ಅಂಕಣ ಸಂಗಾತಿ

ಹನಿಬಿಂದು

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ

ತುಳು ನಾಡಿನ ಸಂಸ್ಕೃತಿಯ ಬಗ್ಗೆ ಒಂದಿಷ್ಟು

ಭಾರತ ಮಾತ್ರವಲ್ಲ ಕರ್ನಾಟಕವೂ ವಿವಿಧ ಸಂಸ್ಕೃತಿಯ ನೆಲೆವೀಡು. ಉತ್ತರ ಕರ್ನಾಟಕ, ಕೊಡವ, ಗಡಿ ಭಾಗದಲ್ಲಿ ಮರಾಠಿ, ತೆಲುಗು, ಕೊಂಕಣಿ, ತಮಿಳು, ಲಂಬಾಣಿ, ಬುಡಕಟ್ಟು ಜನಾಂಗ ಹೀಗೆ ಬೇರೆ ಬೇರೆ ಸಂಸ್ಕೃತಿಯ ಹಾಗೆಯೇ ತುಳುವರದ್ದೂ ಕೂಡ ಬೇರೆಯೇ ತೆರನಾದ ಸಂಸ್ಕೃತಿಯಿದೆ. ಬೆಳಗ್ಗೆ ಎದ್ದು ಬಾಗಿಲಿಗೆ ನೀರು ಹಾಕಿ ರಂಗೋಲಿ ಹಾಕುವ ಕಲೆ ಇಲ್ಲಿನದಲ್ಲ ಬದಲಾಗಿ ಬಾಗಿಲು, ಅಂಗಳ, ಮನೆಯೊಳಗೂ ಗುಡಿಸಿ, ಪಾತ್ರೆ ತೊಳೆದು, ಅಂಗಳವನ್ನು ಸೆಗಣಿ  ನೀರಿನಿಂದ ಸಾರಿಸುವ ಕಾರ್ಯ ಹಿಂದಿನದು. ಯಾವುದೇ ಕಾರ್ಯಕ್ರಮ ಇರಲಿ, ಪೂಜೆ ಇರಲಿ ಮನೆಯ ಅಂಗಳವನ್ನು ಸಾರಿಸಲೇ ಬೇಕು. ಹಿಂದಿನ ಕಾಲದಲ್ಲಿ ಸಿಮೆಂಟ್ ಇಲ್ಲದಾಗ ಮನೆಯ ನೆಲವನ್ನೂ ಹೀಗೆಯೇ ಸಾರಿಸುತ್ತಿದ್ದರಂತೆ. ಬಟ್ಟೆ ತೊಡುವಲ್ಲೂ ವಿಶೇಷ. ಮಹಿಳೆಯರಿಗೆ ಸೀರೆಯ ನೆರಿಗೆ ಉದ್ದ ಬಿಟ್ಟು, ಉದ್ದವಾದ ಕಪ್ಪು ಮಣಿಯ ಕರಿಮಣಿ ಸರ, ಒಂಕಿ ಉಂಗುರ. ಕಾಲಿಗೆ ಹಲವು ಸುತ್ತಿನ ಕಾಲುಂಗುರ ಪತಿವ್ರತೆಗೆ. ದೊಡ್ಡದಾದ ರೌಂಡ್ ತುರುಬು. ಅದರ ಸುತ್ತ ಮಂಗಳೂರು ಮಲ್ಲಿಗೆಯ ಅಲಂಕಾರ. 


ಊಟದಲ್ಲೂ ಅಷ್ಟೇ. ಇಲ್ಲಿ ಬಹಳ ವಿಶೇಷತೆ. ಕುಚ್ಚಲಕ್ಕಿ ಅನ್ನ, ತೆಂಗಿನ ಕಾಯಿ ರುಬ್ಬಿ ಹಾಕಿ ತಯಾರಿಸಿದ ಗಟ್ಟಿ ಸಾಂಬಾರ್,  ಸುಕ್ಕ, ಗಸಿ, ಪಲ್ಯ, ಉಪ್ಪಿನ ಕಾಯಿ, ಚಟ್ನಿ, ಪಾಯಸ, ಹೋಳಿಗೆ, ಹಪ್ಪಳ, ಚಕ್ಕುಲಿ ಇಲ್ಲಿನ ವಿಶೇಷ. ಮಿಶ್ರಾಹಾರಿಗಳಿಗೆ ಕೋಳಿ ಸುಕ್ಕಾ ಹಾಗೂ ಕೋಳಿ ಸಾರು, ಅಕ್ಕಿ ರೊಟ್ಟಿ ಇಲ್ಲಿನ ವಿಶೇಷ. ಆಟಿ (ತುಳು ತಿಂಗಳಿನ ಆಷಾಡ) ದಲ್ಲಿ  ಮಾಡುವ ಪತ್ರೊಡೆ, ತಜಂಕ್ ಮತ್ತು ಹಲಸಿನ ಬೀಜದ ಪಲ್ಯ, ಕೆಡ್ಡಸ ಹಬ್ಬಕ್ಕೆ ತಯಾರಿಸುವ ನನ್ಯರಿ ಅಥವಾ ಕುಡುವರಿ, ಬದನೆ ನುಗ್ಗೆ ಸಾಂಬಾರ್, ಇತರ ದಿನಗಳಲ್ಲಿ ಹಾಗೂ ಕಾರ್ಯಕ್ರಮಗಳಲ್ಲಿ ತಯಾರಿಸುವ  ಮಂಗಳೂರು ಸೌತೇಕಾಯಿ ಸಾಂಬಾರ್, ಹಾಗೆಯೇ ಮಾವಿನಕಾಯಿ, ಅಮಟೆ ಕಾಯಿ, ಸೌತೆಕಾಯಿ, ಹಲಸಿನ ಎಳೆ ಕಾಯಿಯ ಉಪ್ಪಿನಕಾಯಿ, ತೊಂಡೆಕಾಯಿ ಉಪ್ಪಿನಕಾಯಿ ಇಲ್ಲಿನ ವಿಶೇಷ.
  ಇನ್ನು ಕಾರ್ಯಕ್ರಮಗಳ ಊಟದಲ್ಲಿ ಕೂಡ ವಿಶೇಷತೆ. ಐಸ್ ಕ್ರೀಮ್ ಇಲ್ಲಿ ಸರ್ವರ ಆಯ್ಕೆ. ಹಾಗೆಯೇ ಇಲ್ಲಿನ ಜೈನರ ಊಟದ ರುಚಿಯೇ ಬೇರೆ. ಅದನ್ನು ತಿಂದವ ಮತ್ತೆ ಮತ್ತೆ ಬೇಕೇನುವ. ಹುಣಸೆ ಹುಳಿ, ಬೆಳ್ಳುಳ್ಳಿಯ ಉಪ್ಪಿನಕಾಯಿ, ಮೆಣಸಿನ ಚಟ್ನಿ, ವಿಶೇಷ ಸಾರು, ಸಿಹಿ ತಿನಿಸು ಮೆಚ್ಚಿ ಒಪ್ಪುವವರೆ ಎಲ್ಲರೂ. ಇನ್ನು ಅಡುಗೆ ಎಂದರೆ ನೆನಪಾಗುವುದು ಭಟ್ಟರು. ಭಟ್ಟರ ಊಟ, ಹೋಟೆಲ್, ಅದರ ಸವಿ ಇನ್ನೊಂಥರ! ಇಡ್ಲಿ ಸಾಂಬಾರ್,  ಹೋಳಿಗೆ ಊಟ, ಭಟ್ಟರ ಸ್ಪೆಷಲ್ ಸಾರು, ಚಟ್ನಿ, ಸಿಹಿ ತಿನಿಸುಗಳು , ಊಟದ, ತಿನ್ನುವ ಪದ್ಧತಿ, ಮಜ್ಜಿಗೆ ಊಟ ಎಲ್ಲವೂ ವಿಶೇಷ. ತಂಬುಳಿ ಯಂತೂ ಆರೋಗ್ಯಕ್ಕೆ ಲೋಕಪ್ರಿಯವಾಗಿದೆ. ಇನ್ನು  ಅದು ಆರೋಗ್ಯಕರ ಊಟ ಕೂಡ. ಬುದ್ಧಿಶಕ್ತಿಯ ಬೆಳವಣಿಗೆಯೂ.



ಇನ್ನು ಮನೆಗಳ ಅಂದ ಅದೊಂದು ಬೇರೆಯೇ. ಎಲ್ಲಾ ಕಡೆ ಮನೆಗಳು ಪೂರ್ವಾಭಿಮುಖವಾಗಿ ಇದ್ದರೆ ಇಲ್ಲಿ ಅದು ಉತ್ತರಾಭಿಮುಖ. ಪೂರ್ವಕ್ಕೊಂದು ಬಾಗಿಲು. ಮಂಗಳೂರು ಹಂಚಿನ ಮನೆ ನೋಡಲು ಸುಂದರ.
ಊರಲ್ಲಿಯೇ ಬೆಳೆದ ತೆಂಗಿನ ಎಣ್ಣೆಯನ್ನು ಬಳಸಿ ತಯಾರಿಸಿದ ನೀರ್ ದೋಸೆ, ಅದರಲ್ಲೇ ಒಗ್ಗರಣೆ ಹಾಕಿದ ಕೆಂಪು ಚಟ್ನಿ. ತೆಂಗಿನ ಎಣ್ಣೆ ಆಲೀವ್ ಎಣ್ಣೆಗಿಂತಲೂ ಭಾರತದ ಪರಿಸರಕ್ಕೆ ಉತ್ತಮ ಆಹಾರ ಎಂದು ತಜ್ಞರು ಹೇಳುತ್ತಾರೆ. ಬೆಳಗ್ಗೆ ತಿನ್ನುವ ಕುಚಲಕ್ಕಿ ಗಂಜಿ ಚಟ್ನಿ ಯಿಂದ ಯಾವುದೇ ಗ್ಯಾಸ್ಟ್ರಿಕ್ ರೋಗ ಬಾರದು.
ಯಾವುದೇ ಕಾರ್ಯಕ್ರಮಕ್ಕೆ ಆಸನ, ವೇದಿಕೆಗೆ ಹೆಚ್ಚು ಒತ್ತು ಕೊಡದ, ಕೆಲಸಕ್ಕೆ ಹೆಚ್ಚು ಸಮಯ ವ್ಯಯ ಮಾಡುವ ಪ್ರಾಕ್ಟಿಕಲ್ ಜನ ಇಲ್ಲಿನವರು. ಹೆಚ್ಚು ಸಿನೆಮಾ ನೋಡಲು ಸಮಯ ಮೀಸಲಿಡುವುದಿಲ್ಲ. ಬದಲಾಗಿ ತುಳು ನಾಟಕಗಳನ್ನು ಹೆಚ್ಚು ನೋಡುತ್ತಾರೆ. ಈಗಲೂ ಸಿನೆಮಾ ಕಾಲದಲ್ಲಿ ನಾವಿದ್ದರೂ ನಾಟಕದ ಮೋಹ ಜನರನ್ನು ಬಿಟ್ಟಿಲ್ಲ. ಅದರ ಜೊತೆಗೆ ತೆಂಗಿನ ಕಾಯಿಯ ಹಾಗೆಯೇ ಯಕ್ಷಗಾನ ಕೂಡ ಇಲ್ಲಿನ ಜನರ ಉಸಿರು. ಯಕ್ಷಗಾನ ನೋಡದ ತುಳುವನಿಲ್ಲ.


ಹಣಕ್ಕಾಗಿ ಪರದೇಶ, ಪರವೂರಿಗೆ ಹೆಚ್ಚು ವಲಸೆ. ಅದರಲ್ಲೂ ಉದ್ಯಮ ಇವರ ಕೈ ಬಿಡುವುದಿಲ್ಲ. ಹೋಟೆಲ್ ಗಳು ಇವರ ಆಪ್ಯಾಯಮಾನ ಕೆಲಸ.  ಹಲವರಿಗೆ ಹೊಟ್ಟೆ ತುಂಬಾ ಊಟ ಕೊಡುವ ಕಾರ್ಯ.
ಇನ್ನು ಸತ್ಯಪ್ರಿಯರು. ನಂಬಿಕೆ ಉಳಿಸಿಕೊಳ್ಳುವಲ್ಲಿ ನಾನು ಹೆಸರಾದವರು. ಕಪಟ ಅರಿಯದವರು. ಕಷ್ಟದಲ್ಲಿ ಇದ್ದವರಿಗೆ ಸಹಾಯ ಮಾಡುವವರು. ಸ್ವಾಭಿಮಾನಿಗಳು. ಎಷ್ಟೇ ಕಷ್ಟ ಬಂದರೂ ಹೊರಗಿನ ಜನರಿಗೆ ಅದನು ತೋರಿಸಿ ಕೊಳ್ಳದೆ ತಾವೇ ಕಷ್ಟ ಪಡುವವರು. ಯಾರೊಡನೆಯೂ ಉಚಿತಕ್ಕಾಗಿ ಅಂಗಲಾಚದವರು. ತಾವಾಯಿತು ತಮ್ಮ ಬದುಕಾಯಿತು ಎಂದು ದಿನ ಕಳೆಯುವವರು. ಹೆಣ್ಣು ಮಕ್ಕಳನ್ನು , ಹೆಂಗಸರನ್ನು ಗೌರವಿಸುವವರು. ಕುಟುಂಬದಲ್ಲಿ ಮಹಿಳೆಯರಿಗೆ ಹೆಚ್ಚು ಪ್ರಾಧಾನ್ಯತೆ ಕೊಡುವ ಅಳಿಯಕಟ್ಟು ಸಂಪ್ರದಾಯ ರೂಢಿಸಿಕೊಂಡವರು.  ತಾಯಿ ಮನೆಗೆ ಹೆಚ್ಚು ಪ್ರಾಶಸ್ತ್ಯ ಕೊಡುವವರು .

ಹೀಗೆಯೇ ಅದರದೇ ಆದ ಻ಸಂಸ್ಕೃತಿ ಆಚಾರ ವಿಚಾರಗಳನ್ನು ಹೊಂದಿದ, ವಿವಿಧತೆಯಲ್ಲಿ ಏಕತೆ ಮೆರೆವ ತುಳುನಾಡು ತುಳುಲಿಪಿಯನ್ನು ಹೊಂದಿದ್ದು ಪಂಚ ದ್ರಾವಿಡ ಭಾಷೆಗಳಲ್ಲಿ ತುಳು ಕೂಡಾ ಒಂದಾಗಿದೆ. ಮಾತೃಭಾಷೆ ತುಳು ಆದರೂ ಕಲಿಯುವ ಭಾಷೆ ರಾಜ್ಯಭಾಷೆ. ಹಿಂದಿ , ಕನ್ನಡ, ಮಲಯಾಳಂ, ಕೊಂಕಣಿ ಬ್ಯಾರಿ ಭಾಷೆ ಇಲ್ಲಿನ ಜನ ತುಳುವಿನ ಜೊತೆಗೆ ಕಲ್. ಇಂತಹ ತುಳುನಾಡ ಜನ ಪ್ರಪಂಚದ ವಿವಿಧ ಭಾಗಗಳಲ್ಲಿ ಇದ್ದಾರೆ. ತುಳುನಾಡು, ತುಳು ಸಂಸ್ಕೃತಿ ಮೆರೆಯಲಿ, ಬೆಳೆಯಲಿ, ಬೆಳಗಲಿ ಎಂಬ ಸದಾಶಯಗಳು. ನೀವೇನಂತೀರಿ?

————————————–

ಹನಿಬಿಂದು

ಹೆಸರು- ಪ್ರೇಮಾ ಆರ್ ಶೆಟ್ಟಿ ಕಾವ್ಯನಾಮ- ಹನಿ ಬಿಂದುನೂರಕ್ಕೂ ಅಧಿಕ ರಾಷ್ಟ್ರ, ರಾಜ್ಯ, ಅಂತರರಾಜ್ಯ, ಜಿಲ್ಲಾ ಮಟ್ಟದ ಕವಿಗೋಷ್ಠಿಗಳಲ್ಲಿ ಅಧ್ಯಕ್ಷರಾಗಿ, ಕವಿಯಾಗಿ, ಭಾಗವಹಿಸಿದ ಅನುಭವ.ವಿದ್ಯಾರ್ಹತೆ – ಕನ್ನಡ ಮತ್ತು ಆಂಗ್ಲ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ, ಬಿಎಡ್.ವೃತ್ತಿ – ಪದವೀಧರ ಆಂಗ್ಲ ಭಾಷಾ ಶಿಕ್ಷಕರು ಪ್ರವೃತ್ತಿ – ಫ್ಯಾಷನ್ ಡಿಸೈನಿಂಗ್, ಲೇಖಕಿ, ಕವಯತ್ರಿ, (ಕನ್ನಡ, ತುಳು, ಇಂಗ್ಲಿಷ್ ವಿಷಯಗಳಲ್ಲಿ) ಅಂಕಣಗಾರ್ತಿ (ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ) , ಚಿಂತಕಿ,ಸ್ಪೋಕನ್ ಇಂಗ್ಲಿಷ್ ಬೋಧಕಿ. ಮೋಟಿವೇಟರ್,, ಲಿಟರೇಚರ್ ಆಫ್ ಹನಿಬಿಂದು ಇದು ಇವರ ಬ್ಲಾಗ್. , ತುಳು ಕಲ್ಪುಗ ಚಾನೆಲ್ ನ ಫೇಸ್ಬುಕ್, ಇನ್ಸ್ಟಾ ಗ್ರಾಂ, ಯೂ ಟ್ಯೂಬ್ ನಿರ್ವಾಹಕಿ. ಕಲಿಕಾರ್ಥಿ, ವಿದ್ಯಾರ್ಥಿ ಪ್ರೇರಕಿ.ಪ್ರಕಟಿತ ಕೃತಿ – ಭಾವ ಜೀವದ ಯಾನ (ಕವನ ಸಂಕಲನ)ಪ್ರತಿಲಿಪಿಯಲ್ಲಿ ಬರಹಗಾರ್ತಿ – ಮೂವತ್ತಾರು ಸಾವಿರಕ್ಕೂ ಹೆಚ್ಚು ಜನರಿಂದ ಓದಲ್ಪಟ್ಟಿರುವರು.

Leave a Reply

Back To Top