ಚಂದ್ರಿಕಾ ನಾಗರಾಜ್ ಹಿರಿಯಡಕ ಎರಡು ಪುಟ್ಟ ಕಥೆಗಳು

ಕಥಾ ಸಂಗಾತಿ

ಚಂದ್ರಿಕಾ ನಾಗರಾಜ್ ಹಿರಿಯಡಕ

ಎರಡು ಪುಟ್ಟ ಕಥೆಗಳು

ಕಥೆ-ಒಂದು

“ಈ ಕೈಗಳಿಗೆ ನಿನ್ನ ದನಿಯ ಘಲ್ ಶಬ್ದ ಬಳೆಯಾಗಿ ಸೇರಬೇಕಿತ್ತು. ಈ ಕೊರಳಿಗೆ ನಿನ್ನ ಮುತ್ತಿನುಸಿರ ಸರ ಅಂಟಿಕೊಳ್ಳಬೇಕಿತ್ತು. ಈ ಕಿವಿಗಳಿಗೆ ನಿನ್ನ ಶಿಸ್ತಿನ ನಡಿಗೆ ಭಿನ್ನಾಣ ಜುಮುಕಿಯಾಗಿ ಮೆರೆಯಬೇಕಿತ್ತು. ಈ ನೆತ್ತಿಗೆ ನಿನ್ನ ಬಿಸಿಯುಸಿರ ನೆತ್ತಿ ಬೊಟ್ಟು ನಲಿಯಬೇಕಿತ್ತು. ನಿನ್ನ ನಗು ನನ್ನ ಕಾಲ್ಗೆಜ್ಜೆಯಾಗಿ ಘಲ್ ಎನ್ನ ಬೇಕಿತ್ತು.
ಆದರೇನು ಮಾಡುವುದು ಹುಡುಗ ನೀನು ನನ್ನೊಳ ಬೇಗುದಿಯ ಅರಿಯದಾದೆ! ಕಣ್ಣಿಂದ ನೀರಿಳಿಯಿತು. ” ಇವತ್ತು ನಿಶ್ಚಿತ್ತಾರ್ಥ ಕಣೇ, ಮದುವೆ ಅಲ್ಲ. ಅಳ್ತಿ ಯಾಕೆ?” ಗೆಳತಿಯರು ಪ್ರಶ್ನೆ ಇತ್ತರು.
ನಾನು ಸುಮ್ಮನೆ ಕಣ್ಣೊರೆಸಿಕೊಂಡೆ.  ಶಾಸ್ತ್ರಗಳು ಒಂದೊಂದೆ ನಡೆಯಲಾರಂಭಿಸಿದ್ದವು. ನಾನು ಅವನನ್ನು ಅರಸುತ್ತಿದ್ದೆ.
ಅಭಯ್, ನಾನು ಬಾಲ್ಯದ ಸ್ನೇಹಿತರು. ಅಂದಿನಿಂದಲೂ ಅವನೆಂದರೆ ನನಗೆ, ನಾನೆಂದರೆ ಅವನಿಗೆ ಅಚ್ಚುಮೆಚ್ಚು. ಬರು ಬರುತ್ತಾ ನಾನು ಅವನನ್ನು ಆರಾಧಿಸತೊಡಗಿದ್ದೆ. ಪ್ರೇಮವೆಂದರೆ ಆರಾಧನೆಯೇ ಅಲ್ಲವೇ? ಅವನಲ್ಲೂ ನನ್ನ ಕುರಿತು ಅಂತಹ ಭಾವನೆಗಳಿದ್ದವೋ ಗೊತ್ತಿಲ್ಲ. ಅವನೇನೂ ಹೇಳಲಿಲ್ಲ…ನಾನೂ…ಪ್ರೇಮಕ್ಕಿಂತ ಸ್ನೇಹ ಮುಖ್ಯ…ಆದ್ರೆ, ಜೀವಕ್ಕಿಂತ ಅಭಯ್ ಮುಖ್ಯನಾಗಿದ್ದನಲ್ಲಾ…ಅವನ್ಯಾಕೆ ನನ್ನ ಓದಲಿಲ್ಲ…ನನ್ನೊಡಲ ಪ್ರೇಮದ ಅರಿವು ಅವನೊಳಗ್ಯಾಕೆ ರಿಂಗಣಿಸಲಿಲ್ಲ…ಗೊತ್ತಿದ್ದು ನಾಟಕ ಮಾಡಿದನಾ…ಇವತ್ತು ಅದು ಹೇಗೆ ಓಡಾಡುತ್ತಿದ್ದಾನೆ ನೋಡು…ಸಂಭ್ರಮದಿಂದ…ಬೇಡ ಈ ನಿಶ್ಚಿತಾರ್ಥ! ಚೀರಲೂ ಆಗಲಿಲ್ಲ…ಅಷ್ಟರಲ್ಲಿ ಶಿಶಿರ್ ಉಂಗುರ ತೊಡಿಸಿದ್ದ.

****

ಕಥೆ-ಎರಡು

ಸುಮೇಧ್ ಗೆ ಈ ಕಲರ್ ಇಷ್ಟ ಅಲ್ವಾ ಅದ್ಕೆ ತಗೊಂಡೆ” ನನ್ನ ಮಾತಿಗೆ ಧೃತಿ ದುರುಗುಟ್ಟಿ ನೋಡಿದಳು. “ಎಷ್ಟ್ ಸಲ ಹೇಳಿದ್ದೀನಿ  ಸಂಯುಕ್ತ, ಅವ್ನ ಮರ್ತು ಬಿಡೂಂತ…”
“ಉಸಿರನ್ನ ಮರೆತ್ರೆ ನಾನು ಬದುಕಿರ್ತೀನಾ?” ನನ್ನ ಮರು ಪ್ರಶ್ನೆಗೆ  ಅವಳ ಬಳಿ ಉತ್ತರವಿರಲಿಲ್ಲ.
ಅವಳ ಕೆನ್ನೆ ಗಿಂಡಿ, ” ಅವನು ನನ್ನ ಪ್ರಾಣ…ಪ್ರೀತಿ ಯಾವತ್ತೂ ಸಾಯಲ್ಲ ಕಣೇ”ಎಂದೆ. ಅವಳು ಕಣ್ಣೀರಾದಳು. “ಗಟ್ಟಿಗಿತ್ತಿ ಕಣೇ ನೀನು”
“ಅವನೇ ಕಾರಣ” ಎಂದು, “ಬಾ ಇಲ್ಲಿ” ಎಂದು ಕಪಾಟಿನ ಬಳಿ ಕರೆದೊಯ್ದೆ. ಕಪಾಟಿನ ಬಾಗಿಲು ತೆರೆದವಳಿಗೆ ಧೃತಿಯ ಅಚ್ಚರಿ ಬೆರೆತ ಸಂಕಟ ಅರಿವಾಗಿತ್ತು. “ಏನೇ ಇದು?” ತಬ್ಬಿಕೊಂಡು ಬಿಕ್ಕಿದಳು.
“ಇದು ಸುಮೇಧ್ ಗೆ ನಾನು ಕೊಟ್ಟಿದ್ದ ಫಸ್ಟ್ ಗಿಫ್ಟ್ …ಎಷ್ಟ್ ಇಷ್ಟ ಪಟ್ಟಿದ್ದಲಾ ಈ ಶರ್ಟ್ ನಾ…ಕಾಲೇಜ್ ನಲ್ಲಿ ನೋಡಿದ್ಯಲಾ..” ಎದೆಗೊತ್ತಿಕೊಂಡೆ. “ಹ…ಇದು ಅವ್ನು ನಂಗೆ ಕೊಡ್ಸಿದ್ದ ಫಸ್ಟ್ ಸೀರೆ…ಇದನ್ನ ಉಟ್ಕೊಂಡು ದೇವಸ್ಥಾನಕ್ಕೆ ಹೋಗಿದ್ದೆ ಅವನ ಜೊತೆ”
“ಹ ಮತ್ತೆ ಈ ಕಪ್ ವ್ಯಾಲೆಂಟೈನ್ಸ್ ಡೇಗೆ ಅವ್ನು ಕೊಟ್ಟ ಗಿಫ್ಟ್. ಹೊರಗಡೆ ಇಟ್ರೆ ಯಾರಾದ್ರೂ ಒಡ್ದಾಕ್ತಾರಂತ ಇಲ್ಲಿಟ್ಟಿದ್ದೀನಿ”
“ಇದು ಅವನೇ ತೊಡಿಸಿದ ಬಳೆ…ನಮ್ಮೂರ್ ಜಾತ್ರೇಲಿ”
“ಈ ಜುಮ್ಕಿ ನೋಡು”
” ಕಪಾಟಿನ
ಬಾಗಿಲ್ ತೆಗ್ದ್ರೆ ಸಾಕು ನಾನು ಅವನು…ಅಲ್ವಾ…ಫೋಟೋಗಳೆಲ್ಲಾ ನೋಡ್ತಿದ್ರೆ ಅವನು ನಾನು…ನೆನಪು…ಎಲ್ಲಾ…ಕಣ್ಣಿಗಪ್ಪುತ್ತೆ ಅಲಾ… ಅವ್ನೆಲ್ಲಾದ್ರೂ ಬಂದ್ರೆ ನನ್ನ ಮತ್ತೆ ಬಿಟ್ಟು ಹೋಗಲ್ಲ…ಅದಂತೂ ಪಕ್ಕಾ “ಅಂದೆ.
” ಸಂಯುಕ್ತ ” ಅವಳು ಮೆತ್ತಗೆ ಕರೆದಳು.
“ನೋಡಿಲ್ಲಿ” ಪುಟ್ಟ ಪೆಟ್ಟಿಗೆ ತೆರೆದೆ. “ಮಾಂಗಲ್ಯ ಸರ” ಉದ್ಗರಿಸಿದಳು.
“ಕುತ್ತಿಗೆಯಿಂದ ಕಳಚಿಟ್ಟಿರಬಹುದು..ಹಾಗಂತ ಅವ್ನ ಮರ್ತಿದ್ದೀನಿ ಅಂತ ಅರ್ಥ ಅಲ್ಲಾ”
ಅವಳು ಸೋತಳು. ಅವಳನ್ನು ಅಮ್ಮ ಕರೆಸಿದ್ದೆ ನನ್ನ ಮರು ಮದುವೆಗೆ ಒಪ್ಪಿಸಲೆಂಬುದು ನನಗೆ ಗೊತ್ತಿತ್ತು. ಪಾಪ! ಅವಳೇನು ಮಾಡಿಯಾಳು? ಸಂಯುಕ್ತ ಅವನನ್ನು ಪ್ರೀತಿಸಿದ್ದಳು, ಅವನೊಂದಿಗೆ ಜೀವಿಸಿದ್ದಳು…ಈಗಲೂ ಅವನೊಂದಿಗೆ ಬದುಕುತ್ತಿದ್ದಾಳೆ ಎಂಬುದು.

———————-

ಚಂದ್ರಿಕಾ ನಾಗರಾಜ್ ಹಿರಿಯಡಕ

6 thoughts on “ಚಂದ್ರಿಕಾ ನಾಗರಾಜ್ ಹಿರಿಯಡಕ ಎರಡು ಪುಟ್ಟ ಕಥೆಗಳು

    1. ಅಂದವಾದ ದೇಸಿ ಬರವಣಿಗೆ…….ಅಕ್ಕ ತಂಗಿ ಇಬ್ಬರೂ ಬರವಣಿಗೆಯ ಶೈಲಿ ಶ್ಲಾಘನೀಯ

Leave a Reply

Back To Top