ಧಾರಾವಾಹಿ-ಅಧ್ಯಾಯ –4

ಒಬ್ಬ ಅಮ್ಮನ ಕಥೆ

ರುಕ್ಮಿಣಿ ನಾಯರ್

ಕುಟುಂಬದ ಒಂದು ದಿನ

ಮಕ್ಕಳು ನಾಲ್ವರೂ ಊಟಕ್ಕೆ ಬಂದು ಕುಳಿತರು ಕಲ್ಯಾಣಿಯ ವರು ಮಕ್ಕಳಿಗೆ ಊಟ ಬಡಿಸಿ ಪತಿಯು ಊಟಕ್ಕೆ ಬರುವುದನ್ನೇ ಎದುರು ನೋಡುತ್ತಾ ಕುಳಿತರು. ಮಕ್ಕಳೆಲ್ಲರೂ ಅಮ್ಮ ಮಾಡಿದ ರುಚಿಯಾದ ಅಡುಗೆಯನ್ನು ತೃಪ್ತಿಯಿಂದ ಸವಿದರು. ಊಟದ ನಂತರ ಅಕ್ಕ ತಂಗಿಯರು ಇಬ್ಬರೂ ಡೈನಿಂಗ್ ಟೇಬಲ್ ಮೇಲಿದ್ದ ಎಲೆಗಳನ್ನು ತೆಗೆದು ಸ್ವಚ್ಚ ಮಾಡಿ ಒಳಗೆ ಹೋದರು. ಸ್ವಲ್ಪ ಹೊತ್ತಿನಲ್ಲಿ ಬೆಳಗ್ಗೆ ಪಂಚಾಯತಿ ಕಛೇರಿಗೆ ಹೋಗಿದ್ದ ನಾರಾಯಣನ್ ನಾಯರ್  ಹಿಂತಿರುಗಿ ಬಂದರು. ಮನೆಯ ಜಗುಲಿಯ ಮೇಲೆ ಇಟ್ಟಿದ್ದ ಕಿಂಡಿಯಿಂದ ನೀರು ಬಗ್ಗಿಸಿ ಹಿಂಗಾಲು ಮುಂಗಾಲು  ಕೈ ತೊಳೆದು ಜಗುಲಿಯಲ್ಲಿ ಇಟ್ಟಿದ್ದ ಟವೆಲ್ ನಿಂದ ಕೈ  ಒರೆಸಿಕೊಂಡು….” ಕಲ್ಯಾಣಿ ಊಟ ಬಡಿಸು”…. ಎಂದು ಹೇಳುತ್ತಾ ಊಟದ ಟೇಬಲ್ ಬಳಿ  ಬಂದರು.  ಅದಾಗಲೇ ಊಟದ ಟೇಬಲ್ ಮೇಲೆ ಕಲ್ಯಾಣಿಯವರು ಬಾಳೆ ಎಲೆಯನ್ನು ತೊಳೆದು ಒರೆಸಿ ಇಟ್ಟಿದ್ದರು. ನಾಣು ಬಂದು ಕುಳಿತ ಒಡನೆಯೆ ಬಿಸಿ ಹಬೆಯಾಡುವ ಕುಸುಲಕ್ಕಿ ಅನ್ನವನ್ನು ಬಡಿಸಿ ಸಾಂಬಾರ್ ಪಲ್ಯ ಹಪ್ಪಳ ಉಪ್ಪಿನಕಾಯಿ ಬಡಿಸಿ ಕುಡಿಯಲು ಗಿಡಮೂಲಿಕೆಗಳ ನೀರು ಲೋಟದಲ್ಲಿ ಇಟ್ಟರು. ನಾಣು ದೇವರನ್ನು ಮನದಲ್ಲೇ ನಮಿಸಿ ವ್ಯಂಜನಗಳ ಪರಿಮಳವನ್ನು ಆಘ್ರಾಣಿಸುತ್ತಾ ಊಟ ಮಾಡಲು ಆರಂಭಿಸಿದರು. ಊಟದ ಮೊದಲು ದೇವರನ್ನು ನಮಿಸಿ ಊಟ ಮಾಡುವುದು ಮನೆಯಲ್ಲಿ ಪದ್ಧತಿಯಾಗಿತ್ತು. ದೊಡ್ಡವರಿಂದ ಹಿಡಿದು ಮಕ್ಕಳು ಕೂಡಾ ಪಾಲಿಸುತ್ತಾ ಇದ್ದರು.  ಊಟ ಮಾಡುತ್ತಲೆ ಕಲ್ಯಾಣಿಯೆಡೆಗೆ ನೋಡಿದ ನಾಣು…. ” ನೀನೂ ಬಾ ಊಟ ಮಾಡೋಣ”… ಎಂದರು. ಆಗ ಕಲ್ಯಾಣಿ…. “ನೀವು ಊಟ ಮಾಡಿದ ನಂತರ ಮಾಡುವೆ…. ಮೊದಲು ನೀವು ಮನಸಾರೆ ಊಟ ಮಾಡಿ”…. ಎಂದು ಹೇಳಿ ಅವರ ಬೇಕು ಬೇಡಗಳನ್ನು ವಿಚಾರಿಸುತ್ತಾ ಪಕ್ಕದಲ್ಲಿ ಕುಳಿತರು. ನಾಣು ಪತ್ನಿಯನ್ನು ನೋಡಿ ಮುಗುಳ್ನಕ್ಕರು. ಅವರಿಗೆ ಗೊತ್ತು ತಾನು ಎಷ್ಟು ಹೇಳಿದರೂ ಅವಳು ಊಟಕ್ಕೆ ಜೊತೆಗೆ ಕೂರುವುದಿಲ್ಲ. ತಾನು ತೃಪ್ತಿಯಾಗಿ ಊಟ ಮಾಡಿದ ನಂತರವೇ ಅವಳು ಊಟ ಮಾಡುವುದು ಎಂದು. ಹಾಗಾಗಿ ಬೇಗ ಊಟ ಮುಗಿಸಿ ಎದ್ದರು ನಾಣು. ಕಲ್ಯಾಣಿಯವರು ಊಟಕ್ಕೆ ಕುಳಿತರು. ಪತಿ ಮತ್ತೊಮ್ಮೆ ಹೊರಗೆ ಹೋಗುವ ಮೊದಲು ಬೇಗ ಊಟ ಮಾಡಬೇಕು ಎಂದು ಮನದಲ್ಲೇ ಅಂದುಕೊಳ್ಳುತ್ತಾ ಊಟ ಮಾಡಿ ಟೇಬಲ್ ಮೇಲೆ ಇದ್ದ ಪಾತ್ರೆಗಳನ್ನು ತೆಗೆದುಕೊಂಡು ಅಡುಗೆ ಮನೆಯಲ್ಲಿ ಇಟ್ಟು ಕೋಣೆಗೆ ಬಂದರು. 

ಕೋಣೆಯಲ್ಲಿ ಪತಿ ಇಲ್ಲದ್ದನ್ನು ನೋಡಿ ಕಲ್ಯಾಣಿ ವರಾಂಡಕ್ಕೆ

ಬಂದರು. ಅಲ್ಲಿ ಚೇರ್ ನಲ್ಲಿ ಕುಳಿತಿದ್ದ ಪತಿಯನ್ನು ಕಂಡರು.

ಪತಿಯು ಕಾಲು ಚಾಚಿ ಕಣ್ಣು ಮುಚ್ಚಿ ಹಾಗೇ ಒರಗಿ ಸಣ್ಣ ನಿದ್ರೆಯಲ್ಲಿ ಇರುವಂತೆ ತೋರಿತು ಅವರಿಗೆ. ಸದ್ದು ಮಾಡದೇ 

ಅಲ್ಲಿಂದ ಮನೆಯ ಹಿಂದೆ ಇರುವ ಪಡಸಾಲೆಗೆ ಬಂದರು. ಕೆಲಸಕ್ಕೆ ಬರುವ ಹೆಂಗಸರು ಅಲ್ಲಿ ಕಾಯಿಯಾಗಿದ್ದ ಬಾಳೆಯ ಗೊನೆ ಸಿಪ್ಪೆ ಸುಲಿಯದ ತೆಂಗಿನಕಾಯಿ ಜೋಡಿಸಿ ಇಡುತ್ತಾ ಇರುವುದನ್ನು ಗಮನಿಸುತ್ತಾ ನಿಂತರು. ಕಲ್ಯಾಣಿಯ ವರನ್ನು ಕಂಡೊಡನೆ ಇನ್ನೂ ಚುರುಕಾಗಿ ಕೆಲಸ ಮಾಡಲು ಆರಂಭಿಸಿದರು. ಅಲ್ಲಿಂದ ಅಂಗಳಕ್ಕೆ ಇಳಿದ ಅವರು ಒಂದು ಸುತ್ತು ನಡೆದರು. ಮನೆಯ ಸುತ್ತಲೂ ಗಿಡಗಳು ಬಳ್ಳಿಗಳು ಹೂಬಿಟ್ಟು ಮನೆಯ ಶೋಭೆ ಹೆಚ್ಚಿಸಿದ್ದವು. ನಂದಿ ಬಟ್ಟಲು ದಾಸವಾಳ ದುಂಡು ಮಲ್ಲಿಗೆ ಪನ್ನೀರು ಗುಲಾಬಿ ಅರಳಿದ್ದವು. ಬಿಳಿ ಹಾಗು ನೀಲಿ ಶಂಕ ಪುಷ್ಪವು ಮನೆಯ ಮುಂದಿನ ಛಾವಣಿಯನ್ನು ಏರಿ ಸೊಬಗನ್ನು ಹೆಚ್ಚಿಸಿದ್ದವು. ವಿರಾಮದ ವೇಳೆಯಲ್ಲಿ  ಮನೆಯ ಅಂಗಳದ ಹೂ ಗಿಡ ಬಳ್ಳಿಗಳ ಜೊತೆ ಸಮಯ ಕಳೆಯುವುದು ಹಾಗೂ ತೋಟದ ಕಡೆ ಒಂದು ಸುತ್ತು ಹೋಗಿ ನೋಡುವುದು ಅವರ ವಾಡಿಕೆ. ಹಾಗೆ ಹೋಗಿ ಬರುವುದರೊಳಗೆ ನಾಣು ಕೂಡಾ ತೋಟದ ಕಡೆಗೆ ಬರುವುದುಂಟು. ಅಲ್ಲಿ ಕೆಲಸಗಾರರನ್ನು ವಿಚಾರಿಸಿ ಕೆಲಸಗಳು ಹೇಗೆ ನಡೆಯುತ್ತಿದೆ ಬೆಳೆಗಳು ಹೇಗಿವೆ ಏನೆಲ್ಲಾ ಬೇಕಾಗಿದೆ ಎಂದು ಕೂಲಂಕುಷವಾಗಿ ಗಮನಿಸಿ ಬೇಕಾದ ವ್ಯವಸ್ಥೆ ಮಾಡುತ್ತಿದ್ದರು. ಇಂದು ಕೂಡಾ ಎಂದಿನಂತೆ ಕುಳಿತಲ್ಲೇ ಸಣ್ಣ ನಿದ್ರೆ ಮಾಡಿ ಆಯಾಸ ಪರಿಹರಿಸಿಕೊಂಡು 

ನಾರಾಯಣನ್ ನಾಯರ್ ಒಬ್ಬ ಉತ್ತಮ ಕೃಷಿಕರೂ ಆಗಿದ್ದರು. ಕೆಲಸಗಾರರ ಜೊತೆಗೆ ಅವರೂ ಕೂಡ ಕೆಲಸ ಕಾರ್ಯಗಳಲ್ಲಿ ಕೈ ಜೋಡಿಸುತ್ತಾ ಇದ್ದರು. ಸಾಮಾನ್ಯ ಎತ್ತರದ  ಕಟ್ಟು ಮಸ್ತಾದ ದೇಹ ಅವರದು.  ಎಣ್ಣೆಗೆಂಪು ಮೈ ಬಣ್ಣ,  ತಲೆಯಲ್ಲಿ ಸ್ವಲ್ಪ ಗುಂಗುರು ಎನಿಸುವ ಕಪ್ಪು ಕೂದಲು, ಅಗಲವಾದ ಹಣೆ, ಹಣೆ ಮೇಲೆ ಸದಾ ಚಂದನಕ್ಕುರಿ ಇರುತ್ತಿತ್ತು. ಗಂಧವು ಯಾವಾಗಲೂ ಚಿತ್ತವನ್ನು ತಂಪಾಗಿ ಇಡುತ್ತದೆ ಎನ್ನುವುದು ರೂಢಿಗತ ಮಾತು. ತಿಳಿ ಬಣ್ಣದ ಸ್ವಲ್ಪ ಬೂದು ಎನಿಸುವ ಆಕರ್ಷಕ ಕಣ್ಣುಗಳು ಅವರದು. ದಪ್ಪ ಹುರಿ ಮೀಸೆಯ ಚೆಲುವ ನಾಣು. ಬಲಿಷ್ಠವಾದ ತೋಳುಗಳ ಮೇಲೆ ಸದಾ ಇರುತ್ತಿದ್ದ ಬಿಳಿಯ ಜರಿ ಅಂಚಿನ ಅಂಗವಸ್ತ್ರ. ಬಿಳಿಯ ಬಣ್ಣದ ಗರಿಮುರಿ ಅಂಗಿ ಹಾಗೂ ಅದೇ ಬಣ್ಣದ ಜರಿಯ ಮುಂಡು ಅವರ ನಿತ್ಯದ ಉಡುಗೆ.  ಬಲಗೈಯಲ್ಲಿ  ಚಿನ್ನದ ಕಡಗ ಹಾಗೂ ಎಡಗೈಯ ಉಂಗುರ ಬೆರಳಿಗೆ ಮುದ್ರೆಯುಂಗುರ ಯಾವಾಗಲೂ ಇರುತ್ತಿತ್ತು. ಮುಖದಲ್ಲಿ ಸದಾ ಗಾಂಭೀರ್ಯ ತುಂಬಿರುತ್ತಿತ್ತು ಆದರೂ ಎಲ್ಲರೊಂದಿಗೂ ಬೆರೆಯುತ್ತಾ ನಗುತ್ತಾ ಮಾತನಾಡುವರು. ಕುಟುಂಬದವರಿಗೂ ಹೊರಗಿನವರಿಗೂ ಅವರೆಂದರೆ ಎಲ್ಲಿಲ್ಲದ ಗೌರವ ಪ್ರೀತಿ. ಕೆಲಸಗಾರರಿಗಂತೂ ಅವರೆಂದರೆ ಅಚ್ಚುಮೆಚ್ಚು. ಅವರನ್ನು ಕೆಲಸಗಾರರಂತೆ ಕಾಣದೆ ಮನೆಯ ಸದಸ್ಯರ ಹಾಗೇ ಕಾಣುತ್ತಾ ಇದ್ದರು. ಬೆಳಗ್ಗೆ ಸಮಯಕ್ಕೆ ಸರಿಯಾಗಿ ಚಾಯ್ ಹಾಗೂ ಮರಗೆಣಸು ಬೇಯಿಸಿದ್ದು ಅಥವಾ ಮನೆಯಲ್ಲಿ ಮಾಡಿದ ತಿಂಡಿ, ಮಧ್ಯಾಹ್ನದ ಊಟ ಹಾಗೂ ಸಂಜೆಯ ಚಾಯ್ ಅವರಿಗೆ ತಪ್ಪದೇ ಕಾಲ ಕಾಲಕ್ಕೆ ದೊರೆಯುವಂತೆ ನೋಡಿ ಕೊಳ್ಳುತ್ತಾ ಇದ್ದರು. ವೇತನವೂ ಸಮಯಕ್ಕೆ ಸರಿಯಾಗಿ ಕೊಡುತ್ತಿದ್ದರು. ನಾರಾಯಣನ್ ಹಾಗೂ ಕಲ್ಯಾಣಿ ಇಬ್ಬರೂ ಎಲ್ಲರ ಪ್ರೀತಿ ಪಾತ್ರರಾಗಿದ್ದರು.

ನಾಣು ಕೆಲಸಗಾರರ ಜೊತೆ ಮಾತನಾಡುತ್ತಾ ಅಲ್ಲಿಯೇ ನಿಂತರು. ಅಷ್ಟು ಹೊತ್ತೂ ಪತಿಯೊಂದಿಗೆ ತೋಟದಲ್ಲಿ ಇದ್ದ ಕಲ್ಯಾಣಿಯವರು ಎಲ್ಲರಿಗೂ ಚಾಯ್ ಮಾಡಿ ಕೊಡಲೆಂದು ಮನೆಯ ಕಡೆ ನಡೆದರು. ಗಂಡು ಮಕ್ಕಳಿಬ್ಬರೂ ಪಠ್ಯಪುಸ್ತಕ ಓದುತ್ತಾ ಕುಳಿತಿದ್ದರು. ಇನ್ನು ಶಾಲೆ ಪುನಃ ಆರಂಭ ಆಗುವುದಕ್ಕೆ ಸ್ವಲ್ಪ ದಿನಗಳು ಇದ್ದುದರಿಂದ ಸ್ವಲ್ಪ ಪುನರಾವರ್ತನೆ ತಮ್ಮಂದಿರಿಗೆ ಮಾಡಿಸಲು ಅಕ್ಕ ತಂಗಿಯರು ಇಬ್ಬರೂ ಜೊತೆಗೆ ಕುಳಿತರು. ಕಲ್ಯಾಣಿಯವರು ಕೆಲಸಗಾರರು ಕರೆದು ತಂದಿಟ್ಟ ಹಸುವಿನ ಹಾಲನ್ನು ಒಲೆಯ ಮೇಲೆ  ಇಟ್ಟು ಕಾಯಿಸಿ ನೊರೆ ಬರುವಂತೆ ಆರಿಸಿ ಮಕ್ಕಳಿಗೆ ಕುಡಿಯಲು ಕೊಟ್ಟು ಜೊತೆಗೆ ತಿನ್ನಲು ನೇಂದ್ರ ಬಾಳೆಯ ಹಣ್ಣಿನಿಂದ ಆಗ ತಾನೇ ತಯಾರಿಸಿದ ಪಯಮ್ ಪೊರಿಯನ್ನು ಕೊಟ್ಟರು. ಪಯಮ್ ಪೊರಿ ಎಂದರೆ ಸುಮತಿಗೆ ತುಂಬಾ ಇಷ್ಟ. ನೇಂದ್ರ ಬಾಳೆಯ ಹಣ್ಣನ್ನು ತೆಳುವಾಗಿ ಸೀಳಿ ಅಕ್ಕಿ ಹಿಟ್ಟು ಹಾಗೂ ಮೈದಾವನ್ನು ಸಮ ಪ್ರಮಾಣದಲ್ಲಿ ಹಾಕಿ ಸ್ವಲ್ಪ ಸಕ್ಕರೆಯನ್ನು ಹಿಟ್ಟಿಗೆ ಬೆರೆಸಿ ಜೊತೆಗೆ ಎಳ್ಳು ಹಾಕಿ ಬಾಳೆಯ ಹಣ್ಣಿನ ತುಂಡುಗಳನ್ನು ಅದರಲ್ಲಿ ಅದ್ದಿ ಎಣ್ಣೆಯಲ್ಲಿ ಕರಿದು ಮಾಡಿದ ತಿನಿಸು ಅದು. ಕಲ್ಯಾಣಿಯವರು ಕೆಲಸದ ಹುಡುಗನನ್ನು ಕರೆದು ಪತಿ ಹಾಗೂ ತೋಟದಲ್ಲಿ ಕೆಲಸ ಮಾಡುತ್ತಾ ಇರುವವರಿಗಾಗಿ ಚಾಯ್ ಹಾಗೂ ಪಯಮ್ ಪೊರಿಯನ್ನು ಕೊಟ್ಟು ಕಳುಹಿಸಿ ಸಂಜೆಯ ಪೂಜೆಗೆ ಹೂವು ಬೇಕಾಗಿ ಇದ್ದುದರಿಂದ ಬುಟ್ಟಿಯನ್ನು ತಂದು ಸುಮತಿಗೆ ಕೊಟ್ಟು…. ” ಪೂಜೆಗೆ ಚೆಂದದ ಹೂವುಗಳನ್ನು ಬಿಡಿಸಿ  ತಂದು ದೇವರ ಕೋಣೆಯಲ್ಲಿ ಇಡು ಅಪ್ಪ ಸ್ನಾನ ಮಾಡಿ ಬಂದು ಪೂಜೆ ಮಾಡುವರು”…. ಎಂದು ಹೇಳಿ ಅಡುಗೆಯ ಮನೆಯ ಕಡೆಗೆ ಹೋದರು. ಮನೆಯ ಕೆಲಸದಲ್ಲಿ ಸಹಾಯ ಮಾಡಲೆಂದು ಇದ್ದ ಹೆಂಗಸರನ್ನು ಕರೆದು ಅವರಿಗೂ ಚಾಯ್ ಪಯಮ್ ಪೊರಿ ಕೊಟ್ಟು ತಾವೂ ಚಾಯ್ ಕುಡಿಯಲು ಕುಳಿತರು.

ಸಂಜೆಯಾಯಿತು ದೀಪ ಹಚ್ಚುವ ಸಮಯವಾಯಿತು. 

ನಾಣು ತೋಟದಿಂದ ಬಂದವರು ಕೊಳದ ಬಳಿಗೆ ಹೋಗಿ ಮಿಂದು ಮಡಿಯುಟ್ಟು ನೇರವಾಗಿ ದೇವರ ಕೋಣೆಗೆ ಹೋಗಿ ಬುಟ್ಟಿಯಲ್ಲಿ ಇಟ್ಟಿದ್ದ ಹೂವನ್ನು ಕೃಷ್ಣನ ಹಾಗೂ ಭಗವತಿಯ ಮೂರ್ತಿಗೂ ಇಟ್ಟು ದೀಪ ಹಚ್ಚಿ ಭಕ್ತಿಯಿಂದ ದೇವರ ನಾಮಸ್ಮರಣೆ ಮಾಡುತ್ತಾ ಅಕ್ಕ ತಂಗಿಯರು ಇಬ್ಬರನ್ನೂ ಕರೆದು ಒಂದು ಮಣ್ಣಿನ ಹಚ್ಚಿದ ದೀಪವನ್ನು ಸುಮತಿಯ ಕೈಯಲ್ಲಿ ಇಟ್ಟು ಇಬ್ಬರೂ ಹೋಗಿ ಸರ್ಪಕಾವಿನಲ್ಲಿ ದೀಪ ಬೆಳಗಿಸಿ ಬನ್ನಿ ಎಂದು ಕಳುಹಿಸಿದರು.


ರುಕ್ಮಿಣಿ ನಾಯರ್

ಕೇರಳ ಮೂಲದವರಾದ ರುಕ್ಮಿಣಿ ನಾಯರ್ (ರುಕ್ಮಿಣಿ ಎ.ವಿ),ಹುಟ್ಟಿದ್ದುಹಾಸನ ಜಿಲ್ಲೆಯ ಸಕಲೇಶಪುರದಲ್ಲಿ.ಸುಮತಿ ಪಿ.ಎಸ್. ಮತ್ತು ವೇಲಾಯುಧನ್ ನಾಯರ್ ಅವರ ಎರಡನೆಯ ಮಗಳಾಗಿ.ನಂತರ ಶ್ರೀದರ್ ಬಿ.ಎಂ.ರವನ್ನು ಮದುವೆಯಾಗಿ ಬೆಂಗಳೂರಲ್ಲಿನೆಲೆಸಿದ್ದಾರೆ..ಕೆಲಕಾಲ ಶಿಕ್ಷಕಿಯಾಗಿಕೆಲಸ ಮಾಡಿದವರೀಗ ಪೂರ್ಣಪ್ರಮಾಣದ ಗೃಹಿಣಿಯಾಗಿ ಬರವಣಿಗೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಪುಸ್ತಕ ಓದುವುದು-ಬರೆಯುವುದು, ಚಿತ್ರ ಬಿಡಿಸುವುದು. ಗಿಡಗಳನ್ನು ಬೆಳೆಸುವುದು ಇವರ ಹವ್ಯಾಸಗಳು

Leave a Reply

Back To Top