ಸಂಪ್ರದಾಯಗಳನ್ನು ಉಳಿಸಿಕೊಂಡು ಬರುವುದು ಕೂಡ ಒಂದು ಸವಾಲು ಜಿ. ಹರೀಶ್ ಬೇದ್ರೆ

ವಿಶೇಷಲೇಖನ

ಸಂಪ್ರದಾಯಗಳನ್ನು ಉಳಿಸಿಕೊಂಡು

ಬರುವುದು ಕೂಡ ಒಂದು ಸವಾಲು

ಜಿ. ಹರೀಶ್ ಬೇದ್ರೆ

ಉದ್ಯೋಗಸ್ಥ ಮಹಿಳೆ ಎದುರಿಸುವ ಸವಾಲುಗಳು ಮುಖ್ಯವಾಗಿ ಎರಡು ರೀತಿಯಲ್ಲಿ ವಿಂಗಡಿಸಬಹುದು. ಒಂದು ಮನೆಯೊಳಗೆ ಊಟ ತಿಂಡಿ, ಕಸ ಮುಸುರೆ, ಮಕ್ಕಳ, ಗಂಡನ ಹಾಗೂ ಯಾರಾದರೂ ಹಿರಿಯರು ಮನೆಯಲ್ಲಿದ್ದರೆ ಅವರ ಬೇಕು ಬೇಡಗಳನ್ನು ಗಮನಿಸಬೇಕಾಗುತ್ತದೆ. ಹಾಗೆಯೇ ಮನೆಯ ಹೊರಗೆ, ತಾನು ದುಡಿಯುವ ಸಂಸ್ಥೆಯ ನೀತಿ ನಿಯಮಗಳನ್ನು ಪಾಲಿಸುತ್ತಾ, ತಾನು ಹೊಂದಿರುವ ಸ್ಥಾನದ ಜವಾಬ್ದಾರಿಯನ್ನು ನಿಭಾಯಿಸಬೇಕಾಗುತ್ತದೆ. ಇದರ ಜೊತೆಗೆ ಮಹಿಳೆ ಎದುರಿಸುವ ಸವಾಲು ಎಂದರೆ, ತಾನು ಬೆಳೆದು, ಬಂದ ಮನೆಯ ಹಬ್ಬ ಹರಿದಿನಗಳನ್ನು, ಸಂಪ್ರದಾಯಗಳನ್ನು ಚಾಚೂ ತಪ್ಪದೆ ಆಚರಿಸಿಕೊಂಡು ಬಂದು ಅವುಗಳನ್ನು ಉಳಿಸುವುದರ ಜೊತೆಗೆ ತನ್ನ ಮುಂದಿನ ಪೀಳಿಗೆಗೆ ಹೇಳಿಕೊಡುವುದು ಆಗಿರುತ್ತದೆ.

ಮಹಿಳೆ ಆರ್ಥಿಕವಾಗಿ ಸ್ವಾವಲಂಭಿಯಾದಂತೆಲ್ಲಾ ಜವಾಬ್ದಾರಿಗಳು ಹೆಚ್ಚಾಗಿ ಹಬ್ಬ ಹರಿದಿನಗಳೆಲ್ಲಾ ಸಾಂಕೇತಿಕವಾಗಿ ಆಚರಿಸ್ಪಡುತ್ತಿದೆ. ಏನೇ ಎಂದರೂ ಈ ವಿಷಯದಲ್ಲಿ ಪುರುಷರಿಗೆ ಆಸಕ್ತಿ ಕಡಿಮೆಯೆ. ಪೂಜೆ ಪುನಸ್ಕಾರಕ್ಕೆ ಬೇಕಾದ ವಸ್ತುಗಳನ್ನು ತಂದುಕೊಟ್ಟು, ಮನೆಯಲ್ಲಿ ಹೇಳಿದ ಚೂರುಪಾರು ಕೆಲಸಗಳನ್ನು ಮಾಡಿಕೊಡಬಹುದೇ ಹೊರತು ಪ್ರತಿಯೊಂದನ್ನೂ ಅಣಿಗೊಳಿಸಿ ಆಚರಣೆ ಮಾಡುವುದು ವಿರಳವೇ. ಹಾಗಾಗಿ ಹಬ್ಬ ಹರಿದಿನಗಳ ಸಂಪ್ರದಾಯ ಆಚರಿಸಿ, ಉಳಿಸಿ, ಮುಂದಿನ ಪೀಳಿಗೆಗೆ ಹೇಳಿಕೊಡುವ ಹೆಚ್ಚಿನ ಸವಾಲು ಮಹಿಳೆಯರ ಹೆಗಲ ಮೇಲೆ ಇರುತ್ತದೆ. ಇದರಿಂದಾಗಿಯೇ ಎಲ್ಲಾ ಆಚರಣೆಗಳು ಸಾಂಕೇತಿಕವಾಗಿ ನಡೆಯುವಂತಾಗಿದೆ, ಇದು ಬದಲಾದ ಕಾಲಘಟ್ಟದಲ್ಲಿ ತಪ್ಪು ಅಲ್ಲ.

ಇಂತಹ ಸಂದರ್ಭದಲ್ಲಿಯೂ ಬಡ್ತಿ ಪಡೆದು ಉನ್ನತ ಅಧಿಕಾರಿಯಾಗಿ ಪರಸ್ಥಳಕ್ಕೆ ಒಬ್ಬರೇ ಬಂದಾಗಲೂ, ತಾನು ಮದುವೆಯಾಗಿ ಗಂಡನ ಮನೆಗೆ ಬಂದಾಗ ತನ್ನ ಅತ್ತೆಯಿಂದ ಕಲಿತ ಪ್ರತಿಯೊಂದು ಸಂಪ್ರದಾಯಗಳನ್ನು ಅಷ್ಟೇ ಅಚ್ಚುಕಟ್ಟಾಗಿ ನಡೆಸಿಕೊಂಡು ಬರುತ್ತಿದ್ದಾರೆ ಎಂದರೆ ಅಂತವರ ಬಗ್ಗೆ ಹೆಮ್ಮೆ ಅನಿಸುತ್ತದೆ ಅಲ್ಲವೇ. ಅಂತಹವರು ಯಾರು? ಇಲ್ಲಿ ಉಲ್ಲೇಖಿಸುವಂತದ್ದು ಏನು ಮಾಡಿದ್ದಾರೆ? ಎಂದು ಕೇಳುವಿರಾ…….. ಹೇಳುವೆ. ಭಾರತೀಯ ಜೀವ ವಿಮಾ ನಿಗಮ, ಶಿವಮೊಗ್ಗ ವಿಭಾಗೀಯ ಕಚೇರಿಯಲ್ಲಿ ದಾವೆ ವಿಭಾಗದ ಉಪ ವಿಭಾಗಾಧಿಕಾರಿಯಾಗಿ ಬೆಂಗಳೂರು ವಿಭಾಗದಿಂದ ಬಡ್ತಿ ಪಡೆದು ಬಂದ ಶ್ರೀಮತಿ ರುಕ್ಮಿಣಿಯವರು ಈಗ ತಾವು ವಾಸವಿರುವ ಮನೆಯ ಹಾಲಿನಲ್ಲಿ ಹಾಗೂ ರೂಮಿನಲ್ಲಿ ಇದುವರೆಗೂ ಬೆಂಗಳೂರಿನಲ್ಲಿ ನವರಾತ್ರಿಯ ಸಂದರ್ಭದಲ್ಲಿ ಗೊಂಬೆಗಳನ್ನು ಪ್ರತಿಷ್ಠಾಪಿಸಿ ಪೂಜಿಸುತ್ತಿದ್ದ ಗೊಂಬೆಗಳ ಜೊತೆಗೆ ಮತ್ತಷ್ಟು ಹೊಸ ಗೊಂಬೆಗಳನ್ನು ಖರೀದಿಸಿ ಅತ್ಯಂತ ವ್ಯವಸ್ಥಿತವಾಗಿ ಜೋಡಿಸಿದ್ದಾರೆ. ಇಷ್ಟೇ ಅಲ್ಲದೆ ಪ್ರತಿದಿನ ನವಧಾನ್ಯಗಳ ಒಂದೊಂದು ನೈವೇದ್ಯ ಮಾಡಿ ಎಲ್ಲರಿಗೂ ಹಂಚುವುದರ ಮೂಲಕ ಶಾಸ್ತ್ರೋಕ್ತವಾಗಿ ನವರಾತ್ರಿ ಹಬ್ಬವನ್ನು ಆಚರಿಸಿದ್ದಾರೆ. ಪತಿ ಹಾಗೂ ಮಗ ಇಬ್ಬರೂ ಬೆಂಗಳೂರಿನಲ್ಲಿ ಉದ್ಯೋಗದಲ್ಲಿ ಇರುವ ಕಾರಣ ಮತ್ತು ಮಗನಿಗೆ ಇನ್ನೂ ಮದುವೆ ಆಗಿರದ ಕಾರಣ ತಾವು ಇಲ್ಲಿಯವರೆಗೆ ನಡೆಸಿಕೊಂಡು ಬಂದ ಸಂಪ್ರದಾಯ ಯಾವುದೇ ಕಾರಣಕ್ಕೂ ನಿಲ್ಲಬಾರದು ಎಂದು ಒಬ್ಬರೇ ಆದರೂ ಸ್ಥಳೀಯ ಸಹೋದ್ಯೋಗಿಗಳ ಸಹಕಾರ ಪಡೆದು ಹಬ್ಬ ಆಚರಿಸಿದ ರೀತಿ ಎಲ್ಲರಿಗೂ ಮಾದರಿಯಾಗಿದೆ ಎಂದರೆ ಸುಳ್ಳಲ್ಲ. ಅದೂ ಗೊಂಬೆಗಳನ್ನು ತುಂಬಾ ಅರ್ಥಗರ್ಭಿತವಾಗಿ ಜೋಡಿಸಿ ನೋಡುಗರ ಕಣ್ಣುಗಳಿಗೆ ಹಬ್ಬ ಉಂಟಾಗುವಂತೆ ಮಾಡಿದ್ದಾರೆ. ನೋಡಲು ಬಂದವರಿಗೆ ಅವರು ತುಂಬಾ ಆಸಕ್ತಿಯಿಂದ ವಿವರಿಸುವುದು ನೋಡಿದಾಗ ಇಕತವರ ಸಂತತಿ ಸಾವಿರವಾಗಲಿ ಎಂದು ಖಂಡಿತವಾಗಿಯೂ ಹಾರೈಸದೆ ಇರಲು ಸಾಧ್ಯವಿಲ್ಲ.

(ವಾರ್ಷಿಕೋತ್ಸವದ ಸಲುವಾಗಿ ನೀಡಿದ ಉದ್ಯೋಗಸ್ಥ ಮಹಿಳೆಯರು ಎದುರಿಸುತ್ತಿರುವ ಸವಾಲುಗಳು ವಿಷಯದಿಂದ ಪ್ರೇರಿತನಾಗಿ ಈ ಲೇಖನ ಬರೆದಿರುವೆ)


ಜಿ. ಹರೀಶ್ ಬೇದ್ರೆ

4 thoughts on “ಸಂಪ್ರದಾಯಗಳನ್ನು ಉಳಿಸಿಕೊಂಡು ಬರುವುದು ಕೂಡ ಒಂದು ಸವಾಲು ಜಿ. ಹರೀಶ್ ಬೇದ್ರೆ

  1. ಸಂಪ್ರದಾಯಗಳನ್ನು ಉಳಿಸಿಕೊಂಡು ಹೋಗುವುದು ಖಂಡಿತಾ ಸವಾಲಿನ ಕೆಲಸವೇ ಹೌದು. ಸುಂದರ ಬರಹ

  2. ಅಚ್ಚುಕಟ್ಟಾದ ನೈಜ ಬರವಣಿಗೆ.
    ಮುಂದಿನ ತಲೆಮಾರಿಗೆ ನಮ್ಮ ಸಂಸ್ಕೃತಿ ಉಳಿಸುವ ಬೆಳೆಸುವ ಪ್ರಾಮಾಣಿಕ ಜವಾಬ್ದಾರಿ. Hatsapp madam ji.

Leave a Reply

Back To Top