ಧಾರಾವಾಹಿ-ಅಧ್ಯಾಯ -3
ಒಬ್ಬ ಅಮ್ಮನ ಕಥೆ
ರುಕ್ಮಿಣಿ ನಾಯರ್
ಹರಯದ ಹುಡುಗಾಟ
ಮಕ್ಕಳನ್ನು ಒಳಗೆ ಕರೆದು ಕಲ್ಯಾಣಿಯವರು ಸುಮತಿ ಹಾಗೂ ಅವಳ ಅಕ್ಕನನ್ನು ಜೊತೆಗೆ ಬರುವಂತೆ ಹೇಳಿ ಗಿಡಮೂಲಿಕೆಗಳಿಂದ ಕಾಯಿಸಿದ ಎಣ್ಣೆಯ ಬಟ್ಟಲನ್ನು ಹಿಡಿದು ಮನೆಯ ಹಿಂದಿನ ವರಾಂಡಕ್ಕೆ ಬಂದರು. ಇಬ್ಬರೂ ಹೆಣ್ಣುಮಕ್ಕಳಿಗೂ ಕಪ್ಪು ನೀಳ ಕೇಶರಾಶಿಯು ಅಮ್ಮನಿಂದ ಬಂದ ಬಳುವಳಿ. ದೊಡ್ಡ ಮಗಳನ್ನು ಹತ್ತಿರ ಕರೆದು ತಲೆಗೆ ಚೆನ್ನಾಗಿ ಎಣ್ಣೆ ಹಚ್ಚಿ ನೀಳವಾದ ಕೂದಲನ್ನು ಬಿಡಿಸಿ ಬುಡದವರೆಗೂ ಚೆನ್ನಾಗಿ ತಿಕ್ಕಿ… “ಸ್ವಲ್ಪ ಹೊತ್ತು ಕಳೆದ ನಂತರ ಕೊಳದಲ್ಲಿ ಮಿಂದು ಬಾ”… ಎಂದು ಅವಳನ್ನು ಕಳುಹಿಸಿ …. “ಸುಮತಿ ಈಗ ನೀ ಬಾ ಇಲ್ಲಿ…ಎಣ್ಣೆ ಹಚ್ಚುವೆ” ….ಎಂದು ಕರೆದು ಮುದ್ದಿನ ಮಗಳ ತಲೆ ನೇವರಿಸುತ್ತಾ ಎಣ್ಣೆಯ ಬಟ್ಟಲಿನಿಂದ ಸ್ವಲ್ಪ ಎಣ್ಣೆಯನ್ನು ಅಂಗೈಗೆ ಹಾಕಿ ನೆತ್ತಿಗೆ ಹಚ್ಚಿ ಮೆದುವಾಗಿ ತಟ್ಟಿದರು….”ಅಮ್ಮಾ ಹಾಗೆ ತಟ್ಟಬೇಡ ನನಗೆ ನೋವು ಆಗುತ್ತದೆ”…. ಎಂದು ಹುಸಿ ನಾಟಕ ಆಡುತ್ತಾ ಅಮ್ಮನನ್ನು ಅತ್ತಿಂದ ಇತ್ತ ಓಡಾಡಿಸಿದಳು ಸುಮತಿ. ಹದಿ ಹರೆಯದ ಅವಳು ಚುರುಕಿನ ಹರಿಣಿಯಾಗಿದ್ದಳು. ಅವಳನ್ನು ಹಿಡಿಯುವುದು ಸ್ವಲ್ಪ ಕಷ್ಟವೇ ಆಯಿತು ಕಲ್ಯಾಣಿಯವರಿಗೆ. ಕೊನೆಗೆ ಸೋತು ಅವಳೇ ಅಮ್ಮನ ಕೈಗೆ ಸಿಕ್ಕಳು. ಅವಳ ದಟ್ಟ ಕಪ್ಪು ಉದ್ದನೆಯ ಕೂದಲು ತುಂಬಾ ಆಕರ್ಷಕವಾಗಿತ್ತು.ಹೆಣ್ಣು ಮಕ್ಕಳಿಬ್ಬರೂ ಶಾಲೆಗೆ ಹೋಗುತ್ತಾ ಇದ್ದಾಗ ಜೆಡೆ ಹೆಣೆಯಲು ಕಲ್ಯಾಣಿಯವರು ಹರಸಾಹಸ ಪಡಬೇಕಾಗಿತ್ತು. ಎರಡು ಭಾಗ ಮಾಡಿದರೂ ಕೈಯಲ್ಲಿ ಹಿಡಿಯಲಾರದಷ್ಟು ಒತ್ತಾದ ದಟ್ಟ ಕೂದಲು. ಅದೂ ಅಲ್ಲದೆ ಬೆಳಗ್ಗೆ ಸ್ನಾನ ಮಾಡಿದರೆ ಕೂದಲು ಒಣಗಲು ಸಮಯ ಹಿಡಿಯುತ್ತಾ ಇತ್ತು. ಮಕ್ಕಳಿಬ್ಬರಿಗೂ ಬೆಳಗ್ಗೆ ತಲೆ ಬಾಚಿ ಅವರೇ ಜಡೆ ಹಾಕುತ್ತಾ ಇದ್ದದ್ದು. ಶಾಲೆಗೆ ತಡವಾಗುತ್ತದೆ ಎಂಬ ಕಾರಣದಿಂದ ಸುಮತಿಯ ಕುತ್ತಿಗೆಯ ಭಾಗದ ಸ್ವಲ್ಪ ಕೂದಲನ್ನು ಕತ್ತರಿಸಿ ಒತ್ತಾದ ಕೂದಲುನ್ನು ಕಡಿಮೆ ಮಾಡಿದ್ದೂ ಇದೆ. ಅದನ್ನೆಲ್ಲಾ ನೆನಪಿಗೆ ತಂದುಕೊಂಡು ಕಲ್ಯಾಣಿಯವರು ಮಗಳ ಕೂದಲನ್ನು ಪ್ರೀತಿಯಿಂದ ಸವರಿ ಬುಡದವರೆಗೂ ಎಣ್ಣೆ ಹಚ್ಚಿ ಕೂದಲ ತುದಿಗೆ ಸಣ್ಣ ಗಂಟನ್ನು ಕಟ್ಟಿ….”ಹೋಗು ಅಕ್ಕನ ಜೊತೆಗೆ ಕೊಳದಲ್ಲಿ ಮಿಂದು ಬಾ”….ಎಂದು ಕಳುಹಿಸಿದರು.
ಅಕ್ಕನ ಜೊತೆ ಕೊಳದ ಬಳಿಗೆ ಹೊರಟ ಸುಮತಿ ಎಂದಿನಂತೆ ವಿನೋದದಲ್ಲಿ ತೊಡಗಿದಳು. ಪ್ರಕೃತಿಯ ಜೊತೆ ಅವಳದು ಅವಿನಾಭಾವ ಸಂಬಂಧ. ದಿನವೂ ನಡೆದು ಹೋಗುವ ದಾರಿಯನ್ನೇ ಪ್ರತೀ ದಿನವೂ ಹೊಸದಾಗಿ ಕಂಡಂತೆ ನೋಡುವಳು. ದಟ್ಟ ಹಸಿರಿನಿಂದ ಕೂಡಿದ ತೆಂಗು ಅಡಿಕೆ ಬಾಳೆ ತೋಟಗಳು. ನಡುವೆ ಇಬ್ಬರು ನಡೆಯುವಷ್ಟು ಕಿರಿದಾದ ಕಾಲು ದಾರಿ ಅಕ್ಕ ಪಕ್ಕದಲ್ಲಿ ಸಣ್ಣ ನೀರಿನ ತೋಡು ತೋಟಗಳಿಗೆ ನೀರು ಹಾಯಿಸಲೆಂದು ಮಾಡಿರುವರು. ಅದರಲ್ಲಿ ಇಳಿದು ಪುಟ್ಟ ಮೀನುಗಳ ಹಿಂದೆ ಓಡುವುದು ಸುಮತಿಗೆ ಪ್ರಿಯವಾದ ವಿನೋದ ಜೊತೆಗೆ ಬಲೆಯಂತೆ ತೋರುವ ಬಿಳಿಯ ಟವೆಲನ್ನು ನೀರಲ್ಲಿ ಹಾಸಿ ಮೀನುಗಳು ಅದರಲ್ಲಿ ಬಂದರೆ ಅವು ಸಾಯದಂತೆ ಟವೆಲನ್ನು ಅರ್ಧ ಮುಳುಗಿಸಿ ಹಿಡಿದು ಆ ಮೀನುಗಳ ಜೊತೆ ಆಡುವಳು. ಅವಳ ಇಷ್ಟದ ಮಂಜಾಡಿಕ್ಕುರು (ಗುಲಗಂಜಿ) ಬೀಜವನ್ನು ಆರಿಸಲು ಮರದ ಕೆಳಗೆ ಹೋಗಿ ಅವುಗಳನ್ನು ಆರಿಸಿಕೊಂಡು ಮಡಿಲಲ್ಲಿ ತುಂಬಿಸಿಕೊಂಡು ಮಡಿಲು ತುಂಬಾ ತುಂಬಿರುವ ಮಂಜಾಡಿಕ್ಕುರುಗಳನ್ನು ಅಕ್ಕನಿಗೆ ತೋರಿಸಿ ….”ನೋಡು ಎಷ್ಟು ಬೀಜಗಳನ್ನು ಹೆಕ್ಕಿ ತಂದಿರುವೆ ಅಳೆಗುಳಿ ಮಣೆ ಆಡಲು ಸಂಜೆ ತಮ್ಮಂದಿರನ್ನು ಒಟ್ಟಿಗೆ ಸೇರಿಸಿಕೊಂಡು ಆಡೋಣ”….ಎಂದು ಹೇಳುತ್ತ ಸ್ನಾನ ಮಾಡುವ ಕೊಳದ ಬಳಿಗೆ ಇಬ್ಬರೂ ನಡೆದರು. ಕೊಳದ ಸುತ್ತಲೂ ಹೂವಿನ ಗಿಡಗಳು ಸುತ್ತುವರೆದಿದ್ದವು. ಮಲ್ಲಿಗೆ, ನಂದಿಬಟ್ಟಲು, ದಾಸವಾಳ, ಶಂಕಪುಷ್ಪ, ಗಂಟೆಯ ಆಕಾರದ ಹಳದಿ ಹೂವು, ಬಿಳಿ ಹಾಗೂ ಕೆಂಪು ದೇವಕಣಗಿಲೆ, ಗ್ಲೋರಿ ಬೋವರ್ ಗಿಡಗಳಿಂದ ಕೂಡಿದ್ದವು. ಇವೆಲ್ಲವೂ ಅಕ್ಕ ತಂಗಿಯರ ಆರೈಕೆಯಿಂದ ನಳನಳಿಸಿ ಸೊಂಪಾಗಿ ಬೆಳೆದಿದ್ದವು.
ಕೊಳದ ಬಳಿ ತಲುಪಿದ ಇಬ್ಬರೂ ದಾಸವಾಳದ ಎಲೆ ಹಾಗೂ ಗ್ಲೋರಿ ಬೋವರ್ ಎಲೆಗಳನ್ನು ಬಿಡಿಸಿ ಜೊತೆಗೆ ತಂದ ಸೀಗೆ ಕಾಯಿಯನ್ನು ಅಗಲವಾದ ಕಲ್ಲಿನ ಮೇಲೆ ಹಾಕಿ ಕುಟ್ಟಿ ಒಂದು ಪಾತ್ರೆಗೆ ನೀರು ಹಾಕಿ ಅದರಲ್ಲಿ ಕುಟ್ಟಿದ ಎಲೆ ಹಾಗೂ ಸೀಗೆ ಕಾಯಿಯನ್ನು ಹಾಕಿ ಚೆನ್ನಾಗಿ ಕಿವುಚಿ ತಯಾರಾದ ಲೋಳೆಯ ರಸದಿಂದ ಕೂದಲನ್ನು ಒಬ್ಬರಿಗೆ ಇನ್ನೊಬ್ಬರು ಸಹಾಯ ಮಾಡುತ್ತಾ ತೊಳೆದು ಕೊಳದಲ್ಲಿ ಇಳಿದು ಸ್ನಾನ ಮಾಡಿ ಮಡಿಯುಟ್ಟು ಮಂಜಾಡಿಕ್ಕುರುಗಳನ್ನು ಖಾಲಿಯಾದ ಪಾತ್ರೆಯಲ್ಲಿ
ಹಾಕಿಕೊಂಡು ಮನೆಗೆ ಹಿಂದಿರುಗಿ ದೇವರ ಕೋಣೆಗೆ ಹೋಗಿ ಅಮ್ಮನನ್ನು ಕೂಗಿ ಕರೆದರು…..” ಅಮ್ಮ ನಮ್ಮ ಸ್ನಾನ ಆಯಿತು ದೇವರಿಗೆ ನಮಿಸಿದ್ದೂ ಆಯಿತು…. ಬಂದು ಚಂದನಕ್ಕುರಿ ಇಟ್ಟು ಕೊಡು ….” ಎಂದು ಕರೆದಾಗ ಪುಟ್ಟು ಮಾಡಲು ಹಿಟ್ಟು ಹದ ಮಾಡಿ ತೆಂಗಿನಕಾಯಿ ತುರಿ ಹಾಕಿ ಒಲೆಯ ಮೇಲೆ ಇಡುತ್ತಾ ಇದ್ದ ಕಲ್ಯಾಣಿಯವರು… “ಒಂದು ನಿಮಿಷ ಅಲ್ಲಿಯೇ ಇರಿ” ಎಂದು ಹೇಳಿ ಕೈ ತೊಳೆದುಕೊಂಡು ಬಂದರು. ಅಮ್ಮನ ಪಾದವನ್ನು ಮುಟ್ಟಿ ನಮಿಸಿದಾಗ ಇಬ್ಬರ ತಲೆಯನ್ನು ನೇವರಿಸಿ….. “ಶ್ರೀ ಕೃಷ್ಣನು ನಿಮ್ಮನ್ನು ಸದಾ ಕಾಪಾಡಲಿ”…. ಎಂದು ಆಶೀರ್ವದಿಸಿ ಅವರಿಬ್ಬರ ತೋಳುಗಳನ್ನು ಹಿಡಿದು ಮೇಲೆಬ್ಬಿಸಿ ಹಣೆಗೆ ಚಂದನದ ತಿಲಕವನ್ನು ಇಟ್ಟು ಇನ್ನೇನು ಅಡುಗೆ ಮನೆಯ ಕಡೆಗೆ ಹೋಗಬೇಕು ಎಂದು ಇರುವಾಗ ಆಗಲೇ ತಾನು ಬಾವಿಯ ಕಟ್ಟೆಯ ಬಳಿ ಸ್ನಾನ ಮಾಡಿಸಿ ತಲೆ ಮೈ ಒರೆಸಿ ಬಟ್ಟೆ ತೊಡಿಸಿ ಕಳುಹಿಸಿದ್ದ ಗಂಡು ಮಕ್ಕಳು ಇಬ್ಬರೂ ಓಡೋಡಿ ಬಂದು ಅಮ್ಮನನ್ನು ತಬ್ಬಿ ಹಿಡಿದುಕೊಂಡು… “ನಮಗೂ ಆಶೀರ್ವಾದ ಮಾಡಿ ತಿಲಕ ಇಡಮ್ಮಾ” … ಎಂದು ಮುದ್ದಾಗಿ ಹೇಳಿದಾಗ ಅವರಿಬ್ಬರ ಕೆನ್ನೆ ಮೃದುವಾಗಿ ಹಿಂಡಿ ಅವರಿಬ್ಬರಿಗೂ ತಿಲಕ ಇಟ್ಟು … “ನಾಲ್ವರೂ ಬನ್ನಿ ತಿಂಡಿಗೆ ಪುಟ್ಟು ಕಡಲೆ ಸಾರು ಮಾಡಿದ್ದೇನೆ ಸಾರು ಬೇಡದಿದ್ದರೆ ನೇಂದ್ರ ಬಾಳೆ ಹಣ್ಣಾಗಿದೆ ಅದರ ಜೊತೆ ತಿನ್ನಿ”… ಎಂದು ಹೇಳಿ ಲಗುಬಗೆಯಿಂದ ಅಡುಗೆ ಮನೆಯ ಕಡೆಗೆ ನಡೆದರು. ಒಲೆಯ ಮೇಲೆ ಬೇಯಲು ಇಟ್ಟ ಪುಟ್ಟಿನ ಪಾತ್ರೆಯ ಮೇಲಿಂದ ಕೊಳವೆಯನ್ನು ತೆಗೆದು ಬಿಸಿ ಕೈಗೆ ತಾಗದೇ ಇರಲಿ ಎಂದು ಬಟ್ಟೆಯಿಂದ ಕೊಳವೆಯನ್ನು ಹಿಡಿದು ಬಾಳೆಯ ಎಲೆಯ ಮೇಲೆ ಒಂದೊಂದೇ ತುಂಡು ಪುಟ್ಟನ್ನು ನಿಧಾನವಾಗಿ ಕೊಳವೆಯಿಂದ ಒಂದು ತೆಳುವಾದ ಪುಟ್ಟ ದುಂಡನೆಯ ಕೋಲಿನ ಸಹಾಯದಿಂದ ನೂಕಿದರು. ಹಬೆಯಾಡುವ ಪುಟ್ಟಿನ ತುಂಡನ್ನು ಪಿಂಗಾಣಿ ತಟ್ಟೆಯಲ್ಲಿ ಇಟ್ಟು ನಾಲ್ವರಿಗೂ ಕೊಟ್ಟರು. ನಾಲ್ವರೂ ಖುಷಿಯಿಂದ ಬಿಸಿ ಪುಟ್ಟನ್ನು ನಿಧಾನವಾಗಿ ಸ್ವಲ್ಪ ಕಡಲೆ ಸಾರಿನ ಜೊತೆ ಹಾಗೂ ಸ್ವಲ್ಪ ನೇಂದ್ರ ಬಾಳೆ ಹಣ್ಣಿನ ಜೊತೆಗೆ ಕಿವುಚಿ ತಿಂದರು.
ಬೇಸಿಗೆಯ ರಜೆ ಇನ್ನೂ ಮುಗಿದಿರಲಿಲ್ಲ ಹಾಗಾಗಿ ತಿಂಡಿಯ ನಂತರ ಮಕ್ಕಳು ಆಟವಾಡುವುದರಲ್ಲಿ ತೊಡಗಿದರು. ಸ್ವಲ್ಪ ಹೊತ್ತು ಕಣ್ಣಾ ಮುಚ್ಚಾಲೆ ಆಟ ಆಡೋಣ ಎಂದು ಸುಮತಿ ಅಕ್ಕ ಹಾಗೂ ತಮ್ಮಂದಿರಿಗೆ ಹೇಳಿದಳು. ಅವರಿಗೂ ಆ ಆಟ ಇಷ್ಟವಾಗಿದ್ದ ಕಾರಣ ಸರಿ ಎಂದು ಖುಷಿಯಿಂದ ಒಪ್ಪಿಕೊಂಡರು. ತಮ್ಮಂದಿರು ಅಂದರೆ ಅವಳಿಗೆ ಎಲ್ಲಿಲ್ಲದ ಪ್ರೀತಿ ಆದರೂ ತುಂಟಾಟಕ್ಕಾಗಿ ಅವರನ್ನು ಗೋಳು ಹೊಯ್ದು ಕೊಳ್ಳುವುದಕ್ಕೆ ಕಡಿಮೆ ಏನೂ ಇರಲಿಲ್ಲ. ಎಲ್ಲರಿಗಿಂತಲೂ ಮೊದಲು ಚಿಕ್ಕ ತಮ್ಮನಿಗೆ ಹೇಳಿ… “ನಮ್ಮನ್ನೆಲ್ಲ ಹಿಡಿ ನೋಡೋಣ”… ಎಂದು ಅವನ ಕಣ್ಣುಗಳನ್ನು ಬಿಗಿಯಾಗಿ ಕೈಯಿಂದ ಮುಚ್ಚಿ… “ಕಣ್ಣೇ ಮುಚ್ಚೆ ಕಾಡೆ ಗೂಡೆ ಉದ್ದಿನ ಮೂಟೆ ಉರುಳೇ ಹೋಯ್ತು ನಮ್ಮಯ ಹಕ್ಕಿ ಬಿಟ್ಟೇ ಬಿಟ್ಟೇ ಕೂಕ್”…. ಎಂದು ಹೇಳುತ್ತಾ ಅವನನ್ನು ಬಿಟ್ಟು ಓಡೋಡಿ ಪತ್ತಾಯ ಪೊರೆಯ( ಉಗ್ರಾಣ) ಹಿಂದೆ ಹೋಗಿ ಬಚ್ಚಿಟ್ಟು ಕೊಂಡಳು ಸುಮತಿ. ಅಲ್ಲಿ ಹೋದರೆ ಅಮ್ಮ ಗದರುತ್ತಾರೆ ಎಂದು ತಿಳಿದಿದ್ದರೂ ಹೋಗಿ ಬಚ್ಚಿಟ್ಟು ಕೊಂಡಳು. ಚಿಕ್ಕ ತಮ್ಮ ಎಲ್ಲರನ್ನೂ ಹುಡುಕಿ ಕೊನೆಗೆ ಸಿಗದೇ… “ಅಮ್ಮಾ ಯಾರೂ ಕಾಣಿಸುತ್ತಾ ಇಲ್ಲ ಎಲ್ಲರೂ ಬಚ್ಚಿಟ್ಟು ಕೊಂಡಿದ್ದಾರೆ. ನನಗೆ ಹುಡುಕಲೇ ಆಗುತ್ತಾ ಇಲ್ಲ”…. ಎಂದು ಪುಕಾರು ಹೇಳುತ್ತಾ ಅಮ್ಮನ ಬಳಿ ಹೋದ. ಕಲ್ಯಾಣಿಯವರು…. “ಸಾಕು ಮಕ್ಕಳೇ ಅವನನ್ನು ಸತಾಯಿದಿದ್ದು….ಇನ್ನಾದರೂ ಅವನ ಕಣ್ಣ ಮುಂದೆ ಬನ್ನಿರೋ”…ಎಂದಾಗ ಒಂದೊಂದು ಮೂಲೆಯಿಂದ ಒಬ್ಬೊಬ್ಬರಾಗಿ ಹೊರಗೆ ಬಂದರು. ಸುಮತಿ ಮಾತ್ರ ಉಗ್ರಾಣದ ಕಡೆಯಿಂದ ಬರುವುದನ್ನು ನೋಡಿ ಕಲ್ಯಾಣಿಯವರು…. “ನಿನಗೆ ಎಷ್ಟು ಬಾರಿ ಹೇಳುವುದು ಅಲ್ಲಿಗೆ ಹೋಗಬಾರದು ಅಂತ”…. ಎಂದು ಹೇಳುತ್ತಾ ಅವಳ ಕಿವಿ ಹಿಂಡಿ….”ಈಗ ಊಟ ಮಾಡಿ ಬನ್ನಿ ಎಲ್ಲರೂ”…. ಎಂದು ಮನೆಯ ಹಿಂದಿನ ವರಾಂಡಕ್ಕೆ ಹೋಗಿ ಕೆಲಸದವರು ಊಟ ಮಾಡಲೆಂದೇ ಕತ್ತರಿಸಿ ಇಟ್ಟಿದ್ದ ಬಾಳೆ ಎಲೆಗಳನ್ನು ತಂದು ತೊಳೆದು ಊಟದ ಟೇಬಲ್ ಮೇಲೆ ಇಟ್ಟು ಕುಸುಲಕ್ಕಿ ಅನ್ನ, ಸಾಂಬಾರ್, ಪಲ್ಯ, ಹಪ್ಪಳ, ಮಾವಿನಕಾಯಿಯ ಉಪ್ಪಿನಕಾಯಿ, ಗಿಡ ಮೂಲಿಕೆಗಳಿಂದ ಕಾಯಿಸಿದ ನೀರನ್ನು ಇಟ್ಟು ಮಕ್ಕಳು ಬರುವುದನ್ನು ಕಾಯುತ್ತಾ ಅಲ್ಲೇ ನಿಂತರು.
ಕೇರಳ ಮೂಲದವರಾದ ರುಕ್ಮಿಣಿ ನಾಯರ್ (ರುಕ್ಮಿಣಿ ಎ.ವಿ),ಹುಟ್ಟಿದ್ದುಹಾಸನ ಜಿಲ್ಲೆಯ ಸಕಲೇಶಪುರದಲ್ಲಿ.ಸುಮತಿ ಪಿ.ಎಸ್. ಮತ್ತು ವೇಲಾಯುಧನ್ ನಾಯರ್ ಅವರ ಎರಡನೆಯ ಮಗಳಾಗಿ.ನಂತರ ಶ್ರೀದರ್ ಬಿ.ಎಂ.ರವನ್ನು ಮದುವೆಯಾಗಿ ಬೆಂಗಳೂರಲ್ಲಿನೆಲೆಸಿದ್ದಾರೆ..ಕೆಲಕಾಲ ಶಿಕ್ಷಕಿಯಾಗಿಕೆಲಸ ಮಾಡಿದವರೀಗ ಪೂರ್ಣಪ್ರಮಾಣದ ಗೃಹಿಣಿಯಾಗಿ ಬರವಣಿಗೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಪುಸ್ತಕ ಓದುವುದು-ಬರೆಯುವುದು, ಚಿತ್ರ ಬಿಡಿಸುವುದು. ಗಿಡಗಳನ್ನು ಬೆಳೆಸುವುದು ಇವರ ಹವ್ಯಾಸಗಳು
ಬಹಳ ಬಹಳ ನೈಜವಾಗಿ ಮೂಡಿ ಬರುತ್ತಿದೆ ನಿಮ್ಮ ಕತೆ..
ಅದೂ ಪ್ರಕೃತಿಯ ಸೊಬಗಿನ ಜೊತೆಗೆ..
ಒಂದು ಸಿನಿಮಾ ನೋಡುತ್ತಿದ್ದೇವೇನೋ ಅನ್ನಿಸುತ್ತಿದೆ….