ಅನ್ನಪೂರ್ಣ ಸುಭಾಷಚಂದ್ರ ಸಕ್ರೋಜಿಕಾಕಸ್ಪರ್ಶ

ಕಾವ್ಯಸಂಗಾತಿ

ಅನ್ನಪೂರ್ಣ ಸುಭಾಷಚಂದ್ರ ಸಕ್ರೋಜಿ

ಕಾಕಸ್ಪರ್ಶ

ಸ್ಮಶಾನ ಸನಿಹ ಶಿವನ ವಾಸ
ಗುಡಿಯ ಮೇಲೆ ಹೊಳೆವ ಕಳಸ
ಅದರ ಮೇಲೆ ಕುಳಿತ ಕಾಕರಾಜ

ಸುತ್ತ ಮುತ್ತ ಮತ್ತೆ ದೃಷ್ಟಿ ಹರಿಸಿ
ಸ್ವಾರ್ಥಿಜನರ ರೋದನ ಆಕ್ರಂದನ
ಕಂಡು ಪಕ್ಕ ಬಡಿದು ನಕ್ಕಿತು

ಎಲೊ ಸ್ವಾರ್ಥಿ ಮೂಢ ಮನುಜಾ
ಸಮದೃಷ್ಟಿಯ ಸ್ಮಶಾನಭೂಮಿಯ
ಸಮಾಧಾನ ಸಮಚಿತ್ತ ಕಲಿತುಕೊ

ನಿರ್ಜೀವ ದೇಹವನಪ್ಪುವ ಅಗ್ನಿ
ಮಣ್ಣಿನಲ್ಲಿ ಮಣ್ಣಾಗುವ ದೇಹಕೆ
ಜಾತ್ಯಾತೀತ ಸತ್ಯ ಸ್ಮಶಾನ ಭೂಮಿ

ಬಡವ ಬಲ್ಲಿದ ಸಂತ ಮಹಂತ
ಸಜ್ಜನ ದುರ್ಜನ ಅಬಾಲವೃದ್ಧ
ಭೇದವೆಣಿಸದ ಪುಣ್ಯಭೂಮಿ

ಅಗುಳ ಅನ್ನಕಾಗಿ ಬಂದ ನಮ್ಮನು
ಹೊಡೆದೋಡಿಸುವ ನೀನಿಂದು
ಕಾಕಸ್ಪರ್ಶಕಾಗಿ ಕಾಯುತಿರುವೆ

ನಮ್ಮನ್ನೇನು ನಿನ್ನ ಸತ್ತ ಬಳಗ
ಎಂದುಕೊಂಡೆಯಾತಿನ್ನಲುಬರಲು
ಮರ್ಯಾದಸ್ಥರು ನಾವು ತೊಲಗು

ಪರಿಸರ ಪ್ರೇಮಿಗಳು ನನ್ನ ಬಳಗ
ಅರಳಿ ಅಶ್ವತ್ಥ ಮರಗಳುನಮ್ಮಿಂದ
ಮುನ್ಸೂಚನೆ ಕೊಡುವವರುನಾವು

ಜೀವಂತವಿದ್ದಾಗ ಮರಣಯಾತನೆ
ಕೊಟ್ಟು ಕಣ್ಣೀರಿಳಿಸಿ ಕೈಬಿಟ್ಟ ನಿನ್ನ
ಪಾಪದ ಅನ್ನ ನಾ ಉಣಲಾರೆ

ಬೇಕಾದಷ್ಟು ಹಣಖರ್ಚು ಸತ್ತವರ
ಹೆಸರಲಿ ದಾನ ಧರ್ಮಾದಿ ಕ್ರಿಯಾ
ಭೂತಪ್ರೇತಾದಿ ಭಯದಿಮಾಡುವಿ

ಪಣ ತೊಟ್ಟಿರುವೆವು ನಾವಿಂದು
ಪಿಂಡಸ್ಪರ್ಶ ಮಾಡಲಾರೆವೆಂದು
ಎಷ್ಟ್ಹೊತ್ತುಕಾಯುವೆಯೊಕಾಯು


ಅನ್ನಪೂರ್ಣ ಸುಭಾಷಚಂದ್ರ

Leave a Reply

Back To Top