇ ಲೋಹದ ಹನಿಗಳ ತೂತು
ಕಾಲುಚೀಲ, ಶರಾಯಿ, ಅಂಗಿಯಿಂದ
ಅದೇ ಕಬ್ಬಿಣದ ಕುಲುಮೆಯ ಘಾಟು

ನೊಗದ ಎತ್ತಿನ ಕುತ್ತಿಗೆಯಂತೆ, ಕೈಗಂಟು
ಕಿವಿಯ ಹಿಂದೆ ಗವುಸು ಕನ್ನಡಕದ ಗೀರು
ಬೆವರಿನ ಬವಣೆಗೆ ಅಂಟದಂತಿರಲು
ಹುಬ್ಬಿನಷ್ಟೇ ಚಿಕ್ಕ ತರಿ ತಲೆಗೂದಲು

ಐದು ಸ್ಟೀಲಿನ ತಾಟುಗಳಿಗೆ ಊಟ
ನಾಲ್ಕು ಗೋಡೆಗಳ ಸುಭದ್ರ ಸೂರು
ಮೂರು ಕುಡಿಗಳಿಗೆ ಫೀಸು, ಪುಸ್ತಕಗಳು
ಎರಡು ಹೆಣ್ಣುಗಳಿಗೆ ಅರ್ಧ ಜೀವ ಅವನು

ಕಾಲದೊಡನೆ ಕಾಲಿನ ಚುಕ್ಕೆಗಳೂ ಬೆಳೆದವು
ಕಲಬೆರಕೆಯಾಗದೆ ಮಕ್ಕಳು ಅಪರಂಜಿಯಾದವು
ಧರಿಸಿ ಬಿಳಿಯ ಪಂಚೆ ತಂಪಾಗಿರುತ್ತಾನೆ
ನಿವೃತ್ತನಾದರೂ ತುಕ್ಕಿಲ್ಲದ ಯಂತ್ರವಾಗಿದ್ದಾನೆ
( 05.11.23, ತಂದೆಯವರ ಹುಟ್ಟು ಹಬ್ಬ )

ರಾಧಿಕಾ ವಿ ಗುಜ್ಜರ್

7 thoughts on “ರಾಧಿಕಾ ವಿ ಗುಜ್ಜರ್ ಕವಿತೆ ಅಪ್ಪ

Leave a Reply

Back To Top